ಗುರುವಾರ, ಆಗಸ್ಟ್ 12, 2010

ಪ್ರೀತಿಯಿಂದ

ಒಹ್! ಗೆಳತಿ

ಸ್ನೇಹಕ್ಕೊಂದು ಸವಿಯಾಗಿ ಬಂದವಳು! ಮನದಾಳದ ಪ್ರೀತಿಗೊಂದು ಕಾರಣ ಮಾತ್ರವಾಗಿರದೇ ಅದನ್ನು ಉಳಿಸಿ ಬೆಳೆಸಿದವಳು ನೀನು!!

ನಿನ್ನ ಜೊತೆಗಿನ ಕೆಲವೇ ಘಳಿಗೆಗಳು ಅದೆಷ್ಟು ಭಾವನೆಗಳನ್ನು ಹುಟ್ಟಿಸಿದೆ ಎಂದರೆ ದೂರವಿದ್ದರೂ ಮನಸು ಯಾವಾಗಲೂ ಆರ್ದ್ರ, ನಿನ್ನ ಸಿಹಿ ನೆನಪುಗಳಿಂದ, ಬೆಚ್ಚಗಿನ ಕನಸುಗಳಿಂದ. ಮತ್ತದೇ ಸಂಜೆ, ಅದೇ ಬೆಟ್ಟ, ಅದೇ ಬಂಡೆಯ ಸುತ್ತಲೇ ಮನಸು ಹರಿಯುತ್ತದೆ. ಅಂತಹ ಒಂದು ಕ್ಷಣವನ್ನು ಕೊಟ್ಟ ನಿನಗೊಂದು ಸವಿ ಮುತ್ತಿನ ಥ್ಯಾಂಕ್ಸ್! ರಾತ್ರಿಯ ಪ್ರೀತಿಯ ನಿದ್ದೆಯಲ್ಲೂ ನಿನ್ನದೊಂದು ಸಣ್ಣ ಕನವರಿಕೆ ಇದ್ದೇ ಇರುತ್ತದೆ.

ದಿನದ ಬೆಳಗಿನಲ್ಲಿ ನಿನ್ನ ದನಿಯ ಕೇಳುತ್ತ ಹಾಸಿಗೆಯ ಮುಸುಕಿನಲ್ಲಿ ಇನ್ನಷ್ಟು ನಿದ್ದೆಯ ತುಣುಕುಗಳನ್ನು ಆಸೆಯಿಂದ ಕದಿಯುತ್ತೇನೆ. ಅಲ್ಲಿ ಅರಳಿರುವ ಪ್ರೀತಿಯ ಕ್ಷಣಗಳನ್ನು ಮರೆಯದೆ ಎತ್ತಿಡುತ್ತೇನೆ, ನನ್ನ ಮನಸಿನ ಗೂಡಿನಲ್ಲಿ! ಇಷ್ಟದ ಹಾಡು, ಸಂಜೆಯ ಸೂರ್ಯ, ಕಡಲ ದಂಡೆ ಇವೆಲ್ಲದರ ಹೊರತಾಗಿ ನಿನ್ನ ನೆನಪು!! ಆಹ್...ಈ ಪ್ರೀತಿಗೆ ಸೋಲದೆ ಇರಲಾರೆ.


ನನಗೆ ನೀನೆಷ್ಟು ಇಷ್ಟ ಅಂತ ಪ್ರತೀ ಸಾರಿ ನನಗೆ ನಾನೇ ಕೇಳಿಕೊಂಡಾಗಲೆಲ್ಲ ನಿನ್ನ ಮೇಲಿನ ಪ್ರೀತಿ ಹೆಚ್ಚುತ್ತಲೇ ಹೋಗುತ್ತದೆ. ಅಷ್ಟಾಗಿಯೂ ಅಸಲಿಗೆ ನೀನೇಕೆ ಇಷ್ಟ ಅನ್ನುವುದನ್ನು ಯೋಚಿಸಿದಾಗಲೆಲ್ಲ ನಿನ್ನ ಸ್ನೇಹ, ನಿನ್ನ ನಗು, ನಿನ್ನ ಮಾತು, ನಿನ್ನ ಸಿಟ್ಟು, ನಿನ್ನ ವ್ಯಕ್ತಿತ್ವ, ನಿನ್ನ ಸೌಮ್ಯತೆ, ಸರಳತೆ ಹೀಗೆ ಏನೆಲ್ಲ ಕಾರಣಗಳು ಕಂಡರೂ ಅವೆಲ್ಲ ನೆಪ ಮಾತ್ರ. ನಿನ್ನ ಪ್ರೀತಿಸಲು ನನಗೆ ಕಾರಣಗಳೇ ಇಲ್ಲ, ಅವು ಬೇಕಾಗಿಯೂ ಇಲ್ಲ.


ಯೋಚಿಸಿದಷ್ಟೂ ಗೊಂದಲ

ಪ್ರೀತಿ ಇದೇನಾ
ಈ ಬದುಕಿಗೆ ನೀನೆ ಏಕೆ ಬೇಕು
ನಿನ್ನಂಥವಳಿದ್ದರೆ ಸಾಕಿತ್ತು..ಅಲ್ಲಾ

ನಾಳಿನ ಬದುಕಿಗೊಂದು ಕನಸಾಗಿ ಬಂದವಳು ನೀನು. ಒಂಟಿತನದ ನೀರಸ ಬದುಕಿನಲ್ಲಿ ಜೊತೆಯಾಗಿ ನಿಂತವಳು. ನನ್ನ ಹುಚ್ಚು ಕಲ್ಪನೆಗೆ ಅರ್ಥ ಕೊಟ್ಟವಳು. ನನ್ನ ನೋವಿಗೆ ಕಣ್ಣೀರಾದವಳು. ನೀನೆ ಅಲ್ಲವೆ ನನ್ನೆಲ್ಲ ಹಠವನ್ನು ಗೆದ್ದವಳು. ಬಾಳಿನುದ್ದಕ್ಕೂ ನಿನ್ನ ಜೊತೆ ಇರಲೇಬೇಕೆಂಬ ಹೆಬ್ಬಯಕೆ ದಿನವೂ ಹೆಚ್ಚುತ್ತದೆ. ಜೀವನದ ಕೊನೆಯ ಘಳಿಗೆ ನಿನ್ನ ಮಡಿಲಲ್ಲಿ ಇರಲೆಂದು ಬಯಸುತ್ತೇನೆ.

ನಿನ್ನೊಲವ ಆಸರೆಯ ಮಡಿಲಲ್ಲಿ ಇಂದೆನ್ನ

ಕನಸೆಲ್ಲ ತುಂಬಿಹೆನು ಬಲು ಪ್ರೀತಿಯಿಂದ
ಸಿಹಿ ಇರಲಿ ಕಹಿ ಬರಲಿ ನಾನಿರುವೆ,
ನಿನ್ನ ಜೊತೆಯಿರಲಿ ಉಸಿರಿರುವವರೆಗೆ

ಈ ಜೀವನವನ್ನು ಕೇಳಿದ್ದು ಕಡಿಮೆ, ಪಡೆದಿದ್ದೆ ಜಾಸ್ತಿ. ನಿನ್ನ ಸ್ನೇಹಕ್ಕೊಂದು ಪ್ರೀತಿಯ ನಮನ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ