ಸೋನು,
ಹೇಗಿದ್ದಿಯಾ? ಸಮಯದ ಪರಿವೆಯಿಲ್ಲದೆ, ದಡಕ್ಕೆ ಬಂದು ಅಪ್ಪಳಿಸಿ ಹೋಗುವ ಅಲೆಗಳಿಗೆ ಎದೆ ಕೊಟ್ಟು ನಿಂತ ಬಂಡೆಯಂತೆ ನೀನು ಬಿಟ್ಟು ಹೋದ ಜಾಗದಲ್ಲೇ ಇದ್ದೀನಿ ಇನ್ನೂ! ಅಂದು ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ಅಷ್ಟು ದೂರಕ್ಕೆ ಕೇವಲ ನಿನಗೊಸ್ಕರವೇ ಬಂದು ಬಿಟ್ಟಿದ್ದೆನಾ? ಗೊತ್ತಿಲ್ಲ.
ಯಾವ ಮೋಹನ
ಮುರುಳಿ ಕರೆಯಿತೋ
ದೂರ ತೀರಕೆ
ನನ್ನನು..
ಯಾವ ಲಾಜಿಕ್ಕೂ ಗೊತ್ತಿಲ್ಲದ ಶುದ್ದ ದಡ್ಡ ಬದುಕು ಇದು. ಇಂತಹ ದಡ್ಡ ಬದುಕಿನೊಳಗೆ ಸಂಭ್ರಮದಿಂದ ನಡೆದು ಬಂದವಳು ನೀನು. ಸಿಡುಕ ಮ್ಯಾನೇಜರ್ ನ ಜೊತೆ ನಡೆದು ಬಂದು "ಹಲೋ" ಅಂದವಳ ಕಣ್ಣುಗಳಲ್ಲಿ ನನಗೆ ಕಂಡಿದ್ದು ತುಂಬು ಕಾನ್ಫಿಡೆನ್ಸು!! ಕಾಮನಬಿಲ್ಲು ನಮ್ಮ ಆಫೀಸಿನ ಹೊಸ್ತಿಲಿಗೆ ಎಡವಿ ಬಿದ್ದು ಹುಡುಗಿಯಾಗಿ ಬಂದಿದೆಯಾ? ಅಂತ ಆಶ್ಚರ್ಯವಾಯ್ತು!!!
ಅಂದು ಒಂದು ಸಂಭ್ರಮವಾಗಿ ನಡೆದು ಬಂದವಳಲ್ಲಿ ಹೀಗೊಂದು ಸೂತಕವನ್ನೂ ಉಳಿಸಿ ಹೋಗುವ ಶಕ್ತಿ ಇದೆ ಅಂತ ನನ್ನ ಪೆದ್ದು ಮನಸಿಗೆ ಗೊತ್ತೇ ಆಗಲಿಲ್ಲ.
ಈ ದುಷ್ಟ ಪ್ರಪಂಚದಲಿ ಹಲವಾರು ಮೊಸಕ್ಕೊಳಗಾದವನು, ಹಲವರನ್ನು ಕಳೆದುಕೊಂಡವನು ಅನುಭವಿಸುವ ಆ ತಳಮಳ ನಿನಗೆ ಕೊನೆಗೂ ಗೊತ್ತಾಗಲಿಲ್ಲ. ಗೊತ್ತು ಮಾಡಿಕೊಳ್ಳುವ ಇಚ್ಚೆಯೂ ಇರಲಿಲ್ಲ. ತಾಯಿ ಇಲ್ಲದವಳಿಗೆ ತಂದೆ ಇಲ್ಲದವನ ಭಯ, ಅಸಹಾಯಕತೆ, ಅಭದ್ರತೆ, ಪೋಸ್ಸೇಸಿವನೆಸ್ಸು ಯಾವುದು ಅರ್ಥವೇ ಆಗಲಿಲ್ಲ. ಸಡಗರದ ಜಾತ್ರೆಯಲಿ ಕಣ್ಣರಳಿಸಿ ನೋಡುತಿರುವ ಹಸುಗೂಸನ್ನು ತಾಯಿ ಮರೆತು ಹೋದಂತೆ ಹೊರಟು ಹೋದೆ.
Infact ಹಾಗಂತ ನೀನೊಂದು ನಿರ್ಧಾರ ತೆಗೆದುಕೊಂಡವಳಂತೆ ಕೊನೆಯ ಮಾತನ್ನೂ ಆಡಿ ಹೋದ ಮೇಲೆ ಎದೆಯೋಳಗೊಂದೂ ಹಾಡು ಉಳಿದಿಲ್ಲವೆಂಬಂತಹ ನಿರ್ಭರ ಮೌನವಿತ್ತು. ತುಂಬಾ ಹೊತ್ತು ಒಬ್ಬನೇ ಕುಳಿತು ಸಿಗರೇಟು ಸುಟ್ಟೆ. ಕತ್ತಲಲ್ಲಿ ಕುಳಿತಾಗ, ಒಬ್ಬಂಟಿಯಾದಾಗ ನನಗೆ ತೋಚುವದು ಅದೊಂದೇ! ಕಡೆ ಪಕ್ಷ ಯಾರೋ ಜೊತೆಗಿದ್ದಾರೆ ಬಿಡು ನನ್ನಂತೆಯೇ ಉರಿಯುತ್ತಾ, ಕರಗುತ್ತಾ, ನಾಶವಾಗುತ್ತಾ - ಅನಿಸುತ್ತಿರುತ್ತದೆ. ಒಂದಾದ ಮೇಲೊಂದು ಸಿಗರೇಟು ಸುಡುತ್ತೇನೆ. ನೀನಿದ್ದಾಗ ತಕರಾರು ತೆಗೆಯುತ್ತಿದ್ದೆ. ಸಿಗರೇಟಿನ ಬಗ್ಗೆ. ಆಮೇಲೆ ನನ್ನ ಬಗ್ಗೆಯೇ ತಕರಾರು ಶುರುವಾಯಿತು. ಎದ್ದು ಹೋದೆ. ಉಳಿದಿರುವದು ಬರೀ ಕತ್ತಲು. ಸಿಗರೇಟಿನ ತುದಿಯ ನಿಗಿನಿಗಿ ಕೆಂಡ ಮತ್ತು ನನ್ನೊಳಗಿನ ಮೌನ-ಅಷ್ಟೇ.
ನಿನ್ನೆ ಸುರಿಯುವ ಸೋನೆಯಲಿ ಪುಟ್ಟ ಪಾಪುವಿನ ಕೈ ಹಿಡಿದು ನಡೆಯುತ್ತಿದ್ದೆ, ಅದರ ಮುಗ್ದ ಪ್ರಶ್ನೆಗಳೊಂದಿಗೆ. ನನ್ನ ಎಡಗೈ ಕಿರು ಬೆರಳು ಹಿಡಿದು ನಡೆಯುತ್ತಿದ್ದ ಆ ಮಗುವಿನ ಪ್ರತಿ ಪ್ರಶ್ನೆಯಲ್ಲೂ ನಿನ್ನನ್ನೇ ಹುಡುಕುತ್ತಿದ್ದೆ.
ನೀನು ಗೆಳತಿಯಾ, ಬಂಧುವಾ , ನನ್ನೊಳಗಿನ ಭಾವವಾ, ಮಾತು ಕಳೆದು ಹೋದಾಗ ದಕ್ಕುವ ಮೌನವಾ? ಅರ್ಥವಾಗುತ್ತಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ