ಸೋಮವಾರ, ಡಿಸೆಂಬರ್ 31, 2012

ವರ್ಷದ ಕೊನೆಯ ದಿನ !

ವರ್ಷದ ಕೊನೆಯ ದಿನ !
ಬೃಹತ್ ಬದುಕಿನಲಿ
ಜಾರಿಹೋದ ಇನ್ನೊಂದು ಸಂವತ್ಸರ
ಹಳೆಯ ನೆನಪು, ಹೊಸ ಕನಸು
ಮೈಗೂಡಿ ಮುನ್ನುಗ್ಗುವ
ಶುದ್ದ ಸಂಕ್ರಮಣ
ಹಳೆಯ ನೋವಿಗೆ ಮಂಜುಗಣ್ಣಿನ
ವಿದಾಯ
ಹೊಸ ಹರುಷಕೆ ಅದೇ ಕಣ್ಣಲ್ಲಿ
ನಿಚ್ಚಳ ಆದಾಯ
ಪ್ರಳಯವೂ ಘಟಿಸದ ಕ್ರುದ್ದ
ಜಗತ್ತಿನಲಿ
ನಾವು ಮಾತ್ರ ಅನುಕ್ಷಣವು
ಮುಳುಗೇಳುವ ದ್ವೀಪಗಳು
ಆ ಎಲ್ಲ ದ್ವೀಪಗಳು ಹತ್ತಿರ ಸರಿದು
ಒಂದೇ ಖಂಡವಾಗುವ
ಖುಷಿಯಲಿ, ಆಸೆಯಲಿ, ನಂಬಿಕೆಯಲಿ
೨೦೧೩ ನ್ನು ಸ್ವಾಗತಿಸೋಣ !!!
ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಸೋಮವಾರ, ಸೆಪ್ಟೆಂಬರ್ 10, 2012

ಮತ್ತೆ ಮಳೆ!!!

ಸೋನು,
ಇಲ್ಲಿ ತುಂತುರು ಮಳೆ; ಮನದ ಮೂಲೆಯಲ್ಲಿ ಹೆಪ್ಪುಗಟ್ಟಿದ ವಿಷಾಧ. ಕರೆಂಟಿಲ್ಲದ ಈ ನಡುರಾತ್ರಿಯಲಿ ಕೇವಲ ಒಂದು ಪುಟ್ಟ ದೀಪದ ಬೆಳಕಿನಲಿ ಈ ಪತ್ರ ಬರೆಯುತ್ತಿದ್ದೇನೆ.ದೀಪ ಉರಿಯುತಿದೆ ಒಂಟಿಯಾಗಿ;ನನ್ನಂತೆ. 
ಬಿಸಿಲ ಧಗೆಯ ಕಳೆಯಲು ಸುರಿಯುವ ಈ ಮಳೆ ನನ್ನ ಕಣ್ಣಿಗೆ ಅಮೃತದ ಹನಿಗಳಂತೆ ಗೋಚರಿಸುತ್ತಿವೆ. ನಾವಿಬ್ಬರು ಜೊತೆಯಾಗಿ ಇಂತದ್ದೆ ಮಳೆಯಲಿ 
ನಡೆದು ಹೋದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಕುಳಿತಿದ್ದೇನೆ. ನಿನ್ನ ಹೆಜ್ಜೆಯ ಗುರುತುಗಳೂ ಇಲ್ಲದ ದಾರಿಯಲಿ;ತಬ್ಬಲಿಯಾಗಿ.
ಇಲ್ಲಿಂದ ಎಷ್ಟೋ ಸಾವಿರ ಸಾವಿರ ಕಿಲೋಮೀಟರುಗಳ ದೂರದಲ್ಲಿ ನೀನು ಬಿಡುವ ಪ್ರತಿ ನಿಟ್ಟುಸಿರು ನನ್ನ ಮನದಲ್ಲೊಂದು ಆತಂಕದ ಅಲೆ  ಎಬ್ಬಿಸಿ ಸುಮ್ಮನಾಗುತ್ತದೆ; ನಿನ್ನಂತೆ. ನೀನಿದ್ದ ದಿನಗಳಲಿ ಇಂತದ್ದೆ ಮಳೆಯಲಿ ನೆನೆದು ಬಂದು ಬೆಚ್ಚಗೆ ತಬ್ಬಿಕೊಳ್ಳಬಹುದಿತ್ತು, ಜೊತೆಯಾಗಿ ಒಂದೇ ಕೊಡೆಯ ಕೆಳಗೆ ನೀರೋದೆಯುತ್ತಾ ನಡೆಯಬಹುದಿತ್ತು, ಇದೆ ಮಳೆ, ಮಳೆಯ ಸೌಂದರ್ಯದ ಬಗ್ಗೆ ಗಂಟೆಗಟ್ಟಲೆ ಮಾತಾಡಬಹುದಿತ್ತು. ಬರೀ ನೀನು ಮಾತ್ರ ಎದ್ದು ಹೋಗದೇ, ಜೊತೆಗೆ ನನ್ನ ಮಾತುಗಳನ್ನೂ ಹೊತ್ತೊಯ್ದೆ ಅನಿಸುತ್ತೆ;ನಾನೀಗ ಮೌನ ವೀಣೆ!
"ಮುಂಗಾರು ಮಳೆಯೇ
ಏನು ನಿನ್ನ ಹನಿಗಳ ಲೀಲೆ"
ಇಂತಹ ಮುಂಗಾರು ಮಳೆಯಲ್ಲೇ ಅಲ್ಲವೇನೆ ನಮ್ಮ ಪ್ರೀತಿ ಫಲಿಸಿದ್ದು. ನವರಂಗ ಥಿಯೇಟರ್ ಮುಂದೆ ನಿಂತು ಬೈ ಟೂ ಕಾಫಿ ಕುಡಿದಿದ್ದು. ರಣ ಖಾರದ ಟಿಕ್ಕಿ ಪುರಿ ತಿಂದು ಬಾಯೋರೆಸಿಕೊಂಡಿದ್ದು. ಎಷ್ಟು ತಪ್ಪಿಸಿಕೊಂಡರೂ ಬಿಡದೆ ಸಿಡಿಯುವ ಇರಚಲಿಗೆ ಈಡಾದದ್ದು. ಕೇವಲ ಇಪ್ಪಿಪ್ಪತ್ತು ವರ್ಷದ ಹುಡುಗ-ಹುಡುಗಿ ಸೇರಿ ನೂರಿಪ್ಪತ್ತು ವರ್ಷದ ಕನಸು ಕಂಡಿದ್ದು. ನನ್ನ ನೋವಿಗೆ ನಿನ್ನ ಕಣ್ಣು ಜಲಪಾತ; ನಿನ್ನ ನಗುವಿಗೆ ನಾನು ಮಳೆ ಕಂಡ ಮಯೂರ!!
"ಒಲವ ಚಂದಮಾಮ
ಚುಕ್ಕಿ ಇಟ್ಟ ಮನದ ರಂಗೋಲಿ ನೀನು"
ಎಷ್ಟು ಚೆನ್ನಾಗಿದ್ದ ದಿನಗಳವು? ಇಂತದ್ದೆ  ಒಂದು ಮಳೆಯ ರಾತ್ರಿ ತಬ್ಬಿ ಮಲಗಿದವನನ್ನು ಬಿಟ್ಟೆದ್ದು ಹೋದಯಲ್ಲ; ಅವತ್ತು ಬಿದ್ದ ಬರಸಿದಲಿನ ಹೊಡೆತಕ್ಕೆ ಇನ್ನೂ ಸುಧಾರಿಸಿಕೊಳ್ಳಲಾಗುತ್ತಿಲ್ಲ. ನಿಂತೇ ಇದ್ದೀನಿ ಇನ್ನು ಅದೇ ಬಿರು ಮಳೆಯ ಕೆಳಗೆ; ಕುಸಿದು ಹೋಗುವಂತಾದರೂ!!!
ನೀನು ಮರೆಯಲೇ ಬೇಕಾದವನು. 

ಗುರುವಾರ, ಫೆಬ್ರವರಿ 16, 2012

ದಟ್ಸ್ ಕನ್ನಡದಲ್ಲಿ ಬಹುಮಾನ ಸಿಕ್ಕಿದ್ದು...

 ಹಾಯ್,
ಹೇಳಿಕೊಳ್ಳೋದಕ್ಕೆ ತುಂಬಾ ಖುಷಿಯಾಗ್ತಿದೆ. ದಟ್ಸ್ ಕನ್ನಡದಲ್ಲಿ valentines day ಪ್ರಯುಕ್ತ ನಡೆದ ಪ್ರೇಮ ಪತ್ರ ಸ್ಪರ್ಧೆಯಲ್ಲಿ ನನ್ನ ಪತ್ರಕ್ಕೆ ಬಹುಮಾನ ಬಂದಿದೆ.
ಬಹುಮಾನದ ಪೋಸ್ಟ್ : http://kannada.oneindia.in/column/sham/2012/0215-valentines-day-contest-winners-aid0037.ಹ್ತ್ಮ್ಲ್

ಪ್ರೇಮ ಪತ್ರ: http://kannada.boldsky.com/relationship/2012/02/0204-love-letter-vady-aid0202.html