ಗುರುವಾರ, ಅಕ್ಟೋಬರ್ 28, 2010

ಮುಂಗಾರು ಹನಿ

ಜನುಮ ಜನುಮದಲ್ಲೂ ಜೊತೆಗೆ ನಡೆವ ಕನಸ ಕಂಡು
ಎದೆಯ ತೋಟದಲ್ಲಿ ಪ್ರೀತಿ ಹೂವ ಬೆಳೆದು ಬೆಳೆದು
ಬೆಂಕಿ ಮಳೆಗೆ ಬೆಂದು ಬೆಂದು
ಜೀವ ಸೊರಗಿದೆ...
ಸಿಡಿಲು ಬಡೆದು ಎದೆಗೆ
ಉರುಳಿತಲ್ಲ ಮನದರಮನೆಯು
ಬಂಧಿ ನಾನು ವಿಧಿ ಸೇರೆಮನೆಯು
ದಾರಿ ಮುಗಿದಿದೆ...

ಬುಧವಾರ, ಅಕ್ಟೋಬರ್ 27, 2010

ಅವಳು


ಮನದ ಸಮುದ್ರ ದಂಡೆಯ
ಸಕ್ಕರೆ ಮರಳಿನಲಿ
ಹೆಜ್ಜೆಯೂರಿ
ನಡೆದು ಹೋದವಳು...
ಮರಳು ಬುದ್ದಿಯ
ನಿದ್ದೆಗಣ್ಣಲಿ
ಎದ್ದು ಹೋದವಳು...
ಹೃದಯ ಪ್ರೀತಿಯ
ಗುಡಿಯ ಕೆಡವಿ
ನಗುತ ಎದ್ದವಳು...
ಅರಳು ಕಂಗಳ
ಕನಸು ಗುಡಿಸಿ
ಹಾರಿ ಹೋದವಳು...
ನನ್ನ ಬದುಕ
ನಗೆಯ ಬಂಡಿ
ಇಳಿದು ಹೋದವಳು...
ಎದೆಯ ಒಳಗೆ
ಗುಬ್ಬಿ ಗೂಡು
ಕಟ್ಟಿ ಹೋದವಳು...
ಎದೆಯ ತುಂಬಾ
ಕಿಚ್ಚು ಹಚ್ಚಿ
ಕಳೆದು ಹೋದವಳು...
ಕೂಡಿ-ಕಳೆದು
ಹಾಡು ಹೇಳಿ
ಓದಿ ಹೋದವಳು...
'ನೀರಿಕ್ಷೆಯಲ್ಲೇ
ಕಾಯ್ದು ಸಾಯಿ'
ಅಂದು ಹೋದವಳು...
ರಾತ್ರಿ-ಹಗಲು
ಕಾಡುತಿರುವ
ಅವಳೇ ನನ್ನೊಳು, ನನ್ನ ಮನದವಳು...

ಕರ್ಣ


ವ್ಯಾಸರು ಸೃಷ್ಟಿಸಿದ ಮಹಾಭಾರತದ ಒಂದು ಅದ್ಭುತ ಪಾತ್ರ: ಕರ್ಣ. ದೇವಸುತನಾದರೂ, ಒಬ್ಬ ಸಾಮಾನ್ಯ ಮನುಷ್ಯನಂತೆ ತವಕ, ತಲ್ಲಣ, ಗೊಂದಲ, ಹತಾಶೆ, ಋಣ ಭಾರ ಎಲ್ಲವನ್ನೂ ಅನುಭವಿಸುತ್ತಾ ಬದುಕಿದವನು. ನಿರ್ದಿಷ್ಟ ನಿರ್ಧಾರಕ್ಕೆ ಬರಲಾಗದೆ ನಮ್ಮಂತೆ ಚಡಪಡಿಸಿದವನು. ಹಸ್ತಿನಾವತಿಯ ರಕ್ತ ಸಿಂಹಾಸನಕ್ಕೆರಲು ಎಲ್ಲ ರೀತಿಯಿಂದಲೂ ಯೋಗ್ಯನಾಗಿದ್ದು, ಹಿಂದೆ ಸರಿದು ಬಿಟ್ಟವನು. ಅದಕ್ಕೆಂದೇ ತನ್ನ ದೊರೆ ಅರಿಕೇಸರಿಯನ್ನು ಅರ್ಜುನನಿಗೆ ಸಮೀಕರಿಸಿ 'ವಿಕ್ರಮಾರ್ಜುನ ವಿಜಯ' ಎಂದು ಹೆಸರಿಟ್ಟರೂ, ಕರ್ಣನ ವ್ಯಕ್ತಿತ್ವಕ್ಕೆ ಮನಸೋತು-
"ನೆನೆಯದಿರಣ್ಣ, ಭಾರತದೋಳ್ ಇಂ ಪೆರರಾರುಮಂ
ಒಂದೇ ಚಿತ್ತದಿಂ! ನೆನವೊಡೆ ಕರ್ಣನಂ ನೆನೆಯ!
ಕರ್ಣನೋಳ್ ಆರ್ ದೊರೆ ಕರ್ಣನ ಏರು, ಕರ್ಣನ ಕಡುನನ್ನಿ,
ಕರ್ಣನ ಅಳಿವು, ಅಂಕದ ಕರ್ಣನ ಚಾಗಂ ಎಂದು ಕರ್ಣನ,
ಪಡೆ ಮಾಡಿನೋಳ್ ಪುಡಿದು ಕರ್ಣ ರಸಾಯನಂ ಅಲ್ತೆ ಭಾರತಂ"
ಎಂದು ಪಂಪ ಹೊಗಳುತ್ತಾನೆ. ದಾನವನ್ನೇ ವೀರತ್ವಕ್ಕೆರಿಸಿದ ಇನ್ನೊಬ್ಬೆ ಒಬ್ಬ ವ್ಯಕ್ತಿ ನಮಗೆ ಇತಿಹಾಸದಲ್ಲಿ ಇನ್ನೆಲ್ಲೂ ಸಿಗುವದಿಲ್ಲ. 'ದಾನ' ಕರ್ಣನ ವ್ಯಕ್ತಿತ್ವದ ಪ್ರತಿಬಿಂಬ. ಅದಕ್ಕೆಂದೇ ಅವನು 'ದಾನ ವೀರ ಶೂರ ಕರ್ಣ'.
ಜಗತ್ತನ್ನೇ ತನ್ನ ಶಕ್ತಿಯಿಂದ ಮುನ್ನಡೆಸುವ ಸೂರ್ಯನ ಮಗನಾದರೂ, ಸೂತನೊಬ್ಬನ ಮನೆಯಲಿ ಸಾಮಾನ್ಯನಂತೆ ಬೆಳೆಯುತ್ತಾನೆ. ಹಾಗೆ ಬದುಕಿದ್ದಕ್ಕೆ ನಮಗೆ ಹೆಚ್ಚು ಆಪ್ತನಾಗ್ತಾನೆ? ಹಸಿವೆ, ಬಡತನ,ಕಿಳರಿಮೆಗಳಲ್ಲೇ ಬಾಲ್ಯವನ್ನು ಕಳೆದ ಕರ್ಣನಿಗೆ, ಕುರು ಚಕ್ರಾಧಿಪತಿಯಾಗು ಎಂದು ಕೃಷ್ಣ ಹೇಳಿದಾಗ, ಆ ಐಶ್ವರ್ಯಕ್ಕಿಂತಲೂ ತನ್ನ ದೊರೆ, ಅಂತರಂಗದ ಮಿತ್ರ ದುರ್ಯೋಧನನೆ ಹೆಚ್ಚು ಅಂದುಕೊಳ್ಳುತ್ತಾನೆ. ಕೊಟಿ ಕಲ್ಲಿದ್ದಿಲಿನ ಮದ್ಯದಲ್ಲಿದ್ದರೂ ಪ್ರಕಾಶಿಸುವ ವಜ್ರದಂತೆ, ತನ್ನ ಮೈಯಲ್ಲಿ ಹರಿಯುತಿರುವ ಕ್ಷಾತ್ರ ರಕ್ತದ ಬಿಸಿ ತಡೆಯಲಾಗದೆ ಪರುಶುರಾಮನಂತಹ ಗುರುವನ್ನು ಗೆದ್ದು, ಜಗತ್ತಿನಲ್ಲೇ ಮಹಾರಥನಾಗ್ತಾನೆ. ಬಯಸದೆ ಸಿಕ್ಕ ದುರ್ಯೋಧನನ ಗೆಳೆತನವನ್ನು ತಪ್ಪಿ ಕೂಡಾ ದುರುಪಯೋಗಪಡಿಸಿಕೊಳ್ಳದ ನಿಜವಾದ ಧರ್ಮರಾಯ ಈ ಕರ್ಣ!!
ಭಿಷ್ಮರಂತಹ ತುಂಬಿದ ಕೊಡವೇ ತುಂಬಿದ ರಾಜಸಭೆಯಲಿ 'ಸೂತಪುತ್ರ' ಎಂದು ಹಂಗಿಸಿದಾಗ, 'ಹುಟ್ಟಿನಿಂದ ಕುಲವನ್ನು ನೋಡುತ್ತಿರಾದರೆ, ಆಚಾರ್ಯ ದ್ರೋಣರು ಕೂಡ ಬೆಸ್ತ ಕುಲದವರು' ಎಂದು ಎದುರು ಮಾತನಾಡುವಷ್ಟು ಘನತೆ ಕಲ್ಪಿಸಿದ ಧುರ್ಯೋಧನನೆ ಅವನಿಗೆಲ್ಲ. ಧುರ್ಯೋಧನ ಸಿಕ್ಕ ನಂತರ ಅವನು ತನಗೋಸ್ಕರ ಬದುಕಲೇ ಇಲ್ಲ ಅನಿಸಿ ಬಿಡುತ್ತದೆ!! ಅವನ ಎಲ್ಲ ಕಾರ್ಯಗಳೂ ಗೆಳೆಯನ ಸುತ್ತಲು ಸುತ್ತ ತೊಡಗಿದವಾ? ಸ್ವಯಂವರದಲಿ ಗೆಲ್ಲಬಹುದಾಗಿದ್ದ, ದ್ರೌಪದಿಯನು ಕೇವಲ ಗೆಳೆಯನಿಗಾಗಿಯೇ ಸೋತು ಬಿಡುತ್ತಾನೆ. ಕೃಷ್ಣ ನಿಂದ ತನ್ನ ಜನ್ಮ ರಹಸ್ಯ ತಿಳಿದ ನಂತರವೂ ರಕ್ತ ಸಂಬಂಧ ಕ್ಕಿಂತಲೂ ಸ್ನೇಹ ಸಂಬಂಧದ ಪರವಾಗೇ ನಿಂತು ಬಿಡುತ್ತಾನೆ. ಅದಕ್ಕೆಂದೇ ನಮ್ಮೆಲ್ಲರ ಹೃದಯದಲಿ ನಿಶ್ಚಲವಾಗಿ ನಿಂತು ಬಿಡುತ್ತಾನೆ. ಹೆತ್ತರೂ ಒಂದು ದಿನವು ಪ್ರೀತಿ-ವಾತ್ಸಲ್ಯ ತೋರಿಸದ ತಾಯಿ ಕುಂತಿಗೇ ವರದಾನ ನೀಡಿ, ಎಲ್ಲೋ ತಾಯಿಗಿಂತಲೂ ದೊಡ್ಡವನು ಅನಿಸಿಬಿಡ್ತಾನೆ!!! ಎಲ್ಲ ಕಡೆಯಿಂದಲೂ ತನಗೆ ಸೋಲು, ಸಾವು ನೀಡುವವರ ಪ್ರೀತಿಗೆ ಮಣಿಯುತ್ತಾನೆ, ಮಣಿದು ಮಡಿಯುತ್ತಾನೆ. ಯುದ್ಧದಲ್ಲಿ ಸಾವು ತನಗೆ ಕಟ್ಟಿಟ್ಟ ಬುತ್ತಿ ಎಂದು ತಿಳಿದಿದ್ದರೂ, ಹೃದಯದ ಗೆಳೆಯನಿಗಾಗಿ ಪರಾಕ್ರಮಿಯಂತೆ ಹೋರಾಡಿ, ಕೃಷ್ಣನ ಮೋಸಕ್ಕೆ ಬಲಿಯಾಗ್ತಾನೆ.
ಅದಕ್ಕೆಂದೇ ಕರ್ಣ ನಮ್ಮಲ್ಲೋಬ್ಬನಾಗ್ತಾನೆ!!!

ಸೋಮವಾರ, ಅಕ್ಟೋಬರ್ 25, 2010

ಸುಖಿ

ಪ್ರಪಂಚದ ನೂರಾರು
ಸಿದ್ದ ಸೂತ್ರಗಳಿಗೆ
ಬಂದು ಕಾಲು ಶತಮಾನವಾದರೂ
ಹೊಂದಿಕೊಳ್ಳಲಾಗುತ್ತಿಲ್ಲ
ಊರಿಗೇ ಒಂದು ದಾರಿಯಾದರೆ
ನನಗೇ ಒಂದು ದಾರಿ!
ಇದು ಹುಚ್ಚೋ ಬೆಪ್ಪೋ
ಗೊತ್ತಿಲ್ಲ ಆದ್ರೆ
ಈ ದಾರೀಲಿ ನಾನಂತೂ ಸುಖಿ!!!

I am Sorry...

ಗೆಳತಿ,
ಕಾಣಿಸದ ಯಾವುದೋ ದೂರದಲಿ ಮೊಳಗುವ ದೇವಸ್ಥಾನದ ಘಂಟೆ, ಪ್ರೀತಿಯಿಂದ ಕಲೆಸಿದ ಮೊಸರನ್ನದ ಕೊನೆಯ ತುತ್ತು, ಬಿಸಿಲು ಮುಗಿದ ಸಾಯಂಕಾಲ ಸುಮ್ಮನೆ ಬಿದ್ದ ಮಳೆ ಎಬ್ಬಿಸುವ ಮಧುರ ಮಣ್ಣಿನ ವಾಸನೆ, ಮಾತು ಬಾರದ ಮಗುವಿನ ಮುಗ್ದ ನಗೆ, ಕರುವಿನ ಅಭೋದ ಕಣ್ಣು, ಹಸಿವೆಯಾದ ತಕ್ಷಣ ನೆನಪಾಗುವ ಅಮ್ಮ-
ನನಗೆ ನಿನ್ನ ನೆನಪಾಗುವದು ಹೀಗೆ!! ಒಳ್ಳೆಯದು ಅಂತ ಈ ಜಗತ್ತಿನಲಿ ಏನೇನಿದೆಯೋ; ಅದನ್ನು ನೋಡಿದಾಗಲೆಲ್ಲ ನೆನಪಾಗುವವಳು ನೀನು!!! ಚಂದದ ಹಾಡು ಕೇಳಿ ಸಂತೋಷಪಡುವ ಹೊತ್ತಲ್ಲೇ ನಿನಿಲ್ಲವಲ್ಲ ಅನಿಸಿಬಿಡುತ್ತದೆ. ಧುಮ್ಮಿಕ್ಕುವ ಜಲಪಾತಕ್ಕೆ ಮುಖ ಒಡ್ಡುತ್ತೇನೆ ತುಂತುರುವಿನಲಿ ನೀನಿರುತ್ತಿಯೆಂಬ ನಂಬಿಕೆ.ಇಬ್ಬನಿ ಬಿದ್ದ ಪಕಳೆಗೆ ಕೆನ್ನೆ ತಾಕಿಸುತ್ತೇನೆ; ನಿನ್ನ ಮನಸು ತಂಪಾಗಿರಲೆಂಬ ಆಸೆ. ನಾನೆಕಿಷ್ಟು ನಿನ್ನ ಪ್ರೀತಿಸುತ್ತೇನೆ?
ನನ್ನ ಪ್ರತಿ ಸುರ್ಯೋದಯವು ನಿನ್ನ ಸ್ಮರಣೆಯೊಂದಿಗೆ ಆಗಿದೆ. ಪ್ರತಿ ಸೂರ್ಯಾಸ್ತವು ನಿನ್ನ ನೆನಪಲ್ಲೇ ಆಗುತ್ತದೆ. ನಿನ್ನ ನಗೆ ನನಗೆ ಮುಂಗಾರಿನ ಆಗಮನ. ನನ್ನ ಬದುಕು ನೀನು. ಬರೆಯಲು ಕುಳಿತರೆ ಕಣ್ಣು ತುಂಬಿ ಬರುತ್ತವೆ. ನಿನ್ನ ಮುಖ ನೆನಪಾದರೆ ಎಂಥದೋ ಸಂಕಟ. ಗಡಿಯಾರದಲಿ ಎಂಟು ಘಂಟೆ; ನನಗೆ ನಿನ್ನ ಊಟದ ಚಿಂತೆ!!
ಸೋನು, ನಿನ್ನಿಲ್ಲದ ನನ್ನ ಬದುಕು... ಊಹೂ ನನಗೇ ಕಲ್ಪಿಸಿಕೊಳ್ಳಲಾಗುತ್ತಿಲ್ಲ. ಈ ಮದ್ಯರಾತ್ರಿಯಲಿ ನಿಶಾಚರಿಯಂತೆ ಕುಳಿತು ಯೋಚಿಸುತ್ತಿದ್ದೇನೆ.. I am Sorry ನನಗೇ ಬದುಕಲಾಗುತ್ತಿಲ್ಲ!!!

ಚುಕ್ಕಿ ಚಂದ್ರಮನಲ್ಲೂ ನಿನ್ನನ್ನೇ ಹುಡುಕುತ್ತಾ...

ಹುಡುಗೀ,
"ಎಲ್ಲಿಯೋ ಮಧು ಬಟ್ಟಲು ಒಡೆದ ಸದ್ದು! ಯಾರ ಹೃದಯ ಚೂರಾಯಿತೋ?"
ಎಂದು ಕೇಳಿದವನು ಗಾಲಿಬ್.
ಈ ಬದುಕಿನಲಿ ಪ್ರೀತಿಯನ್ನು ಅನುಭವಿಸಿದಷ್ಟೇ ತೀವ್ರವಾಗಿ ವಿಷಾಧವನ್ನೂ ಅನುಭವಿಸಿದವರಿಗೆ ಮಾತ್ರ ಆ ಸದ್ದು ಕೇಳುತ್ತದೆ. ಅಂತಹ ಪ್ರತಿ ಸದ್ದಿನ ಹಿಂದೆ ಒಂದು ವಂಚನೆ ಇರಬಹುದು ಅಥವಾ ಒಂದು ಅಮಾಯಕ ನಂಬಿಕೆ ಇರಬಹುದು!!
ಮಲೆನಾಡಿನ ಮಾಮರದಲ್ಲೆಲ್ಲೋ ಚಿಗುರು ತಿಂದು ಕೂಗಿದ ಕೋಗಿಲೆಯ ಕೂಹೂವಿಗೆ ಬಯಲುಸೀಮೆಯ ಮೂಲೆಯಲ್ಲಿರುವ ಮರದ ಮೇಲೆ ಕುಳಿತ ಹೆಸರಿಲ್ಲದ ಹಕ್ಕಿ ಅನುಭವಿಸಿದ ಹೇಳಿಕೊಳ್ಳಲಾಗದ ಖುಷಿಯಂತೆ ಬದುಕಿನಲಿ ನಡೆದು ಬಂದೆ!! ಬರೀ ಕಿಳರಿಮೆಗಳೇ ತುಂಬಿದ ಈ ಹುಡುಗನ ಆತ್ಮವಿಶ್ವಾಸದಂತೆ!!! ಆಮೆಲೆನಿದೆ ಈ ಬಾನು, ಈ ಭೂಮಿ ಯಾವುದು ಸಾಲದೆಂಬಂತೆ ತಿರುಗಾದಿಬಿಟ್ಟೆವು ಸ್ಟಾರ್ ಹೋಟೆಲಿನಿಂದ ಬೀದಿ ಬದಿಯ ಗೊಲಗುಪ್ಪೆ ವರೆಗೆ. ಎಲ್ಲೆಲ್ಲು ನಾವೇ!!
ಒಂದೇ ಯೋಚನೆ,ಯೋಜನೆ,ಅಭಿರುಚಿ,ಕನಸು ಎಲ್ಲವು ಇದ್ದೂ, ನಾವು ಬೇರೆಯಾಗಿದ್ದು ಯಾಕೆ? I think ಇದು ಯಾವತ್ತಿಗೂ ಬಗೆಹರಿಯದ ಪ್ರಶ್ನೆ! ನಮ್ಮ ಅಹಂ, attitude, possesiveness, ಹೊಂದಾಣಿಕೆ, ಹಠ, ಜಗಳ ಹೀಗೆ ನೂರು ಕಾರಣಗಳು ಇದ್ದರೂ, ತಪ್ಪು ಯಾರದೇ ಇದ್ದರೂ ಸೋನು, ಚೂರೆ ಚೂರು ಇದೆಲ್ಲವನ್ನೂ ಬಿಟ್ಟು ಯೋಚನೆ ಮಾಡಿ ನೋಡು ಕೂಡಿ ಬದುಕಲಿಕ್ಕೆ ಸಾವಿರ ಕಾರಣ ಸಿಕ್ಕಾವು.
ಹೆಸರೇ ಕೇಳದ ದೂರದೂರುಗಳಲ್ಲಿ ಹುಟ್ಟಿ, ಬೆಳೆದು ಕೇವಲ ಈ ಪ್ರೀತಿಗಾಗಿಯೇ ನಾವಿಬ್ಬರು ಸೇರಿದೆವೇನೋ ಅನಿಸುತ್ತದೆ. ಬಿಡು ಇದೆಲ್ಲ ನನ್ನ ಪೆದ್ದು ಮನಸಿನ ಭಾವುಕ ಕನವರಿಕೆ ಇರಬಹುದು. ಇಡೀ ಬದುಕನ್ನು ಒಂದು ಲ್ಯಾಬ್ ನಲ್ಲಿನ ಪ್ರಾಕ್ಟಿಕಲ್ ಎಂದು ತಿಳಿದ ಸೈನ್ಸ್ ಹುಡುಗಿಯಲ್ಲವೇ ನೀನು? ಹಾಳು ಹಂಪೆಯ ಕಲ್ಲಿನ ರಥದ ಮುಂದೆ ನಿಂತು ಅಂದಿನ ಶ್ರೀ ಕೃಷ್ಣ ದೇವರಾಯನ ಸುವರ್ಣ ಕಾಲಕ್ಕೆ ಹೋಗಿ, ಅಂದಿನ ವೈಭವವನ್ನು ಇಂದು ಅನುಭವಿಸುವ ಇತಿಹಾಸ ಕಲಿತವನ ಮನದ ಭಾವುಕತೆ ನಿನಗೆಲ್ಲಿ ಅರ್ಥವಾದೀತು?
ಹುಣ್ಣಿಮೆಯ ರಾತ್ರಿ ಗೆಳತಿಯರೋಡಗೂಡಿ ಪಾನಿಪುರಿ ತಿಂದು ಬಂದು ಯಾವುದೊ ಇಂಗ್ಲಿಷ್ ಸಿನಿಮಾ ನೋಡೋಳಿಗೆ ಟೆರೇಸಿನ ಮೇಲೆ ಮಲಗಿ ಚುಕ್ಕಿಗಳೊಂದಿಗೆ ಮಾತನಾಡುತ್ತ, ಚಂದ್ರನ ಮೇಲೊಂದು ಕವಿತೆ ಕಟ್ಟಲು ಪರದಾಡುತಿರುವ ಈ ಹುಡುಗ ಹುಚ್ಚನ ಹಾಗೆ ಕಂಡರೆ ಅದು ನಿನ್ನ ತಪ್ಪಲ್ಲ ಬಿಡು!!!ಅಸಂಖ್ಯಾತ ಚುಕ್ಕಿಗಳಲು, ಚಲುವಾಂತ ಚನ್ನಿಗ ಚಂದ್ರನ ಮುಖದಲ್ಲೂ, ನಿನ್ನನ್ನೇ ಹುಡುಕುತಿರುವ ಈ ಪೆದ್ದು ಮನಸಿನ ಹುಡುಗ ನಿನಗೆ ನೆನಪಾಗುತ್ತಿಲ್ಲವೇ? I miss u ಕಣೇ!!!

ಶನಿವಾರ, ಅಕ್ಟೋಬರ್ 23, 2010

ಎಲ್ಲಿರುವೆ?


ಯಾವ ಸಪ್ತ ಸಾಗರದಾಚೆ?
ಬೆಳಗಿನಿಂದ ಇಳಿ ಸಾಯಂಕಾಲದ
-ವರೆಗೂ ಗಿಜಿಗುಡುವ
ಈ ಅಸಹ್ಯ ವಾಸನೆಯ
ಬೆಂಗಳೂರಿನಲ್ಲಿ...
ಕೊಡು-ಕೊಳ್ಳುವಿಕೆಯೇ
ಜೀವನವೆಂದು,
ಭಾವನೆಗಳಿಗೆ ಬೆಲೆಯೇ
ಇಲ್ಲವೆಂದು ನಂಬಿ
ಅಷ್ಟೆತ್ತರಕೆ
ತಲೆ ಎತ್ತಿ ನಿಂತ
ಶಾಪಿಂಗ್ ಮಾಲ್ ಗಳಲಿ...
ಯಾರು ಬಿದ್ದರೂ
ಯಾರು ಸತ್ತರೂ
ತನಗೇನು
ಸಂಭಂದವೇ ಇಲ್ಲ
-ವೆಂದು ಓಡುತ್ತಲೇ ಇರುವ
ಟ್ರಾಫಿಕ್ಕಿನಲಿ...
ಭಾರತದ ಜನಸಂಖ್ಯೆಗೆ
ಜೀವಂತ ನಿದರ್ಶನ
-ದಂತಿರುವ ಗಿಜಿಗಿಜಿ
ಬಿ.ಎಂ.ಟಿ.ಸಿ ಬಸ್ಸಿನಲ್ಲಿ...
ಬಸ್ಸಿನ ಕಿಡಕಿಯಲಿ...
ಪ್ರತಿಸಲ ಹೊರಗೆ
ಹೋಗುವಾಗಲು
ದಾಟಿ ಹೋಗುವ
ಬೀದಿ ತಿರುವಿನ
ಪಾನಿ ಪುರಿ
ಅಂಗಡಿಯಲಿ...
ಏನು ಮಾಡಿದರೂ
ಯಶಸ್ಸು ಸಿಗದೇ
ಸೋತು ಮರಳುವ
ನಿರಾಶೆಯಲಿ...
ಜಗತ್ತಿನ ಎಲ್ಲ
ಜಂಜಡಗಳು ಮುಗಿದು
ಮನದಲಿ ಸ್ಥಾಪಿತವಾಗುವ
ಸ್ನಿಗ್ದ ಮೌನದಲಿ...
ಹಕ್ಕಿಯೊಂದು ಕುಳಿತು
ಹಾರಿ ಹೋದ ಮರದ ರೆಂಬೆಯ
ಮರ್ಮರದಲಿ...

ಗುರುವಾರ, ಅಕ್ಟೋಬರ್ 14, 2010

ಶರಣು



ಬದುಕಿನ ನೂರು ಸೋಲು,

ಕಷ್ಟಗಳೂ ಕಲಿಸದ ಅದ್ಭುತ

ಪಾಠ ಕಲಿಸಿದ ನಿನ್ನ ಸೆಡವಿಗೆ,

ಅಸಡ್ಡೆಗೆ, ಅವಿರ್ಭವಿಸದೆ ಉಳಿದು

ಹೋದ ಆ ಬಂಗಾರದಂತಹ

ಪ್ರೀತಿಗೆ!!!


ನೀನೇನು ಕಾಲವಾ?

ನೀನೇನು ಕಾಲವಾ?

ಹೊರಟು ಹೋದ ಮೇಲೆ

ಮರಳಿ ಬರಲಾರೆ

ಎಂದು ದುಖಿಸುವದಕ್ಕೆ...

ಕವಿ ಮಿರ್ಜಾ ಗಾಲಿಬ್ ಸಾಲು ಎಷ್ಟು ಸತ್ಯ ಆಲ್ವಾ? ಒಂದ್ಸಲ ಸರಿಯಾಗಿ ಓದು. ನಿನಗಿದು ಅರ್ಥವಾದೀತು. ಇದರೊಳಗಿನ ನಾನು ಅರ್ಥವಾದೇನು!

ನೀನು ನನ್ನ ವಿಲಾಸದ ಒಂದು ಭಾಗವಲ್ಲ. ನಿನ್ನನ್ನೇ ಬದುಕಾಗಿಸಿಕೊಂಡಿದ್ದೇನೆ. ಬದುಕಿನ ಕಸುವಾಗಿಸಿಕೊಂಡಿದ್ದೇನೆ. ಹೀಗಾಗಿ ನೀನು ಬಹುದೂರದಲ್ಲಿದ್ದು ನೊಂದರೆ, ನಿಡಸುಯ್ದರೆ, ನಿನ್ನ ಕಣ್ಣುಗಳಲ್ಲಿ ನೀರು ಸುಳಿದಿರುಗಿದರೆ ಒಂದು ವಿಚಿತ್ರ ಸಂಕಟವನ್ನು ನಾನಿಲ್ಲಿ ಅನುಭವಿಸುತ್ತೇನೆ! ನೀನಲ್ಲಿ ಹಸಿದಿದ್ದರೆ, ನನಗಿಲ್ಲಿ ಊಟ ಮಾಡದ ಮನಸ್ಥಿತಿ. ನಿನ್ನ ದುಃಖಕ್ಕೆ, ನನ್ನ ಕಣ್ಣಿರು. ನಿನ್ನ ನಲಿವಿಗೆ, ನನ್ನ ಕಿರುನಗೆ. ನಿನ್ನ ಹಗಲುಗಳ ಮೊದಲ ಕಿರಣ ನಾನು! ನಿನ್ನ ಇರುಳ ಆಕಾಶದಲಿ ಕಾಣುವ ಮೊದಲ ಚುಕ್ಕಿ ನಾನು! ನೀನು ಛಟ್ಟನೆ ಮಾತು ಮುಗಿಸಿ ಎದ್ದು ಹೊರಟೆಯಲ್ಲ? ತಕ್ಷಣ ನೆನಪಾದದ್ದು ಗಾಲಿಬ್ ಕವಿತೆ. ನೀನು ಕಾಲವಲ್ಲ! ಮತ್ತೆ ಹಿಂದಿರುಗುವದಿಲ್ಲವೇನೋ ಎಂದು ದುಗುಡಪಡಬೇಕಾಗಿಲ್ಲ. ಜಗತ್ತು ತುಂಬಾ ಚಿಕ್ಕದು ಮತ್ತು ದುಂಡಗಿದೆ. ನೀನು ಯಾವ ದಾರಿಯಲ್ಲಿ ಹೊರಟರೂ ನಿನ್ನ ನಾವೇ ಮತ್ತೆ ನನ್ನಲ್ಲಿಗೆ ಮರಳಿ ಬರಬೇಕು! ಅಲ್ಲಿ ಸಣ್ಣ ಮರಳ ದಂಡೆಯ ಮೇಲೆ ನಾನಿರುತ್ತೇನೆ! ನಿನಗೋಸ್ಕರ!!

ನಿನ್ನಲ್ಲೊಬ್ಬ ಕಮ್ಮಗಿನ ಗೆಳತಿ, ಕಾಮನೆಗಳ ಕೆಂಡ ಸಂಪಿಗೆ, ಶುದ್ಧ ಪ್ರೀತಿಯ ಮಮಕಾರ, ನೊಂದಾಗ ಚುಕ್ಕು ತಟ್ಟಿ ಮಲಗಿಸುವ ವಾತ್ಸಲ್ಯಮಯಿ ಅಮ್ಮ, ಸುಮ್ಮನೆ ಕೈ ಹಿಡಿದು ನಡೆಸಿಕೊಂಡು ಹೋಗೋಣವೆನಿಸುವಂತಹ ಅರಳು ಕಂಗಳ ಅಮಾಯಕ ಮಗು - ಇಷ್ಟೆಲ್ಲಾ ನಾನು ಕಾಣದೆ ಹೋಗಿದ್ದರೆ... ಇಂದು ಇಷ್ಟೊಂದು ನೋವು ಅನುಭವಿಸುವ ಜರೂರತ್ತಿರಲಿಲ್ಲ!!! ಮಾತಿಗೆ ಕುಳಿತಾಗ ಇದೆಲ್ಲ ಹೇಗೆ ಬಿಡಿಸಿ ಹೇಳಲಿ? ನಾನು ಕೇವಲ ಬರೆಯಬಲ್ಲೆ. ಹಾಳೆಗೂ ನನಗೂ ಯಾವುದೋ ಜನ್ಮದ ನಂಟು - ನನ್ನಂತೆ ನಿನ್ನಂತೆ!!! ಆದರೆ ಅಕ್ಷರಗಳು ಮುನಿಯುವದಿಲ್ಲ. ಛಟ್ಟನೆ ಕೈ ಕೊಡವಿ ಎದ್ದು ಹೋಗುವದಿಲ್ಲ. ಪ್ರತಿ ಸಲ ನಿನಗೆ ಬರೆಯಲು ಕುಳಿತಾಗಲೂ ನೀನು ನನಗೆ ಜಾಸ್ತಿ ಅರ್ಥವಾಗ್ತಿಯ; ತಲೆ ಬಾಗಿಸಿ ನಿಂತ ಫಕಿರನಿಗೆ ದೇವರು ಅರ್ಥವಾದಂತೆ!! ಒಂದೊಂದು ಪತ್ರವೂ ದೂರಾತಿ ದೂರದಿಂದ ಕೈ ಹಿಡಿದು ಕರೆ ತಂದು ನಿನ್ನ ಮಡಿಲಿಗೆ ಚೆಲ್ಲಿದೆ. ಕಡೆಯ ಪಕ್ಷ ನನ್ನ ಅಕ್ಷರಗಳ ಘಮ, ಅದಾದರೂ ನಿನಗೆ ನನ್ನ ಅರ್ಥ ಮಾಡಿಸುವದಿಲ್ಲವಾ ಸೋನು?

ನಂಗೆ ಅದೂ ಗೊತ್ತು: ಮರೆತು ಸುಮ್ಮನಾಗಬಹುದಾದ ಹುಡುಗೀ ನೀನೂ ಅಲ್ಲ. ನನ್ನ ಬದುಕಿನಲಿ ಮೂಡಿ ನಿಂತ ಮೊದಲ ವಸಂತ. ಮಾಮರದ ಚಿಗುರು ತಿಂದ ಮೊದಲ ಕೋಗಿಲೆ. ಕುಹೂ ಎಂದು ಕೂಗಿ ಎಬ್ಬಿಸಿದ ಮೊದಲ ಮಧುರ ದ್ವನಿ. ನನ್ನ ಬದುಕು ನಿನ್ನ ಬರುವಿಕೆಗಿಂತ ಮೊದಲು ಹೇಗಿತ್ತು ಎಂಬುದು ನಿಚ್ಚಳ ನೆನಪಿದೆ; ಅದೂ ಭಾನುವಾರದ ಮದ್ಯಾಹ್ನದಂತೆ ಖಾಲಿ ಖಾಲಿ. ಅಂತ ಬದುಕಿನೊಳಗೆ ಶುಕ್ರವಾರದ ಸಂಭ್ರಮವಾಗಿ ನಡೆದು ಬಂದವಳು ನೀನು!! ಸುಮ್ಮನೆ ಹುಡುಗಿಯಾಗಿದ್ದರೆ ಪರಿ ಪ್ರೀತಿಸುತ್ತಿರಲಿಲ್ಲವೇನೋ? ನೀನೊಂದು ಗುಂಗು. ಬದುಕಿನ ರಂಗು. ಬಿಟ್ಟು ಬಿಡದೆ ನೆನಪಾಗ್ತಿಯ. ಕಣ್ಣಿಗೆ ಕಟ್ಟಿದ ಚಿತ್ರವಾಗುತ್ತಿಯ. ಒಬ್ಬನೇ ಕುಳಿತು ನಿನ್ನ ಹೆಜ್ಜೆಯ ಸಪ್ಪುಳಕ್ಕಾಗಿ ಕಾಯುತ್ತೇನೆ. ಅದೆಷ್ಟೋ ಹೊತ್ತಿನಿಂದ ತುಂಬಾ ಲೋನ್ಲಿ. ನನ್ನೊಳಗೆ ನಾನೂ ಇಲ್ಲವೇನೋ ಎಂಬಷ್ಟು ಒಬ್ಬಂಟಿ. ಬರೆಯುವ ಹುಡುಗ ಹೀಗೆ ಬಳಲಬಹುದೇ ಗೆಳತಿ? ನನ್ನ ಕಥೆಯ ಪಾತ್ರ ಮುನಿದಿವೆ. ಕವಿತೆಗಳಿಗೆಕೋ ಬಿಗಿದ ಗಂಟಲು. ಪೆನ್ನಿಗೂ ವಿಶಾಧದ ಸೆಳೆತ. ಹಾಳೆಗೆ ನೋವಿನ ಮುದುರು. ಅವುಗಳಿಗೆಲ್ಲ ನೀನು ಬೇಕು. ಮೇಕೆ ಮರಿಯ ಅಬೋಧ ಕಣ್ಣುಗಳಲ್ಲಿ ತಾಯಿ ಕಳೆದುಹೋದ ದಿಗಿಲು. ತುಂಬಾ ಇಷ್ಟದಿಂದ ನಾನೂ ಏನನ್ನಾದರೂ ಬರೆದು ಎಷ್ಟು ದಿನಗಳಾದವು ಜಾನಂ?

ಇವತ್ತಿಗೂ ಆಸೆ ಕಳೆದುಕೊಂಡಿಲ್ಲ. ಬಂದೆ ಬರುತ್ತಿ. ಆದರೆ ಯಾವತ್ತು? ಕರಾರುವಾಕಾಗಿ ನೀನು ಬರುವ ಘಳಿಗೆಯನ್ನಾದರೂ ಹೇಳು. ಅಲ್ಲಿಯವರೆಗಾದರೂ ಬದುಕಿರಲು ಪ್ರಯತ್ನಿಸುತ್ತೇನೆ; ಸುಳ್ಳೇ ಸಂತೋಷವೊಂದನ್ನು ಮೈಗೆ ಸುತ್ತಿಕೊಂಡು.

ನೆನಪಿರಲಿ ಒಬ್ಬ ಹುಡುಗ ಕಾಯುತ್ತಿದ್ದಾನೆ

ನಾವೆಗೆ ಕಾಯುವ ದಂಡೆಯಂತೆ

ಕೇವಲ ನಿನಗೋಸ್ಕರ!!!

ಹುಡುಕಿದೆ ನಿನ್ನ...


ಸುರಿದ ಮಳೆಯಲಿ
ಹುಡುಕಿದೆ ನಿನ್ನ
ಇಲ್ಲದಿರಬಹುದು
ಅದೃಷ್ಟ
ಮತ್ತೊಮ್ಮೆ ಪಡೆಯುವ
ಆ ಸ್ವಾತಿ ಮುತ್ತನ್ನ...

ಶುಕ್ರವಾರ, ಅಕ್ಟೋಬರ್ 08, 2010

ಮಳೆಯ ಮೋಡ


ನನ್ನ ಮನದಲ್ಲೂ ಒಂದು
ಮಳೆಯ ಮೋಡ ಹೆಪ್ಪುಗಟ್ಟುತಿದೆ
ಅದಕ್ಕೂ ಭುವಿಗೆ ಇಳಿದು
ಮುತ್ತಾಗುವ ಆಸೆ!
ಆದರೆ ಕಪ್ಪೆ ಚಿಪ್ಪಲ್ಲದೇ
ಇನ್ನೆಲ್ಲೋ ಬಿದ್ದು ಹೋಗುವ ಭಯ...
ಕಲ್ಲು, ಮುಳ್ಳು, ಮರ
ಎಲೆ, ನೆಲ, ನೀರು
ಎಲ್ಲಿ ಬಿದ್ದರೇನು?
ಬಿದ್ದ ಜಾಗದಲ್ಲೊಂದು
ಕನಸು ಚಿಗುರಿಸುವ
ಮನಸು ಅರಳಿಸುವ
ಹಂಬಲ ಅಷ್ಟೇ!!
ಯಾಕೆಂದರೇ ಎಲ್ಲ ಮಳೆ ಹನಿಯೂ ಮುತ್ತಾಗದಂತೆ!!!