ಗುರುವಾರ, ಡಿಸೆಂಬರ್ 30, 2010

ಇದು ಹೊಸ ವರ್ಷ!!!


ಎಡವಿ
ಬಿದ್ದರೆ ಮತ್ತೊಂದು ಹೊಸವರ್ಷ!!!
ಬನಶಂಕರಿಯ ಕಾಫಿ ಬಾರಿನಲ್ಲಿ ಕುಳಿತ ಹುಡುಗಿಯ ಕಣ್ಣುಗಳಲಿ ಯಾರದೋ ನಿರೀಕ್ಷೆ...
ಎಂಥ ರಜೆಯ ದಿನವಾದರೂ ಬೆಳಗಿನ ಚಳಿಗೆ ನಡಗುತ್ತಾ ಪೇಪರ್ ಹಂಚುವ ಹುಡುಗನಿಗೂ ಯಾವುದೊ ಹರುಷ...
ಪಾರ್ಕಿನ ತುಂಬಾ ಜನರಿದ್ದರೂ ತನ್ನ ಕಡಲೆಕಾಯಿ ಮಾರಾಟವಾಗದ ಮುದುಕಿಗೂ ಅದೇನೋ ಸಂತಸ...
ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸಿದರೂ ತಿರುಗಿ ನೋಡದ ಹುಡುಗಿಯ ನೆನಪಿಗೆ ಕರಗಿ ಹೋಗುವ ಹುಡುಗನಿಗೂ ಏನೋ ಆಸೆ...
ಕಳೆದು ಹೋಗಿ ವರುಷಗಳೇ ಕಳೆದರೂ ಅವಳ ನೆನಪನ್ನೇ ಉಸಿರಾಡುವ ಭಗ್ನ ಪ್ರೇಮಿಗೂ ಯಾವುದೋ ಕನಸು...
ಹೀಗೆ ಕಷ್ಟ-ಸುಖಗಳ ತೂಗುಯ್ಯಾಲೆಯಲಿ ತೇಲಿ ಹೋಗುತಿರುವ ಈ ಬದುಕಿನ ದೋಣಿಗೆ ಇನ್ನೊಂದು ದಡ ದಾಟಿದ ಹೆಮ್ಮೆ...
ಈ ವರ್ಷದ ಎಲ್ಲ ಕ್ಷಣಗಳನ್ನೂ ಸಂತೋಷದಿಂದಲೇ ಬದುಕೋಣ ಎಂಬ ದಿವ್ಯ ನಿರ್ಧಾರದೊಂದಿಗೆ ಹೊಸ ವರ್ಷವನ್ನ ಆರಂಭಿಸೋಣ...
Cheers...

ಭಾನುವಾರ, ಡಿಸೆಂಬರ್ 12, 2010

ಲಾಲ್ ಬಾಗಿನಲ್ಲೊಬ್ಬ ಏಕಾಂಗಿ...

ಗೇಟಿನಲ್ಲಿ ೧೦ ರುಪಾಯಿ ನನಗೆ, ೫ ರುಪಾಯಿ ಬೈಕಿಗೆ ಟಿಕೆಟ್ ತೊಗೊಂಡು ಒಳಬಂದರೆ, ಯಾವ ದಿಕ್ಕಿಗೆ ಹೋಗಬೇಕೆಂಬ ಕನ್ ಪ್ಯೂಷನ್ನು, ಎತ್ತ ತಿರುಗಿದರೂ ಹಸಿರೆ - ಉಸಿರು. ಬೆನ್ನ ಹಿಂದೆ ಅಷ್ಟೇತ್ತರಕೆ ಎದ್ದು ನಿಂತ ಬೆಟ್ಟ. ಆ ಬೆಟ್ಟದ ಎದೆಯ ಮೇಲೊಂದು ಮಂಟಪ. ಮಂಟಪದ ತುಂಬಾ ಪ್ರೇಮಿಗಳ ಕಲರವ. ಬದುಕಿನ ಅನಿವಾರ್ಯತೆಗೆ ಯಂತ್ರದಂತಾದ ಮನುಷ್ಯನ ನವಿರು ಭಾವನೆಗಳ ಅನಾವರಣ. ಹಸಿರು ಮೈದುಂಬಿ, ಹೂಗಳು ಅರಳಿ, ಉದ್ಯಾನನಗರ ಎಂಬ ಮಾತಿಗೆ ಜೀವಂತ ಸಾಕ್ಷಿಯಂತೆ ಗಾಜಿನ ಮನೆಯನ್ನೂ, ಕಾರಂಜಿಯನ್ನು, ಜೊತೆ ಜೊತೆಗೆ ಪ್ರೇಮಿಗಳನ್ನು ತನ್ನ ತಂಪಾದ ಮಡಿಲಲ್ಲಿ ಹಿಡಿದಿಟ್ಟುಕೊಂಡ ಲಾಲ್ ಬಾಗಿನಲ್ಲಿ ಬಹುಶ: ನಾನೊಬ್ಬನೇ ಏಕಾಂಗಿ. ಜೀವಂತಿಕೆಯಿಂದ ನಳನಳಿಸುವ ಮರದಲ್ಲೊಂದು ಒಣಗಿ ನಿಂತ ರೆಂಬೆಯಂತೆ!!!

ಕಾಯುತ್ತಿದ್ದಾನೆ...

ಯಾಂತ್ರಿಕ ಜಗತ್ತಿನ
ರಭಸದಲಿ ಸಾಗಿ
ಹೋಗುತಿರುವ ಮುದ್ದು ಹುಡುಗೀ
ಚೂರೇ ಚೂರು ತಿರುಗಿ
ನೋಡು ಮನದ ತುಂಬಾ
ಕೇವಲ ಪ್ರೀತಿ ಇಟ್ಟುಕೊಂಡ
ಒಬ್ಬ ಒಳ್ಳೆ ಹುಡುಗ
ಕಾಯುತ್ತಿದ್ದಾನೆ ಕೇವಲ
ನಿನಗೋಸ್ಕರ!!!

ಬದುಕಿನ ಬಸ್ಸು ತಪ್ಪಿದವ...

ಜನ ಜಂಗುಳಿಯ
ಮೆಜೆಸ್ಟಿಕ್ಕಿನಲಿ ಇನ್ನೂ
ಕಾಯುತ್ತಲೇ ಇದ್ದೇನೆ
ಬಸ್ಸು ತಪ್ಪಿದ
ಪ್ರಯಾಣಿಕನಂತೆ!!

ಸಾಯಲಾರೆ!!!

ಯಾವ ತಪ್ಪೂ ಮಾಡದೇ
ನಿನ್ನ ಪಾಲಿಗೆ ಈಗಾಗಲೇ
ಸತ್ತು ಹೋದ ನಾನು
ನಿನಗೆ ತೊಂದರೆ ಕೊಟ್ಟು
ಇನ್ನೊಮ್ಮೆ ಸಾಯಲಾರೆ!!!

ಮಂಗಳವಾರ, ಡಿಸೆಂಬರ್ 07, 2010

ನೀನು

ಕತ್ತಲ ರಾತ್ರಿಯಲಿ ಹಣತೆ
ಬೇಸಗೆಯಲಿ ಒರತೆ
ಬರ್ಬರ ಏಕತಾನತೆಯಲಿ
ಯಾವತ್ತೂ ಕೇಳದ ಕಥೆ!!

NO WAY...

ಪ್ರೀಯೆ ನಿನ್ನ ನೆನಪೆಂದರೆ
ನನಗೆ ನೋವೇ
ಅದರಿಂದ ಹೊರಬರಲು
NO WAY...

ಚಳಿಗಾಲಕ್ಕೊಂದು ಪುಟ್ಟ ಪತ್ರ...


ಬೆಳ್ಳಿ ಬೆಟ್ಟದ ಭಾವಗಂಗೆ,
ಮಳೆಗಾಲ ಮುಗಿಯುತಿದೆ. ಮುಸುಕಿದ ಮೋಡದ ಮರೆಯಿಂದ ಹೊರ ಸರಿದ ಸೂರ್ಯ ಫಳಫಳಿಸುತ್ತಿದ್ದಾನೆ. ಗರಿಕೆಯ ಗರ್ಭದಲ್ಲಿ ಹುಟ್ಟಿದ ಚಳಿ ಬೆನ್ನು ಮೂಳೆಯವರೆಗೂ ಹರಡುತಿದೆ. ಹೃದಯದಲ್ಲಿದ್ದ ಪ್ರೀತಿ ಈ ಚಳಿಗೆ ಕಿಬ್ಬೊಟ್ಟೆಗೆ ಜಾರಿ ಕಾಂಕ್ಷೆಯಾಗಿ ಎದ್ದು ಬರುತಿದೆ. ಮುಸಲಧಾರೆಗೆ ಕವಿಯಾಗಿದ್ದವನು ಕೆರಳಿದ ಚಿರತೆಯಂತಾಗಿದ್ದೇನೆ. ಸನಿಹದಲಿ ನೀನಿಲ್ಲ!
ಇವತ್ತು ಸಿಗು. ಬೆಳದಿಂಗಳ ರಾತ್ರಿ, ಚಂದ್ರನ ಮುಖದಲ್ಲೂ ಅಸೂಯೆ ಬರುವಷ್ಟು ಗಾಢ ನಮ್ಮಿಬ್ಬರ ಪ್ರೀತಿ, ತನ್ನ ಪ್ರಿಯತಮನಿಗಾಗಿ ಜನುಮಾಂತರದ ವಿರಹ ಕಳೆಯಲೇನೋ ಎಂಬಂತೆ ರಭಸದಿಂದ ಹರಿಯುವ ನದಿಯ ಕಲರವ, ಸಕ್ಕರೆಯಂತೆ ಮೃದುವಾಗಿ ಮೈಗೊತ್ತುವ ಮರಳು, ಕೈ ಚಾಚಿದರೆ ಸಿಗುವ ನಾನು, ತಂಪಾದ ಮೊಸರನ್ನ, ಬೆಳತನಕ ಹಾಡು ಹಾಡು ಹಾಡು...
"ಹೂವು ಹಾಸಿಗೆ ಚಂದ್ರ ಚಂದನ
ಬಾಹು ಬಂಧನ ಚುಂಬನ..."
ದಣಿದರೆ ನನ್ನ ಹೆಗಲು ಇದ್ದೆ ಇದೆ. ಸುಂದರವಾದ ಕನಸುಗಳನ್ನು ಏಳೇಳು ಜನ್ಮಕ್ಕಾಗುವಷ್ಟು ಕಟ್ಟಿ ಕೊಡುತ್ತಾ, ನಿನ್ನ ಕಿವಿಗೆ ಇಂಪಾದ ಹಾಡಾಗುತ್ತಾ, ನಿನ್ನ ಜಂಪಿಗೆ ತಂಪಾದ ಮಡಿಲಾಗುತ್ತಾ, ಬೆಳಗಿನ ಸೂರ್ಯ ಕಿರಣ ನಿನ್ನ ಮನೆಯ ಪಾರಿಜಾತದ ಮೇಲೆ ಬಿಳುವದರೋಳಗಾಗಿ ನಿನ್ನ ಮನೆ ಮುಟ್ಟಿಸುತ್ತೇನೆ. ಅವತ್ತಷ್ಟೆ ಅರಳಿದ ನಿನ್ನ ಮನೆಯ ಕಿಡಕಿಗೆ ಆತು ನಿಂತ ಮಲ್ಲಿಗೆ ಮೊಗ್ಗಿನ ಮೇಲಾಣೆ!!
ನಿನ್ನೊಂದಿಗೆ ಬೆಳದಿಂಗಳಿನಲ್ಲಿ ೪೮೦ ನಿಮಿಷಗಳನ್ನು ಇನ್ನು ಹೇಗೆಲ್ಲ, ಎಷ್ಟೆಲ್ಲಾ ಅದ್ಭುತವಾಗಿ ಕಳೆಯಬೇಕು ಎಂದು ಕಣ್ಣು ತೆರೆದೇ ಕನಸು ಕಾಣುತಿರುವ ನಾನೇ!!

ಒಳಗೆ - ಹೊರಗೆ

ಹೊರಗಡೆ ಜಡಿಮಳೆಯ
ಹಸಿ ಶುಂಟಿ
ಒಳಗಡೆ ತೆಕ್ಕೆಯಲಿ
ಶುದ್ದ ಜಗಳಗಂಟಿ!!

ಪಲಕು


ಪ್ರಕೃತಿಯ ಮಡಿಲಲ್ಲಿ ಮನುಷ್ಯ ಮಗುವಾಗುತ್ತಾನೆ, ಗಿಡವಾಗುತ್ತಾನೆ, ಮರವಾಗುತ್ತಾನೆ, ನದಿಯಾಗುತ್ತಾನೆ, ತುಂತುರು ಹನಿಯಾಗುತ್ತಾನೆ, ತೆಳ್ಳನೆಯ ಮಂಜಾಗುತ್ತಾನೆ, ಕವಿಯಾಗುತ್ತಾನೆ, ಕಿವಿಯಾಗುತ್ತಾನೆ, ತಾನು-ತಾನಾಗುತ್ತಾನೆ!!

ಗೊತ್ತಿದ್ದೂ...

ಎದುರು ಕುಳಿತ ನಿನ್ನನ್ನು
ನೋಡುತ್ತೇನೆ
'ತೃಪ್ತಿಯಾಗುವಂತೆ'
'ತೃಪ್ತಿಯಾಗುವದಿಲ್ಲ'
ಎಂದು ಗೊತ್ತಿದ್ದೂ!

ನೀನು

ಹವಳದ ತುಟಿ
ಬಡ ನಡು
ಮುದ್ದಾದ ಮುಖ
ಬೆಳದಿಂಗಳ ಬಣ್ಣ
ಚಂಚಲ ಮುಂಗುರುಳು
ಪುಟ್ಟ ಬಾಯಿ
ದೊಡ್ಡ ಹೃದಯ
ಆಯಕಟ್ಟಿನ ಜಾಗದಲ್ಲೊಂದು
ಜೇನ ಬಣ್ಣದ ಮಚ್ಚೆ!!!

ಬುಧವಾರ, ನವೆಂಬರ್ 03, 2010

ದೀಪಾವಳಿ


ಹೂ, ಹಣ್ಣು, ಝಗಮಗ ದೀಪಗಳು
ಕಾಯಿ, ಕರ್ಪೂರ, ನೈವೇದ್ಯೆ
ಸಿಹಿ, ಖಾರ, ಉಪ್ಪು, ತುಪ್ಪ
ಅಲ್ಲೆಲ್ಲೋ ಪಟಾಕಿ ಸದ್ದು
ಇಲ್ಲೆಲ್ಲೋ ಮಾವಿನ ತೋರಣ
ಒಳಗಡೆ ಸಿಹಿಯಾದ ಹೂರಣ
ಬಿಮ್ಮನೆ ಕುಳಿತ ಲಕ್ಷ್ಮಿ
ಹೊರಗಡೆ ಇಸ್ಪೀಟು
ಒಳಗಡೆ ಮಗುವಿನ ಅಳು
ಅಜ್ಜಿಯ ಗದರಿಕೆ
ಹುಡುಗರ ತುಂಟಾಟ
ಮದ್ದಿನ ವಾಸನೆ
ಸುರು ಸುರು ಬತ್ತಿ
ಗಂಟಾನಾದ
ಮಂತ್ರಘೋಷ
ದೀಪಾವಳಿಯ ಈ ಸಡಗರದ ಮಧ್ಯ ನಮ್ಮೊಳಗಿನ ಬೆಳಕು ಇನ್ನಷ್ಟು ಪ್ರಕಾಶಿಸಲಿ...
ಹ್ಯಾಪಿ ದೀಪಾವಳಿ ಇನ್ ಅಡ್ವಾನ್ಸ್!

ಬೊಬ್ಬೆ ಹೇಳಿದ ಕಥೆ

ಅದೊಂದು ಮದುವೆ ಮನೆ
ಎಲ್ಲರೂ ಊಟ ಮಾಡಲು
ಅಣಿಯಾಗುತ್ತಿದ್ದಾರೆ
ಅವಳಿಗೋಸ್ಕರ ಸುಡುವ
ಬಿಸಿಲಲ್ಲಿ ಕಾಲಿನ ಬೊಬ್ಬೆ
ಏಳುವವರೆಗೂ ಕಾಯುತಿರುವ
ಅವನು
ಯಾರದೋ ಜೊತೆಗೆ
ನಗುನಗುತಾ
ಊಟ ಮುಗಿಸಿದ
ಅವಳು
ಕೊನೆಗೆ ಉಳಿದಿದ್ದು
ಅವಳು ಉಂಡ
ಅವನು ಬಿಟ್ಟ
ಬಾಳೆಲೆಗಳು ಮಾತ್ರ!

ದೀಪಾವಳಿಗೊಂದು ಕಥೆ

ಮೆಜೆಸ್ಟಿಕ್ ನ ಬಿ.ಎಂ.ಟಿ.ಸಿ ಬಸ್ ನಿಲ್ದಾಣದಿಂದ ಹೊರ ಬಂದು ನಡೆದರೆ ಅಲ್ಲೇ ಪಕ್ಕದಲ್ಲಿ ತಳ್ಳು ಗಾಡಿಯ ಮುಂದೆ ನಿಂತು ದಾರಿಯಲಿ ಹೋಗುವ-ಬರುವವರನ್ನು ಕೂಗಿ ತಿಂಡಿಯ ಹೆಸರು ಹೇಳುತ್ತಾ ನಾನು ನಿಂತಿರುತ್ತೇನೆ. ಕಳೆದ ನಾಲ್ಕು ವರ್ಷಗಳಿಂದಲೂ ನಿರಂತರವಾಗಿ ನಡೆಯುತಿರುವ ಈ ಕ್ರಿಯೆ ಎಷ್ಟು ಸಹಜವಾಗಿದೆ ಎಂದರೆ ರಸ್ತೆಯಲಿ ಯಾರೂ ಇಲ್ಲದಿದ್ದರೂ ನನ್ನ ಕಿರುಚಿಕೊಳ್ಳುವ ಗಂಟಲಿಗೆ ಗೊತ್ತೇ ಆಗುವದಿಲ್ಲ! ಯಾವತ್ತೋ ಬಿಗಿದ ಗಂಟಲಿಗೆ ಕೊಟ್ಟುಕೊಳ್ಳುವ ಶಿಕ್ಷೆಯಂತೆ!!
ರಣ ಬಿಸಿಲಿನ ಬಯಲಿನಲ್ಲಿದೆ ನನ್ನೂರು. ಅದು ಚಿತ್ತೂರು. ಅಪ್ಪ ಬಡ ಕೃಷಿಕ. ಅವ್ವ ಕೂಲಿಯಾಳು. ಅಣ್ಣ-ತಂಗಿಯರ ಮಧ್ಯ ಯಾರಿಗೂ ಬೇಡದ ಬಡ ಕೂಸು - ನಾನು. ನಮ್ಮ ಕೇರಿಯ ಗೆಳೆಯರ ಜೊತೆಗೆ ಆಡುತ್ತಾ, ಬಿಳುತ್ತಾ, ನೆಗೆಯುತ್ತಾ, ಕದಿಯುತ್ತಾ, ಬಡಿಸಿ ಕೊಳ್ಳುತ್ತಾ ನನ್ನ ಬಾಲ್ಯ ಸರಿದು ಹೋಯಿತು. ಬಸ್ಸಿನ ಕಿಡಕಿಯಲಿ ಜಾರಿ ಹೋಗುವ ಮನೋಹರ ದೃಶ್ಯದಂತೆ. ಯಾವ ಶಾಲೆ-ಕಾಲೇಜು ಇಲ್ಲದ ಕುಗ್ರಾಮದಲಿ ಕಾಡ ಕುಸುಮದಂತೆ ಬೆಳೆದ ಧೀರ-ನಾನು. ನನ್ನ ಬದುಕಲ್ಲೂ ಹರೆಯ ಮೂಡುವ ಕಾಲ. ಮೂಗ ಕೆಳಗೆ ಚಿಗುರು ಮೀಸೆ. ಮನದ ಸಮುದ್ರದಲಿ ಭಾವನೆಗಳ ಮಹಾಪೂರ. ಆ ಮಹಾಪೂರಕ್ಕೆ ಸಿಕ್ಕ ಮುತ್ತು-ಅವಳು! ಅವಳೊಂದಿಗೆ ಆಡದ ಆಟವಿಲ್ಲ, ಮಾಡದ ಜಗಳವಿಲ್ಲ, ತಿರುಗದ ಜಾಗವಿಲ್ಲ, ಉಣ್ಣದ ಊಟವಿಲ್ಲ, ಕಾಡ ಮಧ್ಯದಲಿ ಕಳೆದು ಹೋದವನಿಗೆ ಸಿಕ್ಕ ದಾರಿಯಂತವಳು. ಹಾಗೆ ನಮ್ಮ ಸ್ನೇಹಕ್ಕೆ ಎರಡು ವರ್ಷ. ಅದೊಂದು ಬೆಳಿಗ್ಗೆ ಅವ್ವ ನೆಲ ಸಾರಿಸಿ ರಂಗವಲ್ಲಿ ಬಿಡುವ ಹೊತ್ತಿಗೆ ನನಗೆ ಗೊತ್ತಾದದ್ದು- ಇವತ್ತು ದೀಪಾವಳಿ. ಊರ ಗೌಡನ ಮಕ್ಕಳು ಬಣ್ಣ ಬಣ್ಣದ ಬಟ್ಟೆ ತೊಟ್ಟು, ಪಟಾಕಿ ಹಾರಿಸುತ್ತಾ, ಕೇಕೆ ಹೊಡೆಯುತ್ತಾ ಕುಣಿದಾಡುವ ಹೊತ್ತಿಗೆ ನಾವು ಊರ ಮುಂದಿನ ಪಾಳು ಬಿದ್ದ ಹಣಮಪ್ಪನ ಗುಡಿಯಲಿ ಸ್ಥಾಪಿತರಾಗಿದ್ದೆವು.
"ಇವತ್ತು ಸಂಜಿನ್ಯಾಗ ನಾವು ದುಡಿಲಾಕ ಪುಣೆಕ್ಕ ಹೊಂಟೆವಿ. ನಾ ಹೊಳ್ಳಿ ನಿನ್ನ ಮಾರಿ ನೋಡತಿನೋ ಇಲ್ಲೋ?" ಅಂದಳು. ಹಾಗೆ ಅನ್ನುವಷ್ಟರಲ್ಲಿಯೇ ಇಬ್ಬರ ಕಣ್ಣಲ್ಲೂ ನೀರು ಚಕ್ರತೀರ್ಥ. ಮಾತು ಬಾರದ ಮೂಕ ಮರ್ಮರವನು ಅನುಭವಿಸುತ್ತ ಅದೆಷ್ಟು ಹೊತ್ತು ಕುಳಿತಿದ್ದೆವೋ ಗೊತ್ತಿಲ್ಲ. ಇಬ್ಬರ ಮನದಲ್ಲೂ ಜ್ವಾಲಾಮುಖಿ ಸಿಡಿದ ಅನುಭವ. ತುಂಬಿ ಬಂದ ಗಂಟಲು ಮಾತನಾಡಲು ಅವಕಾಶ ಕೊಡಲಿಲ್ಲ. ಪಕ್ಕದಲ್ಲಿ ಕುಳಿತು ಕೈ ಹಿಡಿದವಳ ಭಾವನೆ ಏನಿತ್ತು? ಅವಳ ಕಣ್ಣುಗಳು ಎಲ್ಲವನ್ನೂ ಹೇಳಿ ಮುಗಿಸಿಯೂ ಇನ್ನೇನೋ ಇದೆ ಎಂಬಂತೆ ಅರ್ಧ ಮುಚ್ಚಿಕೊಂಡಿದ್ದವು. ಅವಳು ಅಳುತ್ತಿದ್ದಳಾ? ಗೊತ್ತಿಲ್ಲ. ಆದರೆ ನಾನು ಅಳುವನ್ನು ಮೀರಿದ ದುಖದಲ್ಲಿದ್ದೆ. ಆ ಕ್ಷಣವನ್ನು ನಾನ್ಯಾವತ್ತು ಮರೆಯಲಾರೆ.
ಇಂದು ಅನಿಸುತ್ತದೆ ಅದು ಪ್ರೇಮವಾ, ಸ್ನೇಹವಾ, ಬಯಸದ ಬಂಧವಾ, ಬೆಸೆಯದ ಬಂಧವಾ, ಮುಗಾರು ದಿನಗಳಲಿ ಮಿಂಚಿ ಹೋಗುವ ಮಿಂಚಾ? ಗೊತ್ತಿಲ್ಲ. ಆದರೆ ಪ್ರತಿ ದೀಪಾವಳಿಗೂ ಹಳೆಯ ಗಾಯದಂತೆ, ಕಣ್ಣಿಗೆ ಕಟ್ಟಿದ ಚಿತ್ರದಂತೆ ನೆನಪಾಗುತ್ತಲೇ ಇರುತ್ತದೆ. ಬಹುಶಃ ನಾನಿರುವವರೆಗೂ...

ಹಂಪೆಯಲ್ಲೊಂದು ದಿನ...

ಜಗತ್ತು ಕಂಡ ನಾಲ್ಕು ಮಹಾ ಸಾಮ್ರಾಜ್ಯಗಳಲಿ ಒಂದಾದ ವಿಜಯನಗರ ಸಾಮ್ರಾಜ್ಯದ ಪಳಿಯುಳಿಕೆ ನೋಡುವ ಸೌಭಾಗ್ಯ! ಭರತ ವರ್ಷದಲಿ ಕಂಡು ಕೇಳರಿಯದ ಶ್ರೀಮಂತಿಕೆಯಿಂದ ಆ ಸ್ವರ್ಗವೇ ಭೂಮಿಗೆ ಇಳಿದಂತೆ ಬದುಕಿದ ಜನರ ಜೀವನಗಾಥೆ ಹೇಳುವ ಅದ್ಭುತ ಸ್ಥಳವೇ - ಹಂಪೆ. ಭಾವುಕನೊಬ್ಬ ತನ್ನದೇ ಮುರಿದ ಮನೆಯಲಿ ನಡೆದ ನವಿರು ನೋವಿನ ಅನುಭವ ನೀಡುವ ನಮ್ಮ ಹೆಮ್ಮೆಯ, ನೋವಿನ, ವಿಶಾಧದ - ಹಂಪೆ.
ಭಾರತೀಯರ ದೈವ ಕಲ್ಪನೆಯ ಸಾಕಾರದಂತಿರುವ ಅಂದಿನಿಂದಲೂ ಮನುಷ್ಯನ ಪ್ರೀತಿ, ಔದಾರ್ಯ, ಕರುಣೆ, ದಯೆ, ನಿಷ್ಠೆ, ಪ್ರಾಮಾಣಿಕತೆಯ ಜೊತೆಗೆ ಕ್ರೌರ್ಯ, ಮತಾಂಧತೆ, ಅಧಿಕಾರ ದಾಹ, ಮನಸಿನ ವಿಕೃತತೆ ಹೀಗೆ ಎಲ್ಲವನ್ನು ನೋಡಿಯೂ ನಗುತಲಿರುವ ವಿರುಪಾಕ್ಷ! ಮನುಷ್ಯನ ಸ್ವಾರ್ಥದ ಪ್ರತಿಬಿಂಬದಂತೆ, ತನ್ನ ಅಗಾಧ ದೇಹವನ್ನು ಹೊತ್ತು ನಾಯಿಯಂತೆ ಅಲೆಯುವ ಆನೆ! ಹೊಟ್ಟೆ ಮಾತ್ರ ಕೊಚ್ಚಿ ಹೋಗಿ ಉಳಿದಿದ್ದೆ ಸಾಕು ಎಂಬಂತೆ ನಿಟ್ಟುಸಿರಾದ ಕಡಲೆಕಾಳು ಗಣಪ! ಹಿಂದೆ ನೋಡಿದರೆ ಪಾರ್ವತಿಯಂತೆ, ಮುಂದೆ ನೋಡಿದರೆ ಮುಗ್ದ ಮಗುವಿನಂತೆ ಬಯಲಲ್ಲೇ ಹಠ ಹಿಡಿದು ನಿಂತ ಸಾಸಿವೆಕಾಳು ಗಣಪ! ಉಗ್ರನಾದರೂ ಭಗ್ನವಾಗಿ ಲಕ್ಷ್ಮಿ ಇಲ್ಲದೆ ವಿರಹವನು ಕಣ್ಣಲ್ಲೇ ವ್ಯಕ್ತಪಡಿಸುವ ನರಸಿಂಹ! ಇದ್ದ ಗರ್ಭಗುಡಿ ತುಂಬಾ ಹಬ್ಬಿ ನಿಂತ ಜಲಪ್ರಿಯ ಬಡವಿಲಿಂಗ! ಒರಿಸ್ಸಾದ ಗಜಪತಿಯ ಗರ್ವ ಭಂಗಕ್ಕೆ ಸಾಕ್ಷಿಯಾದ ಶ್ರೀ ಕೃಷ್ಣ ಮಂದಿರ! ಇಂದಿಗೂ ಅಲ್ಲೆಲ್ಲೋ ಉಳಿದು ಹೋಗಿವೆ ಏನೋ ಎಂದು ಕಣ್ಣಾಡಿಸುವಂತೆ ಮಾಡುವ ಚಿನ್ನ, ಬೆಳ್ಳಿ, ಮುತ್ತು, ರತ್ನಗಳ ಸೇರಲ್ಲಿ ಅಳೆದು ಮಾರುತ್ತಿದ್ದ ಚಂದದ ಬಜಾರು! ಮನುಷ್ಯನ ದುರಾಸೆಗೆ ರಕ್ತವನ್ನೂ ಕಂಡಿರುವ ತಿಳಿನೀರಿನ ಅಂದದ ಪುಷ್ಕರಣಿ! ಅಂದಿನ ಹಬ್ಬದ ಅಗಾಧ ಸಂಭ್ರಮಕ್ಕೆ ಸಾಕ್ಷಿಯಾದ ಬೃಹತ್ ಮಹಾನವಮಿ ದಿಬ್ಬ! ಶ್ರೀ ಕೃಷ್ಣ ದೇವರಾಯ ಕುಳಿತು ನಡೆಸುತ್ತಿದ್ದ ರಾಜಸಭೆ! ಕಲ್ಲು ನಾಡಿನ ಬೇಸಿಗೆ ತಂಪಾಗಿಸುವ ಅದ್ಭುತ ತಂತ್ರಜ್ಞಾನದ ಕಮಲ ಮಹಲ್! ಗಜಪಡೆಗೆಂದು ರೂಪಿಸಿದ ವಿಶಾಲ ಗಜಶಾಲೆ! ಅಪರೂಪದ ಸಾಮ್ರಾಜ್ಯಕ್ಕೆ ಅಭೇದ್ಯ ಕಾವಲು ಗೋಪುರ! ಶ್ರೀಮಂತಿಕೆಯ ತೋರುವ ಟಂಕಸಾಲೆ! ದಾಸರ ಗಾನ ವೈಭವ ನೆನಪಿಸುವ ಪುರಂದರ ಮಂಟಪ! ಅರ್ಧ ಚಂದ್ರಾಕಾರವಾಗಿ ಸುತ್ತಿ ತಣಿಯುವ-ತಣಿಸುವ ತುಂಗಭದ್ರೆ! ದೇವರಿಲ್ಲದಿದ್ದರೂ ಆ ಕೊರಗಿಲ್ಲದಂತೆ ಮಾಡುವ ಮಹೋನ್ನತ ವಾಸ್ತುಶಿಲ್ಪ ಕೃತಿ ವಿಜಯ-ವಿ ಮಂದಿರ! ದಾಟಿ ಬಂದರೆ ಕಲ್ಲು ಕಲ್ಲಿನಲೂ ಸಪ್ತ ಸ್ವರ! ಆ ಸ್ವರದ ಮೋಡಿಗೆ ಎಲ್ಲಿಂದಲೋ ನಡೆದು ಬಂದ ಕಲ್ಲಿನ ರಥ!
ಹೀಗೆ ಪ್ರತಿಯೊಂದೂ ಅಂದಿನಿಂದ ಇಂದಿನವರೆಗೂ ನಡೆದ ಇತಿಹಾಸವನ್ನು ಸವಿಸ್ತಾರವಾಗಿ ಹೇಳುವ ಜೀವಂತ ಸಾಕ್ಷಿಗಳಾಗಿ ಉಳಿದುಕೊಂಡಿವೆ; ಕೇಳಲು ಕಿವಿಯಿರಬೇಕು ಅಷ್ಟೇ! ಯಾವುದೋ ಹೆಸರಿಲ್ಲದ ಒಂದು ಬಂಡೆಯ ಮೇಲೆ ನಿಂತು ಕಣ್ಮುಚ್ಚಿ ೫೦೦ ವರ್ಷಗಳಷ್ಟು ಹಿಂದೆ ಹೋದರೆ ನೀವು ಇಂದಿನ ಹಾಳು ಹಂಪೆಯಲ್ಲದೆ ಅಂದಿನ ಭವ್ಯ ವಿಜಯನಗರ ಸಾಮ್ರಾಜ್ಯವನ್ನೇ ನೋಡಬಹುದು; ಅದಕ್ಕೆ ಕೇವಲ ಮನಸ್ಸಿರಬೇಕಷ್ಟೆ! ೨೫೦ ವರ್ಷಗಳಲ್ಲಿ ಕಟ್ಟಿದ ಈ ಭವ್ಯ-ಮಹೋನ್ನತ ಸಾಮ್ರಾಜ್ಯವನ್ನು ಕೇವಲ ಆರು ತಿಂಗಳಲ್ಲಿ ಹಾಳು ಮಾಡಲಾಯಿತಂತೆ! ಎರಡೂ ಮನುಷ್ಯ ಮನಸಿನ ಭಾವನೆಗಳೇ! ಸೃಷ್ಟಿ-ಸರ್ವನಾಶ!! ಎರಡೂ ಮಾಡಿದ್ದೂ ಮನುಷ್ಯನೇ. ಒಂದು ಜೀವನೋತ್ಸಾಹ. ಇನ್ನೊಂದು ಮರಣೋತ್ಸಾಹ !!

ಗುರುವಾರ, ಅಕ್ಟೋಬರ್ 28, 2010

ಮುಂಗಾರು ಹನಿ

ಜನುಮ ಜನುಮದಲ್ಲೂ ಜೊತೆಗೆ ನಡೆವ ಕನಸ ಕಂಡು
ಎದೆಯ ತೋಟದಲ್ಲಿ ಪ್ರೀತಿ ಹೂವ ಬೆಳೆದು ಬೆಳೆದು
ಬೆಂಕಿ ಮಳೆಗೆ ಬೆಂದು ಬೆಂದು
ಜೀವ ಸೊರಗಿದೆ...
ಸಿಡಿಲು ಬಡೆದು ಎದೆಗೆ
ಉರುಳಿತಲ್ಲ ಮನದರಮನೆಯು
ಬಂಧಿ ನಾನು ವಿಧಿ ಸೇರೆಮನೆಯು
ದಾರಿ ಮುಗಿದಿದೆ...

ಬುಧವಾರ, ಅಕ್ಟೋಬರ್ 27, 2010

ಅವಳು


ಮನದ ಸಮುದ್ರ ದಂಡೆಯ
ಸಕ್ಕರೆ ಮರಳಿನಲಿ
ಹೆಜ್ಜೆಯೂರಿ
ನಡೆದು ಹೋದವಳು...
ಮರಳು ಬುದ್ದಿಯ
ನಿದ್ದೆಗಣ್ಣಲಿ
ಎದ್ದು ಹೋದವಳು...
ಹೃದಯ ಪ್ರೀತಿಯ
ಗುಡಿಯ ಕೆಡವಿ
ನಗುತ ಎದ್ದವಳು...
ಅರಳು ಕಂಗಳ
ಕನಸು ಗುಡಿಸಿ
ಹಾರಿ ಹೋದವಳು...
ನನ್ನ ಬದುಕ
ನಗೆಯ ಬಂಡಿ
ಇಳಿದು ಹೋದವಳು...
ಎದೆಯ ಒಳಗೆ
ಗುಬ್ಬಿ ಗೂಡು
ಕಟ್ಟಿ ಹೋದವಳು...
ಎದೆಯ ತುಂಬಾ
ಕಿಚ್ಚು ಹಚ್ಚಿ
ಕಳೆದು ಹೋದವಳು...
ಕೂಡಿ-ಕಳೆದು
ಹಾಡು ಹೇಳಿ
ಓದಿ ಹೋದವಳು...
'ನೀರಿಕ್ಷೆಯಲ್ಲೇ
ಕಾಯ್ದು ಸಾಯಿ'
ಅಂದು ಹೋದವಳು...
ರಾತ್ರಿ-ಹಗಲು
ಕಾಡುತಿರುವ
ಅವಳೇ ನನ್ನೊಳು, ನನ್ನ ಮನದವಳು...

ಕರ್ಣ


ವ್ಯಾಸರು ಸೃಷ್ಟಿಸಿದ ಮಹಾಭಾರತದ ಒಂದು ಅದ್ಭುತ ಪಾತ್ರ: ಕರ್ಣ. ದೇವಸುತನಾದರೂ, ಒಬ್ಬ ಸಾಮಾನ್ಯ ಮನುಷ್ಯನಂತೆ ತವಕ, ತಲ್ಲಣ, ಗೊಂದಲ, ಹತಾಶೆ, ಋಣ ಭಾರ ಎಲ್ಲವನ್ನೂ ಅನುಭವಿಸುತ್ತಾ ಬದುಕಿದವನು. ನಿರ್ದಿಷ್ಟ ನಿರ್ಧಾರಕ್ಕೆ ಬರಲಾಗದೆ ನಮ್ಮಂತೆ ಚಡಪಡಿಸಿದವನು. ಹಸ್ತಿನಾವತಿಯ ರಕ್ತ ಸಿಂಹಾಸನಕ್ಕೆರಲು ಎಲ್ಲ ರೀತಿಯಿಂದಲೂ ಯೋಗ್ಯನಾಗಿದ್ದು, ಹಿಂದೆ ಸರಿದು ಬಿಟ್ಟವನು. ಅದಕ್ಕೆಂದೇ ತನ್ನ ದೊರೆ ಅರಿಕೇಸರಿಯನ್ನು ಅರ್ಜುನನಿಗೆ ಸಮೀಕರಿಸಿ 'ವಿಕ್ರಮಾರ್ಜುನ ವಿಜಯ' ಎಂದು ಹೆಸರಿಟ್ಟರೂ, ಕರ್ಣನ ವ್ಯಕ್ತಿತ್ವಕ್ಕೆ ಮನಸೋತು-
"ನೆನೆಯದಿರಣ್ಣ, ಭಾರತದೋಳ್ ಇಂ ಪೆರರಾರುಮಂ
ಒಂದೇ ಚಿತ್ತದಿಂ! ನೆನವೊಡೆ ಕರ್ಣನಂ ನೆನೆಯ!
ಕರ್ಣನೋಳ್ ಆರ್ ದೊರೆ ಕರ್ಣನ ಏರು, ಕರ್ಣನ ಕಡುನನ್ನಿ,
ಕರ್ಣನ ಅಳಿವು, ಅಂಕದ ಕರ್ಣನ ಚಾಗಂ ಎಂದು ಕರ್ಣನ,
ಪಡೆ ಮಾಡಿನೋಳ್ ಪುಡಿದು ಕರ್ಣ ರಸಾಯನಂ ಅಲ್ತೆ ಭಾರತಂ"
ಎಂದು ಪಂಪ ಹೊಗಳುತ್ತಾನೆ. ದಾನವನ್ನೇ ವೀರತ್ವಕ್ಕೆರಿಸಿದ ಇನ್ನೊಬ್ಬೆ ಒಬ್ಬ ವ್ಯಕ್ತಿ ನಮಗೆ ಇತಿಹಾಸದಲ್ಲಿ ಇನ್ನೆಲ್ಲೂ ಸಿಗುವದಿಲ್ಲ. 'ದಾನ' ಕರ್ಣನ ವ್ಯಕ್ತಿತ್ವದ ಪ್ರತಿಬಿಂಬ. ಅದಕ್ಕೆಂದೇ ಅವನು 'ದಾನ ವೀರ ಶೂರ ಕರ್ಣ'.
ಜಗತ್ತನ್ನೇ ತನ್ನ ಶಕ್ತಿಯಿಂದ ಮುನ್ನಡೆಸುವ ಸೂರ್ಯನ ಮಗನಾದರೂ, ಸೂತನೊಬ್ಬನ ಮನೆಯಲಿ ಸಾಮಾನ್ಯನಂತೆ ಬೆಳೆಯುತ್ತಾನೆ. ಹಾಗೆ ಬದುಕಿದ್ದಕ್ಕೆ ನಮಗೆ ಹೆಚ್ಚು ಆಪ್ತನಾಗ್ತಾನೆ? ಹಸಿವೆ, ಬಡತನ,ಕಿಳರಿಮೆಗಳಲ್ಲೇ ಬಾಲ್ಯವನ್ನು ಕಳೆದ ಕರ್ಣನಿಗೆ, ಕುರು ಚಕ್ರಾಧಿಪತಿಯಾಗು ಎಂದು ಕೃಷ್ಣ ಹೇಳಿದಾಗ, ಆ ಐಶ್ವರ್ಯಕ್ಕಿಂತಲೂ ತನ್ನ ದೊರೆ, ಅಂತರಂಗದ ಮಿತ್ರ ದುರ್ಯೋಧನನೆ ಹೆಚ್ಚು ಅಂದುಕೊಳ್ಳುತ್ತಾನೆ. ಕೊಟಿ ಕಲ್ಲಿದ್ದಿಲಿನ ಮದ್ಯದಲ್ಲಿದ್ದರೂ ಪ್ರಕಾಶಿಸುವ ವಜ್ರದಂತೆ, ತನ್ನ ಮೈಯಲ್ಲಿ ಹರಿಯುತಿರುವ ಕ್ಷಾತ್ರ ರಕ್ತದ ಬಿಸಿ ತಡೆಯಲಾಗದೆ ಪರುಶುರಾಮನಂತಹ ಗುರುವನ್ನು ಗೆದ್ದು, ಜಗತ್ತಿನಲ್ಲೇ ಮಹಾರಥನಾಗ್ತಾನೆ. ಬಯಸದೆ ಸಿಕ್ಕ ದುರ್ಯೋಧನನ ಗೆಳೆತನವನ್ನು ತಪ್ಪಿ ಕೂಡಾ ದುರುಪಯೋಗಪಡಿಸಿಕೊಳ್ಳದ ನಿಜವಾದ ಧರ್ಮರಾಯ ಈ ಕರ್ಣ!!
ಭಿಷ್ಮರಂತಹ ತುಂಬಿದ ಕೊಡವೇ ತುಂಬಿದ ರಾಜಸಭೆಯಲಿ 'ಸೂತಪುತ್ರ' ಎಂದು ಹಂಗಿಸಿದಾಗ, 'ಹುಟ್ಟಿನಿಂದ ಕುಲವನ್ನು ನೋಡುತ್ತಿರಾದರೆ, ಆಚಾರ್ಯ ದ್ರೋಣರು ಕೂಡ ಬೆಸ್ತ ಕುಲದವರು' ಎಂದು ಎದುರು ಮಾತನಾಡುವಷ್ಟು ಘನತೆ ಕಲ್ಪಿಸಿದ ಧುರ್ಯೋಧನನೆ ಅವನಿಗೆಲ್ಲ. ಧುರ್ಯೋಧನ ಸಿಕ್ಕ ನಂತರ ಅವನು ತನಗೋಸ್ಕರ ಬದುಕಲೇ ಇಲ್ಲ ಅನಿಸಿ ಬಿಡುತ್ತದೆ!! ಅವನ ಎಲ್ಲ ಕಾರ್ಯಗಳೂ ಗೆಳೆಯನ ಸುತ್ತಲು ಸುತ್ತ ತೊಡಗಿದವಾ? ಸ್ವಯಂವರದಲಿ ಗೆಲ್ಲಬಹುದಾಗಿದ್ದ, ದ್ರೌಪದಿಯನು ಕೇವಲ ಗೆಳೆಯನಿಗಾಗಿಯೇ ಸೋತು ಬಿಡುತ್ತಾನೆ. ಕೃಷ್ಣ ನಿಂದ ತನ್ನ ಜನ್ಮ ರಹಸ್ಯ ತಿಳಿದ ನಂತರವೂ ರಕ್ತ ಸಂಬಂಧ ಕ್ಕಿಂತಲೂ ಸ್ನೇಹ ಸಂಬಂಧದ ಪರವಾಗೇ ನಿಂತು ಬಿಡುತ್ತಾನೆ. ಅದಕ್ಕೆಂದೇ ನಮ್ಮೆಲ್ಲರ ಹೃದಯದಲಿ ನಿಶ್ಚಲವಾಗಿ ನಿಂತು ಬಿಡುತ್ತಾನೆ. ಹೆತ್ತರೂ ಒಂದು ದಿನವು ಪ್ರೀತಿ-ವಾತ್ಸಲ್ಯ ತೋರಿಸದ ತಾಯಿ ಕುಂತಿಗೇ ವರದಾನ ನೀಡಿ, ಎಲ್ಲೋ ತಾಯಿಗಿಂತಲೂ ದೊಡ್ಡವನು ಅನಿಸಿಬಿಡ್ತಾನೆ!!! ಎಲ್ಲ ಕಡೆಯಿಂದಲೂ ತನಗೆ ಸೋಲು, ಸಾವು ನೀಡುವವರ ಪ್ರೀತಿಗೆ ಮಣಿಯುತ್ತಾನೆ, ಮಣಿದು ಮಡಿಯುತ್ತಾನೆ. ಯುದ್ಧದಲ್ಲಿ ಸಾವು ತನಗೆ ಕಟ್ಟಿಟ್ಟ ಬುತ್ತಿ ಎಂದು ತಿಳಿದಿದ್ದರೂ, ಹೃದಯದ ಗೆಳೆಯನಿಗಾಗಿ ಪರಾಕ್ರಮಿಯಂತೆ ಹೋರಾಡಿ, ಕೃಷ್ಣನ ಮೋಸಕ್ಕೆ ಬಲಿಯಾಗ್ತಾನೆ.
ಅದಕ್ಕೆಂದೇ ಕರ್ಣ ನಮ್ಮಲ್ಲೋಬ್ಬನಾಗ್ತಾನೆ!!!

ಸೋಮವಾರ, ಅಕ್ಟೋಬರ್ 25, 2010

ಸುಖಿ

ಪ್ರಪಂಚದ ನೂರಾರು
ಸಿದ್ದ ಸೂತ್ರಗಳಿಗೆ
ಬಂದು ಕಾಲು ಶತಮಾನವಾದರೂ
ಹೊಂದಿಕೊಳ್ಳಲಾಗುತ್ತಿಲ್ಲ
ಊರಿಗೇ ಒಂದು ದಾರಿಯಾದರೆ
ನನಗೇ ಒಂದು ದಾರಿ!
ಇದು ಹುಚ್ಚೋ ಬೆಪ್ಪೋ
ಗೊತ್ತಿಲ್ಲ ಆದ್ರೆ
ಈ ದಾರೀಲಿ ನಾನಂತೂ ಸುಖಿ!!!

I am Sorry...

ಗೆಳತಿ,
ಕಾಣಿಸದ ಯಾವುದೋ ದೂರದಲಿ ಮೊಳಗುವ ದೇವಸ್ಥಾನದ ಘಂಟೆ, ಪ್ರೀತಿಯಿಂದ ಕಲೆಸಿದ ಮೊಸರನ್ನದ ಕೊನೆಯ ತುತ್ತು, ಬಿಸಿಲು ಮುಗಿದ ಸಾಯಂಕಾಲ ಸುಮ್ಮನೆ ಬಿದ್ದ ಮಳೆ ಎಬ್ಬಿಸುವ ಮಧುರ ಮಣ್ಣಿನ ವಾಸನೆ, ಮಾತು ಬಾರದ ಮಗುವಿನ ಮುಗ್ದ ನಗೆ, ಕರುವಿನ ಅಭೋದ ಕಣ್ಣು, ಹಸಿವೆಯಾದ ತಕ್ಷಣ ನೆನಪಾಗುವ ಅಮ್ಮ-
ನನಗೆ ನಿನ್ನ ನೆನಪಾಗುವದು ಹೀಗೆ!! ಒಳ್ಳೆಯದು ಅಂತ ಈ ಜಗತ್ತಿನಲಿ ಏನೇನಿದೆಯೋ; ಅದನ್ನು ನೋಡಿದಾಗಲೆಲ್ಲ ನೆನಪಾಗುವವಳು ನೀನು!!! ಚಂದದ ಹಾಡು ಕೇಳಿ ಸಂತೋಷಪಡುವ ಹೊತ್ತಲ್ಲೇ ನಿನಿಲ್ಲವಲ್ಲ ಅನಿಸಿಬಿಡುತ್ತದೆ. ಧುಮ್ಮಿಕ್ಕುವ ಜಲಪಾತಕ್ಕೆ ಮುಖ ಒಡ್ಡುತ್ತೇನೆ ತುಂತುರುವಿನಲಿ ನೀನಿರುತ್ತಿಯೆಂಬ ನಂಬಿಕೆ.ಇಬ್ಬನಿ ಬಿದ್ದ ಪಕಳೆಗೆ ಕೆನ್ನೆ ತಾಕಿಸುತ್ತೇನೆ; ನಿನ್ನ ಮನಸು ತಂಪಾಗಿರಲೆಂಬ ಆಸೆ. ನಾನೆಕಿಷ್ಟು ನಿನ್ನ ಪ್ರೀತಿಸುತ್ತೇನೆ?
ನನ್ನ ಪ್ರತಿ ಸುರ್ಯೋದಯವು ನಿನ್ನ ಸ್ಮರಣೆಯೊಂದಿಗೆ ಆಗಿದೆ. ಪ್ರತಿ ಸೂರ್ಯಾಸ್ತವು ನಿನ್ನ ನೆನಪಲ್ಲೇ ಆಗುತ್ತದೆ. ನಿನ್ನ ನಗೆ ನನಗೆ ಮುಂಗಾರಿನ ಆಗಮನ. ನನ್ನ ಬದುಕು ನೀನು. ಬರೆಯಲು ಕುಳಿತರೆ ಕಣ್ಣು ತುಂಬಿ ಬರುತ್ತವೆ. ನಿನ್ನ ಮುಖ ನೆನಪಾದರೆ ಎಂಥದೋ ಸಂಕಟ. ಗಡಿಯಾರದಲಿ ಎಂಟು ಘಂಟೆ; ನನಗೆ ನಿನ್ನ ಊಟದ ಚಿಂತೆ!!
ಸೋನು, ನಿನ್ನಿಲ್ಲದ ನನ್ನ ಬದುಕು... ಊಹೂ ನನಗೇ ಕಲ್ಪಿಸಿಕೊಳ್ಳಲಾಗುತ್ತಿಲ್ಲ. ಈ ಮದ್ಯರಾತ್ರಿಯಲಿ ನಿಶಾಚರಿಯಂತೆ ಕುಳಿತು ಯೋಚಿಸುತ್ತಿದ್ದೇನೆ.. I am Sorry ನನಗೇ ಬದುಕಲಾಗುತ್ತಿಲ್ಲ!!!

ಚುಕ್ಕಿ ಚಂದ್ರಮನಲ್ಲೂ ನಿನ್ನನ್ನೇ ಹುಡುಕುತ್ತಾ...

ಹುಡುಗೀ,
"ಎಲ್ಲಿಯೋ ಮಧು ಬಟ್ಟಲು ಒಡೆದ ಸದ್ದು! ಯಾರ ಹೃದಯ ಚೂರಾಯಿತೋ?"
ಎಂದು ಕೇಳಿದವನು ಗಾಲಿಬ್.
ಈ ಬದುಕಿನಲಿ ಪ್ರೀತಿಯನ್ನು ಅನುಭವಿಸಿದಷ್ಟೇ ತೀವ್ರವಾಗಿ ವಿಷಾಧವನ್ನೂ ಅನುಭವಿಸಿದವರಿಗೆ ಮಾತ್ರ ಆ ಸದ್ದು ಕೇಳುತ್ತದೆ. ಅಂತಹ ಪ್ರತಿ ಸದ್ದಿನ ಹಿಂದೆ ಒಂದು ವಂಚನೆ ಇರಬಹುದು ಅಥವಾ ಒಂದು ಅಮಾಯಕ ನಂಬಿಕೆ ಇರಬಹುದು!!
ಮಲೆನಾಡಿನ ಮಾಮರದಲ್ಲೆಲ್ಲೋ ಚಿಗುರು ತಿಂದು ಕೂಗಿದ ಕೋಗಿಲೆಯ ಕೂಹೂವಿಗೆ ಬಯಲುಸೀಮೆಯ ಮೂಲೆಯಲ್ಲಿರುವ ಮರದ ಮೇಲೆ ಕುಳಿತ ಹೆಸರಿಲ್ಲದ ಹಕ್ಕಿ ಅನುಭವಿಸಿದ ಹೇಳಿಕೊಳ್ಳಲಾಗದ ಖುಷಿಯಂತೆ ಬದುಕಿನಲಿ ನಡೆದು ಬಂದೆ!! ಬರೀ ಕಿಳರಿಮೆಗಳೇ ತುಂಬಿದ ಈ ಹುಡುಗನ ಆತ್ಮವಿಶ್ವಾಸದಂತೆ!!! ಆಮೆಲೆನಿದೆ ಈ ಬಾನು, ಈ ಭೂಮಿ ಯಾವುದು ಸಾಲದೆಂಬಂತೆ ತಿರುಗಾದಿಬಿಟ್ಟೆವು ಸ್ಟಾರ್ ಹೋಟೆಲಿನಿಂದ ಬೀದಿ ಬದಿಯ ಗೊಲಗುಪ್ಪೆ ವರೆಗೆ. ಎಲ್ಲೆಲ್ಲು ನಾವೇ!!
ಒಂದೇ ಯೋಚನೆ,ಯೋಜನೆ,ಅಭಿರುಚಿ,ಕನಸು ಎಲ್ಲವು ಇದ್ದೂ, ನಾವು ಬೇರೆಯಾಗಿದ್ದು ಯಾಕೆ? I think ಇದು ಯಾವತ್ತಿಗೂ ಬಗೆಹರಿಯದ ಪ್ರಶ್ನೆ! ನಮ್ಮ ಅಹಂ, attitude, possesiveness, ಹೊಂದಾಣಿಕೆ, ಹಠ, ಜಗಳ ಹೀಗೆ ನೂರು ಕಾರಣಗಳು ಇದ್ದರೂ, ತಪ್ಪು ಯಾರದೇ ಇದ್ದರೂ ಸೋನು, ಚೂರೆ ಚೂರು ಇದೆಲ್ಲವನ್ನೂ ಬಿಟ್ಟು ಯೋಚನೆ ಮಾಡಿ ನೋಡು ಕೂಡಿ ಬದುಕಲಿಕ್ಕೆ ಸಾವಿರ ಕಾರಣ ಸಿಕ್ಕಾವು.
ಹೆಸರೇ ಕೇಳದ ದೂರದೂರುಗಳಲ್ಲಿ ಹುಟ್ಟಿ, ಬೆಳೆದು ಕೇವಲ ಈ ಪ್ರೀತಿಗಾಗಿಯೇ ನಾವಿಬ್ಬರು ಸೇರಿದೆವೇನೋ ಅನಿಸುತ್ತದೆ. ಬಿಡು ಇದೆಲ್ಲ ನನ್ನ ಪೆದ್ದು ಮನಸಿನ ಭಾವುಕ ಕನವರಿಕೆ ಇರಬಹುದು. ಇಡೀ ಬದುಕನ್ನು ಒಂದು ಲ್ಯಾಬ್ ನಲ್ಲಿನ ಪ್ರಾಕ್ಟಿಕಲ್ ಎಂದು ತಿಳಿದ ಸೈನ್ಸ್ ಹುಡುಗಿಯಲ್ಲವೇ ನೀನು? ಹಾಳು ಹಂಪೆಯ ಕಲ್ಲಿನ ರಥದ ಮುಂದೆ ನಿಂತು ಅಂದಿನ ಶ್ರೀ ಕೃಷ್ಣ ದೇವರಾಯನ ಸುವರ್ಣ ಕಾಲಕ್ಕೆ ಹೋಗಿ, ಅಂದಿನ ವೈಭವವನ್ನು ಇಂದು ಅನುಭವಿಸುವ ಇತಿಹಾಸ ಕಲಿತವನ ಮನದ ಭಾವುಕತೆ ನಿನಗೆಲ್ಲಿ ಅರ್ಥವಾದೀತು?
ಹುಣ್ಣಿಮೆಯ ರಾತ್ರಿ ಗೆಳತಿಯರೋಡಗೂಡಿ ಪಾನಿಪುರಿ ತಿಂದು ಬಂದು ಯಾವುದೊ ಇಂಗ್ಲಿಷ್ ಸಿನಿಮಾ ನೋಡೋಳಿಗೆ ಟೆರೇಸಿನ ಮೇಲೆ ಮಲಗಿ ಚುಕ್ಕಿಗಳೊಂದಿಗೆ ಮಾತನಾಡುತ್ತ, ಚಂದ್ರನ ಮೇಲೊಂದು ಕವಿತೆ ಕಟ್ಟಲು ಪರದಾಡುತಿರುವ ಈ ಹುಡುಗ ಹುಚ್ಚನ ಹಾಗೆ ಕಂಡರೆ ಅದು ನಿನ್ನ ತಪ್ಪಲ್ಲ ಬಿಡು!!!ಅಸಂಖ್ಯಾತ ಚುಕ್ಕಿಗಳಲು, ಚಲುವಾಂತ ಚನ್ನಿಗ ಚಂದ್ರನ ಮುಖದಲ್ಲೂ, ನಿನ್ನನ್ನೇ ಹುಡುಕುತಿರುವ ಈ ಪೆದ್ದು ಮನಸಿನ ಹುಡುಗ ನಿನಗೆ ನೆನಪಾಗುತ್ತಿಲ್ಲವೇ? I miss u ಕಣೇ!!!

ಶನಿವಾರ, ಅಕ್ಟೋಬರ್ 23, 2010

ಎಲ್ಲಿರುವೆ?


ಯಾವ ಸಪ್ತ ಸಾಗರದಾಚೆ?
ಬೆಳಗಿನಿಂದ ಇಳಿ ಸಾಯಂಕಾಲದ
-ವರೆಗೂ ಗಿಜಿಗುಡುವ
ಈ ಅಸಹ್ಯ ವಾಸನೆಯ
ಬೆಂಗಳೂರಿನಲ್ಲಿ...
ಕೊಡು-ಕೊಳ್ಳುವಿಕೆಯೇ
ಜೀವನವೆಂದು,
ಭಾವನೆಗಳಿಗೆ ಬೆಲೆಯೇ
ಇಲ್ಲವೆಂದು ನಂಬಿ
ಅಷ್ಟೆತ್ತರಕೆ
ತಲೆ ಎತ್ತಿ ನಿಂತ
ಶಾಪಿಂಗ್ ಮಾಲ್ ಗಳಲಿ...
ಯಾರು ಬಿದ್ದರೂ
ಯಾರು ಸತ್ತರೂ
ತನಗೇನು
ಸಂಭಂದವೇ ಇಲ್ಲ
-ವೆಂದು ಓಡುತ್ತಲೇ ಇರುವ
ಟ್ರಾಫಿಕ್ಕಿನಲಿ...
ಭಾರತದ ಜನಸಂಖ್ಯೆಗೆ
ಜೀವಂತ ನಿದರ್ಶನ
-ದಂತಿರುವ ಗಿಜಿಗಿಜಿ
ಬಿ.ಎಂ.ಟಿ.ಸಿ ಬಸ್ಸಿನಲ್ಲಿ...
ಬಸ್ಸಿನ ಕಿಡಕಿಯಲಿ...
ಪ್ರತಿಸಲ ಹೊರಗೆ
ಹೋಗುವಾಗಲು
ದಾಟಿ ಹೋಗುವ
ಬೀದಿ ತಿರುವಿನ
ಪಾನಿ ಪುರಿ
ಅಂಗಡಿಯಲಿ...
ಏನು ಮಾಡಿದರೂ
ಯಶಸ್ಸು ಸಿಗದೇ
ಸೋತು ಮರಳುವ
ನಿರಾಶೆಯಲಿ...
ಜಗತ್ತಿನ ಎಲ್ಲ
ಜಂಜಡಗಳು ಮುಗಿದು
ಮನದಲಿ ಸ್ಥಾಪಿತವಾಗುವ
ಸ್ನಿಗ್ದ ಮೌನದಲಿ...
ಹಕ್ಕಿಯೊಂದು ಕುಳಿತು
ಹಾರಿ ಹೋದ ಮರದ ರೆಂಬೆಯ
ಮರ್ಮರದಲಿ...

ಗುರುವಾರ, ಅಕ್ಟೋಬರ್ 14, 2010

ಶರಣುಬದುಕಿನ ನೂರು ಸೋಲು,

ಕಷ್ಟಗಳೂ ಕಲಿಸದ ಅದ್ಭುತ

ಪಾಠ ಕಲಿಸಿದ ನಿನ್ನ ಸೆಡವಿಗೆ,

ಅಸಡ್ಡೆಗೆ, ಅವಿರ್ಭವಿಸದೆ ಉಳಿದು

ಹೋದ ಆ ಬಂಗಾರದಂತಹ

ಪ್ರೀತಿಗೆ!!!


ನೀನೇನು ಕಾಲವಾ?

ನೀನೇನು ಕಾಲವಾ?

ಹೊರಟು ಹೋದ ಮೇಲೆ

ಮರಳಿ ಬರಲಾರೆ

ಎಂದು ದುಖಿಸುವದಕ್ಕೆ...

ಕವಿ ಮಿರ್ಜಾ ಗಾಲಿಬ್ ಸಾಲು ಎಷ್ಟು ಸತ್ಯ ಆಲ್ವಾ? ಒಂದ್ಸಲ ಸರಿಯಾಗಿ ಓದು. ನಿನಗಿದು ಅರ್ಥವಾದೀತು. ಇದರೊಳಗಿನ ನಾನು ಅರ್ಥವಾದೇನು!

ನೀನು ನನ್ನ ವಿಲಾಸದ ಒಂದು ಭಾಗವಲ್ಲ. ನಿನ್ನನ್ನೇ ಬದುಕಾಗಿಸಿಕೊಂಡಿದ್ದೇನೆ. ಬದುಕಿನ ಕಸುವಾಗಿಸಿಕೊಂಡಿದ್ದೇನೆ. ಹೀಗಾಗಿ ನೀನು ಬಹುದೂರದಲ್ಲಿದ್ದು ನೊಂದರೆ, ನಿಡಸುಯ್ದರೆ, ನಿನ್ನ ಕಣ್ಣುಗಳಲ್ಲಿ ನೀರು ಸುಳಿದಿರುಗಿದರೆ ಒಂದು ವಿಚಿತ್ರ ಸಂಕಟವನ್ನು ನಾನಿಲ್ಲಿ ಅನುಭವಿಸುತ್ತೇನೆ! ನೀನಲ್ಲಿ ಹಸಿದಿದ್ದರೆ, ನನಗಿಲ್ಲಿ ಊಟ ಮಾಡದ ಮನಸ್ಥಿತಿ. ನಿನ್ನ ದುಃಖಕ್ಕೆ, ನನ್ನ ಕಣ್ಣಿರು. ನಿನ್ನ ನಲಿವಿಗೆ, ನನ್ನ ಕಿರುನಗೆ. ನಿನ್ನ ಹಗಲುಗಳ ಮೊದಲ ಕಿರಣ ನಾನು! ನಿನ್ನ ಇರುಳ ಆಕಾಶದಲಿ ಕಾಣುವ ಮೊದಲ ಚುಕ್ಕಿ ನಾನು! ನೀನು ಛಟ್ಟನೆ ಮಾತು ಮುಗಿಸಿ ಎದ್ದು ಹೊರಟೆಯಲ್ಲ? ತಕ್ಷಣ ನೆನಪಾದದ್ದು ಗಾಲಿಬ್ ಕವಿತೆ. ನೀನು ಕಾಲವಲ್ಲ! ಮತ್ತೆ ಹಿಂದಿರುಗುವದಿಲ್ಲವೇನೋ ಎಂದು ದುಗುಡಪಡಬೇಕಾಗಿಲ್ಲ. ಜಗತ್ತು ತುಂಬಾ ಚಿಕ್ಕದು ಮತ್ತು ದುಂಡಗಿದೆ. ನೀನು ಯಾವ ದಾರಿಯಲ್ಲಿ ಹೊರಟರೂ ನಿನ್ನ ನಾವೇ ಮತ್ತೆ ನನ್ನಲ್ಲಿಗೆ ಮರಳಿ ಬರಬೇಕು! ಅಲ್ಲಿ ಸಣ್ಣ ಮರಳ ದಂಡೆಯ ಮೇಲೆ ನಾನಿರುತ್ತೇನೆ! ನಿನಗೋಸ್ಕರ!!

ನಿನ್ನಲ್ಲೊಬ್ಬ ಕಮ್ಮಗಿನ ಗೆಳತಿ, ಕಾಮನೆಗಳ ಕೆಂಡ ಸಂಪಿಗೆ, ಶುದ್ಧ ಪ್ರೀತಿಯ ಮಮಕಾರ, ನೊಂದಾಗ ಚುಕ್ಕು ತಟ್ಟಿ ಮಲಗಿಸುವ ವಾತ್ಸಲ್ಯಮಯಿ ಅಮ್ಮ, ಸುಮ್ಮನೆ ಕೈ ಹಿಡಿದು ನಡೆಸಿಕೊಂಡು ಹೋಗೋಣವೆನಿಸುವಂತಹ ಅರಳು ಕಂಗಳ ಅಮಾಯಕ ಮಗು - ಇಷ್ಟೆಲ್ಲಾ ನಾನು ಕಾಣದೆ ಹೋಗಿದ್ದರೆ... ಇಂದು ಇಷ್ಟೊಂದು ನೋವು ಅನುಭವಿಸುವ ಜರೂರತ್ತಿರಲಿಲ್ಲ!!! ಮಾತಿಗೆ ಕುಳಿತಾಗ ಇದೆಲ್ಲ ಹೇಗೆ ಬಿಡಿಸಿ ಹೇಳಲಿ? ನಾನು ಕೇವಲ ಬರೆಯಬಲ್ಲೆ. ಹಾಳೆಗೂ ನನಗೂ ಯಾವುದೋ ಜನ್ಮದ ನಂಟು - ನನ್ನಂತೆ ನಿನ್ನಂತೆ!!! ಆದರೆ ಅಕ್ಷರಗಳು ಮುನಿಯುವದಿಲ್ಲ. ಛಟ್ಟನೆ ಕೈ ಕೊಡವಿ ಎದ್ದು ಹೋಗುವದಿಲ್ಲ. ಪ್ರತಿ ಸಲ ನಿನಗೆ ಬರೆಯಲು ಕುಳಿತಾಗಲೂ ನೀನು ನನಗೆ ಜಾಸ್ತಿ ಅರ್ಥವಾಗ್ತಿಯ; ತಲೆ ಬಾಗಿಸಿ ನಿಂತ ಫಕಿರನಿಗೆ ದೇವರು ಅರ್ಥವಾದಂತೆ!! ಒಂದೊಂದು ಪತ್ರವೂ ದೂರಾತಿ ದೂರದಿಂದ ಕೈ ಹಿಡಿದು ಕರೆ ತಂದು ನಿನ್ನ ಮಡಿಲಿಗೆ ಚೆಲ್ಲಿದೆ. ಕಡೆಯ ಪಕ್ಷ ನನ್ನ ಅಕ್ಷರಗಳ ಘಮ, ಅದಾದರೂ ನಿನಗೆ ನನ್ನ ಅರ್ಥ ಮಾಡಿಸುವದಿಲ್ಲವಾ ಸೋನು?

ನಂಗೆ ಅದೂ ಗೊತ್ತು: ಮರೆತು ಸುಮ್ಮನಾಗಬಹುದಾದ ಹುಡುಗೀ ನೀನೂ ಅಲ್ಲ. ನನ್ನ ಬದುಕಿನಲಿ ಮೂಡಿ ನಿಂತ ಮೊದಲ ವಸಂತ. ಮಾಮರದ ಚಿಗುರು ತಿಂದ ಮೊದಲ ಕೋಗಿಲೆ. ಕುಹೂ ಎಂದು ಕೂಗಿ ಎಬ್ಬಿಸಿದ ಮೊದಲ ಮಧುರ ದ್ವನಿ. ನನ್ನ ಬದುಕು ನಿನ್ನ ಬರುವಿಕೆಗಿಂತ ಮೊದಲು ಹೇಗಿತ್ತು ಎಂಬುದು ನಿಚ್ಚಳ ನೆನಪಿದೆ; ಅದೂ ಭಾನುವಾರದ ಮದ್ಯಾಹ್ನದಂತೆ ಖಾಲಿ ಖಾಲಿ. ಅಂತ ಬದುಕಿನೊಳಗೆ ಶುಕ್ರವಾರದ ಸಂಭ್ರಮವಾಗಿ ನಡೆದು ಬಂದವಳು ನೀನು!! ಸುಮ್ಮನೆ ಹುಡುಗಿಯಾಗಿದ್ದರೆ ಪರಿ ಪ್ರೀತಿಸುತ್ತಿರಲಿಲ್ಲವೇನೋ? ನೀನೊಂದು ಗುಂಗು. ಬದುಕಿನ ರಂಗು. ಬಿಟ್ಟು ಬಿಡದೆ ನೆನಪಾಗ್ತಿಯ. ಕಣ್ಣಿಗೆ ಕಟ್ಟಿದ ಚಿತ್ರವಾಗುತ್ತಿಯ. ಒಬ್ಬನೇ ಕುಳಿತು ನಿನ್ನ ಹೆಜ್ಜೆಯ ಸಪ್ಪುಳಕ್ಕಾಗಿ ಕಾಯುತ್ತೇನೆ. ಅದೆಷ್ಟೋ ಹೊತ್ತಿನಿಂದ ತುಂಬಾ ಲೋನ್ಲಿ. ನನ್ನೊಳಗೆ ನಾನೂ ಇಲ್ಲವೇನೋ ಎಂಬಷ್ಟು ಒಬ್ಬಂಟಿ. ಬರೆಯುವ ಹುಡುಗ ಹೀಗೆ ಬಳಲಬಹುದೇ ಗೆಳತಿ? ನನ್ನ ಕಥೆಯ ಪಾತ್ರ ಮುನಿದಿವೆ. ಕವಿತೆಗಳಿಗೆಕೋ ಬಿಗಿದ ಗಂಟಲು. ಪೆನ್ನಿಗೂ ವಿಶಾಧದ ಸೆಳೆತ. ಹಾಳೆಗೆ ನೋವಿನ ಮುದುರು. ಅವುಗಳಿಗೆಲ್ಲ ನೀನು ಬೇಕು. ಮೇಕೆ ಮರಿಯ ಅಬೋಧ ಕಣ್ಣುಗಳಲ್ಲಿ ತಾಯಿ ಕಳೆದುಹೋದ ದಿಗಿಲು. ತುಂಬಾ ಇಷ್ಟದಿಂದ ನಾನೂ ಏನನ್ನಾದರೂ ಬರೆದು ಎಷ್ಟು ದಿನಗಳಾದವು ಜಾನಂ?

ಇವತ್ತಿಗೂ ಆಸೆ ಕಳೆದುಕೊಂಡಿಲ್ಲ. ಬಂದೆ ಬರುತ್ತಿ. ಆದರೆ ಯಾವತ್ತು? ಕರಾರುವಾಕಾಗಿ ನೀನು ಬರುವ ಘಳಿಗೆಯನ್ನಾದರೂ ಹೇಳು. ಅಲ್ಲಿಯವರೆಗಾದರೂ ಬದುಕಿರಲು ಪ್ರಯತ್ನಿಸುತ್ತೇನೆ; ಸುಳ್ಳೇ ಸಂತೋಷವೊಂದನ್ನು ಮೈಗೆ ಸುತ್ತಿಕೊಂಡು.

ನೆನಪಿರಲಿ ಒಬ್ಬ ಹುಡುಗ ಕಾಯುತ್ತಿದ್ದಾನೆ

ನಾವೆಗೆ ಕಾಯುವ ದಂಡೆಯಂತೆ

ಕೇವಲ ನಿನಗೋಸ್ಕರ!!!

ಹುಡುಕಿದೆ ನಿನ್ನ...


ಸುರಿದ ಮಳೆಯಲಿ
ಹುಡುಕಿದೆ ನಿನ್ನ
ಇಲ್ಲದಿರಬಹುದು
ಅದೃಷ್ಟ
ಮತ್ತೊಮ್ಮೆ ಪಡೆಯುವ
ಆ ಸ್ವಾತಿ ಮುತ್ತನ್ನ...

ಶುಕ್ರವಾರ, ಅಕ್ಟೋಬರ್ 08, 2010

ಮಳೆಯ ಮೋಡ


ನನ್ನ ಮನದಲ್ಲೂ ಒಂದು
ಮಳೆಯ ಮೋಡ ಹೆಪ್ಪುಗಟ್ಟುತಿದೆ
ಅದಕ್ಕೂ ಭುವಿಗೆ ಇಳಿದು
ಮುತ್ತಾಗುವ ಆಸೆ!
ಆದರೆ ಕಪ್ಪೆ ಚಿಪ್ಪಲ್ಲದೇ
ಇನ್ನೆಲ್ಲೋ ಬಿದ್ದು ಹೋಗುವ ಭಯ...
ಕಲ್ಲು, ಮುಳ್ಳು, ಮರ
ಎಲೆ, ನೆಲ, ನೀರು
ಎಲ್ಲಿ ಬಿದ್ದರೇನು?
ಬಿದ್ದ ಜಾಗದಲ್ಲೊಂದು
ಕನಸು ಚಿಗುರಿಸುವ
ಮನಸು ಅರಳಿಸುವ
ಹಂಬಲ ಅಷ್ಟೇ!!
ಯಾಕೆಂದರೇ ಎಲ್ಲ ಮಳೆ ಹನಿಯೂ ಮುತ್ತಾಗದಂತೆ!!!

ಮಂಗಳವಾರ, ಸೆಪ್ಟೆಂಬರ್ 28, 2010

ನಾನು - ನೀನು

ಒಣಗಿ ನಿಂತ ಬೆಳೆಯ
ನಡುವೆ ಕುಳಿತು
ಆಕಾಶದತ್ತ ಆಸೆಯ ಕ್ಷೀಣದೃಷ್ಟಿ
ಬಿರಿ ನಿಂತ ರೈತ - ನಾನು

ಈ ಕ್ಷಣದಿ ಸುರಿದು
ಮರುಕ್ಷಣ ನಿಂತು
ಅನುಕ್ಷಣವು
ಚಂಚಲಗೊಳ್ಳುವ
ಮಲೆನಾಡ ಮಳೆ - ನೀನು.

ಭಗ್ನ ಪ್ರೇಮಕ್ಕೊಂದು ನಮಸ್ಕಾರ!!!

ಈ ಬದುಕಿನ ಹಲವು ಆಯಾಮಗಳಂತೆ ಪ್ರೇಮಕ್ಕೂ ಎರಡು ಮುಖ. ಸಫಲ ಪ್ರೇಮದಲಿ ಬರೀ ಸುಖವೇ ತುಂಬಿರುವಂತೆ, ವಿಫಲ ಪ್ರೇಮದಲ್ಲೂ ನೋವಿನ ಸಿಹಿ! ವಿಫಲ ಪ್ರೇಮದ ನೋವು, ಹತಾಶೆ, ಸಂಕಟ ಇದಾವುದನ್ನು ಅನುಭವಿಸದೆ ಸಾಯುವದು, ಮಲೆನಾಡಲ್ಲೇ ಇದ್ದು ಮಳೆ ನೋಡದ ನಿರ್ಭಾಗ್ಯ ಸ್ಥಿತಿ!!
ಪ್ರತಿ ವಿಫಲ ಪ್ರೇಮಕ್ಕೂ ತನ್ನದೇ ಆದ ನೆನಪು, ಗಂಧ, ಬೆವರು, ನೋವು, ಯಾತನೆ, ಮುರಿದು ಹೋದ ಮನಸಿನ ನರಳಿಗೆ, ಸಮಾಧಿ ಸೇರಿದ ಕನಸಿನ ಕನವರಿಕೆ, ನಡೆದು ಹೋದ ಹೆಜ್ಜೆ ಗುರುತು, ನಕ್ಕ ನಗೆಗಳ ಲೆಕ್ಕ, ಒಂದು ನಂಬಿಕೆ ಮತ್ತು ಒಂದು ವಂಚನೆ ಎಲ್ಲ ಇರುತ್ತೆ.
ಅದೊಂದು ಮಧುರ ಯಾತನೆಯ ಅನುಭೂತಿ. ಆ ನೋವಿನಲ್ಲೂ ಒಂದು ಸುಖ! ಆ ವಿಷಾಧಕ್ಕೂ ಒಂದು ಘನತೆ!! ಆ ನರಳಿಕೆಗೂ ಒಂದು ಸಾರ್ಥಕತೆ!!! ಇದೆಲ್ಲವನ್ನೂ ಅನುಭವಿಸದೇ ಸಾಯುವದು ಹೀನಾಯ!!! ಅದಕ್ಕೆ ಅಲ್ಲವೇ ಜಯಂತ್ ಬರೆದದ್ದು "ಮಧುರ ಯಾತನೆ..."!
ಪ್ರತಿ ಮನುಷ್ಯನು ಪ್ರೀತಿಸಬೇಕು! ಜೀವನದ ಕೊನೆ ಕ್ಷಣದವರೆಗೂ ಮೆಲಕು ಹಾಕುತ್ತಾ ಒಂದು ಸುಮಧುರ ಯಾತನೆ ಅನುಭವಿಸಲು ಒಂದು ವಿಫಲ ಪ್ರೇಮ ಅವನೊಳಗಿರಬೇಕು!!!
ಸ್ಫೂರ್ತಿ : ಜೋಗಿ

ಈಜುಗಾರ!

ನನ್ನ ಕವಿತೆಗಳೆಲ್ಲವೂ
ನಿನ್ನ ಕಣ್ಣ ಕಡಲಲ್ಲಿವೆ
ನಾನೇನು ಕವಿಯಲ್ಲ!
ಆ ಮುತ್ತುಗಳನ್ನು
ಹೆಕ್ಕಿ ತರುವ
ಈಜುಗಾರನಷ್ಟೇ!!

ಶುಕ್ರವಾರ, ಸೆಪ್ಟೆಂಬರ್ 24, 2010

ಇನ್ನೊಂದು ಸ್ವಗತ

ಮೂರು ಸ್ವರದ ಹಾಡಿನಲಿ
ಮಿಡಿತಗಳ ಬಣ್ಣಿಸಬಹುದೆ
ನಾಲ್ಕು ಪದದ ಗೀತೆಯಲಿ
ಹೃದಯವನು ಹರಿಬಿಡಬಹುದೆ
ಉಕ್ಕಿ ಬರುವ ಕಂಠದಲಿ
ನಲಗುತಿದೆ
ನಲುಮೆಯ ಗಾನ
ಧಿಕ್ಕರಿಸುವ ಎದೆಯೊಳಗೆ
ನಗುತಲಿದೆ
ಮಡಿದ ಕವನ
ಒಂಟಿತನದ ಗುರುವೇ ಒಲವೇ...

ಗುರುವಾರ, ಸೆಪ್ಟೆಂಬರ್ 16, 2010

ಮುಗಿಲ ಸಿಂಚನ

ಮನದ ತೋಟದಲಿ ಅರಳಿ ನಗುವ ಹೂವಿನಂತವನ ಜೊತೆಗೆ ಮತ್ತೆ ಜೋಗ-ಕೊಡಚಾದ್ರಿಯ ಚಾರಣ!
ಬೆಳಗಾವಿಯ ಕುಂದಾ ನೆನಪಿಸುವ ಕುಂದಾಪುರದಲಿ ನಾವು ಇಳಿದಾಗ ಬೆಳಗಿನ ಚುಮುಚುಮು ಆರು ಘಂಟೆ. ಬಸ್ಟ್ಯಾoಡಿನ ಪಕ್ಕದ ಕಾಕಾ ಹೋಟೆಲಿನಲ್ಲಿ ಕುಡಿದ ಹಬೆಯಾಡುವ ಟೀ: ದೇವತೆಗಳು ಆಗಷ್ಟೇ ಕೆಳಗಿಳಿದು ಕೈಗಿಟ್ಟ ಅಮೃತ. ಅಮೃತದಂತಹ ಟೀ ಕುಡಿದು ಅದರ ಬಿಸಿಯಲ್ಲೇ ಗಜಾನನ ಬಸ್ಸೇರಿದ ಕ್ಷಣ. ಸಮುದ್ರದ ಪಾದದ ಮೇಲೆ ಕಟ್ಟಿದ ಸೇತುವೆಯ ಮೇಲೇರಿ ದಟ್ಟ ಕಾನನದ ಜೊತೆಗೆ ಶಿಖರದ ಒಡಲು ಸೀಳಿ ಗಿರಗಿರನೆ ತಿರುಗಿ ಏರುವ ಬಸ್ಸು ಹೋಗಿ ನಿಂತದ್ದು ಕೊಲ್ಲೂರು ಮೂಕಾಂಬಿಕೆಯ ದಿವ್ಯ ಸನ್ನಿಧಿಯಲಿ. ಇಳಿದು, ಹೋಟೆಲಿನವನು ಕೇಳಿದ ಐವತ್ತು ಕೊಟ್ಟು ಹೊರಗಡೆ ವರ್ಷದೆವತೆಯೇ ಕೆಳಗಿಳಿದಂತೆ ಸುರಿಯುತಿರುವ ಅದ್ಭುತ ಮಳೆಯಲ್ಲಲ್ಲದೇ ಇಕ್ಕಟ್ಟು ರೂಮಿನಲ್ಲಿ ಅದೇ ತಣ್ಣೀರು ಸುರಿದುಕೊಂಡು ಸ್ನಾನದ ಶಾಸ್ತ್ರ ಮಾಡಿ ಮುಗಿಸಿದ ನಡುಕ. ಹೊರಗಡೆ ಬಂದರೆ ಅದೇ ಇಡ್ಲಿ, ದೋಸೆ, ಉಪ್ಪಿಟ್ಟು! ಯಾವುದೋ ಒಂದು ತಿಂದು ಬಾಗಿಲಲ್ಲೇ ಮೂಕಾಂಬಿಕೆಗೆ ಹಾಯ್, ಬಾಯ್ ಎರಡೂ ಹೇಳಿ ಸಂಪೇಕಟ್ಟೆಗೆ ಓಟ.
ಹೆಸರಿನಷ್ಟೇ ಅಂದವಾದ ಸಂಪೆಕಟ್ಟೆಯಲಿ ಇಳಿದು ಹುಡುಕಿದಾಗ ಸಿಕ್ಕಿದ್ದು ಹೊಚ್ಚ ಹೊಸ ಮಾರುತಿ ಒಮ್ನಿ! ಒಮ್ನಿಯ ತೆಕ್ಕೆಯಲಿ ಸಿಕ್ಕು ಮೆತ್ತಗಾಗುತ್ತ ಸಾಗಿ ನಿಂತಿದ್ದು ಕಟ್ಟಿನ ಹೊಳೆ ಎಂಬ ಮಲೆನಾಡ ಸೆರಗಿನಲಿ. ಶ್ರಾವಣದಲ್ಲೂ ಆಮ್ಲೆಟ್ ತಿಂದು ಏರತೊಡಗಿದ್ದು ಕೊಡಚಾದ್ರಿಯ ಗಿರಿಶೃಂಗಕೆ.
ಕಡಿದಾದ ಬೆಟ್ಟ ಹತ್ತುವ ಕಷ್ಟ ಕಾಣದಂತೆ ನಡೆದು ಹೋದ ಅಂದಿನ ಕಥೆ ಒಯ್ದು ಮುಟ್ಟಿಸಿದ್ದು ಬೆಟ್ಟದ ಹೆಗಲಿಗೆ . ಮುಟ್ಟಿದ ಸಾಯಂಕಾಲ ಆರು ಘಂಟೆಗೆನೆ ಸತ್ತು ಹೋಗೋಷ್ಟು ಹಸಿವು. ಮನುಷ್ಯ ಮಾತ್ರರು ಊಟ ಮಾಡದ ಆ ಸಮಯದಲ್ಲೇ ಅಮೃತದಂತಹ ಅನ್ನ, ಸಾರು, ಹಪ್ಪಳ. ಕೊಡಚಾದ್ರಿಯಲಿ ಸಂಜೆ ಕರಗಿ ರಾತ್ರಿಯಾಗುವ ಮೊದಕ್ಕೆ ಸಾಕ್ಷಿಯಾದ ನಾವಿಬ್ಬರು. ದಣಿದ ದೇಹಕ್ಕೆ ಹಳೆ ಚಾಪೆ, ಹಳೆ ದಿಂಬು. ಅವತ್ತು ಅದೇ ಹಂಸತೂಲಿಕಾಕಲ್ಪ!! ಬೆಳಿಗ್ಗೆ ಎದ್ದು ಕಣ್ಬಿಟ್ಟಾಗ ಇನ್ನೂ ಬಿಡದ ಮಂಜು, ಮಳೆ!!
ಅಂತಹ ಅದ್ಭುತ ಪರಿಸರದಲಿ ನಮ್ಮ ಮೈಯ ಕೊಳೆ ಯಾಕೆ ಬಿಡಬೇಕು ಎಂಬ ಪರಿಸರ ಪ್ರಜ್ಞೆ!!! ಆ ಪ್ರಜ್ಞೆಯಲ್ಲೇ ಸ್ನಾನ ಮಾಡದೆ ತಿಂದ ಉಪ್ಪಿಟ್ಟು!!! ತಿಂದ ಉಪ್ಪಿಟ್ಟು ಕರಗಿಸಲು ಶಂಕರ ಪೀಠಕ್ಕೆ ಪಯಣ. ನಡು ನಡುವೆ ಮಳೆ-ಮಂಜಿನ ಜೂಟಾಟ. ಕಷ್ಟಪಟ್ಟು, ಇಷ್ಟಪಟ್ಟು ಕೊನೆಗೂ ಮುಟ್ಟಿದ ಶಂಕರ ಪೀಠ. ಅಲ್ಲಿಂದ ಸ್ವರ್ಗ ಒಂದೇ ಗೇಣು!!!
ಇಳಿಯಲು ಮನಸಿಲ್ಲದಿದ್ದರೂ ಇಳಿದು, ಶಂಕರ ಭಟ್ಟರು ಹೇಳಿದ ಅವರ ಡಾಕ್ಟರಿಗೆ ಮುಚ್ಚಿದ ಬಾಗಿಲಲ್ಲೇ ನಿಂತು ಕೈ ಮುಗಿದು ಮತ್ತದೇ ಅನ್ನ, ಸಾರು, ಹಪ್ಪಳ!!! ಅಲ್ಲಿಂದ ಹೊರಟಿದ್ದು ಎದೆ ನಡುಗಿಸುವ ಇಡ್ಲುಮನೆ ಜಲಪಾತ. ಸತ್ತೇ ಹೋಗ್ತಿವಿ ಅಂದುಕೊಂಡವರು ಜೀವಂತವಾಗಿ ಹೋಗಿ ನಿಂತಿದ್ದು ಮಲೆನಾಡಿನ ನಿಟ್ಟೂರು!!! ಕರೆದ ರಾಘುವಿನ ಮನೆಯಲಿ ಉಳಿದು ಉಂಡಿದ್ದು ಮೀನು ಸಾರು - ಫಾರಂ ಕೋಳಿ!!! ಮಲೆನಾಡಿನ ತಪ್ಪಲಲ್ಲೊಂದು ಅದ್ಭುತ ರಾತ್ರಿ. ಇಲ್ಲಿ ಬಿಚ್ಚಿಕೊಂಡ ಹಗಲು ಇನ್ನೊಂದು ಲೋಕದ ಬೆರಗು!!! ಸತತ ಎರಡು ದಿನಗಳ ನಂತರದ ಬಿಸಿನೀರು ಸ್ನಾನ. ಗಡಿಬಿಡಿಯಲಿ ತಿಂದ ಎರಡು ಇಡ್ಲಿ. ಓಡೋಡಿ ಏರಿದ ವಿನಾಯಕ ಬಸ್ಸು ದಾಟಿದ್ದು ಶರಾವತಿಯ ಹಿನ್ನಿರಿನಲ್ಲಿದ್ದ ಲಾಂಚು! ಲಾಂಚು ದಾಟಿ ಕಾಲಿಟ್ಟರೆ ಸಾಗರ. ಹಾಲಪ್ಪನನು ನೆನಪಿಸಿಕೊಳ್ಳುತ್ತಾ ಏರಿದ್ದು ಜೋಗದ ಬಸ್ಸು. ನಿಂತಿದ್ದು ಜಗದ್ವಿಖ್ಯಾತ ಜೋಗ!!!
ಇಳಿದು ತಿಂದಿದ್ದು ಬ್ರೆಡ್ಡು- ಆಮ್ಲೇಟು. ಶರಾವತಿ ನಿಸರ್ಗ ಧಾಮದ ಟೆನ್ಟಿನಲಿ ನಾರಾಯಣಪ್ಪ ಕೊಟ್ಟ ಟೀ ಕುಡಿದು ಮಲಗಿದಾಗ ಮದ್ಯಾನ್ಹ ಒಂದು ಘಂಟೆ.
ಎದ್ದಿದ್ದು ಸಾಯಂಕಾಲ ಐದು. ಅಮೆಲೊಂದು ಚಿಕ್ಕ ವಾಕ್. ಟೆನ್ಟಿನಲ್ಲೊಂದು ತಂಪಾದ ರಾತ್ರಿ. ಬೆಳಿಗ್ಗೆ ಎದ್ದು ಕಣ್ ಬಿಟ್ಟರೆ ದುಮ್ಮಿಕ್ಕಿ ಹರಿಯುವ ಶರಾವತಿ! ನಾವು ಶರಾವತಿಯ ದಿವ್ಯ ಸಾನಿಧ್ಯದಲಿ ಮೂಕವಿಸ್ಮಿತ ಪಕ್ಷಿ.
ತಿರುಗಿ ಬಂದ ತಾಳಗುಪ್ಪದಲಿ ಬೇರೆಯಾದ ಜೋಡಿ. ಒಂದು ಉತ್ತರ ದೃವ, ಒಂದು ದಕ್ಷಿಣ ದೃವ. ಬೆಳಿಗ್ಗೆ ಎದ್ದು ನೋಡಿದರೆ ಅದೇ ಮನುಷ್ಯ ವಾಸನೆಯ ಬೆಂಗಳೂರು ಛೇ.

ಗುರುವಾರ, ಆಗಸ್ಟ್ 12, 2010

ಪ್ರೀತಿಯಿಂದ

ಒಹ್! ಗೆಳತಿ

ಸ್ನೇಹಕ್ಕೊಂದು ಸವಿಯಾಗಿ ಬಂದವಳು! ಮನದಾಳದ ಪ್ರೀತಿಗೊಂದು ಕಾರಣ ಮಾತ್ರವಾಗಿರದೇ ಅದನ್ನು ಉಳಿಸಿ ಬೆಳೆಸಿದವಳು ನೀನು!!

ನಿನ್ನ ಜೊತೆಗಿನ ಕೆಲವೇ ಘಳಿಗೆಗಳು ಅದೆಷ್ಟು ಭಾವನೆಗಳನ್ನು ಹುಟ್ಟಿಸಿದೆ ಎಂದರೆ ದೂರವಿದ್ದರೂ ಮನಸು ಯಾವಾಗಲೂ ಆರ್ದ್ರ, ನಿನ್ನ ಸಿಹಿ ನೆನಪುಗಳಿಂದ, ಬೆಚ್ಚಗಿನ ಕನಸುಗಳಿಂದ. ಮತ್ತದೇ ಸಂಜೆ, ಅದೇ ಬೆಟ್ಟ, ಅದೇ ಬಂಡೆಯ ಸುತ್ತಲೇ ಮನಸು ಹರಿಯುತ್ತದೆ. ಅಂತಹ ಒಂದು ಕ್ಷಣವನ್ನು ಕೊಟ್ಟ ನಿನಗೊಂದು ಸವಿ ಮುತ್ತಿನ ಥ್ಯಾಂಕ್ಸ್! ರಾತ್ರಿಯ ಪ್ರೀತಿಯ ನಿದ್ದೆಯಲ್ಲೂ ನಿನ್ನದೊಂದು ಸಣ್ಣ ಕನವರಿಕೆ ಇದ್ದೇ ಇರುತ್ತದೆ.

ದಿನದ ಬೆಳಗಿನಲ್ಲಿ ನಿನ್ನ ದನಿಯ ಕೇಳುತ್ತ ಹಾಸಿಗೆಯ ಮುಸುಕಿನಲ್ಲಿ ಇನ್ನಷ್ಟು ನಿದ್ದೆಯ ತುಣುಕುಗಳನ್ನು ಆಸೆಯಿಂದ ಕದಿಯುತ್ತೇನೆ. ಅಲ್ಲಿ ಅರಳಿರುವ ಪ್ರೀತಿಯ ಕ್ಷಣಗಳನ್ನು ಮರೆಯದೆ ಎತ್ತಿಡುತ್ತೇನೆ, ನನ್ನ ಮನಸಿನ ಗೂಡಿನಲ್ಲಿ! ಇಷ್ಟದ ಹಾಡು, ಸಂಜೆಯ ಸೂರ್ಯ, ಕಡಲ ದಂಡೆ ಇವೆಲ್ಲದರ ಹೊರತಾಗಿ ನಿನ್ನ ನೆನಪು!! ಆಹ್...ಈ ಪ್ರೀತಿಗೆ ಸೋಲದೆ ಇರಲಾರೆ.


ನನಗೆ ನೀನೆಷ್ಟು ಇಷ್ಟ ಅಂತ ಪ್ರತೀ ಸಾರಿ ನನಗೆ ನಾನೇ ಕೇಳಿಕೊಂಡಾಗಲೆಲ್ಲ ನಿನ್ನ ಮೇಲಿನ ಪ್ರೀತಿ ಹೆಚ್ಚುತ್ತಲೇ ಹೋಗುತ್ತದೆ. ಅಷ್ಟಾಗಿಯೂ ಅಸಲಿಗೆ ನೀನೇಕೆ ಇಷ್ಟ ಅನ್ನುವುದನ್ನು ಯೋಚಿಸಿದಾಗಲೆಲ್ಲ ನಿನ್ನ ಸ್ನೇಹ, ನಿನ್ನ ನಗು, ನಿನ್ನ ಮಾತು, ನಿನ್ನ ಸಿಟ್ಟು, ನಿನ್ನ ವ್ಯಕ್ತಿತ್ವ, ನಿನ್ನ ಸೌಮ್ಯತೆ, ಸರಳತೆ ಹೀಗೆ ಏನೆಲ್ಲ ಕಾರಣಗಳು ಕಂಡರೂ ಅವೆಲ್ಲ ನೆಪ ಮಾತ್ರ. ನಿನ್ನ ಪ್ರೀತಿಸಲು ನನಗೆ ಕಾರಣಗಳೇ ಇಲ್ಲ, ಅವು ಬೇಕಾಗಿಯೂ ಇಲ್ಲ.


ಯೋಚಿಸಿದಷ್ಟೂ ಗೊಂದಲ

ಪ್ರೀತಿ ಇದೇನಾ
ಈ ಬದುಕಿಗೆ ನೀನೆ ಏಕೆ ಬೇಕು
ನಿನ್ನಂಥವಳಿದ್ದರೆ ಸಾಕಿತ್ತು..ಅಲ್ಲಾ

ನಾಳಿನ ಬದುಕಿಗೊಂದು ಕನಸಾಗಿ ಬಂದವಳು ನೀನು. ಒಂಟಿತನದ ನೀರಸ ಬದುಕಿನಲ್ಲಿ ಜೊತೆಯಾಗಿ ನಿಂತವಳು. ನನ್ನ ಹುಚ್ಚು ಕಲ್ಪನೆಗೆ ಅರ್ಥ ಕೊಟ್ಟವಳು. ನನ್ನ ನೋವಿಗೆ ಕಣ್ಣೀರಾದವಳು. ನೀನೆ ಅಲ್ಲವೆ ನನ್ನೆಲ್ಲ ಹಠವನ್ನು ಗೆದ್ದವಳು. ಬಾಳಿನುದ್ದಕ್ಕೂ ನಿನ್ನ ಜೊತೆ ಇರಲೇಬೇಕೆಂಬ ಹೆಬ್ಬಯಕೆ ದಿನವೂ ಹೆಚ್ಚುತ್ತದೆ. ಜೀವನದ ಕೊನೆಯ ಘಳಿಗೆ ನಿನ್ನ ಮಡಿಲಲ್ಲಿ ಇರಲೆಂದು ಬಯಸುತ್ತೇನೆ.

ನಿನ್ನೊಲವ ಆಸರೆಯ ಮಡಿಲಲ್ಲಿ ಇಂದೆನ್ನ

ಕನಸೆಲ್ಲ ತುಂಬಿಹೆನು ಬಲು ಪ್ರೀತಿಯಿಂದ
ಸಿಹಿ ಇರಲಿ ಕಹಿ ಬರಲಿ ನಾನಿರುವೆ,
ನಿನ್ನ ಜೊತೆಯಿರಲಿ ಉಸಿರಿರುವವರೆಗೆ

ಈ ಜೀವನವನ್ನು ಕೇಳಿದ್ದು ಕಡಿಮೆ, ಪಡೆದಿದ್ದೆ ಜಾಸ್ತಿ. ನಿನ್ನ ಸ್ನೇಹಕ್ಕೊಂದು ಪ್ರೀತಿಯ ನಮನ.

ಅವಳು

ಒದ್ದೆ ಪಾದಗಳ ಹೆಜ್ಜೆ ಜಾಡಿನಲ್ಲಿ ನಡೆಯಹೊರಟವಳು
ಕಾರಿರುಳ ಬಾನಿನಲಿ ಚಂದಿರನ ಹುಡುಕಿದಳು
ನದಿಯಲ್ಲದವಳು ಎಲೆಯಮೇಲೆ ಬಿದ್ದ ಮಳೆಹನಿಯಂಥವಳು
ಕಡಲ ಸೇರಲು ಹೊರಟಳು.
ದನಿಯಿಲ್ಲದವಳು ಮೌನಿ ಶಿಲೆಯಂಥವಳು
ಎದೆರಾಗವಾಗಲವಣಿಸಿದಳು.
ಬಾನಲ್ಲಿ ರವಿ ಜಾರಿದಾಗ ಕವಿದ ಮುಸ್ಸಂಜೆಯಂಥವಳು
ಎಣ್ಣೆಯಾರಿದ ಹಣತೆಯನು ಕಣ್ಬೆಳಕಿನಲಿ ಬೆಳಗುವವನಿಗಾಗಿ ಕಾದಳು...

ಮಂಗಳವಾರ, ಆಗಸ್ಟ್ 10, 2010

ಕೊನೆಯ ಪತ್ರ!!!


ಮುನಿಸಿನ ಹುಡುಗೀ,
ನಿನಗೊಂದು ಕೊನೆಯ ಪತ್ರ. ನಿನ್ನನ್ನು ಮರೆಯುವ ಮುನ್ನ, ನಿನಗೆ ಮರೆವಾಗುವ ಮುನ್ನ ಒಂದಷ್ಟು ಸಾಲು. ಒಂದಷ್ಟು ಮಾತು. ಜೀವನದಲ್ಲಿ ಒಂದು ಸುಮಧುರ-ಸುಂದರ ಡಿಫೀಟು ಒಪ್ಪಿಕೊಳ್ಳುತ್ತಿದ್ದೇನೆ. ನಿನ್ನನ್ನು ಎಷ್ಟು ಪ್ರೀತಿಸಿದೆನೆಂದರೆ ಈ ಡಿಫೀಟು ಗ್ರೇಟೆ ಅನಿಸುತಿದೆ. ನೀನು ಗೆದ್ದ ಗೆಲುವಿಗೊಂದು ಕಂಗ್ರಾಟ್ಸ್. ನನ್ನ ಸೋತ ಸೋಲಿಗೊಂದು ಹಾಟ್ಸ್ ಆಫ್.ನಂಗೆ ನೀನು ದಕ್ಕಲಿಲ್ಲ ಅಂತ ಒಂದು ಕ್ಷಣಕ್ಕೂ ನೋವಾಗುತ್ತಿಲ್ಲ. ಆದರೆ ನಿನ್ನನ್ನು ನಾನು ಎಷ್ಟು ಪ್ರೀತಿಸಿದೆ ಅಂತ ಹೇಳಲೇ ಆಗಲಿಲ್ಲವಲ್ಲ? ಅದು ನೋವು ಕೊಡುತ್ತಿದೆ. ಆದರೆ ಗೆಳತೀ, ನಿನ್ನೆದುರು ನಿಂತು ಸೋಲುವ ಈ ಸೋಲೂ ಅದ್ಭುತವಾದದ್ದೇ. ನನಗೆ ಪ್ರತಿಯೊಂದು ನೆನಪಿದೆ. ಮೊಟ್ಟ ಮೊದಲು ನಿನ್ನ ನೋಡಿದಾಗಿನಿಂದ, ಕಟ್ಟ ಕಡೆಯ ದಿನ ನಿನ್ನ ಕಣ್ಣುಗಳಲ್ಲಿ ನಿರಾಕರಣೆ ಎದ್ದು ಬಂದ ಘಳಿಗೆಯ ತನಕ. ಯಾವುದನ್ನೂ ಮರೆತಿಲ್ಲ. ನಿನ್ನನ್ನು ನೋಡಿದೆ, ಆರಾಧಿಸಿದೆ, ಸನಿಹಕ್ಕೆ ಬಂದೆ, ಸುಮ್ಮನೆ ಬೆನ್ನತ್ತಿದೆ, ಬೊಗಸೆಯೊಡ್ಡಿ ಬೇಡಿದೆ, ಅಂಗಲಾಚಿದೆ, ಗೊಗೆರೆದೆ, ಹಠ ಮಾಡಿದೆ, ಅತ್ತೆ! ಆದರೆ ನೀನು, ನಿನ್ನ ಪ್ರಾರ್ಥನೆ, ಭಕ್ತಿ, ಉಪವಾಸ, ನಿಷ್ಠೆ ಯಾವುದಕ್ಕೂ ಸಂಬಂಧ ಇಲ್ಲ ಎಂದು ನಿರ್ಧರಿಸಿ ಪ್ರೀತಿಯಿಂದ ಎದುರಿಗೆ ತಂದಿಟ್ಟ ಪ್ರಸಾದವನ್ನೂ ಮುಟ್ಟದಂತೆ ಕುಳಿತು ಬಿಟ್ಟಿರುತ್ತಾನಲ್ಲ ಭಗವಂತ? ಹಾಗಿದ್ದೆ. ಇವತ್ತು ಸುಮ್ಮನೆ ಕೈ ಚೆಲ್ಲಿ ವಿದಾಯ ಹೇಳುತ್ತಿದ್ದೇನೆ. ಎರಡು ವರ್ಷಗಳ ಸುಧೀರ್ಘ ಕನಸಿದು. ಇವತ್ತು ಗೋರಿಯಲ್ಲಿ ಇಟ್ಟು ಚರಮಗೀತೆ ಹಾಡುತ್ತಿದ್ದೇನೆ!!
ನಿನಗೋಸ್ಕರ ನಾನು ಏನೇನು ಮಾಡಿದೆ ಅಂತ ಪಟ್ಟಿ ಕೊಡಲಾರೆ. ಒಂದೇ ಮಾತಿನಲ್ಲಿ ಹೇಳಲಾ? ಇದ್ದ ನೂರು ವರ್ಷಗಳ ಬೊಗಸೆಯಿಂದ ಅನಾಮತ್ತು ಎರಡು ವರ್ಷಗಳನ್ನೆತ್ತಿ ತಂದು ನಿನ್ನ ಪಾದಗಳ ಮೇಲೆ ಸುರಿದು ಸುಮ್ಮನೆ ನಿಂತೇ!! ಹೌದು ನಿನಿದ್ದ ಎರಡು ವರ್ಷ ನಿನ್ನ ಪ್ರೀತಿಸುವದನ್ನು ಬಿಟ್ಟು ಬೇರೆ ಏನನ್ನು ಮಾಡಲೇ ಇಲ್ಲ. ಕಾಲ ಉರುಳಿದ್ದೆ ಗೊತ್ತಾಗಲಿಲ್ಲ. ಕಾಲ ನನ್ನನ್ನು ಕೊಂದಿತಾ? ನಾನು ಕಾಲವನ್ನು ಕೊಂದೆನಾ? ಅಥವಾ ನಮ್ಮಿಬ್ಬರನ್ನು ಸೇರಿಸಿ ಕೊಂದು ನೀನು ಮುಗುಳ್ನಕ್ಕೆಯಾ?
ಈಗ ಯೋಚಿಸಿ ಪ್ರಯೋಜನವಿಲ್ಲ. ತುಂಬಾ ಸುಂದರಳಾದ, ತುಂಬಾ ಒಳ್ಳೆಯವಳಾದ ಹಾಗೂ ತುಂಬಾ ಮುಗ್ದಳಾಗಿದ್ದ ಹುಡುಗಿಯೊಬ್ಬಳನ್ನು ಇಷ್ಟು ದಿನ, ಇಷ್ಟು ತಿಂಗಳು, ಇಷ್ಟು ವರ್ಷ ಹೀಗೆ ಪ್ರೀತಿಸಿದ್ದೆ ಎಂಬ ಹೆಮ್ಮೆಯೊಂದು ನನ್ನಲ್ಲಿ ಕಡೆ ತನಕ ಇರುತ್ತದೆ.
ನೀನು ಕೊಟ್ಟ ಎರಡು ವರ್ಷಗಳ ಕನಸಿಗೆ, ಸಾಂಗತ್ಯಕ್ಕೆ, ಬಿಸುಪಿಗೆ, ಕಸುವಿಗೆ ಥ್ಯಾಂಕ್ಸ್ ಹೇಳುತ್ತಾ...
ಕೊನೆಯ ಪತ್ರ ಮುಗಿಸುತ್ತಿದ್ದೇನೆ.
bye.

ಭಾನುವಾರ, ಆಗಸ್ಟ್ 08, 2010

ಒಂದು ಪ್ರೇಮ ಪರ್ವ

ಬನಶಂಕರಿಯ ಗಿಜಿಗುಡುವ
ಬಸ್ ಸ್ಟ್ಯಾಂಡಿನಲ್ಲೊಂದು
ಅಪರೂಪದ ಪ್ರೇಮ ಪಲ್ಲವಿ
ಅವಳು ಆಕಾಶದಿಂದ ಉದುರಿ ಬಿದ್ದ
ಮಳೆಹನಿಯಂತವಳು
ಅವನು ಸಿಕ್ಕ ಮಳೆ ಹನಿಯನ್ನು
ಮುತ್ತಾಗಿಸುವ ಚಿಪ್ಪಿನಂತವನು
ಅವನು ಮೌನ
ಅವಳು ಶಬ್ದ
ಇಬ್ಬರ ಸಂಗ ಲಯಬದ್ದ.

ಬುಧವಾರ, ಜುಲೈ 28, 2010

ಅಲ್ಲ


"ನೀನು ಆರಂಭವೂ ಅಲ್ಲ
ಅಂತ್ಯವೂ ಅಲ್ಲ"
ಈ ಜೀವನವೆಂಬ ಧೀರ್ಘ ಪಯಣದಲಿ ನಡು ದಾರಿಯಲಿ ಸಿಕ್ಕ ಸಹಪಯಣಿಗಳು. ಆದರೂ ನಿನಿದ್ದ ದಾರಿ ಸಾಗಿದ್ದು ಸುಗಮವಾಗಿಯೇ! ಈಗ ನೀನಿಲ್ಲ, ಸಾಗಬೇಕಾದ ದಾರಿ ಬಹಳಷ್ಟಿದೆ. ಸಾಗುವೆ ಕೂಡಾ. ನೀನಿಲ್ಲದಿದ್ದರೆ ಹೆಜ್ಜೆ ಭಾರ ಭಾರ ಆದರೂ ಅಸಾಧ್ಯವಲ್ಲ!! ಸ್ವಲ್ಪ ಸಮಯವಾದರೂ ನನ್ನೊಂದಿಗೆ ಹೆಜ್ಜೆ ಹಾಕಿದ್ದಕ್ಕೆ ಹಾಗೂ ಸಾಕಷ್ಟು ದೂರದವರೆಗೆ ಆ ನೆನಪು ಉಳಿಸಿದ್ದಕ್ಕೆ ಧನ್ಯವಾದಗಳನ್ನು ಹೇಳುತ್ತಾ...
ನೀನಿಲ್ಲದೆ ಮುಂದಕ್ಕೆ ನಡೆಯಲೇ ಬೇಕೆಂದು ನಿರ್ಧರಿಸಿದ...

ನಿನ್ನವನಾಗಿದ್ದ,

ನಾನೇ.

ಈ ಪ್ರೀತಿ ಒಂಥರಾ...

ಆಕಾಶದಿಂದ ಧರೆಗಿಳಿದ ಆ ಅದ್ಭುತ ಹನಿಯಂತೆ, ಈ ಎದೆಯಲಿ ಅವಿರ್ಭವಿಸಿದ ವರ್ಷದೇವತೆಯೇ,
ನಿಜವಾಗ್ಲೂ ನಾನು accept ಮಾಡಿರಲಿಲ್ಲ. ಇನ್ನೂ ಎಲೆ ಮರೆಯ ಕಾಯಿಯಂತಿದ್ದ, ಮೊಗ್ಗಿನಲ್ಲೇ ಹಿಗ್ಗಾಗಿದ್ದ ನಮ್ಮ ಪ್ರೀತಿ ಇಷ್ಟು ಬೇಗ ರುಚಿಯಾದ ಹಣ್ಣಾಗಿ, ಘಮ ಘಮಿಸುವ ಸುಮವಾಗಿ ಅರಳುತ್ತದೆಂದು ನಂಬಿರಲಿಲ್ಲ!!!
ಹುಟ್ಟಿದ ಶರಧಿ ಎಂದೋ ಸಾಗರ ಸೇರುವಂತೆ, ನಾವಿಬ್ಬರೂ ಸೇರುತ್ತೆವೆಂದು ಗೊತ್ತಿತ್ತು. ಆದರೆ ಅದು ಇಷ್ಟು ಬೇಗ! ಈ ಅನಿರೀಕ್ಷಿತ ಸಂತೋಷದ ಬಿರುಗಾಳಿಗೆ ಮಾತೇ ಹೊರಡುತ್ತಿಲ್ಲ. ತುತ್ತು ಅನ್ನಕ್ಕೂ ಗತಿ ಇಲ್ಲದ ಬಿಕ್ಷುಕನಿಗೆ ಕಣ್ಮುಚ್ಚಿ ತೆರೆಯುವದರೋಳಗಾಗಿ ಭಕ್ಷ-ಬೋಜಗಳ ಬಂಡಿ ಎದುರಾದರೆ, ಹೇಗೆ ಮೂಕನಾಗುತ್ತಾನೋ ಹಾಗಾಗಿದೆ ನನ್ನ ಸ್ತಿತಿ!!
ಇಂದು ಬೆಳಗಿನಿಂದಲೇ ಯಾಕೋ ಸುಮ್ಮನೆ ಭಾವುಕನಾಗಿದ್ದೆ, ಎಕ್ಸೈಟ್ ಆಗಿದ್ದೆ. ಆದರೆ ಆ ಭಾವುಕತೆಗೆ ಕಾರಣವೇ ಇದು ಎಂದು ಅಂದುಕೊಂಡಿರಲಿಲ್ಲ.
ಮಳೆಯನ್ನೇ ಕಾಣದ ಬರಡು ಭೂಮಿಯಲ್ಲಿ ಅಕಾಲಿಕ ಮಳೆ ಸುರಿದು ತಂಪಾಗುವಂತೆ, ಮೊದಲ ಮಳೆಗೆ ಬರುವ ಸುಮಧುರ ಮಣ್ಣಿನ ವಾಸನೆಯಂತೆ, ಆ ಮಳೆ ನಿಂತು ತುಂಬಾ ಹೊತ್ತಾದರೂ ಆ ಕಂಪಲ್ಲೇ ಇದ್ದೀನಿ ನಾನಿನ್ನೂ! ಅದ್ಭುತ ಕವಿಯ ಕಾವ್ಯ ಓದಿದ ನಂತರದ ಅತ್ಯದ್ಭುತ ಸೈಲೆನ್ಸ್ ನಂತೆ. ಆದರೆ ಪ್ರೀತಿಯನ್ನ ಒಪ್ಪಿಕೊಂಡ ನಂತರದ ಮೌನ ಇಷ್ಟು ಅದ್ಭುತವೆಂದು ಗೊತ್ತಿರಲಿಲ್ಲ!! ನಿನ್ನ ಒಪ್ಪಿಗೆಯನ್ನು ಕೇಳಿದ ಮರುಕ್ಷಣದಿಂದ ಈ ಕ್ಷಣದ ವರೆಗೂ ಅದನ್ನೇ ಅನುಭವಿಸುತ್ತ ಪ್ರತಿಮೆಯಂತಾಗಿದೆ ಮನಸು!!! ಹೇಳಿಕೊಳ್ಳೋಣವೆಂದರೆ ಸಮಿಪದಲಿ ಯಾರೂ ಇಲ್ಲ.
ಇದು ಕೇವಲ ಪತ್ರವಲ್ಲ! ನನ್ನ ಜೀವನದ ಶುದ್ದ ತಿರುವಿನ ಬೃಹತ್ ಮೈಲಿಗಲ್ಲು!! ಈ ಮೈಲುಗಲ್ಲಿನ ಕಾರಣವೇ ನೀನು!!!
ಯಾವುದೇ, ಯಾರದೇ ಮೇಲಿನ ದ್ವೇಷ, ಅಸೂಯೆ, ಸಿಟ್ಟಿನಿಂದಲ್ಲದೆ, ಕೇವಲ ನಿನ್ನ ಹಾಗೂ ಈ ಜೀವನದ ಮೇಲಿನ ಅಘಾಧ ಪ್ರೀತಿಗಾಗಿ ನಾನು ಬದಲಾಗುತ್ತಿದ್ದೇನೆ!! ನಾಳೆ ಬೆಳಿಗ್ಗೆ ಯಿಂದ ನನ್ನ ಜೀವನದ ಹೊಸ ಸುಂದರ ಅಧ್ಯಾಯ ಪ್ರಾರಂಭ. ಆ ಅಧ್ಯಾಯದ ಹೆಸರೇ - ಪ್ರೀತಿ. ಮೊದಲ ಸಾಲಿನ ಮೊದಲ ಪದವೇ - ನೀನು!!!
"ಪರಸ್ಪರ ನಂಬಿಕೆಯ ಮೇಲೆ ನಿಂತ ಭವಂತಿ"ಯ ಅಡಿಗಲ್ಲು ಬಿದ್ದ ಎಂಟು ಘಂಟೆಗಳ ನಂತರ ನಮ್ಮಿಬ್ಬರ ಪ್ರೀತಿ ಎಂಬ ಲತೆಯಿಂದ ಜನಿಸಿದ ಮೊದಲ ಸುಮವೇ ಈ ಪತ್ರ.
ನೀನು ನನ್ನ ಮೇಲೆ ಇಟ್ಟ ಪ್ರೀತಿ, ನಂಬಿಕೆ, ವಿಶ್ವಾಸ ಎಲ್ಲವು ನಾನು ಮಣ್ಣು ಸೇರುವ ಕೊನೆಯ ಘಳಿಗೆಯವರೆಗೂ ಹೀಗೆ ಇರುತ್ತವೆ ಎಂದು ಹೇಳುತ್ತಾ, ಪ್ರತಿ ದಿನದ ಸೂರ್ಯ ಅಸ್ತಮಿಸುವದರೋಳಗಾಗಿ ಇಂತಹದೇ ಅದ್ಭುತ ಪತ್ರ ನಿನ್ನ ಕೈಗಿಡುತ್ತಾ, ಆ ಕ್ಷಣಕ್ಕೆ ಕಣ್ಣರಳಿಸುವ ನಿನ್ನ ನೋಡುತ್ತಾ, ನಿನ್ನ ಖುಷಿಗೆ ನಗುವಾಗುತ್ತ, ದುಃಖಕ್ಕೆ ಹೆಗಲಾಗುತ್ತಾ, ನಿದ್ರೆಗೆ ಮಡಿಲಾಗುತ್ತಾ, ಕನಸಿಗೆ ಬಣ್ಣವಾಗುತ್ತಾ, ಕನವರಿಕೆಗೆ ಜೋಗುಳವಾಗುತ್ತಾ, ಈ ರಾತ್ರಿಗೆ ಗುಡ್ ನೈಟ್ ಹೇಳುತ್ತಾ, ನಾಳಿನ ಹೊಸ ಮುಂಜಾನೆಗೆ ಇಂಚಿಂಚಾಗಿ ತೆರೆದುಕೊಳ್ಳುತ್ತಿರುವ...

ಮಂಗಳವಾರ, ಜುಲೈ 27, 2010

ಗೊತ್ತಿಲ್ಲ!!!

ಅಂದು,
ಹೀಗೆ ಕಾಯುತ್ತಿದ್ದೆ ನೀನು ಬರುವೆ ಎಂದು. ನೀ ಬಂದೆ. ಇವತ್ತೂ ಕಾಯುತ್ತಿದ್ದೇನೆ ನೀನು ಬರುವದಿಲ್ಲ ಎಂದು ಗೊತ್ತಿದ್ದೂ!! ಇದು ನನ್ನ ಮೂರ್ಖತನವಾ, ದುರಾಸೆಯಾ, ಆಸೆಯಾ, ಬಯಕೆಯಾ, ನನ್ನ ಪ್ರೀತಿಯ ಪರೀಕ್ಷೆಯಾ, ಗೊತ್ತಿಲ್ಲ!!
ನಿನ್ನ ಮುದ್ದು ಮುಖ ನೋಡುತ್ತಾ, ಅನುಗಾಲವೂ ಜೊತೆಗಿರುವ ಕನಸನ್ನು ಹೊತ್ತು ಬದುಕಬೇಕು. ಇಲ್ಲಾ ನಿನ್ನೊಂದಿಗಿನ ಈ ಜನ್ಮದ್ದಲ್ಲ, ಏಳೇಳು ಜನ್ಮದ ಸಂಬಂಧವನ್ನು ಕಳೆದುಕೊಂಡು ಬಿಡಬೇಕು.
ಇಲ್ಲಿ ಸಂಜೆಯೊಂದು ನಿಧಾನವಾಗಿ ಸಾಯುತಿದೆ. ಬೀದಿ ದೀಪಗಳು ಕಣ್ಣು ಬಿಡುತ್ತಿವೆ. ನಿಚ್ಚಳ ಸಂಜೆ ಇದ್ದದ್ದು ಉನ್ಮಾದ ರಾತ್ರಿಯಾಗಿ ಬದಲಾಗುತ್ತಿದೆ. ಹಸುವನ್ನು ಬಿಟ್ಟು ದೂರ ಹೋದ ಕರು 'ಅಂಬಾ' ಎಂಬ ಸದ್ದಿನೊಂದಿಗೆ ಹಿಂದಿರುಗುತಿದೆ. ಕಾಳಿಗಾಗಿ ಗೂಡು ಬಿಟ್ಟ ಹಕ್ಕಿ ಮರಳುತಿದೆ. ಸತ್ತ ಸೂರ್ಯನ ನೆನಪಲಿ ಸೊಳ್ಳೆಗಳು ರೋಧಿಸುತ್ತಿವೆ. ಇಷ್ಟಗಲ ಚಾಚಿಕೊಂಡ ಅದೇ ಇಕ್ಕಟ್ಟು ರೂಮಿನಲ್ಲಿ ನಾನು ಬಿದ್ದುಕೊಂಡಿದ್ದೇನೆ ಹೆಣದಂತೆ!!!
ಬದುಕೇ ಬದಲಾಗುವದಿಲ್ಲವೇ? ಈ ಹತಾಶೆಯಲ್ಲೇ ಕೊರಗಿ ಬದುಕೇ ಮುಗಿದು ಹೋಗುತ್ತದಾ? ಎದುರು ಮನೆಯ ಮುದುಕಿಗೆ ಬಂದ ಕುಷ್ಟದಂತೆ ಸವೆದು ಸಾಯುತ್ತಿನಾ? ಮರೆತು ಹೋದವಳು ಮರಳಿ ಬರಬಹುದಾ? ಒಂಟಿ ದೋಣಿಗೊಂದು ದಡ ಸಿಗಬಹುದಾ? ಗೊತ್ತಿಲ್ಲ.
ಈ ಎಲ್ಲ ಗೊತ್ತಿಲ್ಲಗಳಿಗೂ ಉತ್ತರ ಹುಡುಕಬೇಕು. ಆದರೆ ಮೈಯಲ್ಲಿ ಕಸುವೆ ಸತ್ತಂತಿದೆ. ನೀನು ಕೈ ಬಿಟ್ಟು ಹೋದ ಮೇಲೆಯೇ ಹಿಗಾದದ್ದಾ? ಗೊತ್ತಿಲ್ಲ!!!

ಜೀವನ

ಮಬ್ಬಿನ ಮುಂಜಾನೆಯ
ಮುಗ್ದ ಮೌನ
ಮದ್ಯಾಹ್ನದ
ಕಾಲಮಾನ
ಇಳಿ ಸಂಜೆಯ
ಸುಂದರ ಕವನ
ಮಧ್ಯ ರಾತ್ರಿಯ
ಅಗಾಧ ಕಾಮ
ಎಲ್ಲದರ ನಡುವೆಯೇ
ನರ ಮಾನವನ ಜೀವನ.

ನೀನೇ...

ಮಂಜುಗಣ್ಣಿನ
ಮಬ್ಬಿನ ಮುಂಜಾನೆಯ
ಹಿತವಾದ ಚಳಿಯಲಿ
ಅಬ್ಬರಿಸುವ ಮದ್ಯಾಹ್ನದ
ಪ್ರಖರ ಸೂರ್ಯನ
ಸೊಕ್ಕಿನ ಮುಖದಲಿ
ಇಳಿ ಸಂಜೆಯ ಬಿಡದೆ ಸುರಿಯುವ
ಧಾರೆ ಧಾರೆ ವರ್ಷಧಾರೆಯಲಿ
ಎಲ್ಲೆಲ್ಲೂ ನೀನೇ
ಮರೆಯ ಬೇಕೆಂದು ನಿಶ್ಚಯಿಸಿದ ಮನಸಿನಲಿ.

ಗೆಳೆಯನ ಮದುವೆ

ವಂಚನೆಗೊಳಗಾದವರಿಗಿಂತಲೂ ವಂಚಿಸಿದವರು ನೆಮ್ಮದಿಯಿಂದಿದ್ದಾರೆಂದು ಎಲ್ಲೂ ಕುರುಹಿಲ್ಲ!!! ಆದರೂ ಮನಸು ತನಗಾದ ವಂಚನೆಯತ್ತಲೇ ತಿರುಗುತ್ತಿದೆ. ನಿನ್ನ ವಂಚನೆಯನ್ನು ಮರೆತು ಗೆಳೆಯನ ಮದುವೆಗೆ ಅಣಿಯಾಗುತ್ತಿದ್ದೇನೆ ಹುಡುಗಿ!! ಎಲ್ಲ ಪ್ರೇಮಗಳೂ ಮೋಸಕ್ಕೊಳಗಾಗುವದಿಲ್ಲ. ಮೋಸವಾದವುಗಳು ಪ್ರೇಮವಲ್ಲ!! ಎದುರಿಗೆ ಕುಳಿತು ಮಾತನಾಡಿದ್ದು ಕೆಲವೇ ನಿಮಿಷ ಆದರೂ ಅವರ ಮನಸು ತಿಳಿ ತಿಳಿ. ಕನಸು ಸ್ವಚ್ಚ ಸ್ವಚ್ಚ. ಅವರಿಬ್ಬರ ಮಾತು ಕೇಳಿ, ಕೈಲಾದ ಸಹಾಯ ಮಾಡಿ, ಅವರಿಬ್ಬರನ್ನು ಒಂದು ಮಾಡುವ ಸಂಕಲ್ಪದೊಂದಿಗೆ ಎದ್ದು ಬಂದೆ. ನಿನ್ನ ವಂಚನೆಯನ್ನು ನೆನೆಯುತ್ತಾ.

"ಅವಳೆಲ್ಲಿ"?

ಮತ್ತೆ ಮಳೆ ಬೀಳುತ್ತಿದೆ. ಮನಸು ಪ್ರಫುಲ್ಲ ಎಂದುಕೊಳ್ಳುವದರೋಳಗಾಗಿ ನಿನ್ನ ನೆನಪು! ಮಾಡಿದ ಪ್ರಯತ್ನವೆಲ್ಲ ಗುಡ್ಡಕ್ಕೆ ಮಣ್ಣು ಹೊತ್ತಂತೆ. ಮನದಲ್ಲಿ ತುಂಬಿ ತುಳುಕುತ್ತಿದೆ ವಿಷಾಧ.
ಈ ಮಳೆಗಾಲಕ್ಕಾಗಿಯೇ ಜೊತೆಯಾಗಿ ಗೂಡು ಕಟ್ಟೋಣ ಎಂದುಸುರಿ ಎಲ್ಲಿ ಮರೆಯಾದೆ ಹುಡುಗಿ?
ಈ ಮಳೆಯ ಪ್ರತಿ ಹನಿಯೂ ಕೇಳುತಿದೆ "ಅವಳೆಲ್ಲಿ"?

ಸಾಕ್ಷಿ

ಪ್ರೀತಿ ಹುಟ್ಟಿದ್ದಕ್ಕೆ
ಕಾರಣ ಕೆಳುತ್ತಿಯಲ್ಲೇ
ಸತ್ತಿದ್ದಕ್ಕೆ ಸಾಕ್ಷಿ
ಕಣ್ಣಲ್ಲಿಟ್ಟುಕೊಂಡು!!

ನೀನು

ಬಂದೆ
ಇದ್ದೆ
ಎದ್ದೆ!!!

ಗುಟ್ಟು

ಗಂಡನಿಗೂ ಹೇಳದ ಗರ್ಭವತಿಯ ಮಡಿಲಲ್ಲಿ ಆಗಷ್ಟೇ ಅರಳುತಿರುವ ಕಂದನ ಮಿಸುಕಿನಂತಿರಲಿ ನಮ್ಮ ಪ್ರೀತಿ!
ನಮ್ಮಿಬ್ಬರಿಗೆ ಮಾತ್ರ ಅದು ಮಿಸುಕಿದ ಸುಖದ ನೋವಿರಲಿ!! ಈ ಜಗದ ಹಂಗು ನಮಗ್ಯಾಕೆ?

ನಾವು

'ನಾನು' ಅನ್ನುತ್ತಿದ್ದವನು
'ನಾವು' ಅಂದಾಗಲೇ
ಅವನು ಇಬ್ಬರಾದದ್ದು!!

ಕಂಪನ

ಇಡೀ ಜಗವೇ ಮೊದಲ ಮಳೆಗೆ
ರೋಮಾಂಚನ
ಈ ಮನದಲ್ಲಿ ನಿನೆದ್ದು ಹೋದ
ಕಂಪನ!!

ಶುಕ್ರವಾರ, ಜುಲೈ 23, 2010

ಒಂದು ಗಜಲು...


"ಸರಿ ಕಣೇ, ದ್ವೇಷವೇ ಇರಲಿ: ಮನಸನ್ನು ನೋಯಿಸಲಿಕ್ಕಾದರೂ ಸರಿಯೇ,
ಮತ್ತೆ ಬಾ. ಮತ್ತೊಮ್ಮೆ ನನ್ನ ಒಬ್ಬಂಟಿಗನನ್ನಾಗಿ ಮಾಡಿ ಹೋಗಲಿಕ್ಕಾದರೂ ಬಾ!!
ಹೀಗೆ ನಾವು ಬೇರೆಯಾದುದಕ್ಕೆ ಯಾರಿಗೆ ಏನಂತ ನೆಪ ಹೇಳೋಣ?
ಪ್ರಪಂಚದ ನೀತಿ ನಿಯಮ ಜಾರಿಯಲ್ಲಿಡಲ್ಲಿಕ್ಕಾದರೂ ಬಾ.
ಮೊದಲಿನಷ್ಟು ತೀವ್ರವಾಗಿ, ಪದೇ ಪದೇ ಬರಲಿಕ್ಕಾಗದಿದ್ದರೂ ಸರಿಯೇ
ಆದರೂ ಅಪರೂಪಕ್ಕೊಮ್ಮೆ, ರಮಿಸಲಿಕ್ಕೆ ಬಾ
ಹೇಗೆ ನಿನಗೆ 'ಬರಲಾಗದು' ಎಂಬುವದಕ್ಕೆ ನೆಪಗಳು ಸಿಗುತ್ತವೋ
ಹಾಗೆ ಒಮ್ಮೆ ಯಾವತ್ತಾದರೂ ಮತ್ತೇ ನನ್ನನ್ನು ಬಿಟ್ಟು
ಹೋಗಲಿಕ್ಕಾಗದಂತೆ ಬಾ...
ಬಂದು ಬಿಡು!!"
-ಅಹ್ಮದ್ ಫರಾಜ್

ಬುಧವಾರ, ಜುಲೈ 21, 2010

ಕೊಡಚಾದ್ರಿಯ ದಾರಿಯಲಿ...

ನಿರ್ಜನ ಕಾಡಿನಲ್ಲಿ

ಸುರಿಯುವ ಹಿಮದಲಿ

ಬೀಳುವ ಸೋನೆ ಮಳೆಯಲಿ

ಕಣ್ತುಂಬುವ ಹಸುರಿನಲಿ

ಎಲೆಯಲಿ ಅವಿತ ಇಬ್ಬನಿಯಲಿ

ಮಳೆಗಾಲದಲಿ ಹುಟ್ಟಿ,

ಬೇಸಿಗೆಗೆ ಮುಗಿದು ಹೋಗುವ

ಜಲಧಾರೆಯಲಿ

ಆ ಜಲಧಾರೆಯ

ತಂಪು ತಂಪು ನೀರಿನಲಿ

ಒಬ್ಬಂಟಿ ಪಯಣದಲಿ

ಸಿಕ್ಕ ಮುದ್ದಾದ ಕರುವಿನ

ಅಬೋಧ ಕಣ್ಣಿನಲಿ

ನನಗೆ ನಿನ್ನದೇ

ದಿವ್ಯ ನಗೆ ದೀಪ

"ಕಾಡಿನಲ್ಲಿ ಕಳೆದು ಹೋಗುವ ಹಂಬಲದೊಂದಿಗೆ

ಮರಳಿ ನಾಡಿಗೆ ಬಂದ ತೊಯ್ದ ಮನಸ್ಕ..."

ಹುಡುಕಾಟ

ಮತ್ತೆ ಒಲವಿನ ಹುಡುಕಾಟ

ಕೊಡಚಾದ್ರಿಯ ಗಿರಿಶೃಂಗಕೆ ಅಲೆದಾಟ

ಇಳಿಯುವ ಹಿಮರಾಶಿಯ ಸಲ್ಲಾಪ

ತಂಪು ತಂಗಾಳಿಯ ಆಲಾಪ

ಧುಮ್ಮಿಕ್ಕಿ ಹರಿಯುವ ಶರಾವತಿಯ ಕಲಾಪ

ಜೋಗದಲ್ಲಿ ಬಿದ್ದು ಸಿಡಿಯುವ ಪ್ರತಾಪ

ಬಿಡದೆ ಸುರಿಯುವ ಸೋನೆ

ನನಗೆ ಎಲ್ಲೆಲ್ಲೂ ನೀನೆ

ಮಾನವನಾಗಿ ಹುಟ್ಟಿದ ಮೇಲೆ ಜೋಗದ ಗುಂಡಿ ಕಂಡ ಸಾರ್ಥಕತೆಯೊಂದಿಗೆ...

ಮಂಗಳವಾರ, ಜುಲೈ 13, 2010

ನಾನು


ನಿನ್ನ ಬರೀ ಪಾದಗಳಿಗೆ
ಬೆಳ್ಳಿಯ ಕಿರುಗೆಜ್ಜೆ
ಕಟ್ಟಿ
ಆ ಗೆಜ್ಜೆಯ ನಾದಕ್ಕೆ
ಮೈ ಮರೆತು
ಪ್ರಾಣ ಬಿಡಬೇಕು
ಅಂದುಕೊಂಡಿದ್ದ
ಭಾವುಕ

ಸತ್ತು ಮಲಗಿದ ಮೊಲದ ಮರಿಯಂತಹ ಪ್ರೇಮವನ್ನು ನೆನೆದು...

ಸೋನು,
ಹೇಗಿದ್ದಿಯಾ? ಸಮಯದ ಪರಿವೆಯಿಲ್ಲದೆ, ದಡಕ್ಕೆ ಬಂದು ಅಪ್ಪಳಿಸಿ ಹೋಗುವ ಅಲೆಗಳಿಗೆ ಎದೆ ಕೊಟ್ಟು ನಿಂತ ಬಂಡೆಯಂತೆ ನೀನು ಬಿಟ್ಟು ಹೋದ ಜಾಗದಲ್ಲೇ ಇದ್ದೀನಿ ಇನ್ನೂ! ಅಂದು ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ಅಷ್ಟು ದೂರಕ್ಕೆ ಕೇವಲ ನಿನಗೊಸ್ಕರವೇ ಬಂದು ಬಿಟ್ಟಿದ್ದೆನಾ? ಗೊತ್ತಿಲ್ಲ.
ಯಾವ ಮೋಹನ
ಮುರುಳಿ ಕರೆಯಿತೋ
ದೂರ ತೀರಕೆ
ನನ್ನನು..
ಯಾವ ಲಾಜಿಕ್ಕೂ ಗೊತ್ತಿಲ್ಲದ ಶುದ್ದ ದಡ್ಡ ಬದುಕು ಇದು. ಇಂತಹ ದಡ್ಡ ಬದುಕಿನೊಳಗೆ ಸಂಭ್ರಮದಿಂದ ನಡೆದು ಬಂದವಳು ನೀನು. ಸಿಡುಕ ಮ್ಯಾನೇಜರ್ ನ ಜೊತೆ ನಡೆದು ಬಂದು "ಹಲೋ" ಅಂದವಳ ಕಣ್ಣುಗಳಲ್ಲಿ ನನಗೆ ಕಂಡಿದ್ದು ತುಂಬು ಕಾನ್ಫಿಡೆನ್ಸು!! ಕಾಮನಬಿಲ್ಲು ನಮ್ಮ ಆಫೀಸಿನ ಹೊಸ್ತಿಲಿಗೆ ಎಡವಿ ಬಿದ್ದು ಹುಡುಗಿಯಾಗಿ ಬಂದಿದೆಯಾ? ಅಂತ ಆಶ್ಚರ್ಯವಾಯ್ತು!!!
ಅಂದು ಒಂದು ಸಂಭ್ರಮವಾಗಿ ನಡೆದು ಬಂದವಳಲ್ಲಿ ಹೀಗೊಂದು ಸೂತಕವನ್ನೂ ಉಳಿಸಿ ಹೋಗುವ ಶಕ್ತಿ ಇದೆ ಅಂತ ನನ್ನ ಪೆದ್ದು ಮನಸಿಗೆ ಗೊತ್ತೇ ಆಗಲಿಲ್ಲ.
ಈ ದುಷ್ಟ ಪ್ರಪಂಚದಲಿ ಹಲವಾರು ಮೊಸಕ್ಕೊಳಗಾದವನು, ಹಲವರನ್ನು ಕಳೆದುಕೊಂಡವನು ಅನುಭವಿಸುವ ಆ ತಳಮಳ ನಿನಗೆ ಕೊನೆಗೂ ಗೊತ್ತಾಗಲಿಲ್ಲ. ಗೊತ್ತು ಮಾಡಿಕೊಳ್ಳುವ ಇಚ್ಚೆಯೂ ಇರಲಿಲ್ಲ. ತಾಯಿ ಇಲ್ಲದವಳಿಗೆ ತಂದೆ ಇಲ್ಲದವನ ಭಯ, ಅಸಹಾಯಕತೆ, ಅಭದ್ರತೆ, ಪೋಸ್ಸೇಸಿವನೆಸ್ಸು ಯಾವುದು ಅರ್ಥವೇ ಆಗಲಿಲ್ಲ. ಸಡಗರದ ಜಾತ್ರೆಯಲಿ ಕಣ್ಣರಳಿಸಿ ನೋಡುತಿರುವ ಹಸುಗೂಸನ್ನು ತಾಯಿ ಮರೆತು ಹೋದಂತೆ ಹೊರಟು ಹೋದೆ.
Infact ಹಾಗಂತ ನೀನೊಂದು ನಿರ್ಧಾರ ತೆಗೆದುಕೊಂಡವಳಂತೆ ಕೊನೆಯ ಮಾತನ್ನೂ ಆಡಿ ಹೋದ ಮೇಲೆ ಎದೆಯೋಳಗೊಂದೂ ಹಾಡು ಉಳಿದಿಲ್ಲವೆಂಬಂತಹ ನಿರ್ಭರ ಮೌನವಿತ್ತು. ತುಂಬಾ ಹೊತ್ತು ಒಬ್ಬನೇ ಕುಳಿತು ಸಿಗರೇಟು ಸುಟ್ಟೆ. ಕತ್ತಲಲ್ಲಿ ಕುಳಿತಾಗ, ಒಬ್ಬಂಟಿಯಾದಾಗ ನನಗೆ ತೋಚುವದು ಅದೊಂದೇ! ಕಡೆ ಪಕ್ಷ ಯಾರೋ ಜೊತೆಗಿದ್ದಾರೆ ಬಿಡು ನನ್ನಂತೆಯೇ ಉರಿಯುತ್ತಾ, ಕರಗುತ್ತಾ, ನಾಶವಾಗುತ್ತಾ - ಅನಿಸುತ್ತಿರುತ್ತದೆ. ಒಂದಾದ ಮೇಲೊಂದು ಸಿಗರೇಟು ಸುಡುತ್ತೇನೆ. ನೀನಿದ್ದಾಗ ತಕರಾರು ತೆಗೆಯುತ್ತಿದ್ದೆ. ಸಿಗರೇಟಿನ ಬಗ್ಗೆ. ಆಮೇಲೆ ನನ್ನ ಬಗ್ಗೆಯೇ ತಕರಾರು ಶುರುವಾಯಿತು. ಎದ್ದು ಹೋದೆ. ಉಳಿದಿರುವದು ಬರೀ ಕತ್ತಲು. ಸಿಗರೇಟಿನ ತುದಿಯ ನಿಗಿನಿಗಿ ಕೆಂಡ ಮತ್ತು ನನ್ನೊಳಗಿನ ಮೌನ-ಅಷ್ಟೇ.
ನಿನ್ನೆ ಸುರಿಯುವ ಸೋನೆಯಲಿ ಪುಟ್ಟ ಪಾಪುವಿನ ಕೈ ಹಿಡಿದು ನಡೆಯುತ್ತಿದ್ದೆ, ಅದರ ಮುಗ್ದ ಪ್ರಶ್ನೆಗಳೊಂದಿಗೆ. ನನ್ನ ಎಡಗೈ ಕಿರು ಬೆರಳು ಹಿಡಿದು ನಡೆಯುತ್ತಿದ್ದ ಆ ಮಗುವಿನ ಪ್ರತಿ ಪ್ರಶ್ನೆಯಲ್ಲೂ ನಿನ್ನನ್ನೇ ಹುಡುಕುತ್ತಿದ್ದೆ.
ನೀನು ಗೆಳತಿಯಾ, ಬಂಧುವಾ , ನನ್ನೊಳಗಿನ ಭಾವವಾ, ಮಾತು ಕಳೆದು ಹೋದಾಗ ದಕ್ಕುವ ಮೌನವಾ? ಅರ್ಥವಾಗುತ್ತಿಲ್ಲ.

ಮಂಗಳವಾರ, ಜುಲೈ 06, 2010

ಯಾಕೋ ಖುಷಿಯಾಗ್ತಿದೆ...


ಮತ್ತೆ ಮಳೆ! ಹತಾಶನಾಗಿ ಬಂದ ಮಗನಿಗೆ ಸಾಂತ್ವನಿಸುವ ತಾಯಿ ಪ್ರೀತಿಯಂತೆ; ಹನಿ ಹನಿ
ಈ ತುಂತುರುವಿನ ಎದೆಯ ಪ್ರತಿ ಹನಿಯಲ್ಲೂ ನಿನದೇ ಪ್ರತಿದ್ವನಿ.
ನಿನ್ನ ಪಾಲಿಗೆ ನಾನು; ಮರೆತು ಹೋದ ಕನಸು, ತಪ್ಪಿ ಹೋದ ಟ್ರೇನು, ಇನ್ನೆಂದೂ ತಿರುಗಿ ಬರಲಾರದ ಸಮಯ,
ಗುರುತೂ ಉಳಿಯದೇ ನಡೆದು ಹೋದ ಹೆಜ್ಜೆ.
ಆದರೆ ನಿನ್ನ ಆ ಹೆಜ್ಜೆಯ ಗೆಜ್ಜೆನಾದದಿಂದಲೇ ಮೈ ಮರೆತ ಭಾವುಕ ನಾನು. ಇಲ್ಲಿ ನೀನಿಲ್ಲ ಆದರೆ ನಿನ್ನೊಂದಿಗೆ ಕಳೆದ ಸಾವಿರ ಸಾವಿರ ನೆನಪುಗಳಿವೆ. ಆ ನೆನಪುಗಳಿಗೆ ನನ್ನ ಸಾಂತ್ವನಿಸುವ ಶಕ್ತಿ ಇದೆ!
ಅಷ್ಟು ಸಾಕು. ನನ್ನ ಬದುಕಿನಲ್ಲೂ ಕಾಮನಬಿಲ್ಲು ಮೂಡುವ ಸಂದರ್ಭ! ವಸಂತ ಮಾಸವಿಲ್ಲದೆ ಕೂಗುವ ಕೋಗಿಲೆ, ನೋವಿನ ಅಲೆಗಳಿಗೆ ಸಿಕ್ಕು ಕರಗಿ ಹೋದ ಕಲ್ಲು ಬಂಡೆಯಂತಹ ಕಷ್ಟ, ಮುಸುಕಿದ ಮೋಡದೊಳಗಿಂದ ಫಳ ಫಳಿಸುವ ಸೂರ್ಯ. ಇದಾವುದು ತುಂಬ ದೂರವಿಲ್ಲ!!
ಸಂಜೆ ಬಂದ ಮಳೆಗೆ ಕಾಲಿಗೆ ಮೆತ್ತಿದ ಮಣ್ಣಿನಲ್ಲೂ ಯಾವುದೋ ಘಮ.
ಯಾಕೋ ಖುಷಿಯಾಗ್ತಿದೆ...

ದಿಲ್ ನೆ ಫಿರ್ ಯಾದ ಕಿಯಾ!!!


"ಭಲೇ ಭಲೇ ಚಂದದ ಚಂದುಳ್ಳಿ ಹೆಣ್ಣು ನೀನು
ಮಿಂಚು ಕೂಡಾ ನಾಚುವ ಮಿಂಚಿನ ಬಳ್ಳಿ ನೀನು"
ಯಾವ ದಿವ್ಯಘಳಿಗೆಯಲ್ಲಿ ಕಲ್ಯಾಣ ಲೇಖನಿಯಿಂದ ಮೂಡಿ ಬಂತೋ ಈ ಅದ್ಭುತ ಹಾಡು. ಕೇಳಿದ ಮರುಕ್ಷಣದಿಂದ ಇಷ್ಟವಾಯ್ತು. ಇದು ನನ್ನ ಅನುಗಾಲದ ಸಂಗಾತಿ, ಪ್ರತಿದಿನದ ಸ್ವಗತ. ಈ ಹಾಡಿನಲ್ಲಿರುವಂತಹ ಒಬ್ಬ ಚಂದುಳ್ಳಿ ಚಲುವೆ ನನ್ನ ಬಾಳಲ್ಲೂ ಬರುತ್ತಾಳೆ ಎಂಬ ಅದಮ್ಯ ನಂಬುಗೆಯಿಂದ ಬದುಕಿದ್ದೆ.
ನನ್ನ ನಂಬಿಕೆ ಸುಳ್ಳು ಮಾಡದೇ ಬಿರು ಬೇಸಿಗೆಯಲಿ ಬಂದ ಸಂಜೆ ಮಳೆಯಂತೆ ಆ ದೇವತೆ ನಡೆದು ಬಂದಳು. ನಂತರದ ದಿನಗಳು 'ಜಸ್ಟ್ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ'.

ಪ್ರತಿ ಸಾಲಲ್ಲೂ ಇಣುಕೋ ಅಕ್ಷರ ಅವಳೇ...

ನಿಜಕ್ಕೂ ತನ್ನ ಕಣ್ಣ ಬೆಳಕಿನಿಂದಲೇ ನನ್ನ ಬಾಳನ್ನು ಬೆಳಗುತ್ತಾ, ನಸು ನಗುತ್ತಾ, ಗದರಿಸುತ್ತಾ, ಲಾಲಿಸುತ್ತಾ, ಪಾಲಿಸುತ್ತಾ ತಂಪು ತಂಗಾಳಿಯಂತೆ ನಾನು ಈ ಲೋಕವೇ ಮರೆತು ಹೋಗೋವಷ್ಟು ಪ್ರೀತಿಸಿದಳು. ಆದರೆ ಯಾವುದೋ ವಿಷ ಘಳಿಗೆ ನಮ್ಮಿಬ್ಬರನ್ನೂ ಇವತ್ತು ಬೇರೆ ಬೇರೆ ಮಾಡಿದೆ. ಏನಾದರೂ ಈ ಹಾಡು ಎಲ್ಲಿ,ಯಾವಾಗ,ಹೇಗೆ ಕೇಳಿದರೂ ನನ್ನ ನೆನಪಿನ ಸುರುಳಿ ಆ ಎರಡು ವರ್ಷದ ಅದ್ಭುತ ಅನುಭವಕ್ಕೆ ಬಿಚ್ಚಿಕೊಳ್ಳುತ್ತದೆ.

"ಎಲ್ಲ ಶಿಲ್ಪಗಳಿಗೂ ಒಂದೊಂದು ಹಿಂದಿನ ಕಥೆಯಿದೆ
ನನ್ನ ಶಿಲ್ಪ ಚಲುವೆ ಇವಳ ಮುಂದೆನ್ನ ಬದುಕಿದೆ"

ಬದುಕು ಪೂರ್ತಿ ಅವಳ ಸರಿಗಮ, ತಕಧಿಮಿಗಳಲೇ ಕಳೆದು ಬಿಡುವ ದಿವ್ಯ ನಿರ್ಧಾರಕ್ಕೆ ಬಂದು ನಿಂತಿದ್ದೇನೆ.
ನಿಜ, ಒಂದು ಹಾಡಿಗೆ ಸಂತೋಷದ ಜೊತೆಗೆ ವಿಷಾಧವನ್ನೂ ಕೈ ಹಿಡಿದು ತರುವ ಶಕ್ತಿ ಇರುತ್ತದೆ.

ಬುಧವಾರ, ಜೂನ್ 16, 2010

ಧಾರವಾಡದಲ್ಲೊಂದು ಮಹಾ ಬೆಳಗುಶಾಲ್ಮಲೆಯಲ್ಲೊಂದು ಅದ್ಭುತ ಮುಂಜಾನೆ, ಧಾರವಾಡದ ತುಂತುರು ಮಳೆಯ ಜೊತೆ ರಮ್ಯ ಪ್ರಕೃತಿಯ ಮಡಿಲಲ್ಲಿ ದಿವ್ಯ ಸುಪ್ರಭಾತ. ಸಕಲ ಜೀವರಾಶಿಗಳಿಗೂ ಎಚ್ಚರಗೊಳಿಸುವ ಭವ್ಯ ದಿನಕರ. ಮನದ ಮೂಲೆಯಲ್ಲೆಲ್ಲೋ ಒಂದು ನವ್ಯ ಉತ್ಸಾಹ. ಬದುಕಿನ ಇನ್ನೊಂದು ಮಹಾ ಹಗಲು ಇಂಚಿಂಚಾಗಿ ತೆರೆದುಕೊಳ್ಳುವ ಸಂಭ್ರಮ. ಕತ್ತಲು ಸರಿದು ಬೆಳಕು ಹರಡುವ ನಿತ್ಯ ಸಂಕ್ರಮಣ. ಇನ್ನೊಂದು ಪರಿಭ್ರಮಣ ಯಶಸ್ವಿಯಾಗಿ ಮುಗಿಸಿದ ಭೂಮಿಯ ಮುಖದಲ್ಲೊಂದು ಅನನ್ಯ ಸಾರ್ಥಕತೆ. ಸಾಧನಕೇರಿಯ ಶಬ್ದ ಗಾರುಡಿಗ ಲಯಬದ್ದವಾಗಿ ಹೆಣೆದ "ಮೂಡಲ ಮನೆಯ ಮುತ್ತಿನ ನೀರಿನ...". ತಾಯಿಯ ತೆಕ್ಕೆಯಲ್ಲಿ ಮಲಗಿ ತುಟಿಯಂಚಿನಲಿ ನಗು ಅರಳಿಸಿ ಯಾವುದೋ ಸವಿಗನಸು ಕಾಣುತಿರುವ ಮುಗ್ದ ಮಗುವಿಗೂ ಮಗ್ಗುಲು ಬದಲಿಸುವ ಹಂಬಲ. ಶತಶತಮಾನಗಳಿಂದಲೂ ಪ್ರತಿ ಬೆಳಗಿಗೂ ಕೂಗುವ ಕೋಳಿ ನೈಸರ್ಗಿಕ ಸಮಯಸಾಚಿ. ದಶದಿಕ್ಕುಗಳಿಗೂ ತನ್ನ ರಂಗಾದ ರಂಗು ತುಂಬಿ ನಗುತ ಏರುವ ಸಹ್ಯ ಸೂರ್ಯ. ಮೊನ್ನೆ ಹುಟ್ಟಿದ ತನ್ನ ಮುದ್ದು ಮರಿಯ ಹೊಟ್ಟೆ ತುಂಬಿಸಲು ಪುರ್ರನೆ ಹಾರಿದ ತಾಯಿ ಹಕ್ಕಿ. ರಾತ್ರಿಯ ಜಡತ್ವ ಕಳೆದು ಬೆಳಗಿನ ಕೆಲಸಕ್ಕೆ ತಯಾರಾದ ರೈತ. ಇವತ್ತೂ ಬಾರದ ಮರೆತ ಪ್ರೇಮಿಯ ಪತ್ರಕ್ಕಾಗಿ ಕಾಯುವ ಗೃಹಿಣಿ. ಇನ್ನೂ ಒಂದು ದಿನ ಬದುಕಿ ಬಿಟ್ಟೆ ಎಂಬ ಸಂತೋಷದಲ್ಲಿ ಕೊಸಕೊಸನೆ ಕೆಮ್ಮಿ ಕ್ಯಾಕರಿಸುವ ವಯೋವೃದ್ಧ. ಮನಸಿಗೆ ಕನಸು ತಾಕಿಸಿ, ನಿನ್ನೆ ಕೊಟ್ಟ ಹುಡುಗನ ಬಿಸಿ ಮುತ್ತಿಗೆ ಈಗಲೂ ಕರಗುತಿರುವ, ಎಚ್ಚರಾದರೂ ಮುದುಡಿ ಮಲಗುವ ಹುಚ್ಚು ಹುಡುಗಿ. ಸ್ವಾತಿ ಮಳೆಗೆ ಬಾಯಿ ತೆರೆದು ಕಾಯುತಿರುವ ಚಿಪ್ಪಿನಂತೆ ತನ್ನನ್ನೇ ಮರೆತು ಹೋದವಳ ನೆನಪುಗಳೊಂದಿಗೆ ಎದ್ದೆಟಿಗೆ ಸಿಗರೇಟು ಸುಡುತಿರುವ ಭಗ್ನ ಪ್ರೇಮಿ. ರಾತ್ರಿ ಕಂಡ ಕನಸುಗಳೆಲ್ಲವನ್ನು ನನಸು ಮಾಡಲು ಅವಡುಗಚ್ಚಿದ ದೃಡ ಮನಸ್ಕ. ಇದೆಲ್ಲದರ ಮದ್ಯೆಯು ಸೂರ್ಯನ ಮುಖದಲ್ಲಿ ಮುಗುಳ್ನಗೆ ಹುಡುಕುವ ನಾನು.

ಲಹರಿ...

ಬೆಂದಕಾಳೂರಿನಲ್ಲಿ ಇನ್ನೊಂದು ಮಳೆಯ ಸಂಜೆ! ತುಂಬಿ ತುಳುಕುವ ರಸ್ತೆಗಳಲ್ಲಿ ಲಕ್ಷಾಂತರ ಅಪರಿಚಿತ ಮುಖಗಳು. ಬೆಳಿಗ್ಗೆ ಯಿಂದ ದುಡಿದು,ದಣಿದು ಗೂಡು ಸೇರಿಕೊಳ್ಳುವ ಈ ಸಮಯದಲ್ಲಿ, ನಾನೊಬ್ಬನೇ ಕುಳಿತ ಪಾರ್ಕಿನ ಕಲ್ಲು ಬೆಂಚಿನ ಹಿಂದಿರುವ ಮರಗಳ ಮರೆಯಲಿ ಕುಳಿತ ಜೋಡಿಯೊಂದು ಪಿಸುಗುಡುತ್ತಿತ್ತು.
ಮಳೆಗಾಲ ಯಾವಾಗಲೂ ಪ್ರೇಮಿಗಳ ಕಾಲ. ಎದೆಯ ಆಕಾಶದಲಿ ತಾಪದಿಂದ ಹೆಪ್ಪುಗಟ್ಟಿದ ಪ್ರೀತಿ, ಭೂಮಿಗೆ ಆವಿರ್ಭವಿಸುವ ರಮ್ಯ ಕಾಲ!!
ಒಂದು ಇಳಿಸಂಜೆಯ ಜಡಿ ಮಳೆಯಲಿ ಪ್ರೀತಿಸುವ ಜೀವದ ಜೊತೆ ಒಂದು ವಾಕ್!!! ಅದು ಬದುಕಿನ ಕೊನೆಯ ಕ್ಷಣದವರೆಗೂ ನೆನಪಿನ ಖಜಾನೆಯಲ್ಲಿ ಅಚ್ಚಳಿಯದೆ ಉಳಿಯುವ ಮಧುರ ನೆನಪು!! ಮಳೆಯಲಿ... ಜೊತೆಯಲಿ!!!
ಮಳೆ! ಎಷ್ಟೇ ಹತೋಟಿಯಲ್ಲಿಟ್ಟುಕೊಂಡರೂ ನೀನಿಲ್ಲದ ಮನದ ಬೇಗುದಿ, ತಳಮಳ ಎಲ್ಲವನ್ನೂ ಅಭಿವ್ಯಕ್ತಿಸಲು ಸಿಗುವ ಏಕೈಕ ದಾರಿ. ಹೌದು ಮಳೆಗೆ ಮಾತ್ರ ಮನಸಿನ ಕೊಳೆ ತೊಳೆಯುವ ಶಕ್ತಿ ಇದೆ. ಅದು ನೊಂದು ಬೇರೆಯಾದ ಎರಡು ಜೀವಗಳನ್ನು ಜೋಡಿಸುವ ಅದ್ಭುತ ಔಷಧಿ! ಆದರೆ ಆ ಔಷಧಿಯ ಪರಿಣಾಮಕ್ಕಿಂತಲೂ ಘೋರ ಸ್ಥಿತಿಗೆ ಇಳಿದ ನಮ್ಮ ಪ್ರೀತಿ!!!

ಗುರುವಾರ, ಜೂನ್ 10, 2010

ಸುಪ್ತ ಸ್ವರ...


ದೀಪಗಣ್ಣಿನ ಹುಡುಗಿ,
ಮನಸು ಈಗೀಗ ಕೊಂಚ ಸ್ಥಿಮಿತಕ್ಕೆ ಬರುತ್ತಿದೆ ಗೆಳತಿ! ಅವತ್ತಿನ ದುಖವೆಲ್ಲ ಇವತ್ತು ಕಡಿಮೆಯಾಗಿ ಹೋಗಿದೆ ಅಂತ ಹೇಳಲಾರೆ, ಆದರೆ ಅವತ್ತಿನ ಹಾಗೆ ಎದೆಯಿಂದ ರಕ್ತ ಚಿಮ್ಮುತ್ತಿಲ್ಲ. ಒಳಗಿನ ಜ್ವಾಲಾಮುಖಿ ಕೂಡ ತನ್ನ ಸದ್ದಡಗಿಸಿಕೊಂಡಿದೆ. ನನ್ನೊಂದಿಗೆ ನಾನೇ ಸಂಧಾನಕ್ಕೆ ಬರತೊಡಗಿದ್ದೇನೆ. ಕಣ್ಣಿರು ಕಂಟ್ರೋಲ್ ಗೆ ಬರುತ್ತಿವೆ. ನಂಗೊತ್ತು ಇವತ್ತಿನ ಸ್ಥಿತಿಯಲಿ, ನಾನು ಮಾತ್ರ ನನ್ನನ್ನ ಸಮಾಧಾನಿಸಿಕೊಳ್ಳಬಲ್ಲೆ!! ಹಾಗೆ ನಿನ್ನೊಂದಿಗೆ ವಾರಗಟ್ಟಲೆ, ತಿಂಗಳುಗಟ್ಟಲೆ, ವರ್ಷಗಟ್ಟಲೆ ಬದುಕಿ ಬಿಟ್ಟವನಿಗೆ ಈಗ ಇದ್ದಕ್ಕಿದ್ದಂತೆ ಒಬ್ಬಂಟಿಯಾಗಿ ಬದುಕುವದು ಕಷ್ಟವಾಗುತ್ತೆ ನೋಡು.
ನೀನು ಅಂತಹ ಹುಡುಗಿ ಅಲ್ಲ ಅಂದುಕೊಂಡಿದ್ದೆ!! ಕಡೆ ಪಕ್ಷ ನನ್ನನ್ನು ಸೋಲಿಗೆ, ಒಂದು ದೌರ್ಭಾಗ್ಯಕ್ಕೆ, ಬದುಕಿನ ultimate ಆಘಾತಕ್ಕೆ ಒಡ್ಡುವ ಮುನ್ನ ಕೊಂಚ ಯೊಚಿಸುತ್ತಿಯಾ ಅಂದುಕೊಂಡಿದ್ದೆ. ಮರಣ ದಂಡನೆ ಕೊಡುವವರೂ ಕೂಡ ನಿನ್ನ ಕೊನೆ ಆಸೆ ಏನು ಅಂತ ಕೆಳ್ತಾರಂತೆ. ಆದರೆ ನೀನು "ನಿನಗಿರುವ ಕೊನೆಯ ಅವಕಾಶವೇ ಮರಣ ದಂಡನೆ"ಎಂಬಂತೆ ತೀರ್ಪು ಘೋಷಿಸಿ ಬಿಟ್ಟೆ.
ಇವತ್ತು ನನಗೆ ಆಶ್ಚರ್ಯವಾಗುತಿರೋದು, ನೀನೇಕೆ ನನ್ನ ಬಿಟ್ಟು ಹೋದೆ ಎಂಬ ಕಾರಣಕ್ಕಾಗಿ ಅಲ್ಲ. ಅದಕ್ಕೆ ಸಾವಿರ ಕಾರಣ ಸಿಗಬಹುದು. ಆದರೆ ವಿನಾಕಾರಣ ನನ್ನ ಪ್ರೀತಿಸಿದ್ದೇಕೆ ? ಅದನ್ನು ಮೊದಲು ಹೇಳು. ನಾನು ನಿಜಕ್ಕೂ ನನ್ನ ಪಾಡಿಗೆ ನಾನು ಎಂಬಂತೆ ಇದ್ದು ಬಿಟ್ಟಿದ್ದೆ. ಬದುಕು ಸುಂದರವಾಗಿತ್ತು. ನಾನು ಸಪ್ತ ಸಾಗರ ದಾಟಬೇಕಿತ್ತು. ಇಪ್ಪತ್ತು ವರ್ಷಗಳ ತಾರುಣ್ಯವನ್ನ ಮುಷ್ಟಿಯಲ್ಲಿ ಇಟ್ಟುಕೊಂಡು ನೂರಿಪ್ಪತ್ತು ವರ್ಷಗಳ ಸುಧೀರ್ಘ ಪ್ರಯಾಣದ ಕನಸು ಕಾಣುತ್ತಿದ್ದೆ. ಅವತ್ತಿನ ನನ್ನ ಓಟಕ್ಕೆ ತಡೆಗೋಡೆಗಳಿರಲಿಲ್ಲ. ಅಂತಹದೊಂದು ಆಹ್ಲಾದಕರ ರಭಸದಲ್ಲಿದ್ದವನಿಗೆ ಇದ್ದಕ್ಕಿದ್ದಂತೆ ಯಾರೋ ಹೆಗಲು ತಟ್ಟಿ "ಹಲೋ" ಅಂದದ್ದು ಕೇಳಿಸಿತು. ದಡ್ಡ ನಾನು ತಿರುಗಿ ನೋಡಿಬಿಟ್ಟೆ!!!
ತಪ್ಪು ನನ್ನದು ಇತ್ತು ಬಿಡು. ಕಣ್ಣುಗಳಲ್ಲಿ ಪ್ರೀತಿಯ ಪಾರಿಜಾತ ಅರಳಿಸಿಕೊಂಡು ನಿಂತವಳನ್ನು ಪ್ರೀತಿಸದೇ ಇರಲು ಸಾಧ್ಯವೇ ಇರಲಿಲ್ಲ! ಹೆಗಲು ಮುಟ್ಟಿ "ಹಲೋ" ಅಂದವಳೆಡೆಗೆ ತಿರುಗಿ ನೋಡಿದೆನೋ ಇಲ್ಲವೋ, ಕ್ಷಣಕ್ಕಾಗಿ ಅಮ್ಮನ ಗರ್ಭದಲ್ಲಿದ್ದಾಗಿನಿಂದಲೂ ಕಾಯುತ್ತಿದ್ದೆನೇನೋ ಎಂಬಂತೆ "ಎಸ್" ಅಂದುಬಿಟ್ಟೆ!!
ಅವತ್ತು ನಿನ್ನ ಕಣ್ಣುಗಳೆಷ್ಟು ನಿಷ್ಕಲ್ಮಶವಾಗಿದ್ದವು ಗೊತ್ತಾ? ಮುಖದಲ್ಲಿ ಮುಗ್ದ ನಗೆ. ಅವತ್ತಿನ ತನಕ ನಿನ್ನದೆಂದುಕೊಂಡಿದ್ದೆಲ್ಲ ಒಂದೇ ಬೊಗಸೆಯಲ್ಲಿ ನನಗೆ ಕೊಟ್ಟು, ಸಮುದ್ರದ ತುದಿಯ ತನಕ ಜೊತೆಯಲ್ಲೇ ತೇಲಿ ಬರುವ ಮಾತಾಡಿದ್ದೆ!! ನಿನ್ನ ಮಾತುಗಳಲ್ಲಿ ಭರವಸೆ ಇತ್ತು, ಪ್ರೀತಿ ಇತ್ತು, ಗೆಲ್ಲುವ ಹಟವಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಬದುಕನ್ನು ಇವತ್ತಿನಿಂದ ಕಡೆಯ ದಿನದ ತನಕ ಒಟ್ಟಿಗೆ ಕಳೆಯುತ್ತೆಂಬ ವಿಶ್ವಾಸವಿತ್ತು!!!
ನನಗೆಲ್ಲ ಅರ್ಥವಾಗುತ್ತೆ. ಮೊದಮೊದಲು ನಾನು ಮೂರ್ಖನ ಹಾಗೆ ರಿಯಾಕ್ಟ್ ಮಾಡಿಬಿಟ್ಟೆ. ನಿನ್ನೆಲ್ಲೋ ನನ್ನ ತೋಳುಗಳಿಂದ ಜಾರುತ್ತಿದ್ದಿ ಎಂಬುದು ಅರವಿಗೆ ಬರುತ್ತಿದ್ದಂತೆ, ರೈಲ್ವೆ ಸ್ಟೇಷನ್ ನಲ್ಲಿ ಅಮ್ಮನನ್ನು ಕಳೆದುಕೊಂಡ ಮಗುವಿನಂತೆ ತಬ್ಬಿಬ್ಬಾದೆ. 2 ವರ್ಷ ಮತ್ತೇನನ್ನು ಮಾಡದೇ ನಿನ್ನನ್ನು ಪ್ರೀತಿಸಿದ ಮಾತ್ರಕ್ಕೆ ನಿನ್ನ ಮೇಲೊಂದು ಹಕ್ಕು ಬಂದುಬಿಟ್ಟಿದೆ ಅಂದು ಕೊಂಡವನು ನಾನು. ಮೊಟ್ಟ ಮೊದಲ ಬಾರಿಗೆ ನಿನ್ನ ಕಣ್ಣುಗಳಲ್ಲಿ ಬಣ್ಣ ಬದಲಾಗುವದನ್ನು ನೋಡಿದೆ. ನಿಂತ ನೆಲವೇ ಬಾಯಿ ಬಿಟ್ಟಂತಾಯಿತು. ಅವತ್ತು ನಿನ್ನ ಎಷ್ಟು ಕಾಡಿದ್ದೆ ನೆನಪಿದೆಯಾ? ನಿನ್ನೆದುರು ನಿಂತು ಕಣ್ಣಿರು ಹಾಕಿದ್ದೆ, ಗೊಗೆರೆದಿದ್ದೆ. ಆರಡಿಯ ಎತ್ತರದ ಆಳು; ಮಳೆಗೆ ತೊಯ್ದ ಗುಬ್ಬಿಯಂತಾಗಿದ್ದೆ.
ಬಿಡು ಇದೆಲ್ಲ ಕೆಲಸಕ್ಕೆ ಬಾರದ ಮಾತು. ಬಸ್ಸು ತಪ್ಪಿಸಿಕೊಂಡವನ ಹಳಿ
ಹಳಿ. ನೀನು ಮರೆತು ಹೋದ ಚಿತ್ರ. ನಿನ್ನ ಮರೆವುಗಳಲ್ಲಿ ನೀನಿರು, ನನ್ನ ನೆನಪುಗಳಲ್ಲಿ ನಾನಿರುತ್ತೇನೆ. ನಿನ್ನ ಮನಸು ಖುಷಿಯಾಗಿರಲಿ. ನನ್ನಲ್ಲಿ ಮತ್ತೆ ಬೆಳಕಾಗುವದಿಲ್ಲ. ನಿರೀಕ್ಷೆಗಳ ಮೆರವಣಿಗೆ ನಿಂತು ಹೋಗಿದೆ. ನಿನ್ನೊಂದಿಗೆ ಕಳೆದ ರಸ ನಿಮಿಷಗಳು ನನಗೆ ಸಾಕು; ಈ ಜನ್ಮಕ್ಕೆ, ಇದರ ಇನ್ನುಳಿದ ಅವಧಿಗೆ. ನಿನ್ನ ಕಣ್ಣಿನ ದೀಪ ಆರದಿರಲಿ.
ಮುಂದಿನ ಜನ್ಮದಲ್ಲಿ ನಿನಗೆ ಅರ್ಹನಾಗುವಷ್ಟು ಒಳ್ಳೆಯವನಾಗಿ ಹುಟ್ಟಿ ಬರುತ್ತೇನೆ...
ಕೇವಲ ನಿನಗಾಗಿ.