ಮಂಗಳವಾರ, ಏಪ್ರಿಲ್ 27, 2010

ಹುಣ್ಣಿಮೆ...


ನಾಚುತ್ತಾ ಆಕೆ
ಎದೆಯ ಮೇಲಿನ ಹೊದಿಕೆ
ಬದಿಗೆ
ಸರಿಸುತ್ತಾ ಹೋದ ಹಾಗೆ
ಪಾಡ್ಯ, ಬಿದಿಗೆ, ತದಿಗೆ..
(ಡುಂಡಿರಾಜರಿಂದ ಕದ್ದಿದ್ದು...)

ಸೋಮವಾರ, ಏಪ್ರಿಲ್ 26, 2010

ಒಂದು ಸಂಜೆ...

ಇನ್ನೊಂದು ಬೇಸರದ ಸಂಜೆ
ಪಾರ್ಕಿನ ಮೂಲೆಯಲ್ಲಿರುವ
ಕಲ್ಲು ಹಾಸಿನ ಮೇಲೆ ಅದೇ
ಒಬ್ಬಂಟಿ ಮುದುಕ...
ನಿನ್ನೆ ಬಂದ ಮಳೆಗೆ
ಇಂದೂ ಕ್ಲೀನ್ ಆಗದ
ಉದುರಿದ ಎಲೆಗಳು...
ಗೇಟಿನ ಪಕ್ಕದಲ್ಲಿ
ನಿಂತು ಸಿಗರೇಟು ಸುಡುತ್ತ
ತನ್ನ ಕೈ ಕೊಟ್ಟ
ಗೆಳತಿಯನ್ನ ನೆನೆಸಿಕೊಳ್ಳುವ
ಮಧ್ಯವಯಸ್ಕ...
ಬಂದೆ ಬರ್ತೀನಿ ಅಂತಾ
ಹೇಳಿ ಇನ್ನು ಬಾರದ ಹುಡುಗಿಗೆ
ಕಾಯುತಿರುವ
ಮುಗ್ದ ಪ್ರೇಮಿ...
ಬೆಳಿಗ್ಗೆ ಇಂದಲೂ
ಆಗದ ವ್ಯಾಪಾರಕ್ಕೆ
ಚಿಂತೆಯ ಮೋಡ ಮುಸುಕಿದ
ಮುಖದ ಕಳ್ಳೆಕಾಯಿ ಮಾರುವ
ಮುದುಕಿ...
ಇವರೆಲ್ಲರ ಧಾವಂತದ
ಮುಖದಲ್ಲೂ ನಿನ್ನನ್ನೇ
ಹುಡುಕುವ ಹುಚ್ಚ
ನಾನು...
ನನ್ನ ಎಲ್ಲ ನಿರೀಕ್ಷೆಯನ್ನು
ಸುಳ್ಳು ಮಾಡುವ
ಹಠ ಹಿಡಿದ
ನೀನು...

ಗುರುವಾರ, ಏಪ್ರಿಲ್ 22, 2010

ಮಳೆಯ ಗೆಳೆಯ...

ಮನಸೇ,
ಇವತ್ತು ಹೊರಗೆ ಭಯಂಕರ ಮಳೆ! ಒಳಗೂ ಕೂಡಾ!! ಹೌದು ಪ್ರತಿ ಮಳೆಗೂ ಭಾವುಕ ಮನುಷ್ಯನ ಮನಸಿನಲಿ ಭಾವನೆಗಳ ಅಬ್ಬರವೆಬ್ಬಿಸುವ ಶಕ್ತಿ ಇದೆ. ಅದಕ್ಕೆ ಜೀವಂತ ಉದಾಹರಣೆ ನಾನೇ!!
ಪ್ರತಿ ಮಳೆಯೂ ನನ್ನಲ್ಲೊಂದು ಉತ್ಸಾಹ, ಖುಷಿ, ಸಮಾಧಾನ, ಆಸೆ ಛಲ ತುಂಬುವಂತೆ ನೋವು, ದುಃಖ, ಖಿನ್ನತೆಯನ್ನೂ ತರುತ್ತದೆ. ಸುರಿಯುವ ನೀರಿನಲ್ಲಿ ಹರಿದು ಬರುವದು ಏನೆಂದು ಯಾರಿಗೆ ಗೊತ್ತು? ಎಲ್ಲವೂ ಇದ್ದಾಗಲೇ ಅದು ಬದುಕು ಅಲ್ವಾ?
ಇಷ್ಟು ದಿನದ ಎಲ್ಲ ಬೇಗೆಗಳನ್ನು ತೊಳೆದು ಹಾಕಲೆಂದೇ ಬಂದಂತಿತ್ತು ಈ ಬಿರುಮಳೆ. ಮಳೆ ಜೊತೆ ಆಲಿಕಲ್ಲು ಕೂಡಾ! ಖುಷಿಯಿಂದ ಮಳೆಯ ತುಂತುರುವಿನಲಿ ನಿಂತವನ ಎದೆಗೆ ಬಿದ್ದ ಆಲಿಕಲ್ಲು ನಿನ್ನ ನೆನಪಿನಂತೆ ಅದೇ ಸುಮಧುರ ಯಾತನೆಯನ್ನು ಹೊತ್ತು ತಂದಿದ್ದು ಆಶ್ಚರ್ಯ!!
ಪ್ರತಿ ಹಸಿವೆಗೂ ತಾಯಿಯತ್ತ ನೋಡುವ ಮಗುವಿನಂತೆ ಸುರಿಯುವ ಮಳೆಯನ್ನೇ ನೋಡುತ್ತಿದ್ದೆ. ನನ್ನ ಮಳೆಯ ಹಸಿವು ಅಗಾಧವಾದದ್ದು, ಅನಂತವಾದದ್ದು! ಹೌದು ನಾನು ಮಳೆ ಹಸಿವಿನ ಮನುಷ್ಯ!! ನನ್ನ ಹಸಿವನ್ನು ತಣಿಸಲು ಬಂದ ಮಳೆಯ ರುದ್ರ ರೂಪ ನಿನಗಾಗಿ...





ಬೀಳುವ ಆಲಿಕಲ್ಲಿನ ತಂಪಲ್ಲೂ ನಿನ್ನನ್ನೇ ಹುಡುಕುತ್ತಿದ್ದ
ಆಸೆಬುರುಕ...

ಶನಿವಾರ, ಏಪ್ರಿಲ್ 17, 2010

ಜೇನು - ನೀನು

ಅಲ್ಲಿ ಹುಟ್ಟಿನ ಒಳಗಿದ್ದರೆ

ಇಲ್ಲಿ ಮೈ ತುಂಬಾ

ದುಂಬಿಗಳ ಕಷ್ಟದ ಫಲ

ಸೃಷ್ಟಿಕರ್ತನ ಛಲ

ತಿಂಗಳುಗಳ ಸಾರ್ಥಕತೆ

ವಾರ್ಷಿಕ ಮೊತ್ತ

ತಿಂದರೆ ಸಿಗುವ ಸುಖ

ನೋಟಕ್ಕೆ ದಕ್ಕುವ ಮಜ

ಅಲ್ಲಿ ಹನಿ ಹನಿ

ಇಲ್ಲಿ ಬೊಗಸೆ ಬೊಗಸೆ

ಅಲ್ಲಿ ಬಾಯ್ತುಂಬ


ಇಲ್ಲಿ ಕೈ ತುಂಬ


ಬಣ್ಣಗಳೆರಡಿದ್ದರೂ ರುಚಿ ಮಾತ್ರ ಒಂದೇ


ಎಂದೆಂದಿಗೂ ಮರೆಯದಂತೆ



ಶುಕ್ರವಾರ, ಏಪ್ರಿಲ್ 16, 2010

ಮಳೆಯೋಲೆ...

ಒಂದು ಸುಂದರ ಸಂಜೆಯ ಜಡಿ ಮಳೆಯಲಿ ನೆನೆದು ತಂಪಾಗಿ ಬಂದವನ ಎದೆಗೆ ಬಿಸಿಯುಸಿರು ತಗಲುವಂತೆ ನಿಂತವಳೇ ಮಳೆಗೂ ಪ್ರೀತಿಗೂ ಅನೇಕ ಸಾಮ್ಯ.
ನನ್ನಂತೆ-ನಿನ್ನಂತೆ!!
ಪ್ರೀತಿಗೆ ಮಳೆ ಬೇಕು. ಎಲ್ಲದಕ್ಕೂ ಬೇಕು. ಮಳೆ ಇದ್ದರೆ ಇಳೆ, ಬೆಳೆ ಎಲ್ಲ. ಮಳೆ ಎಂದರೆ ನೆನಪು. ನಿನ್ನೊಂದಿಗಿನ ನೆನಪು. ಹನಿಗೆ ಮೋಡದ ನೆನಪು, ಮೋಡಕ್ಕೆ ಸಾಗರದ ನೆನಪು, ಸಾಗರಕೆ ಹೊಳೆಯ ನೆನಪು, ಹೊಳೆಗೆ ಬಿದ್ದ ಹನಿಯ ಪುಳಕ. ಸಿಟ್ಟಿಗೆದ್ದರೆ ಕುಂಭದ್ರೋಣ, ಖುಷಿಯಾದರೆ ಧಾರೆ, ಅಂಗಳದ ಕೊನೆಗೆ ಸುರಿದಿಟ್ಟ ತಾರೆ.
ಮೊದಲ ಒಲವ ಮಳೆ
ಅದು ನಿಲ್ಲದ ಮಳೆ
ಮಳೆ ನಿಂತರೂ ಮರದ
ಹನಿ ನಿಲ್ಲುವದಿಲ್ಲ!!
ಮೊದಲ ಮಳೆಗೆ ತೆರೆದುಕೊಂಡ ಮನಸು ಒಳಗೊಳಗೇ ಮುತ್ತಾಗಿತ್ತಾ? ಅಥವಾ ಸ್ವಾತಿ ಮಳೆಯ ತನಕ ಕಾಯಬೇಕಾ?
ಇನ್ನೊಮ್ಮೆ ಸಿಕ್ಕಾಗ ಹೇಳು.
(ಧಾರೆಯಾಗಿ ನನ್ನ ಮೇಲೆ ಪ್ರೀತಿಯ ತುಂತುರು ಚಿಮುಕಿಸಿದ ನನ್ನ ವರ್ಷಧಾರೆಗೆ ಈ ಮಳೆ ನೆನಪಿನ ತಂಗಾಳಿ)

ಅವಳೊಂದಿಗೆ ಮಳೆಯಲಿ!!!


ಅದು ಆಷಾಡದ ಒಂದು ಸಂಜೆ. ಅದಕ್ಕೆ ಜೊತೆಯಾದದ್ದು ಒಂದು ಅವಿಚ್ಛಿನ್ನ ಬಿಳಿ ಮೋಡ. ಇನ್ನೇನು ಸುರಿಯ ಬೇಕು ಮುಸಲಧಾರೆ. ಸ್ವಚ್ಚ ಕಣ್ಣಿಗೆ ಕಾಣುವದು ಜಲಲ ಜಲಧಾರೆ. ಜೊತೆಗೆ ಅವಳು!!
ಜಗತ್ತೇ
ಕಾಯುತಿರುವ ಮೊದಲ ಮಳೆ.ಇವಳೋ ಮೊದಲ ಮಳೆಗೆ ಬಾಯಿತೆರೆದ ಭೂಮಿ. ಇಳಿ ಸಂಜೆಯ ಜಡಿಮಳೆಯಂತೆ ಅವಳು ಶಾಶ್ವತ. ನಿಂತಲ್ಲಿ ನಿಲ್ಲದೆ ಚಂಚಲ. ತೋಯಿಸಿ ತಂಪಾಗಿಸುವ ಎರಡು ಮಳೆಗಳ ನಡುವೆ ನಾನು - ಅಲ್ಲಾಡದೇ ನಿಂತ ಬೃಹತ್ ವೃಕ್ಷ!!
ಹನಿಗಳ ಜೇಂಕಾರದ ನಡುವೆ ಅವಳ ಸ್ವರ, ಹಸುವಿನ ಹಾಲಿಗೆ ಇಷ್ಟೇ ಇಷ್ಟು ಜೇನು ಬೆರೆಸಿದ ವರ. ಅವಳು ನೀರು. ನಾನು ನೀರು ನೀರು. ನಮ್ಮ ಪ್ರೀತಿಯೇ ಹಾಗೆ ಎಷ್ಟೋ ದಿನದಿಂದ ಕಾಯುತ್ತಿದ್ದಂತೆ, ಆದರೆ ಸ್ವಾತಿ ಮಳೆಯಲ್ಲದೆ ಬೇರಾವ ಮಳೆ ಹನಿಯು ಮುತ್ತಾಗದಂತೆ!! ನಾವಿಬ್ಬರೂ ಕಾಯುತ್ತಿರಬೇಕು ಸ್ವಾತಿ-ಚಿಪ್ಪಿನಂತೆ!!!

ಮಳೆ...


ಸೋನೆ ಮಳೆ, ಜಡಿಮಳೆ,
ತುಂತುರು ಮಳೆ,
ಸಿಡಿಲ ಸಿಡಿತಕ್ಕೆ ಗಾಬರಿ ಬಿದ್ದು,
ಮನುಷ್ಯನ ಎದೆಗೆ ಅಪ್ಪಿಕೊಳ್ಳುವ ಪುಕ್ಕಲು ಮಳೆ,
ರಾತ್ರಿ ಶುರುವಾಗುವ,
ಮುಂಜಾನೆ ಹೊತ್ತಿಗೆ ನಿಂತು ಹೋಗುವ ಗುಪ್ತ ಮಳೆ,
ಎದೆಯಲ್ಲಿ ಸಾವಿರ ಕಾಮನಬಿಲ್ಲು ಮೂಡಿಸುವ ಸುಪ್ತ ಮಳೆ,
ಸಾವಿರ ನೆನಪುಗಳಿಗೆ ಮೆರವಣಿಗೆ ಹೊರಡಿಸುವ ಸಂಚಿತ ಮಳೆ,
ವಿರಹದುರಿಗೆ ತುಪ್ಪ ಸುರಿಯುವ ಆಷಾಡದ ರಾಶಿ ಮಳೆ,
ಸಮುದ್ರದಾಳದ ಕಪ್ಪೆಚಿಪ್ಪು ಬಾಯಿ ತೆರೆದಾಗಲೆಲ್ಲ ತಪ್ಪಿಸಿಕೊಳ್ಳುವ ಜಾಣ ಮಳೆ,
ಮಣ್ಣಿನ ವಾಸನೆ ಹೊತ್ತು ತರುವ ಮೊದಲ ಮಳೆ,
ಕವಿ ಭಾವದ ಬಾಗಿಲು ತಟ್ಟುವ ಸಂಜೆ ಐದರ ಮಳೆ,
ಆಕಾಶದಿಂದ ಜಾರಿದ ಪ್ರೀತಿಯ ಮಳೆ,
ಬೆಟ್ಟದ ಮೇಲೆ ಬಿಡದೆ ಸುರಿಯುವ ದೊಡ್ಡ ಮಳೆ,
ಬೇಂದ್ರೆ ಅಜ್ಜನ ಮಜ್ಜನ ಮಾಡಿದ ಉದ್ದುದ್ದ ಶುದ್ಧ ಮಳೆ,
ನಿಮ್ಮ ಮನದಲ್ಲೂ ಬಿದ್ದಿತ್ತೆ ಆಸೆಯ ಮಳೆ?

ಇಂದು..


ಹುಣ್ಣಿಮೆಯ ರಾತ್ರಿಯಿಂದು
ಚಂದಿರನೆ ಇಲ್ಲ!
ಹಸಿರು ಸಸ್ಯ ವನರಾಶಿಯಿದು
ಹೂ ಗಳೇ ಇಲ್ಲ!
ನಾಲ್ಕು ದಿಕ್ಕಿಗೂ ನೀರೇ ಇದೆ
ದಡವೇ ಕಾಣುತ್ತಿಲ್ಲ!
ಕತ್ತಲೆಯ ದಾರಿಯಿದು
ಬೆಳಕೇ ತೋರುತ್ತಿಲ್ಲ!
ಸುಮ್ಮನೆ ಕುಳಿತ ಶಿವನ
ಜಡೆಯಲಿ ಗಂಗೆ ಇಲ್ಲ!
ಮೊದಲ ಮಳೆ ಬಿಳುತ್ತಿದ್ದರೂ
ನವಿಲು ನರ್ತಿಸುತ್ತಿಲ್ಲ!
ದಿನಗಳು ಕಳೆದು ಹೋದರೂ
ನೀನೆ ಇಲ್ಲ!!

ಕತ್ತಲಲ್ಲಿ ಕುಳಿತು ಬರೀ ಶೂನ್ಯವನ್ನೇ ದಿಟ್ಟಿಸುತಿರುವ ಕಂಗಳಲಿ ನಿನ್ನ ಚಿತ್ರ ಕದಲುತಿದೆಯಾ?
ಗೊತ್ತಿಲ್ಲ!! ಕಣ್ಣು ಮಾತ್ರ ಯಾಕೋ ಮಂಜಾಗಿವೆ...

ಹೊರಟೆ...

ಇಷ್ಟಪಟ್ಟು ಆಡುತ್ತಿದ್ದ
ಮಗು ಅರ್ಧಕ್ಕೆ
ಆಟ ಬಿಟ್ಟು ಎದ್ದು ಹೊರಟಂತೆ!!!

ನಾನು..

ಹೊರಗೆ ಸೋನೆ ಮಳೆ
ಒಳಗೆ ನಿನ್ನ ನೆನಪಿನ ಅಗ್ಗಿಷ್ಟಿಕೆ
ಆ ಮಳೆಯ ಚಳಿಗೆ ನಡಗುತ್ತಾ
ಈ ಬಿಸಿಗೆ ಮನಸನ್ನು ಒಡ್ಡುತ್ತಾ
ಬೆಚ್ಚಗಾಗಲು ಒದ್ದಾಡುತ್ತಿರುವ
ಅಲೆಮಾರಿ!!!

ಕವಿತೆ...

ನನ್ನೆದೆಯೊಳಗಿನ ಭಾವ
ಮಾತುಗಳಾಗದಾಗ
ಮೌನದ ಗರ್ಭದಲ್ಲಿ
ಜನಿಸಿದ್ದು...

ಏಕಾಂಗಿ...


ಏಕಾಂತ ರಾತ್ರಿಯಲಿ
ತಂಪಾದ ಮುಂಜಾನೆಯಲಿ
ಇಬ್ಬನಿಯ ಮಬ್ಬಿನಲಿ
ತಬ್ಬಿದ ನಿದ್ದೆಯಲಿ
ಇಷ್ಟಪಟ್ಟ ಹಾಡಿನಲ್ಲಿ
ಹಳೆಯ ಪಲ್ಲವಿಯಲಿ
ತುಂಬಿದ ಬೆಳದಿಂಗಳಿನಲ್ಲಿ
ಬರಗಾಲದ ಭೂಮಿಯಂತೆ ಬರಡಾದ ಈ ಜೀವನದಲಿ
ಮೊದಲ ಮಳೆಗೆ ಸೆಲೆಯೊಡೆದ ಸಿಹಿನೀರಿನ ಬುಗ್ಗೆಯಂತೆ
"ನಿನ್ನ ನೆನಪಿನ ಜಾತ್ರೆಯಲಿ ನಾನೇ ಒಬ್ಬಂಟಿ"

ವಿಪರ್ಯಾಸ!!!

ಎದೆಯೊಳಗೆ ಕದಲುವ
ಕಡಲಿಗೆ ಅಲೆಗಳೇ ಇಲ್ಲ
ಮನಸೊಳಗೆ ಹುಟ್ಟುವ ಅಕ್ಕರೆಗೆ
ಮಾತುಗಳೇ ಸಿಗುತ್ತಿಲ್ಲ
ನನ್ನೊಳಗೆ ನಾನು
ನಿನ್ನೊಳಗೆ ನೀನು
ಇಬ್ಬರೂ ಪ್ರೀತಿಸಿದರೂ
ಬದುಕು ಒಬ್ಬಂಟಿ!!!

ಬುಧವಾರ, ಏಪ್ರಿಲ್ 14, 2010

ಮಳೆಗೊಂದು ಸ್ವಗತ...



ಒಂದೇ ಸಮನೆ ನಿಟ್ಟುಸಿರು
ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ ಕಂಗಳಲಿ
ಕರಗುತಿದೆ ಕನಸಿನ ಬಣ್ಣ
ಎದೆಯ ಜೋಪಡಿಯ ಒಳಗೆ
ಕಾಲಿಡದೆ
ಕೊಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ
ಮಳೆಬಿ
ಲ್ಲಿನಂತೆ ನೋವು
ಕೊನೆಯಿರದ ಏಕಾಂತವೆ ಒಲವೇ...

ನಿನದೇ ನೆನಪು...


ಮತ್ತೆ ಮತ್ತೆ ನೀನೇ ನೆನಪಾಗ್ತಾ ಇದ್ದೀಯ
ಮರೆತು ಹೋಗಬೇಕೆಂಬ ವಿಚಿತ್ರ ತಳಮಳದಲಿ
ಪ್ರತಿ ದಿನವೂ, ಕ್ಷಣವೂ ನಿನದೇ ನೆನಪು
ನೀನಿಲ್ಲ ಎಂಬ ಸತ್ಯ ಅರಗಿಸಿಕೊಳ್ಳದ ಮನಸು
ನಿನಿಲ್ಲೇ ಇದ್ದೀಯ ಎಂಬ ಹುಚ್ಚು ಕನವರಿಕೆಯಲ್ಲೇ ಇದೆ
ಮೊಬೈಲಿನ ವಾಲ್ ಪೇಪರ್ ನಲ್ಲಿ ನಿರಂತರ ಸುರಿಯುವ ಮಳೆಯಂತೆ...

ಸೋಮವಾರ, ಏಪ್ರಿಲ್ 12, 2010

ನಿನ್ನ ಪ್ರೀತಿಸೋದಕ್ಕೆ ಕಾರಣವೇ ಇರಲಿಲ್ಲ...


ಇನ್ಯಾವತ್ತೂ ನಿನ್ನ ನೆನಪು ಮಾಡಿಕೊಳ್ಳಬಾರದೆಂದು ಅವಡುಗಚ್ಚಿ ಕುಳಿತಿದ್ದೆ. ನೀನು ನೆನಪಾದ ತಕ್ಷಣ ಕಣ್ಣಲ್ಲಿ ಮೂಡುವ ಒಂದಷ್ಟು ಹನಿಗಳನ್ನು ನನಗೇ ಕಾಣದಂತೆ ಮುಚ್ಚಿಟ್ಟಿದ್ದೆ. ಪ್ರತಿ ಕ್ಷಣ ನಿನ್ನ ನೆನಪು ಮಾಡಿಕೊಳ್ಳುವ ನನ್ನ ಅಸಹಾಯಕತೆಗೆ ನಾನೇ ಬೇಸರಿಸಿಕೊಂಡಿದ್ದೆ. ನಿನ್ನಿಷ್ಟದ ಹಾಡನ್ನ ಯಾವತ್ತೂ ಗುನಿಗಿಕೊಳ್ಳಲಿಲ್ಲ ನಿನ್ನೊಂದಿಗೆ ತಿಂದ ವೆಜ್ ಕುರ್ಮಾ,ಗೋಲಗುಪ್ಪೆ, ಪಾನಿಪುರಿ ಯಾವುದನ್ನೂ ತಿಂದೆ ಇಲ್ಲ. ನಿನ್ನ ಜೊತೆ ನೋಡಬೇಕಾಗಿದ್ದ ಎಷ್ಟೋ ಸಿನಿಮಾಗಳನ್ನ ನೋಡೇ ಇಲ್ಲ. ಇದಾವುದನ್ನು ನೆನಪು ಮಾಡಿಕೊಳ್ಳಬಾರದು ಎಂದುಕೊಂಡರೂ ನನಗೆ ಸಾಧ್ಯವಾಗ್ತಿಲ್ಲ. ಇದೇನಾ ಪ್ರೀತಿ?
ಕಾರಣವೇ ಇಲ್ಲದೆ ಇಷ್ಟವಾದವಳು ನೀನು. ಅಸಲು ನಿನ್ನ ಪ್ರೀತಿಸೋದಕ್ಕೆ ಕಾರಣವೇ ಇರಲಿಲ್ಲ. ಹೌದು ನಿಜವಾದ ಪ್ರೀತಿಗೆ ಕಾರಣವೇ ಬೇಕಿಲ್ಲ. ಅದು ಬೆಳದಿಂಗಳಿನಂತೆ! ತನ್ನ ಅನನ್ಯವಾದ ಹಾಲು ಬಿಳುಪನ್ನ ಹರಡುವದೊಂದೇ ಕೆಲಸ. ಯಾವುದರ ಮೇಲೆ ತನ್ನ ಬೆಳಕು ಹರಡುತ್ತಿದೆ? ಕಲ್ಲು, ಮುಳ್ಳು, ಬೆಟ್ಟ, ಗುಡ್ಡ, ನದಿ, ತೊರೆ ಉಹುಂ ಅದಕ್ಕೆ ಬೇಕಿಲ್ಲ!! ಅದು ಎಲ್ಲಿ ಬಿದ್ದರೂ ಕಳವಳ, ಗೊಂದಲ ಯಾವುದು ಇಲ್ಲ. ನನ್ನ ಪ್ರೀತಿ ಮಾತ್ರ ಕಾಡು ಬೆಳದಿಂಗಳಾಯಿತೇ? ಗೊತ್ತಿಲ್ಲ!

ಬಣ್ಣ ಬದಲಿಸುವ ಹುಡುಗ - ಹುಡುಗಿಯರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನಿಜವಾಗಿಯೂ ಪ್ರೀತಿಸುವವರ ಸಂಖ್ಯೆ ಯಾವತ್ತೂ ಕಡಿಮೆಯಾಗಿಲ್ಲ!!! ನಿನ್ನ ಚಂಚಲ ಮನಸು, ಹಸಿ ಹಸಿ ಸುಳ್ಳು ಇವೆಲ್ಲವನ್ನೂ ಬದಿಗಿಟ್ಟು ಹೇಳಬೇಕೆಂದರೆ... ಇನ್ನೂ ಕೂಡ ಇಷ್ಟೇ ಇಷ್ಟು ಪ್ರೀತಿ ಉಳಿದಿಕೊಂಡಿದೆ. ಅದು ಹೆಮ್ಮರವೂ ಆಗಬಹುದು. ನನ್ನ ಸ್ವಾಭಿಮಾನವನ್ನೆಲ್ಲ ಮತ್ತೊಮ್ಮೆ ಅಡವಿಟ್ಟು ನೀನು ಬೇಕೇ ಬೇಕೆಂದು ಕೊನೆ ಸಲ ಕೇಳ್ತಾ ಇದ್ದೀನಿ!!! ಪ್ಲೀಸ್ ಒಂದೇ ಒಂದು ಸಲ ತಿರುಗಿ ಬಂದು ಬಿಡು ನಾವು ತಿನ್ನೋ ಪಾನಿಪುರಿ, ಗೋಲಗುಪ್ಪೆ ಕಾಯ್ತಾ ಇವೆ!!! ಇನ್ನೆಂದೂ ಬಿಟ್ಟು ಹೋಗದ ಹಾಗೆ ಗಟ್ಟಿಯಾಗಿ ತಬ್ಬಿಕೊಂಡೇ ಬದುಕಿ ಬಿಡ್ತೀನಿ ಇರುವಷ್ಟು ಕಾಲ.

ನಿನ್ನ ನೆನಪನ್ನೇ ಉಸಿರಾಡಿಕೊಂಡಿರುವ ನಾನೇ..