ಬುಧವಾರ, ಜೂನ್ 16, 2010

ಧಾರವಾಡದಲ್ಲೊಂದು ಮಹಾ ಬೆಳಗು



ಶಾಲ್ಮಲೆಯಲ್ಲೊಂದು ಅದ್ಭುತ ಮುಂಜಾನೆ, ಧಾರವಾಡದ ತುಂತುರು ಮಳೆಯ ಜೊತೆ ರಮ್ಯ ಪ್ರಕೃತಿಯ ಮಡಿಲಲ್ಲಿ ದಿವ್ಯ ಸುಪ್ರಭಾತ. ಸಕಲ ಜೀವರಾಶಿಗಳಿಗೂ ಎಚ್ಚರಗೊಳಿಸುವ ಭವ್ಯ ದಿನಕರ. ಮನದ ಮೂಲೆಯಲ್ಲೆಲ್ಲೋ ಒಂದು ನವ್ಯ ಉತ್ಸಾಹ. ಬದುಕಿನ ಇನ್ನೊಂದು ಮಹಾ ಹಗಲು ಇಂಚಿಂಚಾಗಿ ತೆರೆದುಕೊಳ್ಳುವ ಸಂಭ್ರಮ. ಕತ್ತಲು ಸರಿದು ಬೆಳಕು ಹರಡುವ ನಿತ್ಯ ಸಂಕ್ರಮಣ. ಇನ್ನೊಂದು ಪರಿಭ್ರಮಣ ಯಶಸ್ವಿಯಾಗಿ ಮುಗಿಸಿದ ಭೂಮಿಯ ಮುಖದಲ್ಲೊಂದು ಅನನ್ಯ ಸಾರ್ಥಕತೆ. ಸಾಧನಕೇರಿಯ ಶಬ್ದ ಗಾರುಡಿಗ ಲಯಬದ್ದವಾಗಿ ಹೆಣೆದ "ಮೂಡಲ ಮನೆಯ ಮುತ್ತಿನ ನೀರಿನ...". ತಾಯಿಯ ತೆಕ್ಕೆಯಲ್ಲಿ ಮಲಗಿ ತುಟಿಯಂಚಿನಲಿ ನಗು ಅರಳಿಸಿ ಯಾವುದೋ ಸವಿಗನಸು ಕಾಣುತಿರುವ ಮುಗ್ದ ಮಗುವಿಗೂ ಮಗ್ಗುಲು ಬದಲಿಸುವ ಹಂಬಲ. ಶತಶತಮಾನಗಳಿಂದಲೂ ಪ್ರತಿ ಬೆಳಗಿಗೂ ಕೂಗುವ ಕೋಳಿ ನೈಸರ್ಗಿಕ ಸಮಯಸಾಚಿ. ದಶದಿಕ್ಕುಗಳಿಗೂ ತನ್ನ ರಂಗಾದ ರಂಗು ತುಂಬಿ ನಗುತ ಏರುವ ಸಹ್ಯ ಸೂರ್ಯ. ಮೊನ್ನೆ ಹುಟ್ಟಿದ ತನ್ನ ಮುದ್ದು ಮರಿಯ ಹೊಟ್ಟೆ ತುಂಬಿಸಲು ಪುರ್ರನೆ ಹಾರಿದ ತಾಯಿ ಹಕ್ಕಿ. ರಾತ್ರಿಯ ಜಡತ್ವ ಕಳೆದು ಬೆಳಗಿನ ಕೆಲಸಕ್ಕೆ ತಯಾರಾದ ರೈತ. ಇವತ್ತೂ ಬಾರದ ಮರೆತ ಪ್ರೇಮಿಯ ಪತ್ರಕ್ಕಾಗಿ ಕಾಯುವ ಗೃಹಿಣಿ. ಇನ್ನೂ ಒಂದು ದಿನ ಬದುಕಿ ಬಿಟ್ಟೆ ಎಂಬ ಸಂತೋಷದಲ್ಲಿ ಕೊಸಕೊಸನೆ ಕೆಮ್ಮಿ ಕ್ಯಾಕರಿಸುವ ವಯೋವೃದ್ಧ. ಮನಸಿಗೆ ಕನಸು ತಾಕಿಸಿ, ನಿನ್ನೆ ಕೊಟ್ಟ ಹುಡುಗನ ಬಿಸಿ ಮುತ್ತಿಗೆ ಈಗಲೂ ಕರಗುತಿರುವ, ಎಚ್ಚರಾದರೂ ಮುದುಡಿ ಮಲಗುವ ಹುಚ್ಚು ಹುಡುಗಿ. ಸ್ವಾತಿ ಮಳೆಗೆ ಬಾಯಿ ತೆರೆದು ಕಾಯುತಿರುವ ಚಿಪ್ಪಿನಂತೆ ತನ್ನನ್ನೇ ಮರೆತು ಹೋದವಳ ನೆನಪುಗಳೊಂದಿಗೆ ಎದ್ದೆಟಿಗೆ ಸಿಗರೇಟು ಸುಡುತಿರುವ ಭಗ್ನ ಪ್ರೇಮಿ. ರಾತ್ರಿ ಕಂಡ ಕನಸುಗಳೆಲ್ಲವನ್ನು ನನಸು ಮಾಡಲು ಅವಡುಗಚ್ಚಿದ ದೃಡ ಮನಸ್ಕ. ಇದೆಲ್ಲದರ ಮದ್ಯೆಯು ಸೂರ್ಯನ ಮುಖದಲ್ಲಿ ಮುಗುಳ್ನಗೆ ಹುಡುಕುವ ನಾನು.

ಲಹರಿ...

ಬೆಂದಕಾಳೂರಿನಲ್ಲಿ ಇನ್ನೊಂದು ಮಳೆಯ ಸಂಜೆ! ತುಂಬಿ ತುಳುಕುವ ರಸ್ತೆಗಳಲ್ಲಿ ಲಕ್ಷಾಂತರ ಅಪರಿಚಿತ ಮುಖಗಳು. ಬೆಳಿಗ್ಗೆ ಯಿಂದ ದುಡಿದು,ದಣಿದು ಗೂಡು ಸೇರಿಕೊಳ್ಳುವ ಈ ಸಮಯದಲ್ಲಿ, ನಾನೊಬ್ಬನೇ ಕುಳಿತ ಪಾರ್ಕಿನ ಕಲ್ಲು ಬೆಂಚಿನ ಹಿಂದಿರುವ ಮರಗಳ ಮರೆಯಲಿ ಕುಳಿತ ಜೋಡಿಯೊಂದು ಪಿಸುಗುಡುತ್ತಿತ್ತು.
ಮಳೆಗಾಲ ಯಾವಾಗಲೂ ಪ್ರೇಮಿಗಳ ಕಾಲ. ಎದೆಯ ಆಕಾಶದಲಿ ತಾಪದಿಂದ ಹೆಪ್ಪುಗಟ್ಟಿದ ಪ್ರೀತಿ, ಭೂಮಿಗೆ ಆವಿರ್ಭವಿಸುವ ರಮ್ಯ ಕಾಲ!!
ಒಂದು ಇಳಿಸಂಜೆಯ ಜಡಿ ಮಳೆಯಲಿ ಪ್ರೀತಿಸುವ ಜೀವದ ಜೊತೆ ಒಂದು ವಾಕ್!!! ಅದು ಬದುಕಿನ ಕೊನೆಯ ಕ್ಷಣದವರೆಗೂ ನೆನಪಿನ ಖಜಾನೆಯಲ್ಲಿ ಅಚ್ಚಳಿಯದೆ ಉಳಿಯುವ ಮಧುರ ನೆನಪು!! ಮಳೆಯಲಿ... ಜೊತೆಯಲಿ!!!
ಮಳೆ! ಎಷ್ಟೇ ಹತೋಟಿಯಲ್ಲಿಟ್ಟುಕೊಂಡರೂ ನೀನಿಲ್ಲದ ಮನದ ಬೇಗುದಿ, ತಳಮಳ ಎಲ್ಲವನ್ನೂ ಅಭಿವ್ಯಕ್ತಿಸಲು ಸಿಗುವ ಏಕೈಕ ದಾರಿ. ಹೌದು ಮಳೆಗೆ ಮಾತ್ರ ಮನಸಿನ ಕೊಳೆ ತೊಳೆಯುವ ಶಕ್ತಿ ಇದೆ. ಅದು ನೊಂದು ಬೇರೆಯಾದ ಎರಡು ಜೀವಗಳನ್ನು ಜೋಡಿಸುವ ಅದ್ಭುತ ಔಷಧಿ! ಆದರೆ ಆ ಔಷಧಿಯ ಪರಿಣಾಮಕ್ಕಿಂತಲೂ ಘೋರ ಸ್ಥಿತಿಗೆ ಇಳಿದ ನಮ್ಮ ಪ್ರೀತಿ!!!

ಗುರುವಾರ, ಜೂನ್ 10, 2010

ಸುಪ್ತ ಸ್ವರ...


ದೀಪಗಣ್ಣಿನ ಹುಡುಗಿ,
ಮನಸು ಈಗೀಗ ಕೊಂಚ ಸ್ಥಿಮಿತಕ್ಕೆ ಬರುತ್ತಿದೆ ಗೆಳತಿ! ಅವತ್ತಿನ ದುಖವೆಲ್ಲ ಇವತ್ತು ಕಡಿಮೆಯಾಗಿ ಹೋಗಿದೆ ಅಂತ ಹೇಳಲಾರೆ, ಆದರೆ ಅವತ್ತಿನ ಹಾಗೆ ಎದೆಯಿಂದ ರಕ್ತ ಚಿಮ್ಮುತ್ತಿಲ್ಲ. ಒಳಗಿನ ಜ್ವಾಲಾಮುಖಿ ಕೂಡ ತನ್ನ ಸದ್ದಡಗಿಸಿಕೊಂಡಿದೆ. ನನ್ನೊಂದಿಗೆ ನಾನೇ ಸಂಧಾನಕ್ಕೆ ಬರತೊಡಗಿದ್ದೇನೆ. ಕಣ್ಣಿರು ಕಂಟ್ರೋಲ್ ಗೆ ಬರುತ್ತಿವೆ. ನಂಗೊತ್ತು ಇವತ್ತಿನ ಸ್ಥಿತಿಯಲಿ, ನಾನು ಮಾತ್ರ ನನ್ನನ್ನ ಸಮಾಧಾನಿಸಿಕೊಳ್ಳಬಲ್ಲೆ!! ಹಾಗೆ ನಿನ್ನೊಂದಿಗೆ ವಾರಗಟ್ಟಲೆ, ತಿಂಗಳುಗಟ್ಟಲೆ, ವರ್ಷಗಟ್ಟಲೆ ಬದುಕಿ ಬಿಟ್ಟವನಿಗೆ ಈಗ ಇದ್ದಕ್ಕಿದ್ದಂತೆ ಒಬ್ಬಂಟಿಯಾಗಿ ಬದುಕುವದು ಕಷ್ಟವಾಗುತ್ತೆ ನೋಡು.
ನೀನು ಅಂತಹ ಹುಡುಗಿ ಅಲ್ಲ ಅಂದುಕೊಂಡಿದ್ದೆ!! ಕಡೆ ಪಕ್ಷ ನನ್ನನ್ನು ಸೋಲಿಗೆ, ಒಂದು ದೌರ್ಭಾಗ್ಯಕ್ಕೆ, ಬದುಕಿನ ultimate ಆಘಾತಕ್ಕೆ ಒಡ್ಡುವ ಮುನ್ನ ಕೊಂಚ ಯೊಚಿಸುತ್ತಿಯಾ ಅಂದುಕೊಂಡಿದ್ದೆ. ಮರಣ ದಂಡನೆ ಕೊಡುವವರೂ ಕೂಡ ನಿನ್ನ ಕೊನೆ ಆಸೆ ಏನು ಅಂತ ಕೆಳ್ತಾರಂತೆ. ಆದರೆ ನೀನು "ನಿನಗಿರುವ ಕೊನೆಯ ಅವಕಾಶವೇ ಮರಣ ದಂಡನೆ"ಎಂಬಂತೆ ತೀರ್ಪು ಘೋಷಿಸಿ ಬಿಟ್ಟೆ.
ಇವತ್ತು ನನಗೆ ಆಶ್ಚರ್ಯವಾಗುತಿರೋದು, ನೀನೇಕೆ ನನ್ನ ಬಿಟ್ಟು ಹೋದೆ ಎಂಬ ಕಾರಣಕ್ಕಾಗಿ ಅಲ್ಲ. ಅದಕ್ಕೆ ಸಾವಿರ ಕಾರಣ ಸಿಗಬಹುದು. ಆದರೆ ವಿನಾಕಾರಣ ನನ್ನ ಪ್ರೀತಿಸಿದ್ದೇಕೆ ? ಅದನ್ನು ಮೊದಲು ಹೇಳು. ನಾನು ನಿಜಕ್ಕೂ ನನ್ನ ಪಾಡಿಗೆ ನಾನು ಎಂಬಂತೆ ಇದ್ದು ಬಿಟ್ಟಿದ್ದೆ. ಬದುಕು ಸುಂದರವಾಗಿತ್ತು. ನಾನು ಸಪ್ತ ಸಾಗರ ದಾಟಬೇಕಿತ್ತು. ಇಪ್ಪತ್ತು ವರ್ಷಗಳ ತಾರುಣ್ಯವನ್ನ ಮುಷ್ಟಿಯಲ್ಲಿ ಇಟ್ಟುಕೊಂಡು ನೂರಿಪ್ಪತ್ತು ವರ್ಷಗಳ ಸುಧೀರ್ಘ ಪ್ರಯಾಣದ ಕನಸು ಕಾಣುತ್ತಿದ್ದೆ. ಅವತ್ತಿನ ನನ್ನ ಓಟಕ್ಕೆ ತಡೆಗೋಡೆಗಳಿರಲಿಲ್ಲ. ಅಂತಹದೊಂದು ಆಹ್ಲಾದಕರ ರಭಸದಲ್ಲಿದ್ದವನಿಗೆ ಇದ್ದಕ್ಕಿದ್ದಂತೆ ಯಾರೋ ಹೆಗಲು ತಟ್ಟಿ "ಹಲೋ" ಅಂದದ್ದು ಕೇಳಿಸಿತು. ದಡ್ಡ ನಾನು ತಿರುಗಿ ನೋಡಿಬಿಟ್ಟೆ!!!
ತಪ್ಪು ನನ್ನದು ಇತ್ತು ಬಿಡು. ಕಣ್ಣುಗಳಲ್ಲಿ ಪ್ರೀತಿಯ ಪಾರಿಜಾತ ಅರಳಿಸಿಕೊಂಡು ನಿಂತವಳನ್ನು ಪ್ರೀತಿಸದೇ ಇರಲು ಸಾಧ್ಯವೇ ಇರಲಿಲ್ಲ! ಹೆಗಲು ಮುಟ್ಟಿ "ಹಲೋ" ಅಂದವಳೆಡೆಗೆ ತಿರುಗಿ ನೋಡಿದೆನೋ ಇಲ್ಲವೋ, ಕ್ಷಣಕ್ಕಾಗಿ ಅಮ್ಮನ ಗರ್ಭದಲ್ಲಿದ್ದಾಗಿನಿಂದಲೂ ಕಾಯುತ್ತಿದ್ದೆನೇನೋ ಎಂಬಂತೆ "ಎಸ್" ಅಂದುಬಿಟ್ಟೆ!!
ಅವತ್ತು ನಿನ್ನ ಕಣ್ಣುಗಳೆಷ್ಟು ನಿಷ್ಕಲ್ಮಶವಾಗಿದ್ದವು ಗೊತ್ತಾ? ಮುಖದಲ್ಲಿ ಮುಗ್ದ ನಗೆ. ಅವತ್ತಿನ ತನಕ ನಿನ್ನದೆಂದುಕೊಂಡಿದ್ದೆಲ್ಲ ಒಂದೇ ಬೊಗಸೆಯಲ್ಲಿ ನನಗೆ ಕೊಟ್ಟು, ಸಮುದ್ರದ ತುದಿಯ ತನಕ ಜೊತೆಯಲ್ಲೇ ತೇಲಿ ಬರುವ ಮಾತಾಡಿದ್ದೆ!! ನಿನ್ನ ಮಾತುಗಳಲ್ಲಿ ಭರವಸೆ ಇತ್ತು, ಪ್ರೀತಿ ಇತ್ತು, ಗೆಲ್ಲುವ ಹಟವಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಬದುಕನ್ನು ಇವತ್ತಿನಿಂದ ಕಡೆಯ ದಿನದ ತನಕ ಒಟ್ಟಿಗೆ ಕಳೆಯುತ್ತೆಂಬ ವಿಶ್ವಾಸವಿತ್ತು!!!
ನನಗೆಲ್ಲ ಅರ್ಥವಾಗುತ್ತೆ. ಮೊದಮೊದಲು ನಾನು ಮೂರ್ಖನ ಹಾಗೆ ರಿಯಾಕ್ಟ್ ಮಾಡಿಬಿಟ್ಟೆ. ನಿನ್ನೆಲ್ಲೋ ನನ್ನ ತೋಳುಗಳಿಂದ ಜಾರುತ್ತಿದ್ದಿ ಎಂಬುದು ಅರವಿಗೆ ಬರುತ್ತಿದ್ದಂತೆ, ರೈಲ್ವೆ ಸ್ಟೇಷನ್ ನಲ್ಲಿ ಅಮ್ಮನನ್ನು ಕಳೆದುಕೊಂಡ ಮಗುವಿನಂತೆ ತಬ್ಬಿಬ್ಬಾದೆ. 2 ವರ್ಷ ಮತ್ತೇನನ್ನು ಮಾಡದೇ ನಿನ್ನನ್ನು ಪ್ರೀತಿಸಿದ ಮಾತ್ರಕ್ಕೆ ನಿನ್ನ ಮೇಲೊಂದು ಹಕ್ಕು ಬಂದುಬಿಟ್ಟಿದೆ ಅಂದು ಕೊಂಡವನು ನಾನು. ಮೊಟ್ಟ ಮೊದಲ ಬಾರಿಗೆ ನಿನ್ನ ಕಣ್ಣುಗಳಲ್ಲಿ ಬಣ್ಣ ಬದಲಾಗುವದನ್ನು ನೋಡಿದೆ. ನಿಂತ ನೆಲವೇ ಬಾಯಿ ಬಿಟ್ಟಂತಾಯಿತು. ಅವತ್ತು ನಿನ್ನ ಎಷ್ಟು ಕಾಡಿದ್ದೆ ನೆನಪಿದೆಯಾ? ನಿನ್ನೆದುರು ನಿಂತು ಕಣ್ಣಿರು ಹಾಕಿದ್ದೆ, ಗೊಗೆರೆದಿದ್ದೆ. ಆರಡಿಯ ಎತ್ತರದ ಆಳು; ಮಳೆಗೆ ತೊಯ್ದ ಗುಬ್ಬಿಯಂತಾಗಿದ್ದೆ.
ಬಿಡು ಇದೆಲ್ಲ ಕೆಲಸಕ್ಕೆ ಬಾರದ ಮಾತು. ಬಸ್ಸು ತಪ್ಪಿಸಿಕೊಂಡವನ ಹಳಿ
ಹಳಿ. ನೀನು ಮರೆತು ಹೋದ ಚಿತ್ರ. ನಿನ್ನ ಮರೆವುಗಳಲ್ಲಿ ನೀನಿರು, ನನ್ನ ನೆನಪುಗಳಲ್ಲಿ ನಾನಿರುತ್ತೇನೆ. ನಿನ್ನ ಮನಸು ಖುಷಿಯಾಗಿರಲಿ. ನನ್ನಲ್ಲಿ ಮತ್ತೆ ಬೆಳಕಾಗುವದಿಲ್ಲ. ನಿರೀಕ್ಷೆಗಳ ಮೆರವಣಿಗೆ ನಿಂತು ಹೋಗಿದೆ. ನಿನ್ನೊಂದಿಗೆ ಕಳೆದ ರಸ ನಿಮಿಷಗಳು ನನಗೆ ಸಾಕು; ಈ ಜನ್ಮಕ್ಕೆ, ಇದರ ಇನ್ನುಳಿದ ಅವಧಿಗೆ. ನಿನ್ನ ಕಣ್ಣಿನ ದೀಪ ಆರದಿರಲಿ.
ಮುಂದಿನ ಜನ್ಮದಲ್ಲಿ ನಿನಗೆ ಅರ್ಹನಾಗುವಷ್ಟು ಒಳ್ಳೆಯವನಾಗಿ ಹುಟ್ಟಿ ಬರುತ್ತೇನೆ...
ಕೇವಲ ನಿನಗಾಗಿ.

ತೋಚಿದ್ದು...

ಏನು ಬರೆಯಲಿ?
ಹೇಗೆ ಬರೆಯಲಿ?
ಇನ್ನೊಬ್ಬರ ಕೈ ಗೊಂಬೆಯಾಗಿ
ಋಣದ ಹೊರೆಯಾಗಿ
ಅಸಾಧ್ಯ!!

ಉಹೂ ಕೈಯಲ್ಲಿ ಶಕ್ತಿ ಸಾಲದಾಗಿದೆ. ಮನಸು ಯಾಕೋ ಮುಜುಗರಕ್ಕೊಳಗಾಗಿದೆ. ಈ ನನ್ನ ಪರಸ್ಥಿತಿ ಶತ್ರುವಿಗೂ ಬೇಡ.
ಬರಿ ವಿಷಾದದ ಬೆಳಗು
ಏನು ಘಟಿಸದ ಮದ್ಯಾನ್ಹ
ಸುಮ್ಮನೆ ಸಾಯುತಿರುವ ಸಂಜೆ!!
ಯಾವುದು ಚೈತನ್ಯ ತುಂಬುತ್ತಿಲ್ಲ. ಎಲ್ಲಿ ಹೀಗೇ ಹೊರ ಜಗತ್ತಿಗೆ ಕಾಣದೇ ಮಣ್ಣು ಸೇರುತ್ತೇನೋ ಎಂಬ ದುಗುಡ.
ಇಡೀ ಮನಸೇ ವಿಷಾದದಿಂದ ತುಂಬಿ ನಿಂತಿರುವಾಗ, ಚಿಪ್ಪೆಲ್ಲಿ, ಸ್ವಾತಿ ಮುತ್ತೆಲ್ಲಿ? ದಿಗದಿಗಂತದಾಚೆಗೂ ಚಾಚಿ ನಿಂತಿರುವ ಸತ್ತ ಸಮುದ್ರದಂತೆ!! ನೀನು ಏನು ಹೇಳದೆ, ಕೇಳದೆ ಕಲ್ಲಗಿರುವಾಗ ನನ್ನ ಕಷ್ಟವನ್ನೆಲ್ಲಾ ಯಾರಿಗೆ ಹೇಳಿಕೊಳ್ಳಲಿ?

ಹೆಂಡತಿಯಾಗಿದ್ದರೆ ಸಾಂತ್ವನಿಸುತ್ತಿದ್ದೆ,
ಪ್ರೇಯಸಿಯಾಗಿದ್ದರೆ ಧೈರ್ಯ ಹೇಳುತ್ತಿದ್ದೆ,
ಗೆಳತಿಯಾಗಿದ್ದರೆ ಆಸರೆಯಾಗುತ್ತಿದ್ದೆ,
ದೇವತೆಯಾಗಿದ್ದರೆ ಕೈ ಹಿಡಿದು ಕಾಪಾಡುತ್ತಿದ್ದೆ,
ನೀನು!
ಏನೂ ಅಲ್ಲದಿರುವದಕ್ಕೆ,
ಫೋನು ಎತ್ತಿಟ್ಟು ನಿದ್ದೆ ಮಾಡಿದ್ದೆ!!!

ಕಗ್ಗತ್ತಲ ದಾರಿ ಮುಕ್ಕಾಲು ಸರಿದಿದೆ. ದೂರದಲ್ಲೆಲ್ಲೋ ಬೆಳಕಿನ ಬಿಜ ಮೂಡಿ ಬರುವ ಭರವಸೆ. ಇನ್ನು ದೂರವಿಲ್ಲ ಈ ವಿಷಾದ, ಬೇಸರ, ಋಣಭಾರ ಎಲ್ಲವೂ ನೀಗಿ, ನನ್ನದೇ ಹೊಸ ಬೆಳಕು, ಬಾಳು, ತಳಕು, ಬಳಕು, ಹಸಿರು, ಉಸಿರು, ತುಂತುರು ಬರುವದು ತಡವಿಲ್ಲ.
cheer up ಮನಸೇ...

ಬುಧವಾರ, ಜೂನ್ 09, 2010

ಯೋಚನೆ


ಶ್ರೀರಾಮನ ಪಾದಸ್ಪರ್ಶದಿಂದ
ಕಲ್ಲಾದ ಅಹಲ್ಯೆಗೆ
ಶಾಪ ವಿಮೋಚನೆ
ನಿನ್ನ ನೆನಪಿನ ನೋವಿನಿಂದ
ಬಚಾವಾಗಲು ನನಗೆ
ಕಲ್ಲಾಗುವ ಯೋಚನೆ...