ಬುಧವಾರ, ನವೆಂಬರ್ 03, 2010

ದೀಪಾವಳಿ


ಹೂ, ಹಣ್ಣು, ಝಗಮಗ ದೀಪಗಳು
ಕಾಯಿ, ಕರ್ಪೂರ, ನೈವೇದ್ಯೆ
ಸಿಹಿ, ಖಾರ, ಉಪ್ಪು, ತುಪ್ಪ
ಅಲ್ಲೆಲ್ಲೋ ಪಟಾಕಿ ಸದ್ದು
ಇಲ್ಲೆಲ್ಲೋ ಮಾವಿನ ತೋರಣ
ಒಳಗಡೆ ಸಿಹಿಯಾದ ಹೂರಣ
ಬಿಮ್ಮನೆ ಕುಳಿತ ಲಕ್ಷ್ಮಿ
ಹೊರಗಡೆ ಇಸ್ಪೀಟು
ಒಳಗಡೆ ಮಗುವಿನ ಅಳು
ಅಜ್ಜಿಯ ಗದರಿಕೆ
ಹುಡುಗರ ತುಂಟಾಟ
ಮದ್ದಿನ ವಾಸನೆ
ಸುರು ಸುರು ಬತ್ತಿ
ಗಂಟಾನಾದ
ಮಂತ್ರಘೋಷ
ದೀಪಾವಳಿಯ ಈ ಸಡಗರದ ಮಧ್ಯ ನಮ್ಮೊಳಗಿನ ಬೆಳಕು ಇನ್ನಷ್ಟು ಪ್ರಕಾಶಿಸಲಿ...
ಹ್ಯಾಪಿ ದೀಪಾವಳಿ ಇನ್ ಅಡ್ವಾನ್ಸ್!

ಬೊಬ್ಬೆ ಹೇಳಿದ ಕಥೆ

ಅದೊಂದು ಮದುವೆ ಮನೆ
ಎಲ್ಲರೂ ಊಟ ಮಾಡಲು
ಅಣಿಯಾಗುತ್ತಿದ್ದಾರೆ
ಅವಳಿಗೋಸ್ಕರ ಸುಡುವ
ಬಿಸಿಲಲ್ಲಿ ಕಾಲಿನ ಬೊಬ್ಬೆ
ಏಳುವವರೆಗೂ ಕಾಯುತಿರುವ
ಅವನು
ಯಾರದೋ ಜೊತೆಗೆ
ನಗುನಗುತಾ
ಊಟ ಮುಗಿಸಿದ
ಅವಳು
ಕೊನೆಗೆ ಉಳಿದಿದ್ದು
ಅವಳು ಉಂಡ
ಅವನು ಬಿಟ್ಟ
ಬಾಳೆಲೆಗಳು ಮಾತ್ರ!

ದೀಪಾವಳಿಗೊಂದು ಕಥೆ

ಮೆಜೆಸ್ಟಿಕ್ ನ ಬಿ.ಎಂ.ಟಿ.ಸಿ ಬಸ್ ನಿಲ್ದಾಣದಿಂದ ಹೊರ ಬಂದು ನಡೆದರೆ ಅಲ್ಲೇ ಪಕ್ಕದಲ್ಲಿ ತಳ್ಳು ಗಾಡಿಯ ಮುಂದೆ ನಿಂತು ದಾರಿಯಲಿ ಹೋಗುವ-ಬರುವವರನ್ನು ಕೂಗಿ ತಿಂಡಿಯ ಹೆಸರು ಹೇಳುತ್ತಾ ನಾನು ನಿಂತಿರುತ್ತೇನೆ. ಕಳೆದ ನಾಲ್ಕು ವರ್ಷಗಳಿಂದಲೂ ನಿರಂತರವಾಗಿ ನಡೆಯುತಿರುವ ಈ ಕ್ರಿಯೆ ಎಷ್ಟು ಸಹಜವಾಗಿದೆ ಎಂದರೆ ರಸ್ತೆಯಲಿ ಯಾರೂ ಇಲ್ಲದಿದ್ದರೂ ನನ್ನ ಕಿರುಚಿಕೊಳ್ಳುವ ಗಂಟಲಿಗೆ ಗೊತ್ತೇ ಆಗುವದಿಲ್ಲ! ಯಾವತ್ತೋ ಬಿಗಿದ ಗಂಟಲಿಗೆ ಕೊಟ್ಟುಕೊಳ್ಳುವ ಶಿಕ್ಷೆಯಂತೆ!!
ರಣ ಬಿಸಿಲಿನ ಬಯಲಿನಲ್ಲಿದೆ ನನ್ನೂರು. ಅದು ಚಿತ್ತೂರು. ಅಪ್ಪ ಬಡ ಕೃಷಿಕ. ಅವ್ವ ಕೂಲಿಯಾಳು. ಅಣ್ಣ-ತಂಗಿಯರ ಮಧ್ಯ ಯಾರಿಗೂ ಬೇಡದ ಬಡ ಕೂಸು - ನಾನು. ನಮ್ಮ ಕೇರಿಯ ಗೆಳೆಯರ ಜೊತೆಗೆ ಆಡುತ್ತಾ, ಬಿಳುತ್ತಾ, ನೆಗೆಯುತ್ತಾ, ಕದಿಯುತ್ತಾ, ಬಡಿಸಿ ಕೊಳ್ಳುತ್ತಾ ನನ್ನ ಬಾಲ್ಯ ಸರಿದು ಹೋಯಿತು. ಬಸ್ಸಿನ ಕಿಡಕಿಯಲಿ ಜಾರಿ ಹೋಗುವ ಮನೋಹರ ದೃಶ್ಯದಂತೆ. ಯಾವ ಶಾಲೆ-ಕಾಲೇಜು ಇಲ್ಲದ ಕುಗ್ರಾಮದಲಿ ಕಾಡ ಕುಸುಮದಂತೆ ಬೆಳೆದ ಧೀರ-ನಾನು. ನನ್ನ ಬದುಕಲ್ಲೂ ಹರೆಯ ಮೂಡುವ ಕಾಲ. ಮೂಗ ಕೆಳಗೆ ಚಿಗುರು ಮೀಸೆ. ಮನದ ಸಮುದ್ರದಲಿ ಭಾವನೆಗಳ ಮಹಾಪೂರ. ಆ ಮಹಾಪೂರಕ್ಕೆ ಸಿಕ್ಕ ಮುತ್ತು-ಅವಳು! ಅವಳೊಂದಿಗೆ ಆಡದ ಆಟವಿಲ್ಲ, ಮಾಡದ ಜಗಳವಿಲ್ಲ, ತಿರುಗದ ಜಾಗವಿಲ್ಲ, ಉಣ್ಣದ ಊಟವಿಲ್ಲ, ಕಾಡ ಮಧ್ಯದಲಿ ಕಳೆದು ಹೋದವನಿಗೆ ಸಿಕ್ಕ ದಾರಿಯಂತವಳು. ಹಾಗೆ ನಮ್ಮ ಸ್ನೇಹಕ್ಕೆ ಎರಡು ವರ್ಷ. ಅದೊಂದು ಬೆಳಿಗ್ಗೆ ಅವ್ವ ನೆಲ ಸಾರಿಸಿ ರಂಗವಲ್ಲಿ ಬಿಡುವ ಹೊತ್ತಿಗೆ ನನಗೆ ಗೊತ್ತಾದದ್ದು- ಇವತ್ತು ದೀಪಾವಳಿ. ಊರ ಗೌಡನ ಮಕ್ಕಳು ಬಣ್ಣ ಬಣ್ಣದ ಬಟ್ಟೆ ತೊಟ್ಟು, ಪಟಾಕಿ ಹಾರಿಸುತ್ತಾ, ಕೇಕೆ ಹೊಡೆಯುತ್ತಾ ಕುಣಿದಾಡುವ ಹೊತ್ತಿಗೆ ನಾವು ಊರ ಮುಂದಿನ ಪಾಳು ಬಿದ್ದ ಹಣಮಪ್ಪನ ಗುಡಿಯಲಿ ಸ್ಥಾಪಿತರಾಗಿದ್ದೆವು.
"ಇವತ್ತು ಸಂಜಿನ್ಯಾಗ ನಾವು ದುಡಿಲಾಕ ಪುಣೆಕ್ಕ ಹೊಂಟೆವಿ. ನಾ ಹೊಳ್ಳಿ ನಿನ್ನ ಮಾರಿ ನೋಡತಿನೋ ಇಲ್ಲೋ?" ಅಂದಳು. ಹಾಗೆ ಅನ್ನುವಷ್ಟರಲ್ಲಿಯೇ ಇಬ್ಬರ ಕಣ್ಣಲ್ಲೂ ನೀರು ಚಕ್ರತೀರ್ಥ. ಮಾತು ಬಾರದ ಮೂಕ ಮರ್ಮರವನು ಅನುಭವಿಸುತ್ತ ಅದೆಷ್ಟು ಹೊತ್ತು ಕುಳಿತಿದ್ದೆವೋ ಗೊತ್ತಿಲ್ಲ. ಇಬ್ಬರ ಮನದಲ್ಲೂ ಜ್ವಾಲಾಮುಖಿ ಸಿಡಿದ ಅನುಭವ. ತುಂಬಿ ಬಂದ ಗಂಟಲು ಮಾತನಾಡಲು ಅವಕಾಶ ಕೊಡಲಿಲ್ಲ. ಪಕ್ಕದಲ್ಲಿ ಕುಳಿತು ಕೈ ಹಿಡಿದವಳ ಭಾವನೆ ಏನಿತ್ತು? ಅವಳ ಕಣ್ಣುಗಳು ಎಲ್ಲವನ್ನೂ ಹೇಳಿ ಮುಗಿಸಿಯೂ ಇನ್ನೇನೋ ಇದೆ ಎಂಬಂತೆ ಅರ್ಧ ಮುಚ್ಚಿಕೊಂಡಿದ್ದವು. ಅವಳು ಅಳುತ್ತಿದ್ದಳಾ? ಗೊತ್ತಿಲ್ಲ. ಆದರೆ ನಾನು ಅಳುವನ್ನು ಮೀರಿದ ದುಖದಲ್ಲಿದ್ದೆ. ಆ ಕ್ಷಣವನ್ನು ನಾನ್ಯಾವತ್ತು ಮರೆಯಲಾರೆ.
ಇಂದು ಅನಿಸುತ್ತದೆ ಅದು ಪ್ರೇಮವಾ, ಸ್ನೇಹವಾ, ಬಯಸದ ಬಂಧವಾ, ಬೆಸೆಯದ ಬಂಧವಾ, ಮುಗಾರು ದಿನಗಳಲಿ ಮಿಂಚಿ ಹೋಗುವ ಮಿಂಚಾ? ಗೊತ್ತಿಲ್ಲ. ಆದರೆ ಪ್ರತಿ ದೀಪಾವಳಿಗೂ ಹಳೆಯ ಗಾಯದಂತೆ, ಕಣ್ಣಿಗೆ ಕಟ್ಟಿದ ಚಿತ್ರದಂತೆ ನೆನಪಾಗುತ್ತಲೇ ಇರುತ್ತದೆ. ಬಹುಶಃ ನಾನಿರುವವರೆಗೂ...

ಹಂಪೆಯಲ್ಲೊಂದು ದಿನ...

ಜಗತ್ತು ಕಂಡ ನಾಲ್ಕು ಮಹಾ ಸಾಮ್ರಾಜ್ಯಗಳಲಿ ಒಂದಾದ ವಿಜಯನಗರ ಸಾಮ್ರಾಜ್ಯದ ಪಳಿಯುಳಿಕೆ ನೋಡುವ ಸೌಭಾಗ್ಯ! ಭರತ ವರ್ಷದಲಿ ಕಂಡು ಕೇಳರಿಯದ ಶ್ರೀಮಂತಿಕೆಯಿಂದ ಆ ಸ್ವರ್ಗವೇ ಭೂಮಿಗೆ ಇಳಿದಂತೆ ಬದುಕಿದ ಜನರ ಜೀವನಗಾಥೆ ಹೇಳುವ ಅದ್ಭುತ ಸ್ಥಳವೇ - ಹಂಪೆ. ಭಾವುಕನೊಬ್ಬ ತನ್ನದೇ ಮುರಿದ ಮನೆಯಲಿ ನಡೆದ ನವಿರು ನೋವಿನ ಅನುಭವ ನೀಡುವ ನಮ್ಮ ಹೆಮ್ಮೆಯ, ನೋವಿನ, ವಿಶಾಧದ - ಹಂಪೆ.
ಭಾರತೀಯರ ದೈವ ಕಲ್ಪನೆಯ ಸಾಕಾರದಂತಿರುವ ಅಂದಿನಿಂದಲೂ ಮನುಷ್ಯನ ಪ್ರೀತಿ, ಔದಾರ್ಯ, ಕರುಣೆ, ದಯೆ, ನಿಷ್ಠೆ, ಪ್ರಾಮಾಣಿಕತೆಯ ಜೊತೆಗೆ ಕ್ರೌರ್ಯ, ಮತಾಂಧತೆ, ಅಧಿಕಾರ ದಾಹ, ಮನಸಿನ ವಿಕೃತತೆ ಹೀಗೆ ಎಲ್ಲವನ್ನು ನೋಡಿಯೂ ನಗುತಲಿರುವ ವಿರುಪಾಕ್ಷ! ಮನುಷ್ಯನ ಸ್ವಾರ್ಥದ ಪ್ರತಿಬಿಂಬದಂತೆ, ತನ್ನ ಅಗಾಧ ದೇಹವನ್ನು ಹೊತ್ತು ನಾಯಿಯಂತೆ ಅಲೆಯುವ ಆನೆ! ಹೊಟ್ಟೆ ಮಾತ್ರ ಕೊಚ್ಚಿ ಹೋಗಿ ಉಳಿದಿದ್ದೆ ಸಾಕು ಎಂಬಂತೆ ನಿಟ್ಟುಸಿರಾದ ಕಡಲೆಕಾಳು ಗಣಪ! ಹಿಂದೆ ನೋಡಿದರೆ ಪಾರ್ವತಿಯಂತೆ, ಮುಂದೆ ನೋಡಿದರೆ ಮುಗ್ದ ಮಗುವಿನಂತೆ ಬಯಲಲ್ಲೇ ಹಠ ಹಿಡಿದು ನಿಂತ ಸಾಸಿವೆಕಾಳು ಗಣಪ! ಉಗ್ರನಾದರೂ ಭಗ್ನವಾಗಿ ಲಕ್ಷ್ಮಿ ಇಲ್ಲದೆ ವಿರಹವನು ಕಣ್ಣಲ್ಲೇ ವ್ಯಕ್ತಪಡಿಸುವ ನರಸಿಂಹ! ಇದ್ದ ಗರ್ಭಗುಡಿ ತುಂಬಾ ಹಬ್ಬಿ ನಿಂತ ಜಲಪ್ರಿಯ ಬಡವಿಲಿಂಗ! ಒರಿಸ್ಸಾದ ಗಜಪತಿಯ ಗರ್ವ ಭಂಗಕ್ಕೆ ಸಾಕ್ಷಿಯಾದ ಶ್ರೀ ಕೃಷ್ಣ ಮಂದಿರ! ಇಂದಿಗೂ ಅಲ್ಲೆಲ್ಲೋ ಉಳಿದು ಹೋಗಿವೆ ಏನೋ ಎಂದು ಕಣ್ಣಾಡಿಸುವಂತೆ ಮಾಡುವ ಚಿನ್ನ, ಬೆಳ್ಳಿ, ಮುತ್ತು, ರತ್ನಗಳ ಸೇರಲ್ಲಿ ಅಳೆದು ಮಾರುತ್ತಿದ್ದ ಚಂದದ ಬಜಾರು! ಮನುಷ್ಯನ ದುರಾಸೆಗೆ ರಕ್ತವನ್ನೂ ಕಂಡಿರುವ ತಿಳಿನೀರಿನ ಅಂದದ ಪುಷ್ಕರಣಿ! ಅಂದಿನ ಹಬ್ಬದ ಅಗಾಧ ಸಂಭ್ರಮಕ್ಕೆ ಸಾಕ್ಷಿಯಾದ ಬೃಹತ್ ಮಹಾನವಮಿ ದಿಬ್ಬ! ಶ್ರೀ ಕೃಷ್ಣ ದೇವರಾಯ ಕುಳಿತು ನಡೆಸುತ್ತಿದ್ದ ರಾಜಸಭೆ! ಕಲ್ಲು ನಾಡಿನ ಬೇಸಿಗೆ ತಂಪಾಗಿಸುವ ಅದ್ಭುತ ತಂತ್ರಜ್ಞಾನದ ಕಮಲ ಮಹಲ್! ಗಜಪಡೆಗೆಂದು ರೂಪಿಸಿದ ವಿಶಾಲ ಗಜಶಾಲೆ! ಅಪರೂಪದ ಸಾಮ್ರಾಜ್ಯಕ್ಕೆ ಅಭೇದ್ಯ ಕಾವಲು ಗೋಪುರ! ಶ್ರೀಮಂತಿಕೆಯ ತೋರುವ ಟಂಕಸಾಲೆ! ದಾಸರ ಗಾನ ವೈಭವ ನೆನಪಿಸುವ ಪುರಂದರ ಮಂಟಪ! ಅರ್ಧ ಚಂದ್ರಾಕಾರವಾಗಿ ಸುತ್ತಿ ತಣಿಯುವ-ತಣಿಸುವ ತುಂಗಭದ್ರೆ! ದೇವರಿಲ್ಲದಿದ್ದರೂ ಆ ಕೊರಗಿಲ್ಲದಂತೆ ಮಾಡುವ ಮಹೋನ್ನತ ವಾಸ್ತುಶಿಲ್ಪ ಕೃತಿ ವಿಜಯ-ವಿ ಮಂದಿರ! ದಾಟಿ ಬಂದರೆ ಕಲ್ಲು ಕಲ್ಲಿನಲೂ ಸಪ್ತ ಸ್ವರ! ಆ ಸ್ವರದ ಮೋಡಿಗೆ ಎಲ್ಲಿಂದಲೋ ನಡೆದು ಬಂದ ಕಲ್ಲಿನ ರಥ!
ಹೀಗೆ ಪ್ರತಿಯೊಂದೂ ಅಂದಿನಿಂದ ಇಂದಿನವರೆಗೂ ನಡೆದ ಇತಿಹಾಸವನ್ನು ಸವಿಸ್ತಾರವಾಗಿ ಹೇಳುವ ಜೀವಂತ ಸಾಕ್ಷಿಗಳಾಗಿ ಉಳಿದುಕೊಂಡಿವೆ; ಕೇಳಲು ಕಿವಿಯಿರಬೇಕು ಅಷ್ಟೇ! ಯಾವುದೋ ಹೆಸರಿಲ್ಲದ ಒಂದು ಬಂಡೆಯ ಮೇಲೆ ನಿಂತು ಕಣ್ಮುಚ್ಚಿ ೫೦೦ ವರ್ಷಗಳಷ್ಟು ಹಿಂದೆ ಹೋದರೆ ನೀವು ಇಂದಿನ ಹಾಳು ಹಂಪೆಯಲ್ಲದೆ ಅಂದಿನ ಭವ್ಯ ವಿಜಯನಗರ ಸಾಮ್ರಾಜ್ಯವನ್ನೇ ನೋಡಬಹುದು; ಅದಕ್ಕೆ ಕೇವಲ ಮನಸ್ಸಿರಬೇಕಷ್ಟೆ! ೨೫೦ ವರ್ಷಗಳಲ್ಲಿ ಕಟ್ಟಿದ ಈ ಭವ್ಯ-ಮಹೋನ್ನತ ಸಾಮ್ರಾಜ್ಯವನ್ನು ಕೇವಲ ಆರು ತಿಂಗಳಲ್ಲಿ ಹಾಳು ಮಾಡಲಾಯಿತಂತೆ! ಎರಡೂ ಮನುಷ್ಯ ಮನಸಿನ ಭಾವನೆಗಳೇ! ಸೃಷ್ಟಿ-ಸರ್ವನಾಶ!! ಎರಡೂ ಮಾಡಿದ್ದೂ ಮನುಷ್ಯನೇ. ಒಂದು ಜೀವನೋತ್ಸಾಹ. ಇನ್ನೊಂದು ಮರಣೋತ್ಸಾಹ !!