ಶನಿವಾರ, ಫೆಬ್ರವರಿ 15, 2014

ಆರ್ಟ್ಸ್ ಹುಡುಗ ಮತ್ತು ಸೈನ್ಸ್ ಹುಡುಗಿ!!!



ಪ್ರತಿ ಮನುಷ್ಯ ಜೀವವೂ ಒಂದು ಕ್ಷಣ ಪುಳಕಗೊಳ್ಳುವ ಏಕೈಕ ಸಂಗತಿ ಪ್ರೀತಿ!!! ಪ್ರತಿಯೊಬ್ಬರೂ ಇನ್ನೊಬ್ಬರಿಂದ ಪ್ರೀತಿಸಿಕೊಳ್ಳಬೇಕು ಎಂಬುದು ಮನುಷ್ಯನ basic instinct. ಹಾಗೆ ನಾನು ಕೂಡಾ ಪ್ರೀತಿಸುವ, ಪ್ರೀತಿಸಲ್ಪಡುವ ಆ ದಿನ, ಕ್ಷಣ ನನ್ನ ಜೀವನದಲ್ಲೂ ಬಂದೆ ಬಿಡ್ತು.
ಒಂದು ಮದ್ಯಾಹ್ನ ಊಟ ಮುಗಿಸಿ ಯಾವುದೋ ಫೈಲ್ ನೋಡ್ತಾ ತೂಕಡಿಸುತಿದ್ದವನ ಹತ್ತಿರ ಬಂದು ‘ಹಲೋ’ ಅಂದಿದ್ದಷ್ಟೇ, ಜನ್ಮ-ಜನ್ಮಾಂತರದ ನಿರೀಕ್ಷೆಯಂತೆ ತಿರುಗಿ ನೋಡಿ ಬಿಟ್ಟೆ. ಅಲ್ಲಿ ಆಗಷ್ಟೇ ಮುಂಗಾರು ಮಳೆಯಲಿ ನೆನೆದು ಬಂದ ಶ್ರಾವಣದಂತೆ ಅಪರೂಪದ ‘ಶಿಲ್ಪ’ ಒಂದು ಮುಗುಳ್ನಗುತ್ತಿತ್ತು!!! ಹಾಯ್ ಅಂತ ಕೈ ಚಾಚಿದೆ. ‘ಯಾವುದೋ ಜನ್ಮದ ಮುಂದುವರೆದ ಭಾಗದಂತೆ ನಾವಿಬ್ಬರು ಸಿಕ್ಕೆವು’ ಅನಿಸ್ತು.
ಒಂದೇ ಆಫೀಸು, ಒಂದೇ ಕ್ಯಾಬು, ಒಂದೇ ಅಭಿರುಚಿ (ಸಾಹಿತ್ಯ, ಸಂಗೀತ) ನಾವಿಬ್ಬರೂ ಒಂದೇ ಅನ್ನಿಸುವಂತಹ ಹುಡುಗಿ ಅವಳು. ಪ್ರತಿದಿನ ಆಫೀಸಿನ ಮುಂದಿರುವ ಬೃಹತ್ ಆಲದ ಮರದ ಕೆಳಗೆ ಕ್ಯಾಬ್ ಗಾಗಿ ಕಾಯುತ್ತಿದ್ದ ಆ 20 ನಿಮಿಷಗಳು ರಸಮಯವಾಗತೊಡಗಿದವು. ಬೈರಪ್ಪ, ತೇಜಸ್ವಿ, ರವಿ ಬೆಳಗೆರೆ,ಕುವೆಂಪು, ಬೇಂದ್ರೆ, ಎಸ್ಪಿ, ಯೇಸುದಾಸ್, ಕನ್ನಡ ಸಿನಿಮಾ, ಕಾಯ್ಕಿಣಿ ಹಾಡು, ಕೊಡಚಾದ್ರಿಯ ತಂಪು, ಬೆಂಗಳೂರಿನ ಟ್ರಾಫಿಕ್ ಎಲ್ಲ ಎಲ್ಲ ಮಾತಿನ ಮಧ್ಯ ಬಂದು ಹೋಗ ತೊಡಗಿದವು.ಅಮೇರಿಕಾ ಅಮೇರಿಕಾ ಚಿತ್ರದ ‘ನೂರು ಜನ್ಮಕೂ’ ಹಾಡು ಇಬ್ಬರಿಗೂ ಇಷ್ಟ ಅಂತ ಗೊತ್ತಾಯ್ತು. ಎರಡೂವರೆ ವರ್ಷ ಎಂಬುದು ಒಂದು ಮುಕ್ಕಾಲು ಘಂಟೆಯಂತೆ ಸರಿದು ಹೋಯ್ತು!!!
ಅವಳು ಅದೇ ಆಲದ ಮರದ ಕೆಳಗೆ ನಮ್ಮದೇ ಆಫೀಸಿನ ಇನ್ನೊಬ್ಬನೊಂದಿಗೆ chemistry ಬಗ್ಗೆ ಮಾತು ಶುರು ಮಾಡಿದಾಗಲಾದರೂ ನಾನು ತಿಳಿದುಕೊಳ್ಳ ಬೇಕಿತ್ತು. ಭಾವುಕ ಮನಸಿನ ಆರ್ಟ್ಸ್ ಹುಡುಗ!!! ಸೈನ್ಸ್ ಗೂ - ಆರ್ಟ್ಸ್ ಗೂ ಮ್ಯಾಚ್ ಆಗಲ್ಲ ಅಂತ ತಿಳಿದು ಕೊಳ್ಳೋಕೆ ನಾನು ಕಳೆದುಕೊಂಡಿದ್ದು; ನಿಚ್ಚಳ ಪ್ರೇಮ, ಆಗಾಧ ನಂಬಿಕೆ ಮತ್ತು ಯಾರು ಮರಳಿಸಲಾಗದ ಎರಡೂವರೆ ವರ್ಷ!!!
ಬರಬರುತ್ತಾ ನನ್ನ ಸಾಹಿತ್ಯ ಅವಳ ಲ್ಯಾಬಿನ ಸಿಂಕಿನಲ್ಲಿ ಹರಿಯತೊಡಗಿತು. ಇಡೀ ರಾತ್ರಿ ಕುಳಿತು ಬರೆದು ಕೊಟ್ಟ ಮುದ್ದಾದ ಪ್ರೇಮ ಪತ್ರ ಅವಳ ಮ್ಯಾಥ್ಸ್ ನ ಫಾರ್ಮುಲಾ ಗಳೊಂದಿಗೆ ಹೋರಾಡಲಾಗದೆ ನಿಸ್ಸಹಾಯಕತೆ ಯಿಂದ ಮಡಚಿಹೋಯ್ತು. ಅವನೊಂದಿಗೆ gravity ಬಗ್ಗೆ ಚರ್ಚಿಸುವವಳಿಗೆ ನನ್ನ ಹೃದಯದ ಸೆಳೆತ ತಿಳಿಯಲೇ ಇಲ್ಲ. ಒನ್ ಫೈನ್ ಡೇ ಸಂಪಾದಕರಿಂದ ಮರಳಿ ಬಂದ ಅಪ್ರಕಟಿತ ಕಥೆ ಅಲ್ಲಲ್ಲ ಕವನಗಳಂತೆ, ನಾನು ಬರೆದ ಎಲ್ಲ ಪತ್ರ, ಕವಿತೆ, ಕನಸುಗಳನ್ನೂ ಹಿಂದಿರುಗಿಸಿ ಹೊರಟು ಹೋದಳು; ಕಾರಣವನ್ನೂ ಹೇಳದೆ!!!

ಅದೆಲ್ಲ ಏನೇ ಇರಲಿ ಅವಳು ಇದ್ದಷ್ಟು ದಿನ ಪ್ರಾಮಾಣಿಕವಾಗಿ ಪ್ರೀತಿಸಿದ್ದು ನಿಜ; ಜಿ.ಎಸ್.ಎಸ್ ಪದ್ಯಗಳಂತೆ!!! ಇವತ್ತು ಅವಳಿಲ್ಲ. ಆದರೆ ಅವಳ ಅಸ್ತಿತ್ವದ ಘಮ ನನ್ನ ಮನದಲ್ಲಿ ನಿರಂತರವಾಗಿರುತ್ತೆ; ಕನ್ನಡ ಸಾಹಿತ್ಯದಲ್ಲಿರುವ ಪಂಪನಂತೆ!!!
(ಹಾಯ್ ಬೆಂಗಳೂರ್ - ಸೃಷ್ಟಿ 597 ರಲ್ಲಿ ಪ್ರಕಟಿತ)