ಬುಧವಾರ, ಜುಲೈ 28, 2010

ಅಲ್ಲ


"ನೀನು ಆರಂಭವೂ ಅಲ್ಲ
ಅಂತ್ಯವೂ ಅಲ್ಲ"
ಈ ಜೀವನವೆಂಬ ಧೀರ್ಘ ಪಯಣದಲಿ ನಡು ದಾರಿಯಲಿ ಸಿಕ್ಕ ಸಹಪಯಣಿಗಳು. ಆದರೂ ನಿನಿದ್ದ ದಾರಿ ಸಾಗಿದ್ದು ಸುಗಮವಾಗಿಯೇ! ಈಗ ನೀನಿಲ್ಲ, ಸಾಗಬೇಕಾದ ದಾರಿ ಬಹಳಷ್ಟಿದೆ. ಸಾಗುವೆ ಕೂಡಾ. ನೀನಿಲ್ಲದಿದ್ದರೆ ಹೆಜ್ಜೆ ಭಾರ ಭಾರ ಆದರೂ ಅಸಾಧ್ಯವಲ್ಲ!! ಸ್ವಲ್ಪ ಸಮಯವಾದರೂ ನನ್ನೊಂದಿಗೆ ಹೆಜ್ಜೆ ಹಾಕಿದ್ದಕ್ಕೆ ಹಾಗೂ ಸಾಕಷ್ಟು ದೂರದವರೆಗೆ ಆ ನೆನಪು ಉಳಿಸಿದ್ದಕ್ಕೆ ಧನ್ಯವಾದಗಳನ್ನು ಹೇಳುತ್ತಾ...
ನೀನಿಲ್ಲದೆ ಮುಂದಕ್ಕೆ ನಡೆಯಲೇ ಬೇಕೆಂದು ನಿರ್ಧರಿಸಿದ...

ನಿನ್ನವನಾಗಿದ್ದ,

ನಾನೇ.

ಈ ಪ್ರೀತಿ ಒಂಥರಾ...

ಆಕಾಶದಿಂದ ಧರೆಗಿಳಿದ ಆ ಅದ್ಭುತ ಹನಿಯಂತೆ, ಈ ಎದೆಯಲಿ ಅವಿರ್ಭವಿಸಿದ ವರ್ಷದೇವತೆಯೇ,
ನಿಜವಾಗ್ಲೂ ನಾನು accept ಮಾಡಿರಲಿಲ್ಲ. ಇನ್ನೂ ಎಲೆ ಮರೆಯ ಕಾಯಿಯಂತಿದ್ದ, ಮೊಗ್ಗಿನಲ್ಲೇ ಹಿಗ್ಗಾಗಿದ್ದ ನಮ್ಮ ಪ್ರೀತಿ ಇಷ್ಟು ಬೇಗ ರುಚಿಯಾದ ಹಣ್ಣಾಗಿ, ಘಮ ಘಮಿಸುವ ಸುಮವಾಗಿ ಅರಳುತ್ತದೆಂದು ನಂಬಿರಲಿಲ್ಲ!!!
ಹುಟ್ಟಿದ ಶರಧಿ ಎಂದೋ ಸಾಗರ ಸೇರುವಂತೆ, ನಾವಿಬ್ಬರೂ ಸೇರುತ್ತೆವೆಂದು ಗೊತ್ತಿತ್ತು. ಆದರೆ ಅದು ಇಷ್ಟು ಬೇಗ! ಈ ಅನಿರೀಕ್ಷಿತ ಸಂತೋಷದ ಬಿರುಗಾಳಿಗೆ ಮಾತೇ ಹೊರಡುತ್ತಿಲ್ಲ. ತುತ್ತು ಅನ್ನಕ್ಕೂ ಗತಿ ಇಲ್ಲದ ಬಿಕ್ಷುಕನಿಗೆ ಕಣ್ಮುಚ್ಚಿ ತೆರೆಯುವದರೋಳಗಾಗಿ ಭಕ್ಷ-ಬೋಜಗಳ ಬಂಡಿ ಎದುರಾದರೆ, ಹೇಗೆ ಮೂಕನಾಗುತ್ತಾನೋ ಹಾಗಾಗಿದೆ ನನ್ನ ಸ್ತಿತಿ!!
ಇಂದು ಬೆಳಗಿನಿಂದಲೇ ಯಾಕೋ ಸುಮ್ಮನೆ ಭಾವುಕನಾಗಿದ್ದೆ, ಎಕ್ಸೈಟ್ ಆಗಿದ್ದೆ. ಆದರೆ ಆ ಭಾವುಕತೆಗೆ ಕಾರಣವೇ ಇದು ಎಂದು ಅಂದುಕೊಂಡಿರಲಿಲ್ಲ.
ಮಳೆಯನ್ನೇ ಕಾಣದ ಬರಡು ಭೂಮಿಯಲ್ಲಿ ಅಕಾಲಿಕ ಮಳೆ ಸುರಿದು ತಂಪಾಗುವಂತೆ, ಮೊದಲ ಮಳೆಗೆ ಬರುವ ಸುಮಧುರ ಮಣ್ಣಿನ ವಾಸನೆಯಂತೆ, ಆ ಮಳೆ ನಿಂತು ತುಂಬಾ ಹೊತ್ತಾದರೂ ಆ ಕಂಪಲ್ಲೇ ಇದ್ದೀನಿ ನಾನಿನ್ನೂ! ಅದ್ಭುತ ಕವಿಯ ಕಾವ್ಯ ಓದಿದ ನಂತರದ ಅತ್ಯದ್ಭುತ ಸೈಲೆನ್ಸ್ ನಂತೆ. ಆದರೆ ಪ್ರೀತಿಯನ್ನ ಒಪ್ಪಿಕೊಂಡ ನಂತರದ ಮೌನ ಇಷ್ಟು ಅದ್ಭುತವೆಂದು ಗೊತ್ತಿರಲಿಲ್ಲ!! ನಿನ್ನ ಒಪ್ಪಿಗೆಯನ್ನು ಕೇಳಿದ ಮರುಕ್ಷಣದಿಂದ ಈ ಕ್ಷಣದ ವರೆಗೂ ಅದನ್ನೇ ಅನುಭವಿಸುತ್ತ ಪ್ರತಿಮೆಯಂತಾಗಿದೆ ಮನಸು!!! ಹೇಳಿಕೊಳ್ಳೋಣವೆಂದರೆ ಸಮಿಪದಲಿ ಯಾರೂ ಇಲ್ಲ.
ಇದು ಕೇವಲ ಪತ್ರವಲ್ಲ! ನನ್ನ ಜೀವನದ ಶುದ್ದ ತಿರುವಿನ ಬೃಹತ್ ಮೈಲಿಗಲ್ಲು!! ಈ ಮೈಲುಗಲ್ಲಿನ ಕಾರಣವೇ ನೀನು!!!
ಯಾವುದೇ, ಯಾರದೇ ಮೇಲಿನ ದ್ವೇಷ, ಅಸೂಯೆ, ಸಿಟ್ಟಿನಿಂದಲ್ಲದೆ, ಕೇವಲ ನಿನ್ನ ಹಾಗೂ ಈ ಜೀವನದ ಮೇಲಿನ ಅಘಾಧ ಪ್ರೀತಿಗಾಗಿ ನಾನು ಬದಲಾಗುತ್ತಿದ್ದೇನೆ!! ನಾಳೆ ಬೆಳಿಗ್ಗೆ ಯಿಂದ ನನ್ನ ಜೀವನದ ಹೊಸ ಸುಂದರ ಅಧ್ಯಾಯ ಪ್ರಾರಂಭ. ಆ ಅಧ್ಯಾಯದ ಹೆಸರೇ - ಪ್ರೀತಿ. ಮೊದಲ ಸಾಲಿನ ಮೊದಲ ಪದವೇ - ನೀನು!!!
"ಪರಸ್ಪರ ನಂಬಿಕೆಯ ಮೇಲೆ ನಿಂತ ಭವಂತಿ"ಯ ಅಡಿಗಲ್ಲು ಬಿದ್ದ ಎಂಟು ಘಂಟೆಗಳ ನಂತರ ನಮ್ಮಿಬ್ಬರ ಪ್ರೀತಿ ಎಂಬ ಲತೆಯಿಂದ ಜನಿಸಿದ ಮೊದಲ ಸುಮವೇ ಈ ಪತ್ರ.
ನೀನು ನನ್ನ ಮೇಲೆ ಇಟ್ಟ ಪ್ರೀತಿ, ನಂಬಿಕೆ, ವಿಶ್ವಾಸ ಎಲ್ಲವು ನಾನು ಮಣ್ಣು ಸೇರುವ ಕೊನೆಯ ಘಳಿಗೆಯವರೆಗೂ ಹೀಗೆ ಇರುತ್ತವೆ ಎಂದು ಹೇಳುತ್ತಾ, ಪ್ರತಿ ದಿನದ ಸೂರ್ಯ ಅಸ್ತಮಿಸುವದರೋಳಗಾಗಿ ಇಂತಹದೇ ಅದ್ಭುತ ಪತ್ರ ನಿನ್ನ ಕೈಗಿಡುತ್ತಾ, ಆ ಕ್ಷಣಕ್ಕೆ ಕಣ್ಣರಳಿಸುವ ನಿನ್ನ ನೋಡುತ್ತಾ, ನಿನ್ನ ಖುಷಿಗೆ ನಗುವಾಗುತ್ತ, ದುಃಖಕ್ಕೆ ಹೆಗಲಾಗುತ್ತಾ, ನಿದ್ರೆಗೆ ಮಡಿಲಾಗುತ್ತಾ, ಕನಸಿಗೆ ಬಣ್ಣವಾಗುತ್ತಾ, ಕನವರಿಕೆಗೆ ಜೋಗುಳವಾಗುತ್ತಾ, ಈ ರಾತ್ರಿಗೆ ಗುಡ್ ನೈಟ್ ಹೇಳುತ್ತಾ, ನಾಳಿನ ಹೊಸ ಮುಂಜಾನೆಗೆ ಇಂಚಿಂಚಾಗಿ ತೆರೆದುಕೊಳ್ಳುತ್ತಿರುವ...

ಮಂಗಳವಾರ, ಜುಲೈ 27, 2010

ಗೊತ್ತಿಲ್ಲ!!!

ಅಂದು,
ಹೀಗೆ ಕಾಯುತ್ತಿದ್ದೆ ನೀನು ಬರುವೆ ಎಂದು. ನೀ ಬಂದೆ. ಇವತ್ತೂ ಕಾಯುತ್ತಿದ್ದೇನೆ ನೀನು ಬರುವದಿಲ್ಲ ಎಂದು ಗೊತ್ತಿದ್ದೂ!! ಇದು ನನ್ನ ಮೂರ್ಖತನವಾ, ದುರಾಸೆಯಾ, ಆಸೆಯಾ, ಬಯಕೆಯಾ, ನನ್ನ ಪ್ರೀತಿಯ ಪರೀಕ್ಷೆಯಾ, ಗೊತ್ತಿಲ್ಲ!!
ನಿನ್ನ ಮುದ್ದು ಮುಖ ನೋಡುತ್ತಾ, ಅನುಗಾಲವೂ ಜೊತೆಗಿರುವ ಕನಸನ್ನು ಹೊತ್ತು ಬದುಕಬೇಕು. ಇಲ್ಲಾ ನಿನ್ನೊಂದಿಗಿನ ಈ ಜನ್ಮದ್ದಲ್ಲ, ಏಳೇಳು ಜನ್ಮದ ಸಂಬಂಧವನ್ನು ಕಳೆದುಕೊಂಡು ಬಿಡಬೇಕು.
ಇಲ್ಲಿ ಸಂಜೆಯೊಂದು ನಿಧಾನವಾಗಿ ಸಾಯುತಿದೆ. ಬೀದಿ ದೀಪಗಳು ಕಣ್ಣು ಬಿಡುತ್ತಿವೆ. ನಿಚ್ಚಳ ಸಂಜೆ ಇದ್ದದ್ದು ಉನ್ಮಾದ ರಾತ್ರಿಯಾಗಿ ಬದಲಾಗುತ್ತಿದೆ. ಹಸುವನ್ನು ಬಿಟ್ಟು ದೂರ ಹೋದ ಕರು 'ಅಂಬಾ' ಎಂಬ ಸದ್ದಿನೊಂದಿಗೆ ಹಿಂದಿರುಗುತಿದೆ. ಕಾಳಿಗಾಗಿ ಗೂಡು ಬಿಟ್ಟ ಹಕ್ಕಿ ಮರಳುತಿದೆ. ಸತ್ತ ಸೂರ್ಯನ ನೆನಪಲಿ ಸೊಳ್ಳೆಗಳು ರೋಧಿಸುತ್ತಿವೆ. ಇಷ್ಟಗಲ ಚಾಚಿಕೊಂಡ ಅದೇ ಇಕ್ಕಟ್ಟು ರೂಮಿನಲ್ಲಿ ನಾನು ಬಿದ್ದುಕೊಂಡಿದ್ದೇನೆ ಹೆಣದಂತೆ!!!
ಬದುಕೇ ಬದಲಾಗುವದಿಲ್ಲವೇ? ಈ ಹತಾಶೆಯಲ್ಲೇ ಕೊರಗಿ ಬದುಕೇ ಮುಗಿದು ಹೋಗುತ್ತದಾ? ಎದುರು ಮನೆಯ ಮುದುಕಿಗೆ ಬಂದ ಕುಷ್ಟದಂತೆ ಸವೆದು ಸಾಯುತ್ತಿನಾ? ಮರೆತು ಹೋದವಳು ಮರಳಿ ಬರಬಹುದಾ? ಒಂಟಿ ದೋಣಿಗೊಂದು ದಡ ಸಿಗಬಹುದಾ? ಗೊತ್ತಿಲ್ಲ.
ಈ ಎಲ್ಲ ಗೊತ್ತಿಲ್ಲಗಳಿಗೂ ಉತ್ತರ ಹುಡುಕಬೇಕು. ಆದರೆ ಮೈಯಲ್ಲಿ ಕಸುವೆ ಸತ್ತಂತಿದೆ. ನೀನು ಕೈ ಬಿಟ್ಟು ಹೋದ ಮೇಲೆಯೇ ಹಿಗಾದದ್ದಾ? ಗೊತ್ತಿಲ್ಲ!!!

ಜೀವನ

ಮಬ್ಬಿನ ಮುಂಜಾನೆಯ
ಮುಗ್ದ ಮೌನ
ಮದ್ಯಾಹ್ನದ
ಕಾಲಮಾನ
ಇಳಿ ಸಂಜೆಯ
ಸುಂದರ ಕವನ
ಮಧ್ಯ ರಾತ್ರಿಯ
ಅಗಾಧ ಕಾಮ
ಎಲ್ಲದರ ನಡುವೆಯೇ
ನರ ಮಾನವನ ಜೀವನ.

ನೀನೇ...

ಮಂಜುಗಣ್ಣಿನ
ಮಬ್ಬಿನ ಮುಂಜಾನೆಯ
ಹಿತವಾದ ಚಳಿಯಲಿ
ಅಬ್ಬರಿಸುವ ಮದ್ಯಾಹ್ನದ
ಪ್ರಖರ ಸೂರ್ಯನ
ಸೊಕ್ಕಿನ ಮುಖದಲಿ
ಇಳಿ ಸಂಜೆಯ ಬಿಡದೆ ಸುರಿಯುವ
ಧಾರೆ ಧಾರೆ ವರ್ಷಧಾರೆಯಲಿ
ಎಲ್ಲೆಲ್ಲೂ ನೀನೇ
ಮರೆಯ ಬೇಕೆಂದು ನಿಶ್ಚಯಿಸಿದ ಮನಸಿನಲಿ.

ಗೆಳೆಯನ ಮದುವೆ

ವಂಚನೆಗೊಳಗಾದವರಿಗಿಂತಲೂ ವಂಚಿಸಿದವರು ನೆಮ್ಮದಿಯಿಂದಿದ್ದಾರೆಂದು ಎಲ್ಲೂ ಕುರುಹಿಲ್ಲ!!! ಆದರೂ ಮನಸು ತನಗಾದ ವಂಚನೆಯತ್ತಲೇ ತಿರುಗುತ್ತಿದೆ. ನಿನ್ನ ವಂಚನೆಯನ್ನು ಮರೆತು ಗೆಳೆಯನ ಮದುವೆಗೆ ಅಣಿಯಾಗುತ್ತಿದ್ದೇನೆ ಹುಡುಗಿ!! ಎಲ್ಲ ಪ್ರೇಮಗಳೂ ಮೋಸಕ್ಕೊಳಗಾಗುವದಿಲ್ಲ. ಮೋಸವಾದವುಗಳು ಪ್ರೇಮವಲ್ಲ!! ಎದುರಿಗೆ ಕುಳಿತು ಮಾತನಾಡಿದ್ದು ಕೆಲವೇ ನಿಮಿಷ ಆದರೂ ಅವರ ಮನಸು ತಿಳಿ ತಿಳಿ. ಕನಸು ಸ್ವಚ್ಚ ಸ್ವಚ್ಚ. ಅವರಿಬ್ಬರ ಮಾತು ಕೇಳಿ, ಕೈಲಾದ ಸಹಾಯ ಮಾಡಿ, ಅವರಿಬ್ಬರನ್ನು ಒಂದು ಮಾಡುವ ಸಂಕಲ್ಪದೊಂದಿಗೆ ಎದ್ದು ಬಂದೆ. ನಿನ್ನ ವಂಚನೆಯನ್ನು ನೆನೆಯುತ್ತಾ.

"ಅವಳೆಲ್ಲಿ"?

ಮತ್ತೆ ಮಳೆ ಬೀಳುತ್ತಿದೆ. ಮನಸು ಪ್ರಫುಲ್ಲ ಎಂದುಕೊಳ್ಳುವದರೋಳಗಾಗಿ ನಿನ್ನ ನೆನಪು! ಮಾಡಿದ ಪ್ರಯತ್ನವೆಲ್ಲ ಗುಡ್ಡಕ್ಕೆ ಮಣ್ಣು ಹೊತ್ತಂತೆ. ಮನದಲ್ಲಿ ತುಂಬಿ ತುಳುಕುತ್ತಿದೆ ವಿಷಾಧ.
ಈ ಮಳೆಗಾಲಕ್ಕಾಗಿಯೇ ಜೊತೆಯಾಗಿ ಗೂಡು ಕಟ್ಟೋಣ ಎಂದುಸುರಿ ಎಲ್ಲಿ ಮರೆಯಾದೆ ಹುಡುಗಿ?
ಈ ಮಳೆಯ ಪ್ರತಿ ಹನಿಯೂ ಕೇಳುತಿದೆ "ಅವಳೆಲ್ಲಿ"?

ಸಾಕ್ಷಿ

ಪ್ರೀತಿ ಹುಟ್ಟಿದ್ದಕ್ಕೆ
ಕಾರಣ ಕೆಳುತ್ತಿಯಲ್ಲೇ
ಸತ್ತಿದ್ದಕ್ಕೆ ಸಾಕ್ಷಿ
ಕಣ್ಣಲ್ಲಿಟ್ಟುಕೊಂಡು!!

ನೀನು

ಬಂದೆ
ಇದ್ದೆ
ಎದ್ದೆ!!!

ಗುಟ್ಟು

ಗಂಡನಿಗೂ ಹೇಳದ ಗರ್ಭವತಿಯ ಮಡಿಲಲ್ಲಿ ಆಗಷ್ಟೇ ಅರಳುತಿರುವ ಕಂದನ ಮಿಸುಕಿನಂತಿರಲಿ ನಮ್ಮ ಪ್ರೀತಿ!
ನಮ್ಮಿಬ್ಬರಿಗೆ ಮಾತ್ರ ಅದು ಮಿಸುಕಿದ ಸುಖದ ನೋವಿರಲಿ!! ಈ ಜಗದ ಹಂಗು ನಮಗ್ಯಾಕೆ?

ನಾವು

'ನಾನು' ಅನ್ನುತ್ತಿದ್ದವನು
'ನಾವು' ಅಂದಾಗಲೇ
ಅವನು ಇಬ್ಬರಾದದ್ದು!!

ಕಂಪನ

ಇಡೀ ಜಗವೇ ಮೊದಲ ಮಳೆಗೆ
ರೋಮಾಂಚನ
ಈ ಮನದಲ್ಲಿ ನಿನೆದ್ದು ಹೋದ
ಕಂಪನ!!

ಶುಕ್ರವಾರ, ಜುಲೈ 23, 2010

ಒಂದು ಗಜಲು...


"ಸರಿ ಕಣೇ, ದ್ವೇಷವೇ ಇರಲಿ: ಮನಸನ್ನು ನೋಯಿಸಲಿಕ್ಕಾದರೂ ಸರಿಯೇ,
ಮತ್ತೆ ಬಾ. ಮತ್ತೊಮ್ಮೆ ನನ್ನ ಒಬ್ಬಂಟಿಗನನ್ನಾಗಿ ಮಾಡಿ ಹೋಗಲಿಕ್ಕಾದರೂ ಬಾ!!
ಹೀಗೆ ನಾವು ಬೇರೆಯಾದುದಕ್ಕೆ ಯಾರಿಗೆ ಏನಂತ ನೆಪ ಹೇಳೋಣ?
ಪ್ರಪಂಚದ ನೀತಿ ನಿಯಮ ಜಾರಿಯಲ್ಲಿಡಲ್ಲಿಕ್ಕಾದರೂ ಬಾ.
ಮೊದಲಿನಷ್ಟು ತೀವ್ರವಾಗಿ, ಪದೇ ಪದೇ ಬರಲಿಕ್ಕಾಗದಿದ್ದರೂ ಸರಿಯೇ
ಆದರೂ ಅಪರೂಪಕ್ಕೊಮ್ಮೆ, ರಮಿಸಲಿಕ್ಕೆ ಬಾ
ಹೇಗೆ ನಿನಗೆ 'ಬರಲಾಗದು' ಎಂಬುವದಕ್ಕೆ ನೆಪಗಳು ಸಿಗುತ್ತವೋ
ಹಾಗೆ ಒಮ್ಮೆ ಯಾವತ್ತಾದರೂ ಮತ್ತೇ ನನ್ನನ್ನು ಬಿಟ್ಟು
ಹೋಗಲಿಕ್ಕಾಗದಂತೆ ಬಾ...
ಬಂದು ಬಿಡು!!"
-ಅಹ್ಮದ್ ಫರಾಜ್

ಬುಧವಾರ, ಜುಲೈ 21, 2010

ಕೊಡಚಾದ್ರಿಯ ದಾರಿಯಲಿ...

ನಿರ್ಜನ ಕಾಡಿನಲ್ಲಿ

ಸುರಿಯುವ ಹಿಮದಲಿ

ಬೀಳುವ ಸೋನೆ ಮಳೆಯಲಿ

ಕಣ್ತುಂಬುವ ಹಸುರಿನಲಿ

ಎಲೆಯಲಿ ಅವಿತ ಇಬ್ಬನಿಯಲಿ

ಮಳೆಗಾಲದಲಿ ಹುಟ್ಟಿ,

ಬೇಸಿಗೆಗೆ ಮುಗಿದು ಹೋಗುವ

ಜಲಧಾರೆಯಲಿ

ಆ ಜಲಧಾರೆಯ

ತಂಪು ತಂಪು ನೀರಿನಲಿ

ಒಬ್ಬಂಟಿ ಪಯಣದಲಿ

ಸಿಕ್ಕ ಮುದ್ದಾದ ಕರುವಿನ

ಅಬೋಧ ಕಣ್ಣಿನಲಿ

ನನಗೆ ನಿನ್ನದೇ

ದಿವ್ಯ ನಗೆ ದೀಪ

"ಕಾಡಿನಲ್ಲಿ ಕಳೆದು ಹೋಗುವ ಹಂಬಲದೊಂದಿಗೆ

ಮರಳಿ ನಾಡಿಗೆ ಬಂದ ತೊಯ್ದ ಮನಸ್ಕ..."

ಹುಡುಕಾಟ

ಮತ್ತೆ ಒಲವಿನ ಹುಡುಕಾಟ

ಕೊಡಚಾದ್ರಿಯ ಗಿರಿಶೃಂಗಕೆ ಅಲೆದಾಟ

ಇಳಿಯುವ ಹಿಮರಾಶಿಯ ಸಲ್ಲಾಪ

ತಂಪು ತಂಗಾಳಿಯ ಆಲಾಪ

ಧುಮ್ಮಿಕ್ಕಿ ಹರಿಯುವ ಶರಾವತಿಯ ಕಲಾಪ

ಜೋಗದಲ್ಲಿ ಬಿದ್ದು ಸಿಡಿಯುವ ಪ್ರತಾಪ

ಬಿಡದೆ ಸುರಿಯುವ ಸೋನೆ

ನನಗೆ ಎಲ್ಲೆಲ್ಲೂ ನೀನೆ

ಮಾನವನಾಗಿ ಹುಟ್ಟಿದ ಮೇಲೆ ಜೋಗದ ಗುಂಡಿ ಕಂಡ ಸಾರ್ಥಕತೆಯೊಂದಿಗೆ...

ಮಂಗಳವಾರ, ಜುಲೈ 13, 2010

ನಾನು


ನಿನ್ನ ಬರೀ ಪಾದಗಳಿಗೆ
ಬೆಳ್ಳಿಯ ಕಿರುಗೆಜ್ಜೆ
ಕಟ್ಟಿ
ಆ ಗೆಜ್ಜೆಯ ನಾದಕ್ಕೆ
ಮೈ ಮರೆತು
ಪ್ರಾಣ ಬಿಡಬೇಕು
ಅಂದುಕೊಂಡಿದ್ದ
ಭಾವುಕ

ಸತ್ತು ಮಲಗಿದ ಮೊಲದ ಮರಿಯಂತಹ ಪ್ರೇಮವನ್ನು ನೆನೆದು...

ಸೋನು,
ಹೇಗಿದ್ದಿಯಾ? ಸಮಯದ ಪರಿವೆಯಿಲ್ಲದೆ, ದಡಕ್ಕೆ ಬಂದು ಅಪ್ಪಳಿಸಿ ಹೋಗುವ ಅಲೆಗಳಿಗೆ ಎದೆ ಕೊಟ್ಟು ನಿಂತ ಬಂಡೆಯಂತೆ ನೀನು ಬಿಟ್ಟು ಹೋದ ಜಾಗದಲ್ಲೇ ಇದ್ದೀನಿ ಇನ್ನೂ! ಅಂದು ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ಅಷ್ಟು ದೂರಕ್ಕೆ ಕೇವಲ ನಿನಗೊಸ್ಕರವೇ ಬಂದು ಬಿಟ್ಟಿದ್ದೆನಾ? ಗೊತ್ತಿಲ್ಲ.
ಯಾವ ಮೋಹನ
ಮುರುಳಿ ಕರೆಯಿತೋ
ದೂರ ತೀರಕೆ
ನನ್ನನು..
ಯಾವ ಲಾಜಿಕ್ಕೂ ಗೊತ್ತಿಲ್ಲದ ಶುದ್ದ ದಡ್ಡ ಬದುಕು ಇದು. ಇಂತಹ ದಡ್ಡ ಬದುಕಿನೊಳಗೆ ಸಂಭ್ರಮದಿಂದ ನಡೆದು ಬಂದವಳು ನೀನು. ಸಿಡುಕ ಮ್ಯಾನೇಜರ್ ನ ಜೊತೆ ನಡೆದು ಬಂದು "ಹಲೋ" ಅಂದವಳ ಕಣ್ಣುಗಳಲ್ಲಿ ನನಗೆ ಕಂಡಿದ್ದು ತುಂಬು ಕಾನ್ಫಿಡೆನ್ಸು!! ಕಾಮನಬಿಲ್ಲು ನಮ್ಮ ಆಫೀಸಿನ ಹೊಸ್ತಿಲಿಗೆ ಎಡವಿ ಬಿದ್ದು ಹುಡುಗಿಯಾಗಿ ಬಂದಿದೆಯಾ? ಅಂತ ಆಶ್ಚರ್ಯವಾಯ್ತು!!!
ಅಂದು ಒಂದು ಸಂಭ್ರಮವಾಗಿ ನಡೆದು ಬಂದವಳಲ್ಲಿ ಹೀಗೊಂದು ಸೂತಕವನ್ನೂ ಉಳಿಸಿ ಹೋಗುವ ಶಕ್ತಿ ಇದೆ ಅಂತ ನನ್ನ ಪೆದ್ದು ಮನಸಿಗೆ ಗೊತ್ತೇ ಆಗಲಿಲ್ಲ.
ಈ ದುಷ್ಟ ಪ್ರಪಂಚದಲಿ ಹಲವಾರು ಮೊಸಕ್ಕೊಳಗಾದವನು, ಹಲವರನ್ನು ಕಳೆದುಕೊಂಡವನು ಅನುಭವಿಸುವ ಆ ತಳಮಳ ನಿನಗೆ ಕೊನೆಗೂ ಗೊತ್ತಾಗಲಿಲ್ಲ. ಗೊತ್ತು ಮಾಡಿಕೊಳ್ಳುವ ಇಚ್ಚೆಯೂ ಇರಲಿಲ್ಲ. ತಾಯಿ ಇಲ್ಲದವಳಿಗೆ ತಂದೆ ಇಲ್ಲದವನ ಭಯ, ಅಸಹಾಯಕತೆ, ಅಭದ್ರತೆ, ಪೋಸ್ಸೇಸಿವನೆಸ್ಸು ಯಾವುದು ಅರ್ಥವೇ ಆಗಲಿಲ್ಲ. ಸಡಗರದ ಜಾತ್ರೆಯಲಿ ಕಣ್ಣರಳಿಸಿ ನೋಡುತಿರುವ ಹಸುಗೂಸನ್ನು ತಾಯಿ ಮರೆತು ಹೋದಂತೆ ಹೊರಟು ಹೋದೆ.
Infact ಹಾಗಂತ ನೀನೊಂದು ನಿರ್ಧಾರ ತೆಗೆದುಕೊಂಡವಳಂತೆ ಕೊನೆಯ ಮಾತನ್ನೂ ಆಡಿ ಹೋದ ಮೇಲೆ ಎದೆಯೋಳಗೊಂದೂ ಹಾಡು ಉಳಿದಿಲ್ಲವೆಂಬಂತಹ ನಿರ್ಭರ ಮೌನವಿತ್ತು. ತುಂಬಾ ಹೊತ್ತು ಒಬ್ಬನೇ ಕುಳಿತು ಸಿಗರೇಟು ಸುಟ್ಟೆ. ಕತ್ತಲಲ್ಲಿ ಕುಳಿತಾಗ, ಒಬ್ಬಂಟಿಯಾದಾಗ ನನಗೆ ತೋಚುವದು ಅದೊಂದೇ! ಕಡೆ ಪಕ್ಷ ಯಾರೋ ಜೊತೆಗಿದ್ದಾರೆ ಬಿಡು ನನ್ನಂತೆಯೇ ಉರಿಯುತ್ತಾ, ಕರಗುತ್ತಾ, ನಾಶವಾಗುತ್ತಾ - ಅನಿಸುತ್ತಿರುತ್ತದೆ. ಒಂದಾದ ಮೇಲೊಂದು ಸಿಗರೇಟು ಸುಡುತ್ತೇನೆ. ನೀನಿದ್ದಾಗ ತಕರಾರು ತೆಗೆಯುತ್ತಿದ್ದೆ. ಸಿಗರೇಟಿನ ಬಗ್ಗೆ. ಆಮೇಲೆ ನನ್ನ ಬಗ್ಗೆಯೇ ತಕರಾರು ಶುರುವಾಯಿತು. ಎದ್ದು ಹೋದೆ. ಉಳಿದಿರುವದು ಬರೀ ಕತ್ತಲು. ಸಿಗರೇಟಿನ ತುದಿಯ ನಿಗಿನಿಗಿ ಕೆಂಡ ಮತ್ತು ನನ್ನೊಳಗಿನ ಮೌನ-ಅಷ್ಟೇ.
ನಿನ್ನೆ ಸುರಿಯುವ ಸೋನೆಯಲಿ ಪುಟ್ಟ ಪಾಪುವಿನ ಕೈ ಹಿಡಿದು ನಡೆಯುತ್ತಿದ್ದೆ, ಅದರ ಮುಗ್ದ ಪ್ರಶ್ನೆಗಳೊಂದಿಗೆ. ನನ್ನ ಎಡಗೈ ಕಿರು ಬೆರಳು ಹಿಡಿದು ನಡೆಯುತ್ತಿದ್ದ ಆ ಮಗುವಿನ ಪ್ರತಿ ಪ್ರಶ್ನೆಯಲ್ಲೂ ನಿನ್ನನ್ನೇ ಹುಡುಕುತ್ತಿದ್ದೆ.
ನೀನು ಗೆಳತಿಯಾ, ಬಂಧುವಾ , ನನ್ನೊಳಗಿನ ಭಾವವಾ, ಮಾತು ಕಳೆದು ಹೋದಾಗ ದಕ್ಕುವ ಮೌನವಾ? ಅರ್ಥವಾಗುತ್ತಿಲ್ಲ.

ಮಂಗಳವಾರ, ಜುಲೈ 06, 2010

ಯಾಕೋ ಖುಷಿಯಾಗ್ತಿದೆ...


ಮತ್ತೆ ಮಳೆ! ಹತಾಶನಾಗಿ ಬಂದ ಮಗನಿಗೆ ಸಾಂತ್ವನಿಸುವ ತಾಯಿ ಪ್ರೀತಿಯಂತೆ; ಹನಿ ಹನಿ
ಈ ತುಂತುರುವಿನ ಎದೆಯ ಪ್ರತಿ ಹನಿಯಲ್ಲೂ ನಿನದೇ ಪ್ರತಿದ್ವನಿ.
ನಿನ್ನ ಪಾಲಿಗೆ ನಾನು; ಮರೆತು ಹೋದ ಕನಸು, ತಪ್ಪಿ ಹೋದ ಟ್ರೇನು, ಇನ್ನೆಂದೂ ತಿರುಗಿ ಬರಲಾರದ ಸಮಯ,
ಗುರುತೂ ಉಳಿಯದೇ ನಡೆದು ಹೋದ ಹೆಜ್ಜೆ.
ಆದರೆ ನಿನ್ನ ಆ ಹೆಜ್ಜೆಯ ಗೆಜ್ಜೆನಾದದಿಂದಲೇ ಮೈ ಮರೆತ ಭಾವುಕ ನಾನು. ಇಲ್ಲಿ ನೀನಿಲ್ಲ ಆದರೆ ನಿನ್ನೊಂದಿಗೆ ಕಳೆದ ಸಾವಿರ ಸಾವಿರ ನೆನಪುಗಳಿವೆ. ಆ ನೆನಪುಗಳಿಗೆ ನನ್ನ ಸಾಂತ್ವನಿಸುವ ಶಕ್ತಿ ಇದೆ!
ಅಷ್ಟು ಸಾಕು. ನನ್ನ ಬದುಕಿನಲ್ಲೂ ಕಾಮನಬಿಲ್ಲು ಮೂಡುವ ಸಂದರ್ಭ! ವಸಂತ ಮಾಸವಿಲ್ಲದೆ ಕೂಗುವ ಕೋಗಿಲೆ, ನೋವಿನ ಅಲೆಗಳಿಗೆ ಸಿಕ್ಕು ಕರಗಿ ಹೋದ ಕಲ್ಲು ಬಂಡೆಯಂತಹ ಕಷ್ಟ, ಮುಸುಕಿದ ಮೋಡದೊಳಗಿಂದ ಫಳ ಫಳಿಸುವ ಸೂರ್ಯ. ಇದಾವುದು ತುಂಬ ದೂರವಿಲ್ಲ!!
ಸಂಜೆ ಬಂದ ಮಳೆಗೆ ಕಾಲಿಗೆ ಮೆತ್ತಿದ ಮಣ್ಣಿನಲ್ಲೂ ಯಾವುದೋ ಘಮ.
ಯಾಕೋ ಖುಷಿಯಾಗ್ತಿದೆ...

ದಿಲ್ ನೆ ಫಿರ್ ಯಾದ ಕಿಯಾ!!!


"ಭಲೇ ಭಲೇ ಚಂದದ ಚಂದುಳ್ಳಿ ಹೆಣ್ಣು ನೀನು
ಮಿಂಚು ಕೂಡಾ ನಾಚುವ ಮಿಂಚಿನ ಬಳ್ಳಿ ನೀನು"
ಯಾವ ದಿವ್ಯಘಳಿಗೆಯಲ್ಲಿ ಕಲ್ಯಾಣ ಲೇಖನಿಯಿಂದ ಮೂಡಿ ಬಂತೋ ಈ ಅದ್ಭುತ ಹಾಡು. ಕೇಳಿದ ಮರುಕ್ಷಣದಿಂದ ಇಷ್ಟವಾಯ್ತು. ಇದು ನನ್ನ ಅನುಗಾಲದ ಸಂಗಾತಿ, ಪ್ರತಿದಿನದ ಸ್ವಗತ. ಈ ಹಾಡಿನಲ್ಲಿರುವಂತಹ ಒಬ್ಬ ಚಂದುಳ್ಳಿ ಚಲುವೆ ನನ್ನ ಬಾಳಲ್ಲೂ ಬರುತ್ತಾಳೆ ಎಂಬ ಅದಮ್ಯ ನಂಬುಗೆಯಿಂದ ಬದುಕಿದ್ದೆ.
ನನ್ನ ನಂಬಿಕೆ ಸುಳ್ಳು ಮಾಡದೇ ಬಿರು ಬೇಸಿಗೆಯಲಿ ಬಂದ ಸಂಜೆ ಮಳೆಯಂತೆ ಆ ದೇವತೆ ನಡೆದು ಬಂದಳು. ನಂತರದ ದಿನಗಳು 'ಜಸ್ಟ್ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ'.

ಪ್ರತಿ ಸಾಲಲ್ಲೂ ಇಣುಕೋ ಅಕ್ಷರ ಅವಳೇ...

ನಿಜಕ್ಕೂ ತನ್ನ ಕಣ್ಣ ಬೆಳಕಿನಿಂದಲೇ ನನ್ನ ಬಾಳನ್ನು ಬೆಳಗುತ್ತಾ, ನಸು ನಗುತ್ತಾ, ಗದರಿಸುತ್ತಾ, ಲಾಲಿಸುತ್ತಾ, ಪಾಲಿಸುತ್ತಾ ತಂಪು ತಂಗಾಳಿಯಂತೆ ನಾನು ಈ ಲೋಕವೇ ಮರೆತು ಹೋಗೋವಷ್ಟು ಪ್ರೀತಿಸಿದಳು. ಆದರೆ ಯಾವುದೋ ವಿಷ ಘಳಿಗೆ ನಮ್ಮಿಬ್ಬರನ್ನೂ ಇವತ್ತು ಬೇರೆ ಬೇರೆ ಮಾಡಿದೆ. ಏನಾದರೂ ಈ ಹಾಡು ಎಲ್ಲಿ,ಯಾವಾಗ,ಹೇಗೆ ಕೇಳಿದರೂ ನನ್ನ ನೆನಪಿನ ಸುರುಳಿ ಆ ಎರಡು ವರ್ಷದ ಅದ್ಭುತ ಅನುಭವಕ್ಕೆ ಬಿಚ್ಚಿಕೊಳ್ಳುತ್ತದೆ.

"ಎಲ್ಲ ಶಿಲ್ಪಗಳಿಗೂ ಒಂದೊಂದು ಹಿಂದಿನ ಕಥೆಯಿದೆ
ನನ್ನ ಶಿಲ್ಪ ಚಲುವೆ ಇವಳ ಮುಂದೆನ್ನ ಬದುಕಿದೆ"

ಬದುಕು ಪೂರ್ತಿ ಅವಳ ಸರಿಗಮ, ತಕಧಿಮಿಗಳಲೇ ಕಳೆದು ಬಿಡುವ ದಿವ್ಯ ನಿರ್ಧಾರಕ್ಕೆ ಬಂದು ನಿಂತಿದ್ದೇನೆ.
ನಿಜ, ಒಂದು ಹಾಡಿಗೆ ಸಂತೋಷದ ಜೊತೆಗೆ ವಿಷಾಧವನ್ನೂ ಕೈ ಹಿಡಿದು ತರುವ ಶಕ್ತಿ ಇರುತ್ತದೆ.