ಸೋಮವಾರ, ಏಪ್ರಿಲ್ 07, 2014

ಬೆಳಕಿನ ಬಾಗಿಲು ತೆರೆದ ಎಲ್ಲ ಮಹಾನುಭಾವರಿಗೂ Thanks!!!


ಧಡಾರ್ ಅಂತ ಸದ್ದು! ಏನು ಅಂತ ಕೂಡ ನೋಡಲಾಗದ ಜಡತ್ವ! ಎರಡು ನಿಮಿಷ ಸುಧಾರಿಸಿಕೊಂಡು ಯೋಚಿಸಿದರೆ ನನ್ನದೇ ಕನಸಿನ ಗೋಪುರ ಸಿಡಿದು ಬಿದ್ದಿತ್ತು!!!
“ಇನ್ನು ನಿನ್ನೊಂದಿಗೆ ನನಗೆ ಬದುಕಲಾಗದು; ಯಾಕೆಂದರೆ ನೀನು narrow minded fellow” ಅಂತ ಒಂದೇ ಉಸಿರಲಿ ಹೇಳಿ ಎದ್ದು ಹೋದಳು. ಮುಂಗಾರು ಮಳೆಯಲಿ ಶುರುವಾದ ಪ್ರೀತಿ, ಬಿರು ಬೇಸಿಗೆಯ ಒಂದು ಮಧ್ಯಾನ ಮುರಿದು ಬಿದ್ದಿತ್ತು; ನನ್ನ ಬದುಕಿನಂತೆ. “ಜಗತ್ತಿನಲಿ ಹುಟ್ಟಿದ ಪ್ರತಿ ಗಂಡು-ಹೆಣ್ಣು ಪ್ರಿತಿಸಿಕೊಳ್ಳುತ್ತಾರೆ; ನಿನ್ನದೆನಪ್ಪ ವಿಶೇಷ?” ಅಂತ ಕೇಳಿದ ಪರಮ ಗುರು ರವಿ ಬೆಳಗೆರೆಯ ಮಾತಿನಂತೆ ನಮ್ಮದು 3 ವರ್ಷಗಳ ಪವಿತ್ರ ಪ್ರೇಮ. ಬದುಕಿನ ಎಲ್ಲ ಕಷ್ಟ-ಸುಖಗಳನ್ನೂ ಒಟ್ಟಿಗೆ ಅನುಭವಿಸುವ ನಿರ್ಧಾರ ಮಾಡಿ, ಶುರುವಾದ ವಸಂತಗಾನ.
Propose ಮಾಡಿದ ದಿನವೇ ನಾವು ನಿರ್ಧರಿಸಿದ್ದು; We should rise with love ಅಂತ!!! ಇದ್ದ ಮೂರು ವರ್ಷಗಳಲಿ ಪಂಪನಿಂದ ಹಣಮಂತ ಹಾಲಿಗೇರಿ ವರೆಗೂ ಎಲ್ಲರನ್ನೂ ಓದುತ್ತಾ, ಒಬ್ಬರಿಗೊಬ್ಬರು ಓದಿ ಹೇಳುತ್ತಾ, ಎಲ್ಲೋ ಕೇಳಿದ ಅದ್ಭುತ ಹಾಡು ಕೇಳಿ – ಕೇಳಿಸುತ್ತಾ ದಿನಕ್ಕೊಂದು ಪತ್ರ, ಅರ್ಧದಿನಕ್ಕೊಂದು ಕವಿತೆ, ಮಧ್ಯರಾತ್ರಿಗೊಂದು ಚುಟುಕ ಹೀಗೆ ಬದುಕಿಬಿಟ್ಟೆವು. ಅದು ನಮ್ಮಿಬ್ಬರ ಬದುಕಿನ ಸುವರ್ಣಕಾಲ!!!
ಇಲ್ಲದ ಕಾರಣವನ್ನು ಹುಡುಕಿ, ಆರೋಪಿಸಿ ಎದ್ದು ಹೋದವಳ ಮರೆತು ಬದುಕಲು ತುಂಬಾ ಕಷ್ಟವಿತ್ತು; ಯಾಕೆಂದರೆ ನಾನು ಉಳಿದು ಹೋದವ!!! ಅದು ಕುರುಡು ಕತ್ತಲು. ಎದ್ದು ನಿಲ್ಲಲಾಗದ ಅಸಹಾಯಕತೆ, ಮುಖದ ಮೇಲೆ ಉಳಿದು ಹೋದ ಅವಮಾನದ ಗೀರು, ತುಳಿದು ಹೋದ ಎದೆ, ಸ್ವರ ಮೂಡದ ಕೊಳಲು, ಕ್ಷಣಕ್ಕೊಮ್ಮೆ ತುಂಬಿಕೊಳ್ಳುವ ಕಣ್ಣು, ಒಟ್ಟಿನಲ್ಲಿ ರವಿ ಹೇಳಿದಂತೆ Grinding Halt. ಕೇವಲ ಪ್ರೀತಿಸಿದ ತಪ್ಪಿಗೆ 2 ವರ್ಷಗಳ ಚಿತ್ರಹಿಂಸೆ. ಸತ್ತು ಹೋಗುವ ನಿರ್ಧಾರದಿಂದ ಹಿಂದೆ ಬಂದಿದ್ದಕ್ಕೆ ಕಾರಣ ಕೇವಲ “ಅಮ್ಮ”. ಮುರಿದು ಬಿದ್ದ ಬದುಕನ್ನ ಮತ್ತೆ ಮೊದಲಿನಿಂದ ಕಟ್ಟಿಕೊಳ್ಳುವ ಪೇಲವ ಯತ್ನ. ಮತ್ತೆ ಮತ್ತೆ ಮುಗ್ಗರಿಸುವ ಹಿಂಸೆ, ಸಿಗದ ನೌಕರಿ, ಅದು ಹತಾಶೆಯೇ ಮುಗಿ ಬಿದ್ದ ಕ್ರೂರ ಕಾಲ.
ಆ ಪ್ರಪಾತದಿಂದ ಮೇಲೆಬ್ಬಿಸಿದ್ದು Once Again ಅಮ್ಮ, ಗೆಳೆಯರು, ಮತ್ತೆ ಮೊದಲಿನಿಂದ ಓದಿದ ಎಲ್ಲ ಪ್ರೀತಿಯ ಲೇಖಕರು, ಸಂಗೀತ, ಸಾಹಿತ್ಯ, ಬದುಕಲ್ಲಿ ನಿಧಾನವಾಗಿ ಎಸ್ಪಿಬಿ, ಪಿಬಿಎಸ್, ಹಂಸಲೇಖ ನರಸಿಂಹ ಸ್ವಾಮಿಗಳ ಪದ್ಯ, ಅಶ್ವಥ್ ಕಂಠ ಕೇಳತೊಡಗಿತು! ಬೆಡ್ ರೂಮಲ್ಲಿ ರವಿ, ಭೈರಪ್ಪ, ಅನಂತಮೂರ್ತಿ, ಜಯಂತ ಕಾಯ್ಕಿಣಿ, ಜೋಗಿ, ದೆವನೂರು ಎಲ್ಲರೂ ಸಂತೆ ನೆರೆದು ಸಮಾಧಾನಿಸತೊಡಗಿದರು! ಬದುಕಿನ ಯಾವ ಕಷ್ಟಕ್ಕೂ, ನೋವಿಗೂ, ಹತಾಶೆಗೂ ಸಾಹಿತ್ಯ ಮತ್ತು ಸಂಗೀತದಲ್ಲಿ ಔಷಧಿ ಇದೆ ಎಂಬ ಸತ್ಯ ಗೊತ್ತಾಯ್ತು. I am happy now!!! ಬದುಕು ಮಗ್ಗುಲು ಬದಲಿಸುತಿದೆ. ಪ್ರತಿ ಸುರ್ಯೋದಯಕ್ಕೂ ಹೊಸ ಹುರುಪು, ಪ್ರತಿ ಇರುಳಿಗೂ ನವ ಸಂತಸ. ಯಾವುದೋ ‘ಭಾವ’ ದೂರದಿಂದ ಕೈ ಚಾಚುತಿದೆ. ನನ್ನ ಬದುಕಲ್ಲೂ ಮಧುರ ಆಲಾಪ ಶುರುವಾಗುವ ದಿನ ದೂರವಿಲ್ಲ ಅನಿಸುತಿದೆ. ಬರೋ ಮಳೆಗಾಲಕ್ಕೆ ಕೊರಡು ಕೊನರುವ ಸೂಚನೆ. ತಡೆದ ಮಳೆ ಜಡಿದು ಬರುವ ಮುನ್ಸೂಚನೆ!!!
ಬದುಕಿನ ಕಡು ಕಷ್ಟದಲಿ ಕೈ ಹಿಡಿದೆತ್ತಿದ ಎಲ್ಲ ಮಹಾನುಭಾವರಿಗೂ Thanks!!!

(ಹಾಯ್ ಬೆಂಗಳೂರ್ ನಲ್ಲಿ ಪ್ರಕಟಿತ)

ಶನಿವಾರ, ಮಾರ್ಚ್ 01, 2014

‘ಅಮ್ಮ’ ಮತ್ತು ಅನ್ನದ ಬೆಲೆ ತಿಳಿಸಿದ ಸಿಟ್ಟು...


ನನಗೆ ನೆನಪಿದ್ದಂತೆ, ನಾನು ಮೊಟ್ಟ ಮೊದಲು ಸಿಟ್ಟು ಮಾಡಿಕೊಂಡಿದ್ದು ನನ್ನ ಪ್ರೀತಿಯ ‘ಅಮ್ಮ’ನ ಮೇಲೆ!!! ಇವತ್ತಿಗೂ ಕಣ್ಣಿಗೆ ಕಟ್ಟಿದಂತೆ ನೆನಪಿದೆ. ಆಗ ನಾನು 5 ಅಥವಾ 6 ನೇ ಕ್ಲಾಸ್ ನಲ್ಲಿದ್ದೆ. ಉತ್ತರ ಕರ್ನಾಟಕದ ಬಯಲುಸೀಮೆಯವರಂತೆ ನಂಗೂ ರಣ ಹಸಿವು. ಏನು ಕೊಟ್ಟರೂ, ಎಷ್ಟು ಕೊಟ್ಟರೂ ತಣಿಯದ ಜಠರಾಗ್ನಿ.
          ಒಂದು ಮದ್ಯಾಹ್ನ ಸ್ಕೂಲ್ ಮುಗಿಸಿ ಸಳಸಳನೆ ಬೆವೆಯುತ್ತಾ ಮನೆಗೆ ಓಡಿ ಬಂದರೇ (ಮನೆಯಿಂದ ಸ್ಕೂಲ್ 2 ಕಿ.ಮೀ ದೂರ) ಅಮ್ಮ ಕಲೆಸಿಕೊಟ್ಟದ್ದು ಅನ್ನ, ಟೊಮೇಟೊ ಸಾರು!!! ಊಟ ಮಾಡ್ತಾ ಮಾಡ್ತಾ ಒಂದೇ ಒಂದು ಕಲ್ಲು ಸಿಕ್ಕಿ ಬಿಡ್ತು. ಎಲ್ಲಿತ್ತೋ ಆ ಸಿಟ್ಟು; ಉಣ್ಣುವ ತಟ್ಟೆ ಬೀಸಿ ಎದುರಿಗಿರೋ ಗೋಡೆಗೆ ಅಪ್ಪಳಿಸಿಬಿಟ್ಟೆ! ಬಿಸಿಲಲಿ ಓಡೀ ಬಂದದ್ದು, ರಣ ಹಸಿವು, ಇಷ್ಟವಿಲ್ಲದ ಟೊಮೇಟೊ ಸಾರು, ಅದರಲ್ಲೂ ಸಿಕ್ಕ ಬೆಣಚುಗಲ್ಲು. ಎಲ್ಲ ಸೇರಿ ನನ್ನೊಳಗಿನ ಮನುಷ್ಯನೇ ಸ್ವಲ್ಪ ಕಾಲ ಮರೆಯಾದ  ಕ್ಷಣ.
          ಸರಿಯಾಗಿ ಎರಡು ನಿಮಿಷ ಯಾವುದೋ ಟ್ರಾನ್ಸ್ ನಲ್ಲಿದ್ದ ಅನುಭವ. ಎಲ್ಲವೂ ಸ್ಥಿಮಿತಕ್ಕೆ ಬಂದು ಕಣ್ಣುಜ್ಜಿಕೊಂಡು ನೋಡಿದ್ರೆ; ಗೋಡೆಗೆ ರಾಚಿದ ಅನ್ನ, ಬಿದ್ದ ಏಟಿಗೆ ಚಪ್ಪಟೆಯಾದ ತಟ್ಟೆ, ಅಮ್ಮನ ಕಣ್ಣಲ್ಲಿ ನೀರು. ಬೇರೇನೂ ತೋಚದೇ ಎದ್ದು ಶಾಲೆಗೇ ಹೋಗಿ ಬಿಟ್ಟೆ. ಇಡೀ ದಿನ ಯೋಚನೆ ಮಾಡಿ, ಯಾವ ಮುಖ ಇಟ್ಟುಕೊಂಡು ಅಮ್ಮನ ಕ್ಷಮೆ ಕೇಳೋದು? ಛೇ.. ಎಂಥ ತಪ್ಪು ಮಾಡಿ ಬಿಟ್ಟೆ. ಕ್ಷಣ ಕ್ಷಣಕ್ಕೂ ಪ್ರೀತಿಯಿಂದ ಅನ್ನ ಕಲಿಸಿಕೊಂಡು ಬಂದು ತಟ್ಟೆ ಕೈಗಿಟ್ಟ ಅಮ್ಮನ ಚಿತ್ರವೇ ಕಣ್ಮುಂದೆ ಬರತೊಡಗಿತು. ಸತ್ತೇ  ಹೋಗಿ ಬಿಡೋವಷ್ಟು ನನ್ನ ಮೇಲೆ ನನಗೆ ಅಸಹ್ಯ.
ರಾತ್ರಿ ಎದ್ದು ಮನೆಗೆ ಹೋದರೆ, ಅದೇ ನಗು ಮುಖ, ಮದ್ಯಾಹ್ನ ಏನೂ ಆಗೇ ಇಲ್ಲವೇನೋ ಎಂಬಷ್ಟು ಸಮಾಧಾನ. “ಅರ್ಜೆಂಟ್ ಲ್ಲಿ ಅಕ್ಕಿ ಆರಿಸೋದು ಮರ್ತುಬಿಟ್ಟೆ ಕಣೋ” ಅಂತ ಮಗುವಿನಂತೆ ತಪ್ಪಿತಸ್ಥ ದನಿಯಲಿ ಹೇಳಿದಾಗ, ಯಾಕೋ ತಡೆಯದೆ ಅಮ್ಮನನ್ನ ತಬ್ಬಿಕೊಂಡು ಮನಸು ಹಗುರಾಗೋ ವರೆಗೂ ಅತ್ತುಬಿಟ್ಟಿದ್ದೆ.
ಅದಾದ ನಂತರ ಡಿಗ್ರಿ ಮುಗಿಸಿ ಬೆಂಗಳೂರಿಗೆ ಬಂದು ಬಿಟ್ಟೆ. ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ. ಇಲ್ಲಿಯ ಹೋಟೆಲ್ ಊಟ, ಅಮ್ಮನಿಲ್ಲದ ಇಕ್ಕಟ್ಟು ರೂಮು ಹುಟ್ಟಿಸುವ ಅನಾಥ ಪ್ರಜ್ಞೆ, ಎಲ್ಲ ಎಲ್ಲ ಸೇರಿ ನನಗೀಗ ಗೊತ್ತಾಗಿದೆ; ಅಮ್ಮ ಮತ್ತು ಅನ್ನದ ಬೆಲೆ!!! ಈಗಲೂ ಊರಿಗೆ ಹೋದಾಗ ಟೊಮೇಟೊ ಸಾರು ನೋಡಿದ್ರೆ ಅದೇ ಮುಗ್ದ ನಗು ಅಮ್ಮನ ಮುಖದ ಮೇಲೆ. ನಾನು ಪ್ಯಾಲಿ ನಗೆ ನಕ್ಕು ತಬ್ಬಿಕೊಳ್ತಿನಿ. ನನಗೀಗ ಟೊಮೇಟೊ ಸಾರು ಇಷ್ಟ!!!
ಕೊನೆಗೆ ನಾನ್ಯಾಕೆ ಅವತ್ತು ಹಾಗೆ ರಾಕ್ಷಸನ ಥರ ಆಡಿದ್ದೆ ಅಂದ್ರೆ; ನಮ್ಮ ಪಕ್ಕದ ಮನೆಯ ಒಬ್ಬ ಹುಡುಗ ನನಗಿಂತ 4-5 ವರ್ಷಕ್ಕೆ ದೊಡ್ಡೋನು ಪ್ರತಿದಿನ ಗೋಡೆಗೆ ತಟ್ಟೆ ಅಪ್ಪಳಿಸುತ್ತಿದ್ದ ಮತ್ತು ಅದು ಈಗಲೂ ಮುಂದುವರೆದಿದೆ!! Anyway ಅವತ್ತಿನ ತಪ್ಪಿಗೆ ಈಗ ಕೇಳ್ತಿದೀನಿ “ಅಮ್ಮಾ ಈ ನಿನ್ನ ದುಷ್ಟ ಮಗನನ್ನ ಕ್ಷಮಿಸಿಬಿಡು please….”  

(ಓ ಮನಸೇ 86 ರಲ್ಲಿ ಪ್ರಕಟಿತ)

ಶನಿವಾರ, ಫೆಬ್ರವರಿ 15, 2014

ಆರ್ಟ್ಸ್ ಹುಡುಗ ಮತ್ತು ಸೈನ್ಸ್ ಹುಡುಗಿ!!!



ಪ್ರತಿ ಮನುಷ್ಯ ಜೀವವೂ ಒಂದು ಕ್ಷಣ ಪುಳಕಗೊಳ್ಳುವ ಏಕೈಕ ಸಂಗತಿ ಪ್ರೀತಿ!!! ಪ್ರತಿಯೊಬ್ಬರೂ ಇನ್ನೊಬ್ಬರಿಂದ ಪ್ರೀತಿಸಿಕೊಳ್ಳಬೇಕು ಎಂಬುದು ಮನುಷ್ಯನ basic instinct. ಹಾಗೆ ನಾನು ಕೂಡಾ ಪ್ರೀತಿಸುವ, ಪ್ರೀತಿಸಲ್ಪಡುವ ಆ ದಿನ, ಕ್ಷಣ ನನ್ನ ಜೀವನದಲ್ಲೂ ಬಂದೆ ಬಿಡ್ತು.
ಒಂದು ಮದ್ಯಾಹ್ನ ಊಟ ಮುಗಿಸಿ ಯಾವುದೋ ಫೈಲ್ ನೋಡ್ತಾ ತೂಕಡಿಸುತಿದ್ದವನ ಹತ್ತಿರ ಬಂದು ‘ಹಲೋ’ ಅಂದಿದ್ದಷ್ಟೇ, ಜನ್ಮ-ಜನ್ಮಾಂತರದ ನಿರೀಕ್ಷೆಯಂತೆ ತಿರುಗಿ ನೋಡಿ ಬಿಟ್ಟೆ. ಅಲ್ಲಿ ಆಗಷ್ಟೇ ಮುಂಗಾರು ಮಳೆಯಲಿ ನೆನೆದು ಬಂದ ಶ್ರಾವಣದಂತೆ ಅಪರೂಪದ ‘ಶಿಲ್ಪ’ ಒಂದು ಮುಗುಳ್ನಗುತ್ತಿತ್ತು!!! ಹಾಯ್ ಅಂತ ಕೈ ಚಾಚಿದೆ. ‘ಯಾವುದೋ ಜನ್ಮದ ಮುಂದುವರೆದ ಭಾಗದಂತೆ ನಾವಿಬ್ಬರು ಸಿಕ್ಕೆವು’ ಅನಿಸ್ತು.
ಒಂದೇ ಆಫೀಸು, ಒಂದೇ ಕ್ಯಾಬು, ಒಂದೇ ಅಭಿರುಚಿ (ಸಾಹಿತ್ಯ, ಸಂಗೀತ) ನಾವಿಬ್ಬರೂ ಒಂದೇ ಅನ್ನಿಸುವಂತಹ ಹುಡುಗಿ ಅವಳು. ಪ್ರತಿದಿನ ಆಫೀಸಿನ ಮುಂದಿರುವ ಬೃಹತ್ ಆಲದ ಮರದ ಕೆಳಗೆ ಕ್ಯಾಬ್ ಗಾಗಿ ಕಾಯುತ್ತಿದ್ದ ಆ 20 ನಿಮಿಷಗಳು ರಸಮಯವಾಗತೊಡಗಿದವು. ಬೈರಪ್ಪ, ತೇಜಸ್ವಿ, ರವಿ ಬೆಳಗೆರೆ,ಕುವೆಂಪು, ಬೇಂದ್ರೆ, ಎಸ್ಪಿ, ಯೇಸುದಾಸ್, ಕನ್ನಡ ಸಿನಿಮಾ, ಕಾಯ್ಕಿಣಿ ಹಾಡು, ಕೊಡಚಾದ್ರಿಯ ತಂಪು, ಬೆಂಗಳೂರಿನ ಟ್ರಾಫಿಕ್ ಎಲ್ಲ ಎಲ್ಲ ಮಾತಿನ ಮಧ್ಯ ಬಂದು ಹೋಗ ತೊಡಗಿದವು.ಅಮೇರಿಕಾ ಅಮೇರಿಕಾ ಚಿತ್ರದ ‘ನೂರು ಜನ್ಮಕೂ’ ಹಾಡು ಇಬ್ಬರಿಗೂ ಇಷ್ಟ ಅಂತ ಗೊತ್ತಾಯ್ತು. ಎರಡೂವರೆ ವರ್ಷ ಎಂಬುದು ಒಂದು ಮುಕ್ಕಾಲು ಘಂಟೆಯಂತೆ ಸರಿದು ಹೋಯ್ತು!!!
ಅವಳು ಅದೇ ಆಲದ ಮರದ ಕೆಳಗೆ ನಮ್ಮದೇ ಆಫೀಸಿನ ಇನ್ನೊಬ್ಬನೊಂದಿಗೆ chemistry ಬಗ್ಗೆ ಮಾತು ಶುರು ಮಾಡಿದಾಗಲಾದರೂ ನಾನು ತಿಳಿದುಕೊಳ್ಳ ಬೇಕಿತ್ತು. ಭಾವುಕ ಮನಸಿನ ಆರ್ಟ್ಸ್ ಹುಡುಗ!!! ಸೈನ್ಸ್ ಗೂ - ಆರ್ಟ್ಸ್ ಗೂ ಮ್ಯಾಚ್ ಆಗಲ್ಲ ಅಂತ ತಿಳಿದು ಕೊಳ್ಳೋಕೆ ನಾನು ಕಳೆದುಕೊಂಡಿದ್ದು; ನಿಚ್ಚಳ ಪ್ರೇಮ, ಆಗಾಧ ನಂಬಿಕೆ ಮತ್ತು ಯಾರು ಮರಳಿಸಲಾಗದ ಎರಡೂವರೆ ವರ್ಷ!!!
ಬರಬರುತ್ತಾ ನನ್ನ ಸಾಹಿತ್ಯ ಅವಳ ಲ್ಯಾಬಿನ ಸಿಂಕಿನಲ್ಲಿ ಹರಿಯತೊಡಗಿತು. ಇಡೀ ರಾತ್ರಿ ಕುಳಿತು ಬರೆದು ಕೊಟ್ಟ ಮುದ್ದಾದ ಪ್ರೇಮ ಪತ್ರ ಅವಳ ಮ್ಯಾಥ್ಸ್ ನ ಫಾರ್ಮುಲಾ ಗಳೊಂದಿಗೆ ಹೋರಾಡಲಾಗದೆ ನಿಸ್ಸಹಾಯಕತೆ ಯಿಂದ ಮಡಚಿಹೋಯ್ತು. ಅವನೊಂದಿಗೆ gravity ಬಗ್ಗೆ ಚರ್ಚಿಸುವವಳಿಗೆ ನನ್ನ ಹೃದಯದ ಸೆಳೆತ ತಿಳಿಯಲೇ ಇಲ್ಲ. ಒನ್ ಫೈನ್ ಡೇ ಸಂಪಾದಕರಿಂದ ಮರಳಿ ಬಂದ ಅಪ್ರಕಟಿತ ಕಥೆ ಅಲ್ಲಲ್ಲ ಕವನಗಳಂತೆ, ನಾನು ಬರೆದ ಎಲ್ಲ ಪತ್ರ, ಕವಿತೆ, ಕನಸುಗಳನ್ನೂ ಹಿಂದಿರುಗಿಸಿ ಹೊರಟು ಹೋದಳು; ಕಾರಣವನ್ನೂ ಹೇಳದೆ!!!

ಅದೆಲ್ಲ ಏನೇ ಇರಲಿ ಅವಳು ಇದ್ದಷ್ಟು ದಿನ ಪ್ರಾಮಾಣಿಕವಾಗಿ ಪ್ರೀತಿಸಿದ್ದು ನಿಜ; ಜಿ.ಎಸ್.ಎಸ್ ಪದ್ಯಗಳಂತೆ!!! ಇವತ್ತು ಅವಳಿಲ್ಲ. ಆದರೆ ಅವಳ ಅಸ್ತಿತ್ವದ ಘಮ ನನ್ನ ಮನದಲ್ಲಿ ನಿರಂತರವಾಗಿರುತ್ತೆ; ಕನ್ನಡ ಸಾಹಿತ್ಯದಲ್ಲಿರುವ ಪಂಪನಂತೆ!!!
(ಹಾಯ್ ಬೆಂಗಳೂರ್ - ಸೃಷ್ಟಿ 597 ರಲ್ಲಿ ಪ್ರಕಟಿತ) 

ಗುರುವಾರ, ಜನವರಿ 09, 2014

ಇಬ್ಬನಿ

"ಆಕಾಶದೆಡೆಗೆ ಬರಿಗೈ ಎತ್ತಿ
ನಡೆದು ಬಂದ ನನಗೆ
ಜಗದ ರೀತಿ-ರಿವಾಜು ಗೊತ್ತಿಲ್ಲ
ಒಂದು ಪ್ರೀತಿಯ ಹೊರತಾಗಿ..."