ಜಗತ್ತು ಕಂಡ ನಾಲ್ಕು ಮಹಾ ಸಾಮ್ರಾಜ್ಯಗಳಲಿ ಒಂದಾದ ವಿಜಯನಗರ ಸಾಮ್ರಾಜ್ಯದ ಪಳಿಯುಳಿಕೆ ನೋಡುವ ಸೌಭಾಗ್ಯ! ಭರತ ವರ್ಷದಲಿ ಕಂಡು ಕೇಳರಿಯದ ಶ್ರೀಮಂತಿಕೆಯಿಂದ ಆ ಸ್ವರ್ಗವೇ ಭೂಮಿಗೆ ಇಳಿದಂತೆ ಬದುಕಿದ ಜನರ ಜೀವನಗಾಥೆ ಹೇಳುವ ಅದ್ಭುತ ಸ್ಥಳವೇ - ಹಂಪೆ. ಭಾವುಕನೊಬ್ಬ ತನ್ನದೇ ಮುರಿದ ಮನೆಯಲಿ ನಡೆದ ನವಿರು ನೋವಿನ ಅನುಭವ ನೀಡುವ ನಮ್ಮ ಹೆಮ್ಮೆಯ, ನೋವಿನ, ವಿಶಾಧದ - ಹಂಪೆ.
ಭಾರತೀಯರ ದೈವ ಕಲ್ಪನೆಯ ಸಾಕಾರದಂತಿರುವ ಅಂದಿನಿಂದಲೂ ಮನುಷ್ಯನ ಪ್ರೀತಿ, ಔದಾರ್ಯ, ಕರುಣೆ, ದಯೆ, ನಿಷ್ಠೆ, ಪ್ರಾಮಾಣಿಕತೆಯ ಜೊತೆಗೆ ಕ್ರೌರ್ಯ, ಮತಾಂಧತೆ, ಅಧಿಕಾರ ದಾಹ, ಮನಸಿನ ವಿಕೃತತೆ ಹೀಗೆ ಎಲ್ಲವನ್ನು ನೋಡಿಯೂ ನಗುತಲಿರುವ ವಿರುಪಾಕ್ಷ! ಮನುಷ್ಯನ ಸ್ವಾರ್ಥದ ಪ್ರತಿಬಿಂಬದಂತೆ, ತನ್ನ ಅಗಾಧ ದೇಹವನ್ನು ಹೊತ್ತು ನಾಯಿಯಂತೆ ಅಲೆಯುವ ಆನೆ! ಹೊಟ್ಟೆ ಮಾತ್ರ ಕೊಚ್ಚಿ ಹೋಗಿ ಉಳಿದಿದ್ದೆ ಸಾಕು ಎಂಬಂತೆ ನಿಟ್ಟುಸಿರಾದ ಕಡಲೆಕಾಳು ಗಣಪ! ಹಿಂದೆ ನೋಡಿದರೆ ಪಾರ್ವತಿಯಂತೆ, ಮುಂದೆ ನೋಡಿದರೆ ಮುಗ್ದ ಮಗುವಿನಂತೆ ಬಯಲಲ್ಲೇ ಹಠ ಹಿಡಿದು ನಿಂತ ಸಾಸಿವೆಕಾಳು ಗಣಪ! ಉಗ್ರನಾದರೂ ಭಗ್ನವಾಗಿ ಲಕ್ಷ್ಮಿ ಇಲ್ಲದೆ ವಿರಹವನು ಕಣ್ಣಲ್ಲೇ ವ್ಯಕ್ತಪಡಿಸುವ ನರಸಿಂಹ! ಇದ್ದ ಗರ್ಭಗುಡಿ ತುಂಬಾ ಹಬ್ಬಿ ನಿಂತ ಜಲಪ್ರಿಯ ಬಡವಿಲಿಂಗ! ಒರಿಸ್ಸಾದ ಗಜಪತಿಯ ಗರ್ವ ಭಂಗಕ್ಕೆ ಸಾಕ್ಷಿಯಾದ ಶ್ರೀ ಕೃಷ್ಣ ಮಂದಿರ! ಇಂದಿಗೂ ಅಲ್ಲೆಲ್ಲೋ ಉಳಿದು ಹೋಗಿವೆ ಏನೋ ಎಂದು ಕಣ್ಣಾಡಿಸುವಂತೆ ಮಾಡುವ ಚಿನ್ನ, ಬೆಳ್ಳಿ, ಮುತ್ತು, ರತ್ನಗಳ ಸೇರಲ್ಲಿ ಅಳೆದು ಮಾರುತ್ತಿದ್ದ ಚಂದದ ಬಜಾರು! ಮನುಷ್ಯನ ದುರಾಸೆಗೆ ರಕ್ತವನ್ನೂ ಕಂಡಿರುವ ತಿಳಿನೀರಿನ ಅಂದದ ಪುಷ್ಕರಣಿ! ಅಂದಿನ ಹಬ್ಬದ ಅಗಾಧ ಸಂಭ್ರಮಕ್ಕೆ ಸಾಕ್ಷಿಯಾದ ಬೃಹತ್ ಮಹಾನವಮಿ ದಿಬ್ಬ! ಶ್ರೀ ಕೃಷ್ಣ ದೇವರಾಯ ಕುಳಿತು ನಡೆಸುತ್ತಿದ್ದ ರಾಜಸಭೆ! ಕಲ್ಲು ನಾಡಿನ ಬೇಸಿಗೆ ತಂಪಾಗಿಸುವ ಅದ್ಭುತ ತಂತ್ರಜ್ಞಾನದ ಕಮಲ ಮಹಲ್! ಗಜಪಡೆಗೆಂದು ರೂಪಿಸಿದ ವಿಶಾಲ ಗಜಶಾಲೆ! ಅಪರೂಪದ ಸಾಮ್ರಾಜ್ಯಕ್ಕೆ ಅಭೇದ್ಯ ಕಾವಲು ಗೋಪುರ! ಶ್ರೀಮಂತಿಕೆಯ ತೋರುವ ಟಂಕಸಾಲೆ! ದಾಸರ ಗಾನ ವೈಭವ ನೆನಪಿಸುವ ಪುರಂದರ ಮಂಟಪ! ಅರ್ಧ ಚಂದ್ರಾಕಾರವಾಗಿ ಸುತ್ತಿ ತಣಿಯುವ-ತಣಿಸುವ ತುಂಗಭದ್ರೆ! ದೇವರಿಲ್ಲದಿದ್ದರೂ ಆ ಕೊರಗಿಲ್ಲದಂತೆ ಮಾಡುವ ಮಹೋನ್ನತ ವಾಸ್ತುಶಿಲ್ಪ ಕೃತಿ ವಿಜಯ-ವಿಠಲ ಮಂದಿರ! ದಾಟಿ ಬಂದರೆ ಕಲ್ಲು ಕಲ್ಲಿನಲೂ ಸಪ್ತ ಸ್ವರ! ಆ ಸ್ವರದ ಮೋಡಿಗೆ ಎಲ್ಲಿಂದಲೋ ನಡೆದು ಬಂದ ಕಲ್ಲಿನ ರಥ!
ಹೀಗೆ ಪ್ರತಿಯೊಂದೂ ಅಂದಿನಿಂದ ಇಂದಿನವರೆಗೂ ನಡೆದ ಇತಿಹಾಸವನ್ನು ಸವಿಸ್ತಾರವಾಗಿ ಹೇಳುವ ಜೀವಂತ ಸಾಕ್ಷಿಗಳಾಗಿ ಉಳಿದುಕೊಂಡಿವೆ; ಕೇಳಲು ಕಿವಿಯಿರಬೇಕು ಅಷ್ಟೇ! ಯಾವುದೋ ಹೆಸರಿಲ್ಲದ ಒಂದು ಬಂಡೆಯ ಮೇಲೆ ನಿಂತು ಕಣ್ಮುಚ್ಚಿ ೫೦೦ ವರ್ಷಗಳಷ್ಟು ಹಿಂದೆ ಹೋದರೆ ನೀವು ಇಂದಿನ ಹಾಳು ಹಂಪೆಯಲ್ಲದೆ ಅಂದಿನ ಭವ್ಯ ವಿಜಯನಗರ ಸಾಮ್ರಾಜ್ಯವನ್ನೇ ನೋಡಬಹುದು; ಅದಕ್ಕೆ ಕೇವಲ ಮನಸ್ಸಿರಬೇಕಷ್ಟೆ! ೨೫೦ ವರ್ಷಗಳಲ್ಲಿ ಕಟ್ಟಿದ ಈ ಭವ್ಯ-ಮಹೋನ್ನತ ಸಾಮ್ರಾಜ್ಯವನ್ನು ಕೇವಲ ಆರು ತಿಂಗಳಲ್ಲಿ ಹಾಳು ಮಾಡಲಾಯಿತಂತೆ! ಎರಡೂ ಮನುಷ್ಯ ಮನಸಿನ ಭಾವನೆಗಳೇ! ಸೃಷ್ಟಿ-ಸರ್ವನಾಶ!! ಎರಡೂ ಮಾಡಿದ್ದೂ ಮನುಷ್ಯನೇ. ಒಂದು ಜೀವನೋತ್ಸಾಹ. ಇನ್ನೊಂದು ಮರಣೋತ್ಸಾಹ !!
Nima ee hampi soundraya banane oodi namagu alige hoguva manasagide, Adarinda navu aati shigradale alliga beti nidalideve, nima ee varnanega tumbu hrudayada danyavadagalu
ಪ್ರತ್ಯುತ್ತರಅಳಿಸಿ