ಭಾನುವಾರ, ಮೇ 09, 2010

Happy Mother's Day...


ಕೇವಲ ರಕ್ತ, ಮಾಂಸ,
ಮಜ್ಜೆಯಿಂದ ಕೂಡಿದ
ಅವಿವಿವೇಕಿಗೆ,
ಪ್ರೀತಿ, ಬಂಧ, ಮನಸು, ಬಿಸುಪು,
ನೆನಪು, ಕನಸು, ವಾತ್ಸಲ್ಯ, ಖುಷಿ,
ಸಮಾಧಾನ, ಹಠ, ಛಲ, ಸಾಂಗತ್ಯ,
ಧೈರ್ಯ, ಪ್ರಾಮಾಣಿಕತೆ, ಬದುಕು
ಎಲ್ಲವನ್ನೂ ಕೊಟ್ಟು ಬಿರು ಬೇಸಿಗೆಯಂತಹ
ಬದುಕಿನಲಿ ಕೇವಲ ನಿನ್ನ ಪ್ರೀತಿಯ
ತುಂತುರುವಿನಲಿ
ಕೈ ಹಿಡಿದು ನಡೆಸುತ್ತಿರುವ ಅಮ್ಮಾ...
ನಿನದು ಅಕ್ಷರಕೆ ನಿಲುಕದ ಬಂಧ.
I Love You.

Happy Birthday...


ಡಿಯರ್ ಸೋನು,

ನೀನು ಹೊದಿಕೆ ಸರಿಸಿ ಕಿಟಕಿಯೆಡೆಗೆ ಕಣ್ಣು ಬಿಡುವ ಹೊತ್ತಿಗೆ, ಈ ಪತ್ರದ ಬಿಸುಪು ನಿನ್ನ ಮನವನ್ನು ನವಿಲುಗರಿಯಂತೆ ತಾಕಲಿ. ನಿನಗೊಂದು ಅದ್ಭುತವಾದ ಸುಪ್ರಭಾತ!!!

ಕೊಂಚ ಕಿಟಕಿಯೆಡೆಗೆ ಬರ್ತಿಯಾ? ಕಣ್ಣು ಪಟ ಪಟಿಸಬೇಡ. ಹಾರುವ ಮುಂಗುರುಳಿಗೆ ಸುಮ್ಮನಿರಲು ಹೇಳು. ಕಣ್ಣಲ್ಲಿ ಕೇವಲ ಪ್ರೀತಿ ಇರಲಿ. ಇವತ್ತಿನ ಸೂರ್ಯ ಕೇವಲ ನಿನಗೊಂದು ಬರ್ತ್ ಡೇ ವಿಶ್ ಮಾಡಲೆಂದೇ ನನಗಾಗಿ ಉದಯಿಸುತ್ತಾನೆ!! ಮುಂಜಾನೆಯ ಮೌನ ಕೆಡಿಸುವ ಹಕ್ಕು ಕೇವಲ ಒಬ್ಬ ಸೂರ್ಯನಿಗೆ ಮಾತ್ರ ಇದೆ. ಸ್ವಲ್ಪ ಪೂರ್ವದ ಕಡೆಗೆ ನೋಡು. ಆಕಾಶದಲ್ಲೊಬ್ಬ ಆಗಂತುಕ ಸೂರ್ಯ!!! ನೀನು ನೋಡುತ್ತಾ ನಿಂತ ಸೂರ್ಯೋದಯವನ್ನೇ ನೋಡುತ್ತಾ ಕುಳಿತಿರುತ್ತೇನೆ. ಒಂದು ಕದಲಿಕೆ ಇಲ್ಲ. ಒಂದು ನಿಟ್ಟುಸಿರಿಲ್ಲ. ಪ್ರೀತಿಸುವವರಿಗಾಗಿ ಪ್ರಾರ್ಥನೆ ಮಾಡುವ ಫಕೀರ ತನಗಾಗಿ ಏನನ್ನೂ ಕೇಳಿ ಕೊಳ್ಳುವದಿಲ್ಲ!!!

ಸುಡುವ ಬಿಸಿಲು ತಂಪಾದ ಮಳೆಯಾಗಿ ಭುವಿಗೆ ಆವಿರ್ಭವಿಸುವ ದಿವ್ಯ ದಿನಗಳಲ್ಲಿ ಹುಟ್ಟಿದವಳು ನೀನು. ಅಮ್ಮನ ತೆಕ್ಕೆಯಲ್ಲಿ ನೀನು ಕೊಸ ಕೊಸನೆ ಸದ್ದು ಮಾಡಿ ಚಿಕ್ಕದೊಂದು ಚಿತ್ಕಾರವೆತ್ತಿದಾಗ, ನಿನ್ನನ್ನು ಸೃಷ್ಟಿಸಿದ ದೇವರು "ಪೂರ್ತಿ ನೂರು ವರುಷ" ಎಂಬ ಶರಾ ಬರೆದು ಪೆನ್ನು ಮುಚ್ಚಿ ಇಟ್ಟಿರಬೇಕು!!! ಅವನು ಕರುಣಾಮಯಿ. ತಾನು ಸೃಷ್ಟಿಸಿದ ಸೌಂದರ್ಯ ನೂರು ಕಾಲ ಬಾಳಲಿ ಅಂತ ಬಯಸೋ ಸಂಭಾವಿತ.

ಅವನು ಬಯಸಿದಂತೆ ನೂರು ಕಾಲವೂ ಸುಖ, ಸಮೃದ್ದಿ, ನೆಮ್ಮದಿ, ನಗೆ ಬೆಳದಿಂಗಳಿನಂತೆ ನಿನ್ನ ಬಾಳಲ್ಲಿ ಹರಡಲಿ. ಕೊನೆಗೆ ಎಲ್ಲ ಜಾತ್ರೆ ಮುಗಿದು ದಿಂಬಿಗೆ ಕೆನ್ನೆಯೊತ್ತಿ ನಿದ್ದೆಗೊಂದು ಆಲಿಂಗನ ಅರ್ಪಿಸುವಾಗ ಗೆಳತೀ, ಸುಮ್ಮನೆ ನನ್ನನ್ನೊಮ್ಮೆ ನೆನಪಿಸಿಕೋ ಸಾಕು. ದೂರದಿಂದಲೇ ಉಳಿದ ನನ್ನ ಆಯುಷ್ಯವನ್ನೆಲ್ಲ ನಿನಗೆ ಸುರಿದು ಸುಮ್ಮನಾಗಿ ಬಿಡುತ್ತೇನೆ.

Happy Birthday!!!