ಗುರುವಾರ, ನವೆಂಬರ್ 19, 2009

ಒಂದು ಅದ್ಭುತ ಪ್ರೇಮಪತ್ರ!!!

ಒಂದ್ನಿಮಿಷ! ಹೊರಡುವ ನಿನ್ನ ಸಡಗರಕ್ಕೆ ನಾನು ಅಡ್ಡ ಬರುವುದಿಲ್ಲ. ಬಿಟ್ಟು ಹೊರಡುತ್ತಿರುವುದಕ್ಕೆ ಕಾರಣವನ್ನೂ ಕೇಳುತ್ತಿಲ್ಲ. ಮತ್ತೆ ನಿನಗೆ ಪತ್ರ ಬರೆಯುತ್ತೇನೋ ಇಲ್ಲವೋ? ಗುಂಡಗಿರುವ ಭೂಮಿ ಎಷ್ಟೇ ಚಿಕ್ಕದು ಅಂದುಕೊಂಡರೂ ಮತ್ತೆ ಭೇಟಿಯಾಗುತ್ತೇವೋ ಇಲ್ಲವೋ!!!
ಒಂದು ಮಾತು ಹೇಳುತ್ತೇನೆ ಕೇಳು. ಎರಡೂವರೆ ವರ್ಷವೆಂಬುದು ಸುಮ್ಮನೆ ಸರಿದು ಹೋದ ಕಾಲವಲ್ಲ.ಆದರೆ ನನ್ನ ಪಾಲಿಗೆ ಅದು ಸಾವಿರಾರು ಸೂರ್ಯೋದಯ-ಸೂರ್ಯಾಸ್ತಗಳ ಮಹಾ ಸಂಭ್ರಮ. ಪ್ರತಿ ಮುಂಜಾವೂ ನನ್ನ ಪಾಲಿಗೆ ಹೊಸ ವಸಂತ.

ನಿನ್ನ ನೆನಪಿನ ಗೆಜ್ಜೆ ಕಟ್ಟಿಕೊಂಡೇ ಏಳುತ್ತಿದ್ದೆ. ಇವತ್ತು ಅವಳು ಸಿಗುತ್ತಾಳೆ. ಹೀಗೆ ಮಾತಾಡ್ತಾಳೆ. ಮೃದುವಾಗಿ ನಗುತ್ತಾಳೆ. ಪುಟ್ಟ ಪತ್ರ ಬರೆದುಕೊಂಡು ಬಂದಿರುತ್ತಾಳೆ. ತುಟಿಯ ತಿರುವಿನಲ್ಲಿ ಯಾಕೋ ಸಣ್ಣ ಮುನಿಸು.

ಹೇಗೆ ಹೇಳಲಿ ಈ ಹುಡುಗಿಗೆ? ನನ್ನ ಪ್ರತಿ ಉಸುರಿನಲ್ಲೂ ನೀನಿದ್ದೀಯ. ನನ್ನ ಪ್ರತಿ ಕದಲಿಕೆ ನಿನ್ನ ಅಣತಿ. ನೀನಿಲ್ಲದೆ ನನ್ನ ಅಸ್ತಿತ್ವವಿಲ್ಲ. I am only yours. ಹಾಗಂತ ನನ್ನ ಮನಸ್ಸಿಗೆ ಪದೇಪದೆ ಹೇಳಿಕೊಂಡು ನಿನ್ನ ಬಳಿಗೆ ಬಂದರೆ, ನೀನು ಅದೆಲ್ಲ ಮರೆತು ಹೋಗುವಂತೆ ಇಷ್ಟಗಲ ನಗೆಯಾಗುತ್ತಿದ್ದೆ, ಸೂರ್ಯಕಾಂತಿ ಹೂವಿನ ಹಾಗೆ.
ಮೊದಲಿನಿಂದಲೂ ಅಷ್ಟೆ. ನಿನ್ನ ವರ್ತನೆ ಹೀಗೇ ಇರುತ್ತದೆ ಅನ್ನುವ ಹಾಗಿರಲಿಲ್ಲ. ಒಮ್ಮೆ ಪ್ರೀತಿಯ ಹೂಬಿಸಿಲು, ಮತ್ತೊಮ್ಮೆ ಚೆಲುವಿನ ಬೆಳದಿಂಗಳು, ಒಮ್ಮೆ ಬೇಸರದ ಕಡುಮೋಡ, ಇನ್ನೊಮ್ಮೆ ದಿವ್ಯನಗೆಯ ಧರೆದೀಪ, ಹುಚ್ಚು ಹೊಳೆಯಂತಹ ಅಪ್ಪುಗೆ, ಮೆದೆಯಲ್ಲಿ ಬಿದ್ದು ಉರುಳಿದ ಸುಸ್ತು. ಇದ್ದ ಎರಡೂವರೆ ವರ್ಷಗಳಲ್ಲಿ ಅದೆಷ್ಟು ಅನಂತವೆನ್ನಿಸುವಂತಹ ಪ್ರೀತಿ ಕೊಟ್ಟೆ ಹುಡುಗೀ?

ಅಷ್ಟು ಪ್ರೀತಿ ಪಡೆದ ನಾನು ಕೊನೆಯ ದಿನವೇ ಸತ್ತು ಹೋಗಬೇಕಾಗಿತ್ತು. ಈ ಪತ್ರ ಬರೆಯಲು ಅಸಲು ಬದುಕಿರಬಾರದಿತ್ತು. ಆದರೆ ನೀನು, ಇದು ಕೊನೆಯ ದಿನವಾದೀತು ಎಂಬ ಸುಳಿವೇ ಕೊಡಲಿಲ್ಲ.

ಆಯಿತು, ನಿನ್ನ ನಿರ್ಧಾರವೇ ಜಾರಿಗೆ ಬರಲಿ. ನಿನ್ನ ಪಾಲಿಗೆ ಇದೊಂದು ಚಿಕ್ಕ ಹೊರಳು. ಇಲ್ಲಿ ಮುಳುಗಿದವಳಿಗೆ ಅಲ್ಲಿ ಮೇಲೆದ್ದರೆ ಇನ್ನೊಬ್ಬನ ತೋಳಿನಾಸರೆ. ಅವನು ನನಗಿಂತ ಚೆಲುವನಿರಬಹುದು. ರಸಿಕ? ಯಾಕಾಗಬಾರದು? ಶ್ರೀಮಂತ, ಸುಶಿಕ್ಷಿತ, ಗಂಭೀರ, ಧೈರ್ಯವಂತ- ಎಲ್ಲವೂ ಆಗಿರುತ್ತಾನೆ. ಆಗಿರಲಿ ಬಿಡು. ಆದರೆ ನನಗಿಂತ ಹೆಚ್ಚು ಪ್ರೀತಿಸುವವನಾಗಿರಲಾರ. ಅಹಂಕಾರಪಡಲಿಕ್ಕೆ ಅದೊಂದೇ ನನಗೆ ಉಳಿದಿರುದು. ಅಷ್ಟನ್ನಾದರೂ ಉಳಿಸಿ ಹೋಗು.
ಬೇಕಾದರೆ ನನ್ನ ನಾಳೆಗಳನ್ನು ಒಯ್ದುಬಿಡು. ಅವುಗಳ ಅವಶ್ಯಕತೆ ಇನ್ನು ನನಗಿಲ್ಲ. ಬೆಳಕು ತನ್ನ ಸಂತೆ ಮುಗಿಸಿ ಹೋದ ಮನೆಯಲ್ಲಿ ಪ್ರಣತಿ ಅಪ್ರಸ್ತುತ.


ನಿನ್ನ ನೆನಪಿನ ನಾವಿಕ !!!

ಶುಕ್ರವಾರ, ಜುಲೈ 24, 2009

ಅರ್ಪಣೆ!!!


ಮುಂಗಾರು ಮಳೆಯ ಅಬ್ಬರದ ದಿನಗಳಲ್ಲಿ ಇಳಿಸಂಜೆಯ ಜಡೆ ಮಳೆಯಂತೆ ನನ್ನ ಬದುಕಿನಲಿ ನಡೆದು ಬಂದು, ತನ್ನ ಪುಟ್ಟ ಪುಟ್ಟ ಹೆಜ್ಜೆ ಗುರುತುಗಳನ್ನು ನನ್ನ ಎದೆಯ ಮೇಲೆ ಉಳಿಸಿ ಹೊಸ ಅಭಿಸಾರಿಕೆಗೆ ಮತ್ತು ಅವಳ ಮೇಲಿರುವ ಅನನ್ಯ ಪ್ರೀತಿಗೆ...

ಗುರುವಾರ, ಜುಲೈ 23, 2009

ಮೊದಲ ಹೆಜ್ಜೆ …


ಹಾಯ್,
ನಾನು ಗಿರೀಶ್, ಊರು ಉತ್ತರ ಕರ್ನಾಟಕದ ಬಯಲುಸೀಮೆ ಸದ್ಯಕ್ಕೆ ಬೆಂಗಳೂರಿನಲ್ಲಿ ಕೆಲಸ, ವಾಸ. ಅದಕ್ಕೆ ನನಗೆ ಮಳೆ ಅಂದ್ರೆ ಮಲೆನಾಡು ಅಂದ್ರೆ ಸತ್ತು ಹೋಗೋಷ್ಟು ಇಷ್ಟ . ಮೂಲತಃ ನಾನು ಕವಿಯಲ್ಲ , ಸಾಹಿತಿಯಲ್ಲ ! ಆದರೆ ಈ ಬದುಕಿನ ಕ್ಷಣ ಕ್ಷಣ ವನ್ನೂ ಸಂತೋಷದಿಂದ ಅನುಭವಿಸುವ ಆಸೆಹೊತ್ತ ಭಾವುಕಜೀವಿ , ಅಲೆಮಾರಿ , ಅಂತರ್ಮುಖಿ , ನಿಸರ್ಗ ಪ್ರೇಮಿ , ಹಾಡುಗಳ ಹುಚ್ಚ , ಅಕ್ಷರಗಳ ಕಡು ವ್ಯಾಮೋಹಿ ಹೀಗೆ ಇನ್ನು ಏನೇನೋ … ನಾನೇನು ಅಂತ ಇವತ್ತಿನವರೆಗೂ ನಂಗೇ ಅರ್ಥ ಆಗದ ಹೆಬ್ಬಂಡೆ!!!


"ಮಳೆಯಲ್ಲಿ ನೆನೆದರೆ ಮನಸು ಕೊಳೆಯಾಗುವದಿಲ್ಲವಂತೆ!!! ಅಂತಹ ಮನಸು ಕೊಳೆಯಾಗದ ಮಳೆಯಲ್ಲಿ ನಿರಂತರ ನಡೆಯುವಾ ಎನ್ನುತ್ತಾ …
ಮಳೆ ಪಯಣಕ್ಕೆ ಸ್ವಾಗತ..."