ಗುರುವಾರ, ಡಿಸೆಂಬರ್ 30, 2010

ಇದು ಹೊಸ ವರ್ಷ!!!


ಎಡವಿ
ಬಿದ್ದರೆ ಮತ್ತೊಂದು ಹೊಸವರ್ಷ!!!
ಬನಶಂಕರಿಯ ಕಾಫಿ ಬಾರಿನಲ್ಲಿ ಕುಳಿತ ಹುಡುಗಿಯ ಕಣ್ಣುಗಳಲಿ ಯಾರದೋ ನಿರೀಕ್ಷೆ...
ಎಂಥ ರಜೆಯ ದಿನವಾದರೂ ಬೆಳಗಿನ ಚಳಿಗೆ ನಡಗುತ್ತಾ ಪೇಪರ್ ಹಂಚುವ ಹುಡುಗನಿಗೂ ಯಾವುದೊ ಹರುಷ...
ಪಾರ್ಕಿನ ತುಂಬಾ ಜನರಿದ್ದರೂ ತನ್ನ ಕಡಲೆಕಾಯಿ ಮಾರಾಟವಾಗದ ಮುದುಕಿಗೂ ಅದೇನೋ ಸಂತಸ...
ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸಿದರೂ ತಿರುಗಿ ನೋಡದ ಹುಡುಗಿಯ ನೆನಪಿಗೆ ಕರಗಿ ಹೋಗುವ ಹುಡುಗನಿಗೂ ಏನೋ ಆಸೆ...
ಕಳೆದು ಹೋಗಿ ವರುಷಗಳೇ ಕಳೆದರೂ ಅವಳ ನೆನಪನ್ನೇ ಉಸಿರಾಡುವ ಭಗ್ನ ಪ್ರೇಮಿಗೂ ಯಾವುದೋ ಕನಸು...
ಹೀಗೆ ಕಷ್ಟ-ಸುಖಗಳ ತೂಗುಯ್ಯಾಲೆಯಲಿ ತೇಲಿ ಹೋಗುತಿರುವ ಈ ಬದುಕಿನ ದೋಣಿಗೆ ಇನ್ನೊಂದು ದಡ ದಾಟಿದ ಹೆಮ್ಮೆ...
ಈ ವರ್ಷದ ಎಲ್ಲ ಕ್ಷಣಗಳನ್ನೂ ಸಂತೋಷದಿಂದಲೇ ಬದುಕೋಣ ಎಂಬ ದಿವ್ಯ ನಿರ್ಧಾರದೊಂದಿಗೆ ಹೊಸ ವರ್ಷವನ್ನ ಆರಂಭಿಸೋಣ...
Cheers...

ಭಾನುವಾರ, ಡಿಸೆಂಬರ್ 12, 2010

ಲಾಲ್ ಬಾಗಿನಲ್ಲೊಬ್ಬ ಏಕಾಂಗಿ...

ಗೇಟಿನಲ್ಲಿ ೧೦ ರುಪಾಯಿ ನನಗೆ, ೫ ರುಪಾಯಿ ಬೈಕಿಗೆ ಟಿಕೆಟ್ ತೊಗೊಂಡು ಒಳಬಂದರೆ, ಯಾವ ದಿಕ್ಕಿಗೆ ಹೋಗಬೇಕೆಂಬ ಕನ್ ಪ್ಯೂಷನ್ನು, ಎತ್ತ ತಿರುಗಿದರೂ ಹಸಿರೆ - ಉಸಿರು. ಬೆನ್ನ ಹಿಂದೆ ಅಷ್ಟೇತ್ತರಕೆ ಎದ್ದು ನಿಂತ ಬೆಟ್ಟ. ಆ ಬೆಟ್ಟದ ಎದೆಯ ಮೇಲೊಂದು ಮಂಟಪ. ಮಂಟಪದ ತುಂಬಾ ಪ್ರೇಮಿಗಳ ಕಲರವ. ಬದುಕಿನ ಅನಿವಾರ್ಯತೆಗೆ ಯಂತ್ರದಂತಾದ ಮನುಷ್ಯನ ನವಿರು ಭಾವನೆಗಳ ಅನಾವರಣ. ಹಸಿರು ಮೈದುಂಬಿ, ಹೂಗಳು ಅರಳಿ, ಉದ್ಯಾನನಗರ ಎಂಬ ಮಾತಿಗೆ ಜೀವಂತ ಸಾಕ್ಷಿಯಂತೆ ಗಾಜಿನ ಮನೆಯನ್ನೂ, ಕಾರಂಜಿಯನ್ನು, ಜೊತೆ ಜೊತೆಗೆ ಪ್ರೇಮಿಗಳನ್ನು ತನ್ನ ತಂಪಾದ ಮಡಿಲಲ್ಲಿ ಹಿಡಿದಿಟ್ಟುಕೊಂಡ ಲಾಲ್ ಬಾಗಿನಲ್ಲಿ ಬಹುಶ: ನಾನೊಬ್ಬನೇ ಏಕಾಂಗಿ. ಜೀವಂತಿಕೆಯಿಂದ ನಳನಳಿಸುವ ಮರದಲ್ಲೊಂದು ಒಣಗಿ ನಿಂತ ರೆಂಬೆಯಂತೆ!!!

ಕಾಯುತ್ತಿದ್ದಾನೆ...

ಯಾಂತ್ರಿಕ ಜಗತ್ತಿನ
ರಭಸದಲಿ ಸಾಗಿ
ಹೋಗುತಿರುವ ಮುದ್ದು ಹುಡುಗೀ
ಚೂರೇ ಚೂರು ತಿರುಗಿ
ನೋಡು ಮನದ ತುಂಬಾ
ಕೇವಲ ಪ್ರೀತಿ ಇಟ್ಟುಕೊಂಡ
ಒಬ್ಬ ಒಳ್ಳೆ ಹುಡುಗ
ಕಾಯುತ್ತಿದ್ದಾನೆ ಕೇವಲ
ನಿನಗೋಸ್ಕರ!!!

ಬದುಕಿನ ಬಸ್ಸು ತಪ್ಪಿದವ...

ಜನ ಜಂಗುಳಿಯ
ಮೆಜೆಸ್ಟಿಕ್ಕಿನಲಿ ಇನ್ನೂ
ಕಾಯುತ್ತಲೇ ಇದ್ದೇನೆ
ಬಸ್ಸು ತಪ್ಪಿದ
ಪ್ರಯಾಣಿಕನಂತೆ!!

ಸಾಯಲಾರೆ!!!

ಯಾವ ತಪ್ಪೂ ಮಾಡದೇ
ನಿನ್ನ ಪಾಲಿಗೆ ಈಗಾಗಲೇ
ಸತ್ತು ಹೋದ ನಾನು
ನಿನಗೆ ತೊಂದರೆ ಕೊಟ್ಟು
ಇನ್ನೊಮ್ಮೆ ಸಾಯಲಾರೆ!!!

ಮಂಗಳವಾರ, ಡಿಸೆಂಬರ್ 07, 2010

ನೀನು

ಕತ್ತಲ ರಾತ್ರಿಯಲಿ ಹಣತೆ
ಬೇಸಗೆಯಲಿ ಒರತೆ
ಬರ್ಬರ ಏಕತಾನತೆಯಲಿ
ಯಾವತ್ತೂ ಕೇಳದ ಕಥೆ!!

NO WAY...

ಪ್ರೀಯೆ ನಿನ್ನ ನೆನಪೆಂದರೆ
ನನಗೆ ನೋವೇ
ಅದರಿಂದ ಹೊರಬರಲು
NO WAY...

ಚಳಿಗಾಲಕ್ಕೊಂದು ಪುಟ್ಟ ಪತ್ರ...


ಬೆಳ್ಳಿ ಬೆಟ್ಟದ ಭಾವಗಂಗೆ,
ಮಳೆಗಾಲ ಮುಗಿಯುತಿದೆ. ಮುಸುಕಿದ ಮೋಡದ ಮರೆಯಿಂದ ಹೊರ ಸರಿದ ಸೂರ್ಯ ಫಳಫಳಿಸುತ್ತಿದ್ದಾನೆ. ಗರಿಕೆಯ ಗರ್ಭದಲ್ಲಿ ಹುಟ್ಟಿದ ಚಳಿ ಬೆನ್ನು ಮೂಳೆಯವರೆಗೂ ಹರಡುತಿದೆ. ಹೃದಯದಲ್ಲಿದ್ದ ಪ್ರೀತಿ ಈ ಚಳಿಗೆ ಕಿಬ್ಬೊಟ್ಟೆಗೆ ಜಾರಿ ಕಾಂಕ್ಷೆಯಾಗಿ ಎದ್ದು ಬರುತಿದೆ. ಮುಸಲಧಾರೆಗೆ ಕವಿಯಾಗಿದ್ದವನು ಕೆರಳಿದ ಚಿರತೆಯಂತಾಗಿದ್ದೇನೆ. ಸನಿಹದಲಿ ನೀನಿಲ್ಲ!
ಇವತ್ತು ಸಿಗು. ಬೆಳದಿಂಗಳ ರಾತ್ರಿ, ಚಂದ್ರನ ಮುಖದಲ್ಲೂ ಅಸೂಯೆ ಬರುವಷ್ಟು ಗಾಢ ನಮ್ಮಿಬ್ಬರ ಪ್ರೀತಿ, ತನ್ನ ಪ್ರಿಯತಮನಿಗಾಗಿ ಜನುಮಾಂತರದ ವಿರಹ ಕಳೆಯಲೇನೋ ಎಂಬಂತೆ ರಭಸದಿಂದ ಹರಿಯುವ ನದಿಯ ಕಲರವ, ಸಕ್ಕರೆಯಂತೆ ಮೃದುವಾಗಿ ಮೈಗೊತ್ತುವ ಮರಳು, ಕೈ ಚಾಚಿದರೆ ಸಿಗುವ ನಾನು, ತಂಪಾದ ಮೊಸರನ್ನ, ಬೆಳತನಕ ಹಾಡು ಹಾಡು ಹಾಡು...
"ಹೂವು ಹಾಸಿಗೆ ಚಂದ್ರ ಚಂದನ
ಬಾಹು ಬಂಧನ ಚುಂಬನ..."
ದಣಿದರೆ ನನ್ನ ಹೆಗಲು ಇದ್ದೆ ಇದೆ. ಸುಂದರವಾದ ಕನಸುಗಳನ್ನು ಏಳೇಳು ಜನ್ಮಕ್ಕಾಗುವಷ್ಟು ಕಟ್ಟಿ ಕೊಡುತ್ತಾ, ನಿನ್ನ ಕಿವಿಗೆ ಇಂಪಾದ ಹಾಡಾಗುತ್ತಾ, ನಿನ್ನ ಜಂಪಿಗೆ ತಂಪಾದ ಮಡಿಲಾಗುತ್ತಾ, ಬೆಳಗಿನ ಸೂರ್ಯ ಕಿರಣ ನಿನ್ನ ಮನೆಯ ಪಾರಿಜಾತದ ಮೇಲೆ ಬಿಳುವದರೋಳಗಾಗಿ ನಿನ್ನ ಮನೆ ಮುಟ್ಟಿಸುತ್ತೇನೆ. ಅವತ್ತಷ್ಟೆ ಅರಳಿದ ನಿನ್ನ ಮನೆಯ ಕಿಡಕಿಗೆ ಆತು ನಿಂತ ಮಲ್ಲಿಗೆ ಮೊಗ್ಗಿನ ಮೇಲಾಣೆ!!
ನಿನ್ನೊಂದಿಗೆ ಬೆಳದಿಂಗಳಿನಲ್ಲಿ ೪೮೦ ನಿಮಿಷಗಳನ್ನು ಇನ್ನು ಹೇಗೆಲ್ಲ, ಎಷ್ಟೆಲ್ಲಾ ಅದ್ಭುತವಾಗಿ ಕಳೆಯಬೇಕು ಎಂದು ಕಣ್ಣು ತೆರೆದೇ ಕನಸು ಕಾಣುತಿರುವ ನಾನೇ!!

ಒಳಗೆ - ಹೊರಗೆ

ಹೊರಗಡೆ ಜಡಿಮಳೆಯ
ಹಸಿ ಶುಂಟಿ
ಒಳಗಡೆ ತೆಕ್ಕೆಯಲಿ
ಶುದ್ದ ಜಗಳಗಂಟಿ!!

ಪಲಕು


ಪ್ರಕೃತಿಯ ಮಡಿಲಲ್ಲಿ ಮನುಷ್ಯ ಮಗುವಾಗುತ್ತಾನೆ, ಗಿಡವಾಗುತ್ತಾನೆ, ಮರವಾಗುತ್ತಾನೆ, ನದಿಯಾಗುತ್ತಾನೆ, ತುಂತುರು ಹನಿಯಾಗುತ್ತಾನೆ, ತೆಳ್ಳನೆಯ ಮಂಜಾಗುತ್ತಾನೆ, ಕವಿಯಾಗುತ್ತಾನೆ, ಕಿವಿಯಾಗುತ್ತಾನೆ, ತಾನು-ತಾನಾಗುತ್ತಾನೆ!!

ಗೊತ್ತಿದ್ದೂ...

ಎದುರು ಕುಳಿತ ನಿನ್ನನ್ನು
ನೋಡುತ್ತೇನೆ
'ತೃಪ್ತಿಯಾಗುವಂತೆ'
'ತೃಪ್ತಿಯಾಗುವದಿಲ್ಲ'
ಎಂದು ಗೊತ್ತಿದ್ದೂ!

ನೀನು

ಹವಳದ ತುಟಿ
ಬಡ ನಡು
ಮುದ್ದಾದ ಮುಖ
ಬೆಳದಿಂಗಳ ಬಣ್ಣ
ಚಂಚಲ ಮುಂಗುರುಳು
ಪುಟ್ಟ ಬಾಯಿ
ದೊಡ್ಡ ಹೃದಯ
ಆಯಕಟ್ಟಿನ ಜಾಗದಲ್ಲೊಂದು
ಜೇನ ಬಣ್ಣದ ಮಚ್ಚೆ!!!