ಸೋಮವಾರ, ಡಿಸೆಂಬರ್ 12, 2011

ವಿದಾಯ...


ನಂಬಿಕೆಗೆ ದ್ರೋಹ ಬಗೆಯುವ
ಸುಂದರ ಪದ

ಸ್ಥಬ್ದ ಕೊಳಲು!!!

ಸೋನು,
ಸುಂದರ ಮಳೆಗಾಲ ಮುಗಿದು, ಮೈ ನಡುಗಿಸುವ ಚಳಿ ಎದುರಾದರೂನ ಯಾಕೋ ಮನದಲಿ ತುಂಬಿ ನಿಂತ ವಿಷಾಧವೆ ಮರೆಯಾಗ್ತಿಲ್ಲ. ಈ ಬದುಕಿನಲಿ ಕಷ್ಟವಿರಬೇಕು ಇಲ್ಲಾ ಸುಖವಿರಬೇಕು. ಎರಡೂ ಇಲ್ಲದ ನಿಂತ ನೀರಿನಂತಾಗಿದೆ ಬದುಕು. ಕಷ್ಟ-ಮೈಮರೆಯಲು ಅವಕಾಶ ಕೊಡದ ಅತ್ತೆ. ಸುಖ-ಜಗತ್ತೇ ಮರೆತು ಹೋಗುವ ಅಮ್ಮನ ಮಡಿಲು. ಎರಡೂ ಇಲ್ಲದೆ ಯಾವ ಚಲನೆಯೂ ಇಲ್ಲದೆ ಸಮುದ್ರದ ದಡದಲ್ಲಿ ಎದ್ದು ನಿಂತ ಬಂಡೆಯಂತಾಗಿದ್ದೇನೆ!
ಹೊಸ ಕಷ್ಟಗಲಿಲ್ಲದೆ, ಸವಾಳುಗಲಿಲ್ಲದೆ, ಆ ಸವಾಲುಗಳ ಗೆದ್ದ ಖುಷಿ ಇಲ್ಲದೆ ಬಲು ಬೋರಾಗಿದೆ ಕಣೆ. ಏಳಬೇಕು, ಎದ್ದು ನಿಂತು ಚುಮು ಚುಮು ಚಳಿಯಲಿ ಅರಳುವ ಸೂರ್ಯೋದಯ ನೋಡಬೇಕು. ಬದುಕು ಮತ್ತೆ ಮೊದಲಿನಂತಾಗಬೇಕು. ಹೊಸ ಆಸೆ, ಕನಸು, ಕಸುವು, ಹುಮ್ಮಸ್ಸು ಸಕಲವೂ ಮೈದೆಳೆದು ಧೂಳಿನಿಂದ ಎದ್ದು ಬರಬೇಕು.
ಬಹು ದೂರದಲ್ಲಿದ್ದರು ತನ್ನ ಇರುವಿಕೆಯ ತೋರುವ ಧಗಧಗಿಸುವ ಸೂರ್ಯನಂತೆ ನಿನ್ನ ನೆನಪು ಕೂಡಾ ಮನದಲ್ಲಿ ನೋವಿನ ಹೂ ಅರಳಿಸಿ ನಗುತಲಿದೆ: ನಿನ್ನಂತೆ! ಅದೇ ಹೂವಿನ ಸುಗಂಧದೊಂದಿಗೆ ನನ್ನ ನಿತ್ಯದ ಬೆಳಗು ಮೂಡುತಿದೆ.
ಎಲ್ಲೇ ಇರು  ಹೇಗೆ ಇರು
ಎಂದೆಂದೂ ಮನದಲಿ
ನೀ ತುಂಬಿರು...
"ಇಲ್ಲವುಗಳ ಮಧ್ಯೆಯೇ ಎಲ್ಲವೂ ಹುಟ್ಟುವದು" ಎಂಬ ಕವಿವಾಣಿಯಂತೆ, ನೀನು ಇಲ್ಲದ ಜೀವನವನ್ನು ಸ್ಥಿರವಾಗಿಟ್ಟುಕೊಳ್ಳಲು ಒದ್ದಾಡುತ್ತಲೇ ಇದ್ದೇನೆ. ಅದೇಕೋ ಸಾಧ್ಯವಾಗ್ತಿಲ್ಲ! ಬಿಟ್ಟು ಹೋಗಿ ಇಷ್ಟು ವರ್ಷಗಳಾದರೂ ಯಾಕೆ ನನ್ನ ಮನದ ಮೂಲೆಯಲ್ಲೆಲ್ಲೋ ಕುಳಿತು ಹೀಗೆ ಕಾಡುತಿರುವೆ ಹುಡುಗಿ? ನಾವು ಕಟ್ಟಿದ ಗುಬ್ಬಿಯ ಗೂಡಿನೋಳಗಿಂದ ಮರಿಯೊಂದು ಜಾರಿ ಬಿದ್ದು ಸತ್ತು ಹೋಯಿತಂತೆ! ಬಿದ್ದು ಹೋದದ್ದು ಮರಿಯೋ ಅಥವಾ ಮರಿಯಾಗಬೇಕಿದ್ದ ಮೊಟ್ಟೆಯೋ? ಗೊತ್ತಿಲ್ಲ!
ನಾನಂತೂ ಮುರಿದು ಬಿದ್ದ ಕೊಳಲಿನಂತಾಗಿದ್ದೇನೆ!!! ಇನ್ನ್ಯಾವ ಸ್ವರವೂ ಮೂಡದ  ಸ್ಥಬ್ದ ಕೊಳಲು...!!!

ಮಂಗಳವಾರ, ಮೇ 17, 2011

ಏನು ಮಾಡಲಿ ಗೆಳತೀ, ಪೊಸೆಸಿವ್ ಮನಸ್ಸು ಲೂಸ್ ಮಾದ!!!



ವಿ ಸೂ : ಇದನ್ನ ನಾನೇ ಬರಿಬೇಕಿತ್ತು ಆದರೆ ನಾನು ಹೇಳಬೇಕು ಅಂದುಕೊಂಡಿರೋ ಎಲ್ಲವು ಇಲ್ಲಿವೆ ಅದಕ್ಕೆ ನನ್ ಗುರು ರವಿ ಬೆಳಗೆರೆ ಬರದಿರೋ ಲವ್ ಲವಿಕೆ ಯಿಂದ ಕದ್ದು ಹಾಕ್ತಾ ಇದ್ದೀನಿ. ಗುರುಗಳಿಗೆ ಥ್ಯಾಂಕ್ಸ್!!

ನನ್ನ ಒಲವಿನ ಜಾನ್ಸ್,

ಬೆಳಗ್ಗೆಯಿಂದ ನಿನಗೆ ಏನೋ ಹೇಳಬೇಕು ಅಂದುಕೊಂಡದ್ದು ಈಗ ನೆನಪಾಯ್ತು ನೋಡು. ಮತ್ತೇನಿಲ್ಲ, ನಂಗೆ ನೀನು ಅಂದ್ರೆ ಇಷ್ಟ. ನಿನ್ನ ಪುಟ್ಟ ಪಾದ ಇಷ್ಟ. ಅದರ ಕಿರುಬೆರಳು ಮುದ್ದು. ಮೈಯ ಮಚ್ಚೆಗೆಲ್ಲ ಒಂದು ಕಡೆಯಿಂದ, ತಲಾ ಒಂದಕ್ಕೆ ನೂರರನಂತೆ ಮುತ್ತಿಟ್ಟುಕೊಂಡು ಬಂದರೆ ಒಟ್ಟಿನಲ್ಲಿ ಎಷ್ಟು ಸಾವಿರವೋ? ನಿನ್ನ ತುದಿಗೋಪ ನಂಗಿಷ್ಟ. ಕಣ್ಣ ಹೊರಳಿಗೆ ಅಲ್ಲೇ ಬಿದ್ದು ಸಾಯ್ತೇನೆ. ಮೈಯ ಮಾಟಕ್ಕೆ ನಿಂತಲ್ಲೇ ಮಟಾಷ್. ಆಕ್ಸಿಡೆಂಟಾಗಿ ಸಾಯುವುದೇ ಹಣೆಯಲ್ಲಿ ಬರೆದಿದ್ದರೆ, ನಿನ್ನ ಹುಬ್ಬಿ ತಿರುವಿನಲ್ಲಿ ಆಗಲಿ ಅಪಘಾತ. ಕೊರಳ ಇಳಿಜಾರಿನಲ್ಲಿ ಸಂಭವಿಸಲಿ ಆಕ್ಸಿಡೆಂಟ್. ತೋಳ ತಿರುವಿನಲ್ಲಿ ಬ್ರೇಕು ಫೇಲಾಗಲಿ. ಕಿಬ್ಬೊಟ್ಟೆಯ ನುಣಿಪಿನಲ್ಲಿ ಸ್ಕಿಡ್ಡಾಗಿ ಹೋದೆನು. ಐ ಲವ್ ಯೂ ಕಣೆ.

ನಾನೇನು ಮಾಡಲಿ? ನೀನು ಯಾರೊಂದಿಗಾದರೂ ಮಾತನಾಡಿದರೆ ನಂಗೆ ಬೇಜಾರಾಗುತ್ತೆ. ಸೋಶಿಯಾಲಜಿ ಮೇಷ್ಟ್ರು, ಪೈನಲ್ ಇಯರ್‍ ಶಿವು, ಸ್ಪೋರ್ಟ್ಸ್ ಸೆಕ್ರೇಟರಿ ಈರಣ್ಣ ಕಡೆಗೆ ಅಟೆಂಡರ್‍ ಹನುಮಂತಿವಿನೊಂದಿಗೆ ನೀನು ನಗುನಗುತ್ತಾ ಮಾತನಾಡಿದರೂ,. ಬೆರಳ ತುದಿಗೆ ಚೇಳ ಕುಟುಕು. ನಾನದರೂ ಏನು ಮಾಡಲಿ? ಎ ದಿಲ್ ತೋ ಪಾಗಲ್ ಹೈ….

ಹೀಗೆ ಪೊಸೆಸೀವ್ ಆಗಿರೋದು ತಪ್ಪು. ಎಷ್ಠಾದರೂ ನೀನು ನನ್ನವಳು. ನನ್ನ ಪ್ರೀತಿಗೆ, ವಿನಂತಿಗೆ ಸಮ್ಮತಿ ಸಲ್ಲಿಸಿದವಳು. ನನ್ನನ್ನು ತುಂಬಾಪ್ರೀತಿಸುವಳು. ಇಂದಲ್ಲಾ ನಾಳೆ ಮದುವೆಯಾಗಲಿರುವಳು. ನೀನು ನಾಲ್ಕು ಮಂದಿಯೊಂದಿಗೆ ಮಾತನಾಡಿದರೆ ತಪ್ಪೇನಿದೆ? ನಿಂಗೂ ಒಂದು ಸೋಶಿಯಲ್ ಲೈಫ್ ಬೇಡವಾ? ಗೆಳೆಯರು ಬೇಡವಾ? ನೂನು ಮೊದಲಿನಂತೆಯೇ ಇರಬೇಕು. ನನ್ನ ಪ್ರೀತಿ ನಿನಗೆ ಬಂಧನವಾಗಬಾರದು. ಎಸ್, ಹಾಗಂತೆಲ್ಲಾ ಯೋಚಿಸುತ್ತೇನೆ. ತುಂಬಾ ಸ್ಪುಟವಾಗಿ ಯೋಚಿಸಿ, ಇನ್ಮೇಲಿಂದ ಹಾಗೆಲ್ಲಾ ಪೊಸೆಸೀವ್ ಆಗಿ ಆಡಬಾರದು ಎಂತ ನಿರ್ಧರಿಸುತ್ತೇನೆ. ಆದರೆ ಏನು ಮಾಡಲಿ ಜಾನ್ಸ್? ಮನಸ್ಸು ಲೂಸ್ ಮಾದ! ಬೆಳಗ್ಗೆ ನೀನು ಕಾರಿಡಾರಿನಲ್ಲಿ ನಿಂತು ಕನ್ನಡಕ ಮೇಷ್ಟ್ರು ಜೊತೆಯಲ್ಲಿ ನಗ ನಗ್ತಾ ಮಾತಾಡ್ತಾ ನಿಂತಿದ್ದು ನೋಡಿದೆ. ರಾತ್ರಿ ಯೋಚಿಸಿದ್ದಲ್ಲಾ ಮರೆತು ಹೋಗಿ ಅಂಗಾಲಿನ ಸಿಟ್ಟು ನೆತ್ತಿಗೇರಿಕೊಂಡು ಬಂದು, ಐ ಆಮ್ ಸಾರಿ….ಆ ಹೊತ್ತಿನಲ್ಲಿ ನಾನು ಮನುಷ್ಯನಾಗಿರಲಿಲ್ಲ.

ಜಾನ್ಹವಿ, ನಿನ್ನೊಂದಿಗೆ ತುಂಬಾ ಒರಟಾಗಿ ಮಾತನಾಡಿಬಿಟ್ಟೆ. ಹಾಗೆಲ್ಲಾ ಮಾತನಾಡುವುದು ನನ್ನ ಸ್ವಭಾವವೇ ಅಲ್ಲ. ಮನೆಯಲ್ಲೂ ನಾನು ಉಳಿದೆಲ್ಲರಿಗಿಂತ ಸ್ಮೂತ್ ಫೆಲೋ. ಅಪ್ಪನೆದುರು ನಿಂತು ಪಾಕೆಟ್ ಮನಿ ಕೇಳುವುದಕ್ಕೂ ಅಳಕುತ್ತೇನೆ. ಅಣ್ಣ ನನ್ನ ಪಾಲಿಗೆ ಡೆಡ್ಲಿ. ಅತ್ತಿಗೆಯೊಂದಿಗೂ ನನಗೆ ಅಂತ ಸಲಿಗೆಯಿಲ್ಲ. ಏನು ಮಾಡಲಿ ಹೇಳು, ನನಗೆ ಅಕ್ಕ ತಂಗಿಯರಿಲ್ಲ. ಹಠ ಮಾಡಿ ಮುದ್ದು ಮಾಡಿಸಿಕೊಳ್ಳೋಣವೆಂದರೆ ಚಿಕ್ಕಂದಿನಲ್ಲೇ ಅಮ್ಮ ತೀರಿಹೋದಳು. ಐ ಆಮ್ ಸಾರಿ ಜಾನ್ಸ್, ಅಭದ್ರತೆ ಯೆಂಬುದು ಚಿಕ್ಕಂದಿನಿಂದಲೂ ನನ್ನ ಬೆನ್ನತ್ತಿದ ಪೀಡೆ. ನನಗೆ ಸಿಗಬೇಕಾದ ಪ್ರೀತಿ ಎಲ್ಲಿ ಸಿಗದೇ ಹೋಗುತ್ತದೋ, ಎಲ್ಲಿ ಇನ್ನೊಬ್ಬರ ಪಾಲಾಗುತ್ತದೋ ಅಂತ ಅಟಮಟಿಸುತ್ತೇನೆ. ಈ ಕಾರಣಕ್ಕಾಗಿಯೇ ಮಧ್ಯಾಹ್ನ ನಿನ್ನೊಂದಿಗೆ ಒರಟಾಗಿ ಮಾತನಾಡಿದ್ದು.

ಬೇಸರ ಮಾಡಿಕೊಳ್ಳಬೇಡ ಜಾನ್ಸ್, ನನ್ನ ಸೆಡವು, ನನ್ನ ಮುನಿಸು, ಒರಟು ಮಾತು, ಹಠ, ಜಗಳ ಇವೆಲ್ಲಾ ತುಂಬಾ ತಾತ್ಕಾಲಿಕ. “ನೀನು ನನ್ನವನು, ಫಾರೆವರ್‍” ಅಂತ ಎದೆಯ ಮೇಲೆ ಒಂದು ಸಲ ನಿನ್ನ ಪುಟ್ಟ ಕೈಯಿಟ್ಟು ಹೇಳು, ಮತ್ತೆ ನಾನು ಬೇರೆಯದೇ ಮನುಷ್ಯ. ಒಂದೇ ಒಂದು ಮುಟಿಗೆಯಷ್ಟು ಪ್ರೀತಿ ಸಿಕ್ಕರೂ ಚಲಿಸಿಹೋಗುವುವನು ನಾನು. ನನಗೆ ತುಂಬಾ ಅತಿರೇಕವೆನಿಸುವಂತಹ ಡಿಮ್ಯಾಂಡ್ ಗಳಿಲ್ಲ. ನೀನು ನನಗೋಸ್ಕರ ಏನೂ ಮಾಡಬೇಕಾಗಿಲ್ಲ. ಒಂದು ಹಿಡಿ ಪ್ರೀತಿ ಕೊಡು; ನಂಗ್ ನಂಗೇ ಅಂತ ಕೊಡು. ನನ್ನದು ಹುಚ್ಚು ಬಡಬಡಿಕೆ ಅನ್ನಿಸಿದರೂ ಸಹನೆಯಿಂದ ಕೇಳಿಸಿಕೋ. ನನ್ನಲ್ಲೊಂದು ವಿಶ್ವಾಸ ಮೂಡಿಸು. “ಬದುಕಿದರೂ ಬಾಳಿದರೂ, ಸತ್ತರೂ, ಸರ್ವನಾಶವಾದರೂ-ಒಟ್ಟಿಗೆ” ಅಂತ ಆಣೆ ಮಾಡು. ಐ ಪ್ರಾಮಿಸ್, ಇನ್ನು ಮೇಲೆ ಯಾವತ್ತೂ ಪೊಸೆಸೀವ್ ಆಗಿ ಆಡುವುದಿಲ್ಲ. ನಿಜ ಹೇಳಬೇಕೆಂದರೆ, ನಿನ್ನ ಬಗ್ಗೆ ಅನುಮಾನ ನನಗೆ ಖಂಡಿಯ ಇಲ್ಲ. ಇವೆಲ್ಲಾ ಹುಚ್ಚು ಮನಸ್ಸಿನ ಆಟ: ಪ್ಲೀಸ್, ನಂಬು.

ನಾಳೆ ಸಿಗೋಣ.

ನಿನ್ನನ್ನು ಎಂದಿನಂತೆಯೇ ಪ್ರೀತಿಸುತ್ತೇನೆ, ಆರಾಧಿಸುತ್ತೇನೆ. ಹೇಯ್ ಜಾನ್ಸ್, ಈ ಜಗತ್ತಿನಲ್ಲಿ ನನಗೆ ಬೇರೆ ಇದ್ದಾರಾದರೂ ಯಾರು ಹೇಳು? ಜಗಳಕ್ಕೂ ನೀನೇ ಬೇಕು: ನಂಗ್ ನಂಗೇ ಬೇಕು. ಇಡಿ ಇಡಿಯಾಗಿ ಬೇಕು.

-ನಿನ್ನವನು.

ಮಂಗಳವಾರ, ಮೇ 10, 2011

ಏಕಾಂಗಿ ನವಿಲು...

ಯಾರೂ ನೋಡದ ಕಾಡಿನ ಬಯಲಲಿ, ತನ್ನ ಪರಿವಾರವನ್ನೆಲ್ಲ ಮರೆತು, ಮಳೆಯ ಆಗಮನಕ್ಕೆ ಕಾಯುವ ಮಯೂರ. ಅದಕ್ಕೆ ಮಳೆ ಬರುವ ಮುನ್ಸೂಚನೆ ಇತ್ತಾ? ಅಥವಾ ಇದರ ಕರೆಗೆ ಅದು ಧರೆಗಿಳಿಯಿತಾ? ಗೊತ್ತಿಲ್ಲ. ಬಹುದಿನಗಳ ನಂತರ ಪ್ರಿಯತಮನ ಮುಖ ನೋಡಲು ಬಾಗಿಲ ಮರೆಯಲಿ ನಿಂತ ಷೋಡಶಿಯಂತೆ!! ಅದು ಕಾಯುತ್ತಲೇ ಇತ್ತು.
ಮಯೂರನ ಕರೆಗೆ ಓಗೊಟ್ಟು ಸುರಿದ ಮಳೆ! ಅದು ಮಯೂರ ಮಳೆ!! ಬದುಕಿನ ಎಲ್ಲ ಜಡತ್ವ ತೊರೆದು, ಹೊಸ ತಳಿರು-ತೋರಣಗಳಿಂದ ಅಲಂಕರಿಸಿ ಬರಮಾಡಿಕೊಳ್ಳುವ ಹಬ್ಬದಂತೆ. ಮಳೆ ಬರುವ ವರೆಗೂ ಅದು ನಿಂತೇ ಇತ್ತು. ಪ್ರಿಯತಮೆಗೆ ಮಾತು ಕೊಟ್ಟ ಮುಗ್ದ ಹುಡುಗನಂತೆ!!

ಗುರುವಾರ, ಏಪ್ರಿಲ್ 21, 2011

ಜೀ ಕನ್ನಡ ವಾಹಿನಿ ಮುಖ್ಯಸ್ಥರಿಗೊಂದು ಬಹಿರಂಗ ಆಗ್ರಹ ಪತ್ರ



ಮಾನ್ಯರೆ,

ಈ ಪತ್ರವನ್ನು ಅತ್ಯಂತ ನೋವು, ವಿಷಾದ, ಕಳವಳದಿಂದ ನಿಮಗೆ ಬರೆಯುತ್ತಿದ್ದೇವೆ. ಪತ್ರ ಓದಿದ ನಂತರವಾದರೂ ನೀವು ನಮ್ಮ ಭಾವನೆಗಳಿಗೆ ಸ್ಪಂದಿಸುತ್ತೀರೆಂಬ ನಂಬಿಕೆ ಇದೆ. ಲಕ್ಷ-ಕೋಟಿ ಜನರನ್ನು ತಲುಪುವ ಮೀಡಿಯಾಗಳು ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಇದು ಕಾನೂನಿನ ಪರಿಭಾಷೆಗಳಿಗೆ ಮಾತ್ರ ಒಳಪಡುವ ವಿಷಯ ಎಂದು ಯಾರೂ ಭಾವಿಸಬೇಕಾಗಿಲ್ಲ, ಕಾನೂನನ್ನೂ ಮೀರಿದ ನೈತಿಕತೆ, ಮಾನವೀಯತೆಯ ಹೊಣೆಗಾರಿಕೆಯನ್ನೂ ಒಪ್ಪಿ ಅನುಸರಿಸಬೇಕಾಗುತ್ತದೆ. ತಾವು ಇಡೀ ಪತ್ರವನ್ನು ಓದಿ, ಸೂಕ್ತ, ಅತ್ಯಗತ್ಯ, ಸಕಾಲಿಕ ನಿರ್ಧಾರಕ್ಕೆ ಬರುವಿರೆಂಬ ನಂಬುಗೆ ನಮಗಿದೆ.

ನಮ್ಮ ತಕರಾರು, ಸಿಟ್ಟು, ಆತಂಕ ಇರುವುದು ನಿಮ್ಮ ವಾಹಿನಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ೯ ಗಂಟೆಗೆ ಪ್ರಸಾರವಾಗುವ ಬೃಹತ್ ಬ್ರಹ್ಮಾಂಡ ಎಂಬ ಜ್ಯೋತಿಷ್ಯ ಸಂಬಂಧಿ ಕಾರ್ಯಕ್ರಮದ ಕುರಿತು. ಈ ಕಾರ್ಯಕ್ರಮವನ್ನು ನಡೆಸಿಕೊಡುವವರು ಶ್ರೀ ನರೇಂದ್ರ ಬಾಬು ಶರ್ಮ ಎಂಬುವವರು. ಇವರು ನಿಮ್ಮ ಚಾನಲ್‌ನಲ್ಲಿ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಮುನ್ನ ಸುವರ್ಣ ವಾಹಿನಿಯಲ್ಲಿ ಭವ್ಯ ಬ್ರಹ್ಮಾಂಡ ಎಂಬ ಹೆಸರಿನಲ್ಲಿ, ಅದಕ್ಕೂ ಮುನ್ನ ಕಸ್ತೂರಿ ವಾಹಿನಿಯಲ್ಲಿ ಬ್ರಹ್ಮಾಂಡ ಎಂಬ ಹೆಸರಿನಲ್ಲಿ ಇದೇ ಸ್ವರೂಪದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಬಹಳಷ್ಟು ಜನರಿಗೆ ಗೊತ್ತಿರುವ ಪ್ರಕಾರ ತೀರಾ ಇತ್ತೀಚಿನವರೆಗೆ ನರೇಂದ್ರ ಶರ್ಮ ಅವರು ಕನ್ನಡ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿದ್ದವರು.

ನರೇಂದ್ರ ಶರ್ಮ ಅವರು ಕಸ್ತೂರಿ ವಾಹಿನಿ ಹಾಗು ಸುವರ್ಣ ವಾಹಿನಿಗಳಲ್ಲಿ ಬ್ರಹ್ಮಾಂಡ ನಡೆಸುತ್ತಿದ್ದಾಗಲೇ ಅವರು ಬಳಸುವ ಭಾಷೆ, ಹೇಳುವ ಹಸಿಹಸಿ ಸುಳ್ಳುಗಳು ಮಾನವಂತರ, ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯರನ್ನು ವಿನಾಕಾರಣ ನಿಂದಿಸುವುದು-ಅವಹೇಳನ ಮಾಡುವುದು, ಕೆಳಜಾತಿಯ ಜನರನ್ನು ಗುರಿಪಡಿಸಿ ತಿರಸ್ಕಾರದಿಂದ ಮಾತನಾಡಿ ಅಪಮಾನಿಸುವುದು, ಜ್ಯೋತಿಷ್ಯದ ಹೆಸರಿನಲ್ಲಿ ಸುಳ್ಳುಗಳ ಕಂತೆ ಕಟ್ಟಿ ಜನರನ್ನು ಬೆದರಿಸುವುದು ಇವರು ಹಿಂದಿನಿಂದ ಮಾಡಿಕೊಂಡು ಬಂದಿರುವ ಕೆಲಸ. ಅದನ್ನು ಅವರು ನಿಮ್ಮ ಜೀ ವಾಹಿನಿಯಲ್ಲೂ ಮಾಡುತ್ತಿದ್ದಾರೆ ಹಾಗು ಅದು ಈಗ ಅತಿರೇಕಕ್ಕೆ ತಲುಪಿದೆ.

ನಿಮ್ಮ ಜೀ ವಾಹಿನಿಯ ವೇದಿಕೆಯನ್ನು ಬಳಸಿಕೊಂಡು ನರೇಂದ್ರ ಶರ್ಮ ಏನೇನು ಮಾತನಾಡಿದ್ದಾರೆ ಎಂಬುದಕ್ಕೆ ಕೆಲವು ಸ್ಯಾಂಪಲ್‌ಗಳನ್ನು ಇಲ್ಲಿ ಒದಗಿಸುತ್ತಿದ್ದೇವೆ. ದಯವಿಟ್ಟು ಗಮನವಿಟ್ಟು ಓದಬೇಕಾಗಿ ವಿನಂತಿ.

೧. ನಾನು ಜಗನ್ಮಾತೆಯ ಪುತ್ರ. ಆಕೆ ಮೇ.೧೨ರಂದು ಭೂಮಿಗೆ ಬರುತ್ತಿದ್ದಾಳೆ. ಬಂದವಳು ಭೂಮಿಯನ್ನು ನಾಶಪಡಿಸುತ್ತಾಳೆ. ನಾನು ಇದನ್ನು ಘೋಷಿಸಿರುವುದರಿಂದ, ಜಗನ್ಮಾತೆ ನನ್ನ ಮಾತು ಉಳಿಸುವ ದೃಷ್ಟಿಯಿಂದಲಾದರೂ ಪ್ರಳಯ ನಡೆಸುತ್ತಾಳೆ.

೨. ಕರ್ನಾಟಕದ ಯಾವ ದೇವಸ್ಥಾನಗಳಲ್ಲೂ ದೇವರಿಲ್ಲ. ಕರ್ನಾಟಕದಲ್ಲಿ ಸಾಧು ಸಂತರು ಮಾತ್ರ ಇದ್ದಾರೆ. ದೇವರು ಇರುವುದೆಲ್ಲ ತಮಿಳುನಾಡಿನಲ್ಲಿ. ಅಲ್ಲಿನ ಧರ್ಮಕ್ಷೇತ್ರಗಳಲ್ಲಿ. ಹಾಗಾಗಿ ನಾನು ತಮಿಳುನಾಡಿನ ದೇವಸ್ಥಾನಗಳಿಗೆ ಹೋಗುವಂತೆ ಭಕ್ತರಿಗೆ ಹೇಳುತ್ತೇನೆ.

೩. ಹೆಣ್ಣು ಮಕ್ಕಳು ನೈಟಿ ತೊಡಬಾರದು. ಸಲ್ವಾರ್ ಕಮೀಜ್ ಹಾಕಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ. ರಾತ್ರಿ ಗಂಡನ ಜತೆ ಮಲಗಿ ಬೆಳಿಗ್ಗೆ ಎದ್ದ ಕೂಡಲೇ ಅಡುಗೆ ಮನೆಗೆ ಹೋಗಬಾರದು. ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದರೆ ಲಕ್ಷಣ. ಅಗಲವಾದ ಬಿಂದಿ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಬೂಬಮ್ಮಗಳ ಹಾಗೆ ಕಾಣುತ್ತೀರಿ. (ಬೂಬಮ್ಮ ಎಂದರೆ ಮುಸ್ಲಿಂ ಹೆಂಗಸು)

೪. ಬೆಳಿಗ್ಗೆ ಎದ್ದ ಕೂಡಲೇ ಪೊರಕೆಯನ್ನು, ಹಜಾಮರ ಮುಖವನ್ನು ನೋಡಬಾರದು. ನೋಡಿದರೆ ಕೆಟ್ಟದಾಗುತ್ತದೆ.

೫. ಇಡೀ ಜಗತ್ತು ಮುಳುಗಿ ಹೋಗುತ್ತದೆ, ಬೆಳಗಾವಿಯ ಒಂದು ಹಳ್ಳಿ ಮಾತ್ರ ಉಳಿದುಕೊಳ್ಳುತ್ತದೆ. ಪಾಪಿಗಳು ಮಾಡಿದ ತಪ್ಪಿಗಾಗಿ ಪಾಪಿಗಳಲ್ಲದವರೂ ನಾಶವಾಗುತ್ತಾರೆ.

೬. ಹಾವು ಎಂದರೆ ದೇವರು. ಜಪಾನ್ ದೇಶದವರು ಹಾವು ತಿನ್ನುತ್ತಾರೆ, ಅದಕ್ಕೆ ಸುನಾಮಿ ಬಂದಿದ್ದು.

ಇವು ಕೆಲವು ಸ್ಯಾಂಪಲ್‌ಗಳು ಮಾತ್ರ. ಈತನ ಇನ್ನಷ್ಟು ಭಯಾನಕ ಉಪದೇಶಗಳ ಕುರಿತು ಈ ಹಿಂದೆ ಇದೇ ಬ್ಲಾಗ್ ನಲ್ಲಿ ಪ್ರಸ್ತಾಪಿಸಿದ್ದೇವೆ. ಒಮ್ಮೆ ಓದಿ ನೋಡಲು ವಿನಂತಿ. ಈ ಬಗೆಯ ದುರ್ಬೋಧನೆಗಳನ್ನು ನೀಚಾತಿನೀಚರಷ್ಟೆ ಸಮರ್ಥಿಸಿಕೊಳ್ಳಬಹುದು. ಹೀಗಾಗಿ ನೀವು ಇವುಗಳನ್ನೆಲ್ಲ ಒಪ್ಪಲಾರಿರಿ ಎಂದು ನಮ್ಮ ನಂಬಿಕೆ. ನರೇಂದ್ರ ಶರ್ಮ ಬಳಸುವ ಭಾಷೆ ಎಷ್ಟು ಕೊಳಕಾಗಿದೆಯೆಂದರೆ ಆತ ಪದೇಪದೇ ಮುಂಡೇವು, ಮುಂಡೆ (ಗಂಡ ಸತ್ತ ಹೆಂಗಸು), ಕಳ್ ನನ್ ಮಕ್ಕಳು, ಗೂಬೆ, ಗುಗ್ಗು, ದರಿದ್ರದವು.. ಇತ್ಯಾದಿ ಪದಗಳನ್ನೇ ಬಳಸುತ್ತಾರೆ. ವೇದೋಪನಿಷತ್ತುಗಳನ್ನು ಓದಿದ ವ್ಯಕ್ತಿ ಇಷ್ಟು ಅಸಭ್ಯವಾದ ಭಾಷೆಯಲ್ಲಿ ಸಾರ್ವಜನಿಕವಾಗಿ ಮಾತನಾಡಲು ಸಾಧ್ಯವೇ?

ಕಪಟ ಜ್ಯೋತಿಷಿಗಳು ಹರಡುವ ಮೂಢನಂಬಿಕೆಗಳ ಕುರಿತು ಸ್ವಾಮಿ ವಿವೇಕಾನಂದರು ಹೀಗೆ ಹೇಳಿದ್ದರು:
ಜ್ಯೋತಿಷ್ಯ ಮುಂತಾದುವನ್ನು ಹೇಳಿ ಉದರಪೋಷಣೆ ಮಾಡಿಕೊಳ್ಳುವವರ ಹತ್ತಿರ ಸಂಬಂಧವನ್ನು ಇಟ್ಟುಕೊಳ್ಳಕೂಡದು ಎನ್ನುವನು ಬುದ್ಧ. ಅವನಿಗೆ ಇದರ ರಹಸ್ಯ ಚೆನ್ನಾಗಿ ಗೊತ್ತಾಗಿರಬೇಕು. ತಾರೆಯೊಂದು ನನ್ನ ಜೀವನದ ಮೇಲೆ ತನ್ನ ಪ್ರಭಾವವನ್ನು ಬೀರಿ ವ್ಯಥೆಯನ್ನು ತಂದರೆ ನನ್ನ ಜೀವನ ಕುರುಡು ಕಾಸಿಗೂ ಯೋಗ್ಯವಲ್ಲ. ಜ್ಯೋತಿಷ್ಯ ಮುಂತಾದ ರಹಸ್ಯಗಳನ್ನೆಲ್ಲಾ ನೆಚ್ಚುವುದು ದೌರ್ಬಲ್ಯದ ಚಿಹ್ನೆ. ಈ ಸ್ವಭಾವ ನಿಮ್ಮ ಮನಸ್ಸಿನಲ್ಲಿ ಬಲವಾಗುತ್ತಿದ್ದರೆ ನೀವು ಒಬ್ಬ ವೈದ್ಯನನ್ನು ನೋಡಿ; ಒಳ್ಳೆಯ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಿ..... ಜ್ಯೋತಿಷ್ಯ ಮುಂತಾದವುಗಳಲ್ಲೆಲ್ಲಾ ಸ್ವಲ್ಪ ಸತ್ಯಾಂಶವಿದ್ದರೂ ಅದನ್ನು ನಾವು ನಿರ್ಲಕ್ಷ್ಯದಿಂದ ನೋಡಬೇಕು..... ಮೂಢಭಾವನೆಗಳು ನಾಯಿಕೊಡೆಯಂತೆ ನಮ್ಮ ದೇಶದಲ್ಲಿ ಹಬ್ಬುತ್ತಿವೆ. ವಿಚಾರ ಮಾಡದ ಸ್ತ್ರೀಯರು ಇನ್ನೂ ಸ್ವಾತಂತ್ರ್ಯಕ್ಕೆ ಹೋರಾಡುತ್ತಿರುವರು. ಒಬ್ಬ ಹಣಕ್ಕಾಗಿ ಮತ್ತೊಬ್ಬರನ್ನು ಮೋಸ ಮಾಡಿದರೆ ಅವನನ್ನು ಮೋಸಗಾರ ಎನ್ನುವಿರಿ. ಇತರರನ್ನು ಅಧ್ಯಾತ್ಮಿಕ ದೃಷ್ಟಿಯಿಂದ ಪಾಪಿಗಳು ಎಂದು ಮೋಸಗೊಳಿಸುವವರು ಎಂತಹ ಪಾಪಿಗಳಿರಬೇಕು? ಇದು ಪರಮಪಾತಕ. ಸತ್ಯ ನಿಮ್ಮನ್ನು ಧೀರರನ್ನಾಗಿ ಮಾಡಬೇಕು; ಮೌಢ್ಯತೆಯಿಂದ ಪಾರಾಗುವಂತೆ ಮಾಡಬೇಕು. ಇದೇ ಸತ್ಯದ ಪರೀಕ್ಷೆ.... ಬೇಕಾದರೆ ತಾರೆಗಳನ್ನು ನಿಮ್ಮ ಬೊಗಸೆಯಿಂದ ಎತ್ತಿ ನುಂಗಿಹಾಕಬಹುದು. ನಿಮ್ಮ ನೈಜಸ್ವಭಾವ ಅಂತಹುದು. ಧೀರರಾಗಿ, ಎಲ್ಲಾ ವಿಧದ ಮೂಢನಂಬಿಕೆಗಳಿಂದ ಪಾರಾಗಿ, ಮುಕ್ತರಾಗಿ.

ಇವತ್ತು ನಿಮ್ಮ ಚಾನಲ್ ಮೂಲಕ ನರೇಂದ್ರ ಶರ್ಮ ಅವರು ಇಡೀ ಕರ್ನಾಟಕವನ್ನು ಮೌಢ್ಯದಲ್ಲಿ ಮುಳುಗಿಸಲು ಯತ್ನಿಸುತ್ತಿದ್ದಾರೆ. ಅಮೆರಿಕದ ಕೆಲವು ಸ್ವತಂತ್ರ ಕ್ರಿಶ್ಚಿಯನ್ ಗುಂಪುಗಳು ಹರಡುತ್ತಿರುವ ಪ್ರಳಯದ ಥಿಯರಿಗಳನ್ನೇ (http://www.coffetoday.com/the-doomsday-is-on-may-21-2011/907618/
http://www.ebiblefellowship.com/may21/
http://en.wikipedia.org/wiki/Harold_Camping
http://www.allvoices.com/contributed-news/8599025-worlds-doomsday-fixed-for-6-pm-on-21st-may-2011) ಕದ್ದು ತಂದು, ಅವುಗಳನ್ನು ಜಗನ್ಮಾತೆಯ ಹೆಸರಿನಲ್ಲಿ ಬದಲಾಯಿಸಿ, ಈ ವರ್ಷವೇ ಪ್ರಳಯವಾಗುತ್ತದೆ ಎಂದು ಭೀತಿ ಸೃಷ್ಟಿಸುತ್ತಿದ್ದಾರೆ. ಪ್ರಳಯವನ್ನು ತಪ್ಪಿಸಲು ಸಾಧ್ಯವಿರುವುದು ನನಗೆ ಮಾತ್ರ, ಹೀಗಾಗಿ ನಾನು ಹೇಳಿದಂತೆ ಕೇಳಿ ಎಂದು ಜನರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ.

ಹಿಂದೆ ಕಸ್ತೂರಿ ವಾಹಿನಿಯಲ್ಲಿದ್ದಾಗ ಸಹ ಲೋಕ ಕಲ್ಯಾಣ, ಇತ್ಯಾದಿ ಬೊಗಳೆ ಮಾತುಗಳನ್ನು ಹೇಳಿ ಅರಮನೆ ಮೈದಾನದಲ್ಲಿ ದೊಡ್ಡ ಯಾಗವೊಂದನ್ನು ನಡೆಸಿದ ನರೇಂದ್ರ ಶರ್ಮ ಅವರು ಇದಕ್ಕಾಗಿ ಕೋಟ್ಯಂತರ ರೂಪಾಯಿ ಹಣವನ್ನು ಮುಗ್ಧ, ಅಮಾಯಕ ಜನಸಾಮಾನ್ಯರಿಂದ ಪಡೆದಿದ್ದರು. ಎಷ್ಟು ಹಣ ಪಡೆದಿದ್ದೀರಿ, ಸ್ವಲ್ಪ ಲೆಕ್ಕ ಕೊಡಿ ಎಂದು ಪತ್ರಕರ್ತರು ಪತ್ರಿಕಾಗೋಷ್ಠಿಯೊಂದರಲ್ಲಿ ಕೇಳಿದಾಗ ನರೇಂದ್ರ ಶರ್ಮ ಗೋಷ್ಠಿಯನ್ನೇ ನಿಲ್ಲಿಸಿ ಹೊರಟುಹೋಗಿದ್ದರು. ನರೇಂದ್ರ ಶರ್ಮ ಅವರು ಸಾರ್ವಜನಿಕರ ದೇಣಿಗೆ ಪಡೆಯಲೆಂದೇ ಎರಡು ಟ್ರಸ್ಟ್‌ಗಳನ್ನು ರಚಿಸಿಕೊಂಡಿದ್ದಾರೆ. ಈ ಟ್ರಸ್ಟ್‌ಗಳಿಗೂ ನಿಮ್ಮ ಚಾನಲ್‌ಗಳಿಗೂ ಯಾವ ಸಂಬಂಧವಿರುವುದಿಲ್ಲ. ಪ್ರಚಾರಕ್ಕೆ ನಿಮ್ಮ ಚಾನಲ್‌ಗಳು, ಹಣ ವಸೂಲಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಟ್ರಸ್ಟ್‌ಗಳು! ಈ ದುರ್ ವ್ಯವಹಾರ ನಿಲ್ಲಿಸಲು ನೀವು ಹೇಳಿದರೆ, ಅವರು ಚಾನಲ್ ಬದಲಾಯಿಸುತ್ತಾರೆ. ಬ್ರಹ್ಮಾಂಡ, ಭವ್ಯ ಬ್ರಹ್ಮಾಂಡ, ಬೃಹತ್ ಬ್ರಹ್ಮಾಂಡ ಆಯಿತು, ಇನ್ನು ಸೂಪರ್ ಬ್ರಹ್ಮಾಂಡ ಸೃಷ್ಟಿಯಾಗಬಹುದು ಅಷ್ಟೆ.

ಇಂಥ ಕಾರ್ಯಕ್ರಮ ಬೇಕೆ ಎಂದು ನೀವು ಯೋಚಿಸಲೇಬೇಕಾದ ಸಮಯವಿದು. ನಿಜ, ಈ ಕಾರ್ಯಕ್ರಮದಿಂದ ನಿಮಗೆ ಟಿಆರ್‌ಪಿ ಹೆಚ್ಚಾಗಿರಬಹುದು. ಆದರೆ ಜನ ಹೆಚ್ಚು ನೋಡುತ್ತಾರೆ ಎಂಬ ಕಾರಣಕ್ಕೆ ಅದು ಶ್ರೇಷ್ಠವಾದ ಕಾರ್ಯಕ್ರಮ ಎಂದು ಭಾವಿಸುವುದು ಮೂರ್ಖತನ. ಬೀದಿಯಲ್ಲಿ ಒಬ್ಬ ಹುಚ್ಚ ವಿಚಿತ್ರವಾಗಿ ಮಾತನಾಡುತ್ತ, ಬಟ್ಟೆ ಬಿಚ್ಚಿಕೊಂಡು ಓಡಾಡುತ್ತಿದ್ದರೆ ಆತನನ್ನು ಎಲ್ಲರೂ ನೋಡುತ್ತಾರೆ. ಮಾಮೂಲಿಯಂತೆ ಓಡಾಡುವ ನಮ್ಮ, ನಿಮ್ಮನ್ನು ಯಾರೂ ಗಮನಿಸುವುದಿಲ್ಲ. ಎಲ್ಲರೂ ನೋಡುತ್ತಾರೆ ಅನ್ನುವ ಕಾರಣಕ್ಕೆ ಬೆತ್ತಲೆ ಹುಚ್ಚನನ್ನು ಪ್ರೋತ್ಸಾಹಿಸುವುದು ಸರಿಯೇ? ಬೆತ್ತಲೆ ಓಡಾಡುವ ಹುಚ್ಚನಿಗೆ ಬಟ್ಟೆ ಕೊಡಿಸಿ, ಯಾವುದಾದರೂ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಬೇಕೇ ಹೊರತು, ಹುಚ್ಚನೇ ಶ್ರೇಷ್ಠ ಎಂದು ಭಾವಿಸಬೇಕಾಗಿಲ್ಲ. ಒಬ್ಬ ಹುಚ್ಚನನ್ನು ಸಹಿಸಿಕೊಂಡ ಪರಿಣಾಮ ಈಗ ಬೀದಿ ತುಂಬ ಹುಚ್ಚರು ಸೇರಿಬಿಡುತ್ತಾರೆ. ಆ ಅಪಾಯವನ್ನೂ ನಾವು ಎದುರಿಸುತ್ತಿದ್ದೇವೆ.

ಇದೆಲ್ಲವನ್ನೂ ಗಮನಿಸಿ ತಾವು ದಯಮಾಡಿ ನರೇಂದ್ರ ಶರ್ಮ ಅವರ ಬ್ರಹತ್ ಬ್ರಹ್ಮಾಂಡ ಕಾರ್ಯಕ್ರಮವನ್ನು ಈಗಿಂದೀಗಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸುತ್ತೇವೆ. ಈ ಕಾರ್ಯಕ್ರಮ ಅನೈತಿಕ, ಅಪ್ರಜಾಸತ್ತಾತ್ಮಕ, ಮಾನವ ವಿರೋಧಿಯಾಗಿದೆ.

ಇದನ್ನು ನಾವು ನಿಮ್ಮ ಬೇಡಿಕೆ ಎಂದು ಹೇಳುತ್ತಿಲ್ಲ, ಆಗ್ರಹ ಎಂದೇ ಹೇಳುತ್ತಿದ್ದೇವೆ. ಯಾಕೆಂದರೆ ಇದು ಕಾನೂನು ಪ್ರಕಾರವೂ ಅಪರಾಧ. ನೀವು ಹಾಗು ನರೇಂದ್ರ ಶರ್ಮ ಸರ್ಕಾರ ರಚಿಸಿರುವ ನಿಯಮಾವಳಿಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟ.

ನಿಮಗೆ ಚೆನ್ನಾಗಿ ಗೊತ್ತಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆ ಸಿದ್ಧಪಡಿಸಿರುವ ಮಾರ್ಗಸೂಚಿಗಳನ್ನು ನೀವು ತಪ್ಪದೇ ಪಾಲಿಸಬೇಕು. ಮಾರ್ಗಸೂಚಿಗಳನ್ನು ಅಲಕ್ಷ್ಯ ಮಾಡಿದ ಎಂಟಿವಿ, ಟಿವಿ೫ ಮುಂತಾದ ಚಾನಲ್‌ಗಳನ್ನು ಶಿಕ್ಷಿಸಲಾಗಿರುವ ಉದಾಹರಣೆಗಳೂ ನಮ್ಮ ಮುಂದಿವೆ. ಟಿವಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಒಟ್ಟು ೧೩ ವಿವಿಧ ಕಾಯ್ದೆಗಳ ವ್ಯಾಪ್ತಿಗೆ ಒಳಪಡುತ್ತವೆ. ಹೀಗಾಗಿ ತಮಗೆ ಕಾನೂನಿನ ಹೊಣೆಗಾರಿಕೆಯೂ ಇದೆ. ಅವುಗಳನ್ನು ನಿಮಗೆ ನೆನಪಿಸಲು ಯತ್ನಿಸುತ್ತೇವೆ.

ಕಾಯ್ದೆಗಳು ಹೀಗಿವೆ.

1. Cable Television Network (Regulation) Act, 1995 and Certification Rules there under.
2. Drugs and Cosmetics Act, 1940.
3. Emblems and Names (Prevention of Improper Use) Act, 1950.
4. Drugs (Control) Act 1950.
5. Drugs and Magic Remedies (Objectionable Advertisements) Act, 1954.
6. Prevention of Food & Adulteration Act, 1954.
7. Prize Competitions Act, 1955.
8. Indecent Representation of Women (Prohibition) Act, 1986.
9. Trade and Merchandise Marks, Act 1999.
10. Copyright Act, 1957.
11. Cigarette and other Tobacco Products Act 2003.
12. Consumer Protection Act, 1986.
13. The Prevention of Cruelty to Animals Act, 1960


ಪ್ರಸಾರ ವೇಳೆ ಕಾನೂನು ಉಲ್ಲಂಘನೆಯನ್ನು ಮೂರು ಹಂತದಲ್ಲಿ ವಿಚಾರಣೆಗೆ ಒಳಪಡಿಸಬಹುದು. ಮೂರನೆ ಹಂತದಲ್ಲಿ ಸರಕಾರ ನೇಮಿಸಿದ ಸಮಿತಿ ಚಾನೆಲ್ ಮುಖ್ಯಸ್ಥ ತಪ್ಪಿತಸ್ಥ ಎಂದು ಕಂಡುಬಂದರೆ, ಪ್ರಸ್ತುತ ಕಾರ್ಯಕ್ರಮವನ್ನು ಪ್ರಸರಣ ಮಾಡದಂತೆ ನಿರ್ದೇಶಿಸಬಹುದು, ಕ್ಷಮಾಪಣೆಯನ್ನು ಬಿತ್ತರಿಸುವಂತೆ ಹೇಳಬಹುದು ಹಾಗೂ ದಂಡ ವಿದಿಸಬಹುದು. ಈ ಪ್ರಕ್ರಿಯೆಗೆ ದೂರು ದಾಖಲಿಸುವುದು ಮುಖ್ಯ.ಮಾರ್ಗಸೂಚಿ ಸ್ಪಷ್ಟ ಮಾತುಗಳಲ್ಲಿ ಕಾರ್ಯಕ್ರಮಗಳಲ್ಲಿ ಅವಹೇಳನಕಾರಿ ಭಾಷೆ, ಜಾತಿ ನಿಂದನೆ, ಮೂಢನಂಬಿಕೆ ವೈಭವೀಕರಣ ಹಾಗೂ ಜನರನ್ನು ದಿಕ್ಕುತಪ್ಪಿಸುವುದನ್ನು ಖಂಡಿಸುತ್ತದೆ.

ಕಂಟೆಂಟ್ ಸರ್ಟಿಫಿಕೇಷನ್ ನಿಯಮಾವಳಿ ೨೦೦೮ ಪ್ರಕಾರ ಯಾವುದೇ ನಿರ್ದಿಷ್ಟ ಜಾತಿ, ಕೋಮು ಅಥವಾ ನಂಬಿಕೆ ವಿರುದ್ಧ ಮಾತನಾಡುವುದು ಅಪರಾಧ. ಜೊತೆಗೆ ಯಾವುದೇ ಒಂದು ಆಚರಣೆಯನ್ನು ಶ್ರೇಷ್ಠ ಅಥವಾ ಕನಿಷ್ಟ ಎಂದು ಬಿಂಬಿಸುವಂತಿಲ್ಲ. ಹಾಗೆಯೇ ಲಿಂಗ ಅಸಮಾನತೆಯನ್ನು ಹೇಳುವಂತಿಲ್ಲ.

ನಿಮ್ಮ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮ ಈ ಎಲ್ಲ ಕಾಯ್ದೆಗಳನ್ನು ಉಲ್ಲಂಘಿಸಿರುವುದು ಸ್ಪಷ್ಟ. ಈ ಕಾರ್ಯಕ್ರಮ ಸ್ತ್ರೀಯರನ್ನು ಕೆಟ್ಟದಾಗಿ ಚಿತ್ರಿಸುತ್ತದೆ. ಹಜಾಮರನ್ನು ನೋಡಬಾರದು ಎನ್ನುವ ಮೂಲಕ ಅಸ್ಪೃಶ್ಯತೆಯನ್ನು ಪ್ರಚಾರ ಮಾಡುತ್ತಿದೆ. ಜನರಲ್ಲಿ ಪ್ರಳಯದ ಭೀತಿಯನ್ನು ಸೃಷ್ಟಿಸುತ್ತಿದೆ. ಮಾಂಸಾಹಾರಿಗಳನ್ನು ಈತ ಕೀಳಾಗಿ ನಿಂದಿಸುವ ಮೂಲಕ ಜನಾಂಗೀಯ ನಿಂದನೆಯನ್ನು ಈ ಕಾರ್ಯಕ್ರಮ ಪೋಷಿಸುತ್ತಿದೆ.

ಭಾರತದ ಸಂವಿಧಾನವು ಜನರಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಾಗಬೇಕು ಎನ್ನುತ್ತದೆ. ಆಧುನಿಕ ಕಾಲಘಟ್ಟದಲ್ಲಿ ನಾವು ಇನ್ನೂ ಕಂದಾಚಾರಗಳ ನರಕದಲ್ಲೇ ಕೊಳೆಯುತ್ತಿದ್ದೇವೆ. ಈ ಕೆಟ್ಟ ಬೆಳವಣಿಗೆಯನ್ನು ಟಿವಿ ಚಾನಲ್ ಗಳು ನಿರಂತರವಾಗಿ ಪೋಷಿಸುತ್ತಿವೆ. ಈ ನಿಟ್ಟಿನಲ್ಲಿ ನಿಮ್ಮ ಚಾನಲ್ ಸೇರಿದಂತೆ ಎಲ್ಲ ಚಾನಲ್ ಗಳು ಟಿಆರ್ಪಿ ಆಸೆಗೆ ಬಲಿಬೀಳದೆ ಕಾಲದ ಅಗತ್ಯಕ್ಕೆ ತಕ್ಕಂಥ, ಮನುಷ್ಯರನ್ನು ಎಲ್ಲ ಮೌಢ್ಯಗಳಿಂದ ಬಿಡುಗಡೆಗೊಳಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಅಗತ್ಯವಿದೆ.

ಈ ಕಾರ್ಯಕ್ರಮವನ್ನು ಕೂಡಲೇ ನಿಲ್ಲಿಸಬೇಕೆಂದು ಮತ್ತೊಮ್ಮೆ ಆಗ್ರಹಪಡಿಸುತ್ತೇವೆ. ಒಂದು ವೇಳೆ ನಿಲ್ಲಿಸದೇ ಹೋದಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ದೂರು ಸಲ್ಲಿಸುವುದೂ ಸೇರಿದಂತೆ, ಪ್ರಜಾಸತ್ತಾತ್ಮಕ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಧನ್ಯವಾದಗಳು.

ಓದುಗರಿಗೊಂದು ಮನವಿ: ದಯಮಾಡಿ ಈ ಪತ್ರದ ಧಾಟಿಯ ಪತ್ರಗಳನ್ನು ಅಥವಾ ಇದೇ ಪತ್ರವನ್ನು ನಿಮ್ಮ ಐಡಿಗಳಿಂದ ಈ feedbackzeekannada@zeenetwork.com ಇಮೇಲ್ ಅಥವಾ ಜೀ ಕನ್ನಡ, ನಂ.೩೯, ಯುನೈಟೆಡ್ ಮ್ಯಾನ್ಷನ್, ಮೂರನೇ ಮಹಡಿ, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು-೧ ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕಾಗಿ ವಿನಂತಿ. ಸಾಧ್ಯವಾಗುವುದಾದರೆ ಈ ಅಭಿಯಾನವನ್ನು ಬೆಂಬಲಿಸುವ ಬ್ಲಾಗರ್‌ಗಳು ಈ ಪತ್ರವನ್ನು ಯಥಾವತ್ತಾಗಿ ತಮ್ಮ ಬ್ಲಾಗ್‌ಗಳಲ್ಲಿ ಪ್ರಕಟಿಸಬೇಕೆಂದು ಕೋರುತ್ತೇವೆ. ಹಾಗೆಯೇ ಇದನ್ನು ಫೇಸ್‌ಬುಕ್ ಹಾಗು ಇತರ ಸೋಷಿಯಲ್ ನೆಟ್‌ವರ್ಕ್‌ಗಳಲ್ಲಿ ಶೇರ್ ಮಾಡಲು ವಿನಂತಿಸುತ್ತೇವೆ.

ಶುಕ್ರವಾರ, ಏಪ್ರಿಲ್ 01, 2011

ಯುಗಾದಿ


ಕೊರೆಯುವ ಚಳಿಯಿಂದ ಬೇಯುವ ಬೇಗೆ! ವಸಂತ ಋತುವಿನ ಹಾಡಿನೊಂದಿಗೆ ಚೈತ್ರದ ಚಿಗುರಿನ ಜನನ! ಬೋಳಾದ ರೆಂಬೆ-ಕೊಂಬೆಗಳಲಿ ಹೊಸ ಚಿಗುರು ಮೈದೆಳೆಯುವ ಪರಿ. ಇದು ಪ್ರಕೃತಿ ಬರೆದ ಭಾಮಿನಿ ಷಟ್ಪದಿ!! ಗಿಡ, ಮರ, ಬಳ್ಳಿಗಳಲ್ಲಿ ಹೂ ಬಿರಿಯುವ ಹೊತ್ತು. ಹಳದಿ, ಕೆಂಪು, ನೇರಳೆ, ಬಣ್ಣ ಬಣ್ಣದ ಹೂವು ಮುಡಿಯುವ ಪ್ರಕೃತಿಗೆ ಹರೆಯ ಮೂಡುವ ಕಾಲ.

ಯುಗಾದಿ ಎಂದರೆ ನೆನಪಾಗುವ ಕವಿ ಬೇಂದ್ರೆ-"ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ/ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ" ಎಂದು ಅಭಿಮಾನದಿಂದ ಹಾಡಿದ ಕವಿ. ಈ ಸಂದರ್ಭದಲಿ ಎಲ್ಲಕ್ಕೂ ಹೊಸತನ, ಹೊಸ ಚೈತನ್ಯ, ಹೊಸ ಕಳೆ. ಹಳೆಯದನ್ನು ಕಳಚಿಕೊಂಡು ಹೊಸದನ್ನು ತೊಡುವ ಪ್ರಕೃತಿಯ ನೀತಿ ಎಲ್ಲರಿಗೂ ಆದರ್ಶ, ಮಾದರಿ.

ಪ್ರಕೃತಿಯಂತೆಯೇ ನಮ್ಮ ಮನದಲ್ಲೂ ಹೊಸ ಗರಿಕೆ ಮೂಡಲಿ.

ಇನಿತು ಕಹಿಗೆ ಬೊಗಸೆ ಸಿಹಿ ಇರಲಿ!

ಯುಗಾದಿ ಹಬ್ಬದ ಶುಭಾಶಯಗಳು.

ಬುಧವಾರ, ಮಾರ್ಚ್ 23, 2011

ಭಗ್ನ ಪ್ರೇಮಿ

"ನವಿಲೂರಿನ ಹುಡುಗಿಯೊಬ್ಬಳು ಯಾರನ್ನೋ ಮದುವೆಯಾಗಿ ಹೊಸ ಬದುಕಿನ ಹೊಸ್ತಿಲೊಳಗೆ ಒಂದು ಹೆಜ್ಜೆ ಇಡುತ್ತಿರುವಾಗಲೇ ಮುಗ್ಧ ಹುಡುಗನೊಬ್ಬ ಬದುಕಿನಿಂದಾಚೆ ಹೆಜ್ಜೆಯಿಟ್ಟು ತುಂಬ ದಿನಗಳಾಗಿದ್ದವು..."

ಶನಿವಾರ, ಮಾರ್ಚ್ 12, 2011

ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೊಟ್ಯಾಂತರ ಉತ್ತರಗಳು ಇವೆಯಾದರೂ, ನನ್ನ ಪುಟ್ಟ ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೇವಲ ನೀನಾಗಿದ್ದೆ!!!


ಸೋನು,

ನಿನಗೆ ಕೊನೆಯ ಪತ್ರ ಬರೆಯಲು ಕುಳಿತಿದ್ದೇನೆ. ಕೈ ನಡುಗುತ್ತಿದೆ, ನನ್ನ ಇಲ್ಲದ ಅದೃಷ್ಟಕ್ಕೆ ನಾನೆ ಶಪಿಸಿಕುಳ್ಳುತ್ತಾ ಕೆಲವು ಸಾಲುಗಳನ್ನಾದರೂ ಕಷ್ಟ ಪಟ್ಟು ಈ ಪತ್ರದಲ್ಲಿ ತುಂಬಿಸಲು ಕುಳಿತಿದ್ದೇನೆ. ಕಣ್ಣಿಂದ ಒಂದೊಂದೆ ಹನಿಗಳು ಜಾರುತ್ತಿವೆ ಥೇಟ್ ನಿನ್ನ ನೆನಪಿನ ಹಾಗೆ. ಇಷ್ಟು ದಿನಗಳೂ ಅವು ಕೊಡುವ ಸುಳ್ಳು ಭರವಸೆಗಳಿಂದಲೇ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕಿನ ಒಂದೊಂದೆ ಹೆಜ್ಜೆಯನಿಡುತ್ತಿದ್ದೆ. ಅಂಕೆ ತಪ್ಪಿದರೂ ಕೈಹಿಡಿದೆತ್ತಲು ನೀನಿದ್ದೀಯ ಎಂಬ ಸಣ್ಣ ಭರವಸೆಯಾದರೂ ಇತ್ತು. ಆದರೆ ಈಗ? ತುಂಬಾ ದೊಡ್ಡ ಜಗದೊಳಗೆ ಯಾಕೋ ಒಂಟಿಯಾಗಿ ಬಿಟ್ಟೆ. ಕಾರಣ ಗೊತ್ತಿಲ್ಲ. ನಿನ್ನ ತಪ್ಪುಗಳ ಪಟ್ಟಿ ಮಾಡಿ ನಿನ್ನ ಮುಂದೆ ಹಿಡಿಯುವ ಧೈರ್ಯ ಸಾಲುತ್ತಿಲ್ಲ. ಕಾರಣ ಗೊತ್ತಾ? ತುಂಬಾ ಪ್ರೀತಿಸಿದವನು ನಾನು.

ನಕ್ಕಾಗ, ಅತ್ತಾಗ, ನೀನು ಸುಮ್ಮನೇ ಮುನಿಸಿಕೊಂಡಾಗ, ಮಾತೆ ಆಡದಿದ್ದಾಗ, ನನ್ನ ಬೆನ್ನ ಮೇಲೆ ಮಗುವಿನಂತೆ ಕೂಸುಮರಿಯಾಡುತ್ತಿದ್ದಾಗ ಒಂದೊಂದು ಕವಿತೆಯನ್ನ ಬರೆದು ಬರೆದು ನಿನ್ನ ಕೈಗಿಡುತ್ತಿದ್ದೆ ಅಲ್ವ? ನಿಜ ಹೇಳು ಅಷ್ಟು ಕವಿತೆಗಳಲ್ಲಿ ಒಂದು ಸಾಲೂ ನೆನಪಾಗುತ್ತಿಲ್ಲವಾ? ಪ್ರತಿ ಸಲ ಕೋಳಿ ಜಗಳಗಳಾದಗ, ಕೆಲವೊಮ್ಮೆ ಮಹಾಯುದ್ಧಗಳು ನಮ್ಮ ಮಧ್ಯೆ ನಡೆದಾಗ ಮೊದಲು ಕೇಳುತ್ತಿದ್ದ ಸ್ಸಾರಿ? ಜಾರಿ ಮುಗ್ಗರಿಸಿ ಬೀಳುತ್ತಿದ್ದಾಗ ಆಸರೆಯಾಗುತ್ತಿದ್ದ ಕೈ? ಚೂರೆ ಚೂರು ನೊಂದುಕೊಂಡರೂ ಈ ಕಣ್ಣುಗಳು ಸುರಿಸುತ್ತಿದ್ದ ಹನಿ? ನನ್ನ ಬಾಹುಗಳಲ್ಲಿ ಪೂರ್ತಿ ನೀನಿದ್ದಾಗಲೂ ಕಳೆದು ಕೊಳ್ಳದ ನನ್ನ ಸಂಯಮ? ಪಡೆದ ಮುತ್ತು? ಕೊಟ್ಟ ಮುತ್ತು? ಪರಸ್ಪರ ತಿನಿಸಿಕೊಂಡ ತುತ್ತುಗಳು? ಇಬ್ಬರೇ ನಡೆದ ಮೌನದ ಹಾದಿ? ಹಾಡಿದ ಸಾಲುಗಳು? ಕಟ್ಟಿದ ಗುಬ್ಬಿಗೂಡು?

ಹೇಳು ಇದ್ಯಾವುದೂ ನಿನಗೆ ನೆನಪಾಗುತ್ತಿಲ್ಲವೆ?

ಚಿಂತೆಯಿಲ್ಲ ಬಿಡು. ನಿನ್ನ ಜೊತೆಯಿದ್ದಾಗ ಒಂದು ನಿರ್ಮಲ ಪ್ರೀತಿಗೆ ನಾನು ಮಾಡಬೇಕಾದ ಋಣಸಂದಾಯವನ್ನ ನಾನು ಪ್ರಾಮಾಣಿಕವಾಗಿ ಮಾಡಿಯಾಗಿದೆ. ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೊಟ್ಯಾಂತರ ಉತ್ತರಗಳು ಇವೆಯಾದರೂ, ನನ್ನ ಪುಟ್ಟ ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೇವಲ ನೀನಾಗಿದ್ದೆ!!! ನಿನ್ನ ವಿನಾಕಾರಣ ಪ್ರೀತಿಸಿದವನು ನಾನು. ಕಾರಣವಿಲ್ಲದೇ ದೂರ ಹೋಗುತ್ತಿರುವವಳು ನೀನು. "ಹೇಳೀ ಹೋಗು ಕಾರಣ" ಎಂದು ನಿನ್ನ ಕೈ ಹಿಡಿದು ಕೇಳುವುದಿಲ್ಲ. ಬಲವಂತದಿಂದ ಪಡೆದುಕೊಂಡ ಪ್ರೀತಿಗೆ ಆಯಸ್ಸು, ಆರೋಗ್ಯ ತುಂಬಾ ಕಡಿಮೆಯಂತೆ. ಚಂದದ ಬದುಕನ್ನರಸಿ ಅದೆಲ್ಲಿಗೋ ಹೊರಟು ನಿಂತಿದ್ದೀಯ ನೀನು. ಹೋಗುತ್ತಿರುವ ದಾರಿಯಲ್ಲೆಲ್ಲ ಕೇವಲ ಸುಖದ ಹೂವುಗಳು, ಪ್ರೀತಿಯ ಊರುಗಳು ಕಾಣಿಸಲಿ. ಸಾಗುವ ದಾರಿಯಲ್ಲಿ ನೆಪಮಾತ್ರಕ್ಕಾದರೂ ಹಿಂತಿರುಗಿ ನೋಡಬೇಡ. ಈ ಬಂಗಾರದಂತಹ ಹುಡುಗನ ಪ್ರಾಮಾಣಿಕ ಪ್ರೀತಿ, ನೀನು ಬೇರೆ ಪ್ರೀತಿಯನ್ನರಸಿಕೊಂಡು ಹೊರಟ ನಿರ್ಧಾರವನ್ನು ಬದಲಿಸಿದರೂ ಬದಲಿಸಬಹುದು!!!

ಹೇಳಲು ಕಷ್ಟವಾದರೂ ಹೇಳುತ್ತಿದ್ದೀನಿ. ನಿನ್ನ ಬದುಕು ಬಂಗಾರವಾಗಲಿ.
ಗುಡ್ ಬೈ

ಸೋಮವಾರ, ಫೆಬ್ರವರಿ 14, 2011

Happy valentine's day...

ಮತ್ತೊಂದು ಪ್ರೇಮಿಗಳ ದಿನ...
ಬದುಕಿನ ನೂರು ಜಂಜಡಗಳ ಮದ್ಯೆ, ದಿನವು ಇಷ್ಟಿಷ್ಟೇ ಮುಗಿದು ಹೋಗುವ ನಮ್ಮೆಲ್ಲ ಯೌವನವನ್ನು ನವೀಕರಿಸಲು ಮತ್ತೆ ಬಂದಿದೆ ಈ ದಿನ. ನಮ್ಮ ಅನುಭವಕ್ಕೆ ಬರುವ ಎಲ್ಲವನ್ನೂ, ಎಲ್ಲರನ್ನೂ ಪ್ರೀತಿಸೋಣ...
Love u!!!

ಶನಿವಾರ, ಫೆಬ್ರವರಿ 05, 2011

ಎದ್ದು ಹೋದವಳಿಗೊಂದು ಮುದ್ದಾದ ಪತ್ರ!!


ಸೋನು,
ಪ್ರಪೋಸ್ ಮಾಡದೇ ಶುರುವಾದ ಪ್ರೇಮ ನಮ್ಮದು! ಹೌದು ಪ್ರಪೋಸ್ ಮಾಡಿ ತೂಕ, ಅಳತೆ ಹಾಕಿ ಮಾಡೋದಕ್ಕೆ ಇದೇನು ಈರುಳ್ಳಿ ವ್ಯಾಪಾರವಾ? ಇಲ್ಲಾ ರಿಯಲ್ ಎಸ್ಟೇಟ್ ಬುಸಿನೆಸ್ಸಾ? ತಾಯಿ ಮಡಿಲಲ್ಲಿ ಬೆಚ್ಚಗೆ ಮಲಗಿದ ಹಸುಗೂಸು ನಿದ್ದೆಯಲ್ಲೇ ನಗುವ ಪರಿಯಂತೆ; ಹುಚ್ಚು ಹೃದಯ ಬೆಚ್ಚಗಾಗುವ ಆ ಕ್ಷಣ ಹೊತ್ತು ಯಾರಿಗೆ ಗೊತ್ತು?
ಒಂದು ಸುಂದರ ಸಂಜೆಯ ಜಡಿಮಳೆಯಲಿ ಯಾವುದೋ ಜನ್ಮದ ಒಪ್ಪಂದದ ಮುಂದುವರೆದ ಭಾಗವಾಗಿ ನಾವಿಬ್ಬರು ಸಿಕ್ಕೆವು! ನೋಡಿದ ಮರುಕ್ಷಣದಿಂದ ಬದುಕಿನ ಎಲ್ಲ ಕಾರ್ಮೋಡಗಳು ಸರಿದು ಮೂಡಿದ್ದು ಪ್ರೀತಿಯ ಕಾಮನಬಿಲ್ಲು! ಪ್ರೀತಿಸೋದಕ್ಕೆ ಕಾರಣ ಬೇಕಾ? never! ಕಾರಣವಿಲ್ಲದೆ ಹುಟ್ಟುವದೆ ನಿಜವಾದ ಪ್ರೀತಿ. ಕಾರಣ ಇಟ್ಟುಕೊಂಡು ಹುಟ್ಟೋದಕ್ಕೆ ಅದೇನು ಭಾರತದ ಪಾಪುಲೆಶನ್ನಾ?
ಹುಚ್ಚಿ, ಅದು ಕಲ್ಲು ಕರಗುವ ಸಮಯ, ತಾಯಿ ಹಕ್ಕಿ ಗುಟುಕು ಹಾಕುವ ಸಮಯ, ಹಾಳು ಬೆಳದಿಂಗಳು ಸಮುದ್ರದಲಿ ಲೀನವಾಗುವ ಸಮಯ, ಅದು, ಬಯಸಿದ ಮನಸುಗಳು ಒಂದಾಗುವ ಸಮಯ! ನಾವು ಒಂದಾಗಿದ್ದು ಹಾಗೆ ಅಲ್ಲವಾ? ದಟ್ಟ ಕಾನನದಲಿ ಕಳೆದು ಹೋದವನಿಗೆ ಸಿಕ್ಕ ದಾರಿಯಂತೆ, ಕಾರ್ಗತ್ತಲಿನಲ್ಲಿ ಬೆಪ್ಪಾಗಿ ನಿಂತವನಿಗೆ ಕಂಡ ಬೆಳಕ ಬೀಜದಂತೆ. ಎಷ್ಟು ಅದ್ಭುತವಾಗಿದ್ದವು ಆ ದಿನಗಳು! ಕುಡುಕ ಡ್ರೈವರ್ ನ ಕೈಗೆ ಸಿಕ್ಕ ಹೊಚ್ಚ ಹೊಸ ಲಾರಿಯಂತೆ! ಎಂಥ ವೇಗ, ಎಂಥ ಬಿರುಸು, ಎಂಥ ಸೊಗಸು. ಹಾಗೆ ಬದುಕಿನ ಸುವಿಶಾಲ ಹೆದ್ದಾರಿಯಲಿ ಹುಮ್ಮಸ್ಸಿನಲ್ಲಿ ಓಡುತ್ತಿದ್ದವನಿಗೆ Road under construction ಬೋರ್ಡು ಕಣ್ಣಿಗೆ ಬಿತ್ತು ನೋಡು ಸ್ಪಾನರ್ ಇಲ್ಲದೆ ಕಳಚಿ ಬಿದ್ದ ಬೋಲ್ಟ್ ನಂತಾದೆ! ಹೃದಯದ ರಿಪೇರಿಗೆ ಯಾವ ಸ್ಪಾನರು? ನೀನಿಲ್ಲದ ಈ ಬದುಕಲಿ ಅದ್ಭುತ ಮೆಕ್ಯಾನಿಕ್ ನೋಬ್ಬನಿಗಾಗಿ ಕಾಯುವ ಲಟಾರಿ ಲಾರಿಯಂತಾಗಿದ್ದೇನೆ!
ಹುಡುಗೀ, ಪ್ರತಿ ಸಿಟ್ಟಿಗೂ ಒಂದು ಆಯುಷ್ಯವಿರುತ್ತದಂತೆ! ಒಬ್ಬ ಬುದ್ದಿವಂತ ಜೀವನ ಪೂರ್ತಿ ದ್ವೇಷಿಸಬಹುದು ಆದರೆ ಹೃದಯವಂತ? ಊಹು೦... ಅದೇನು ಜನ್ಮ ಪೂರ್ತಿ ಜೊತೆಗಿರಲು ಹೃದಯ ಬಯಸಿದ ಪ್ರೀತಿಯಾ? ಬಿ.ಪಿ ಶುಗರ್ ಬರಿಸೋ ಕೆಟ್ಟ ಸಿಟ್ಟು! ಕುಳಿತು ಯೋಚಿಸಿದರೆ ಕೂಡಿ ಬಾಳಲು ಸಾವಿರ ಕಾರಣ ಸಿಕ್ಕಾವು. ನಾವು ಹಾಡಬೇಕಿದ್ದ ಹಾಡುಗಳು ಕೊರಳ ತುದಿಯಲ್ಲೇ ಮಡಿದಾವು. ಹರವಿ ಆನಂದಿಸುವ ಕನಸುಗಳು ಕಮರಿ ಹೋದಾವು. ಈ ಅಗಾಧ ಬದುಕಿನ ಉಳಿದ ಅವಧಿಗೆ ನೀನೆ ಬೇಕು. ಆ ಸಿಟ್ಟು ಬಿಟ್ಟಾಕಿ ಒಟ್ಟಿಗೆ ಬಾಳೋಣ ಬಂದು ಬಿಡು ಬೇಗ.
ಈ ಪ್ರೇಮಿಗಳ ದಿನದ ದಿವ್ಯ ಘಳಿಗೆಯಲಿ ಮತ್ತೆ ಪ್ರಪೋಸ್ ಮಾಡ್ತಿದೀನಿ...
I LOVE YOU...

ಭಾನುವಾರ, ಜನವರಿ 30, 2011

ಆ ದಿನಗಳ ನೆನಪಿನೊಂದಿಗೆ...

ಸೋನು,
ಅಕ್ಕ ಫೋನ್ ಮಾಡಿದ್ಲು. ಚನ್ನಾಗಿದ್ದಾಳಂತೆ. ಆರು ತಿಂಗಳ ಬಸುರಿ. ನಿಧಾನವಾಗಿ ಅವಳಲ್ಲೊಬ್ಬ ತಾಯಿ ರೂಪಗೊಳ್ಳುತ್ತಿದ್ದಾಳೆ!! ಮಾತಾಡ್ತಾ ಆಡ್ತಾ ಆ ದಿನಗಳನ್ನ ನೆನಪಿಸಿಕೊಂಡೆವು. ಕಣ್ಣುಗಳೆಕೋ ಮಂಜು ಮಂಜು. 'ಮೊದಲಿನ ಬಿರುಸು, ಸೊಗಸು ಎರಡೂ ಕಮ್ಮಿಯಾಗಿದೆ ಅನಿಸ್ತಿದೆ ಕಣೋ' ಅಂದ್ಲು. ಅವಳಿಗೇನು ಗೊತ್ತು? ಬದುಕಿನ ಎರಡೂ ಚಕ್ರ ಕಳಚಿದ ಬಂಡಿ ನಾನು ಅಂತ.
ಮತ್ತದೇ ಮಾತು, ಅದೇ ರಾಗ ಏನಾಗಿತ್ತು? ಯಾಕೆ ಬೇರೆಯಾದ್ರಿ? ಸಾವಿನ ಮನೆಯಲ್ಲಿ ಕುಳಿತು ಜೀವ ಹೋಗಿದ್ದು ಹೇಗೆ? ಎಂದು ಕೇಳಿದಂತಿತ್ತು. 'ಅವಳೇಕೆ ನಿನ್ನ ಬಿಟ್ಟು ಹೋದಳು?' ಎಂದು ಪಿಡಿಸಿ ಕೇಳುವ ಈ ಜಗತ್ತಿಗೆ ಹೇಳಲು At lest ಒಂದು ಉತ್ತರವನ್ನಾದ್ರೂ ಉಳಿಸಿ ಹೋಗಬೇಕಿತ್ತು ನೀನು!!
ದಟ್ಟ ಅಡವಿಯಲಿ ದಾರಿ ತಿಳಿಯದವನನ್ನು ಬಿಟ್ಟು ಹೋಗುವ ಮುನ್ನ ಕೊಂಚ ಯೋಚಿಸಬೇಕಿತ್ತು. ಅವಳೊಂದಿಗೆ ಮಾತನಾಡುಅಷ್ಟು ಹೊತ್ತೂ ಎದೆಯ ಮೂಲೆಯಲ್ಲೆಲ್ಲೋ ತಡೆಹಿಡಿದ ನೋವು ಒಸರುತ್ತಿತ್ತು ರಕ್ತದೊಂದಿಗೆ. ಬದುಕು ಎಷ್ಟು ಬೇಗ ಬದಲಾಯಿತು ನೋಡು, ಸತ್ತೆ ಹೋಗಬೇಕು ಅಂದುಕೊಂಡೋನು ಬದುಕಿಯೇ ಇದ್ದೇನೆ! ಮುಗಿದೇ ಹೋಯಿತು ಅಂದುಕೊಂಡೋರ ಬದುಕು ಮತ್ತೆ ಚಿಗುರುತಿದೆ! ಕಾಲದ ಕೈಯಲ್ಲಿ ಎಲ್ಲವೂ ಅಯೋಮಯ.
ನಿಂತು ನೋಡಿದರೆ ಇಡೀ ಜಗತ್ತು ಓಡುತಿದೆ. ಆದರೆ ಯಾವುದರತ್ತ? ಬದುಕಿನತ್ತಲೋ? ಸಾವಿನತ್ತಲೋ? ನಾವು ಇಷ್ಟೆಲ್ಲಾ ಮಾಡುತಿರುವದು ನೆಮ್ಮದಿಯ ಬದುಕಿಗೋ? ಸಾವಿಗೋ? ಗೊತ್ತಿಲ್ಲ. ಯಾವುದನ್ನೂ ನಿರ್ಧರಿಸಲಾಗದ ಗೊಂದಲ. ಯಾಕೆ 'ನೀವಿಬ್ಬರೂ ಬೇರೆಯಾದ್ರಿ?' ಎಂದು ಚುಚ್ಚಿ ಕೇಳುವ ಈ ದುಷ್ಟ ಪ್ರಪಂಚಕ್ಕೆ "ಬೇರೆಯಾಗಿದ್ದು ಇಬ್ಬರಲ್ಲ, ಅವಳೊಬ್ಬಳೆ. ನಾನಿನ್ನು ಅವಳು ಬಿಟ್ಟು ಹೋದ ಅದೇ ಜಾಗದಲ್ಲಿದ್ದೇನೆ - ದೋಣಿಗೆ ಕಾಯುವ ದಂಡೆಯಂತೆ'' ಅಂತ ಕಿರುಚಿ ಹೇಳೋಣ ಅನಿಸ್ತಿದೆ ಆದರೆ ಈ ಜಗತ್ತಿಗೆ ಕಿವಿಯಿಲ್ಲ, ಕೇವಲ ಬಾಯಿ ಮಾತ್ರ!!
ಎದ್ದು ಹೋಗಿ ಇಷ್ಟು ದಿನಗಳಾದರೂ ನಿನ್ನ ಉಸಿರು, ಘಮ, ಬಿಸುಪು, ಹೆಜ್ಜೆಸದ್ದು, ಕಿರುನಗೆ, ಹುಸಿಗೋಪ ಯಾವುದು ಮರೆಯಾಗಿಲ್ಲ! ಅದೆಲ್ಲ ಇನ್ನೂ ಹಾಗೆ ಇದೆ: ವೀಣೆ ಮಿಟಿದ ಎಷ್ಟೋ ಹೊತ್ತಿನ ನಂತರವೂ ಉಳಿಯುವ ಕಂಪನದಂತೆ!!
ಮನುಷ್ಯ ಮೇಲ್ ಐಯ್ ಡಿ, ಫೋನ್ ನಂಬರ್, ಅಡ್ರೆಸ್, ಬದುಕಿನ ರೀತಿ ಹೀಗೆ ಎಲ್ಲವನ್ನೂ ಬದಲಿಸಿಕೊಳ್ಳಬಹುದು. ಆದರೆ ಮನದ ಭಾವ? ಊಹು೦... ಭಾವಕ್ಕೆ ಲಾಜಿಕ್ ಗೊತ್ತಿಲ್ಲ. ಅದು ಯಾವ ಗಣಿತದ ಸಿದ್ದ ಸೂತ್ರಕ್ಕೂ ಸಿಕ್ಕದ ಮಾಯಾವಿ!! ದಟ್ಟ ಸಂತೋಷದ ಘಳಿಗೆಯಲ್ಲಿದಾಗಲೂ ಯಾವುದೋ ನೋವಿಗೆ ಕಣ್ಣಿರು ಬರಿಸುತ್ತೆ. ದುಖದ ನಟ್ಟ ನಡುವಿದ್ದರೂ ತುಟಿಯ ಮೇಲೊಂದು ಕಿರುನಗೆ ಅರಳಿಸುತ್ತೆ.
ಹುಚ್ಚಿ,
ಇವತ್ತಿನ ಈ ಕ್ಷಣದವರೆಗಿನ ಎಲ್ಲವನ್ನೂ delete ಮಾಡಿ reinstall ಮಾಡಿ ಬಿಡೋಣ ಅನ್ನೋದಕ್ಕೆ ಹೃದಯವೇನು computeraa? ಅದು ನೂರು ಕಂಪ್ಯೂಟರ್ ಗಳನ್ನು ಸೃಷ್ಟಿಸಿದರೂ ಕ್ಷಣಕ್ಕೊಂದು ಭಾವಕ್ಕೆ ದನಿ ತೆರೆದು ಹಾಡುವ ನಿತ್ಯ ಗಾಯಕ!! ಅಂಥ ಭಾವ ಸೃಷ್ಟಿಸೋ ಹೃದಯ ನೀನು ಬಂದೆ ಬರ್ತಿಯಾ ಎಂಬ ದಿವ್ಯ ನಿರೀಕ್ಷೆಯಲ್ಲೇ ಇದೆ: ಮೊದಲ ಮಳೆಗೆ ಬಾಯಿ ತೆರೆದು ಕಾಯುತಿರುವ ಚಿಪ್ಪಿನಂತೆ!!!

ಭಾನುವಾರ, ಜನವರಿ 09, 2011

ದೂರ ತೀರ ಯಾನ...

ಹುಡುಗೀ,
ಯಾಕೋ ಕಳವಳಗೊಂಡಿದ್ದೇನೆ. ನಿನ್ನ ಮರೆಯುತ್ತಿದ್ದೆನಾ? ಇತ್ತೀಚಿಗೆ ಯಾಕೋ ಹಾಗನಿಸುತ್ತಿದೆ. ಬದುಕೆಂಬ ಇಡೀ ದಿನದ ಗುನಗುವ ಹಾಡಾಗಬೇಕಾದವಳು, ಎಷ್ಟು ನೆನಪಿಸಿಕೊಂಡರೂ ತುಟಿಗೆ ಬರದೆ ಎದೆಯಲ್ಲೇ ಉಳಿದು ಹೋಗುವ ಪಲ್ಲವಿಯಂತಾದೆಯ? ಗೊತ್ತಿಲ್ಲ!
ಪ್ರತಿ ಸಂಬಂಧಕ್ಕೂ ಒಂದು ಆಯುಷ್ಯ ವಿರುವಂತೆ, ನೋವಿಗೂ ಆಯುಷ್ಯ ವಿರುತ್ತದಾ? ನೀನು ತುಳಿದು ಹೋದ ಎದೆಯ ಮೇಲೆ ಹೊಸ ಗರಿಕೆ ಮೂಡುತ್ತಿದೆಯಾ? ಕಾಲದ ಹೊಡೆತಕ್ಕೆ ಸಿಕ್ಕು ಕರಗಿ ಹೋಗುವ ಚರಾ ಚರ ವಸ್ತುಗಳಲಿ ನೀನೂ ಸೇರಿದೆಯಾ? ಸುಖದ ಅಮಲಿನಲ್ಲಿದ್ದ ಮನುಷ್ಯ ಎಲ್ಲವನ್ನು ಬಲು ಬೇಗ ಮರೆತು ಬಿಡುತ್ತಾನಂತೆ: ನಾನೀಗ ಸುಖದಲ್ಲಿದ್ದೆನಾ? ಉಹೂ... ನಿರ್ಧರಿಸಲಾಗುತ್ತಿಲ್ಲ!
ಬೇಸಿಗೆಯ ಖಾಲಿ ಮದ್ಯಾಹ್ನ ದಂತಿದ್ದ ಬಾಳಲ್ಲಿ ಇಳಿ ಸಂಜೆಯ ತಂಗಾಳಿಯಂತೆ ನಡೆದು ಬಂದವಳು ನೀನು. ನೀನಿದ್ದ ಕಾಲ ನನ್ನ ಬದುಕಿನ ಸುವರ್ಣಯುಗ! ನೀನು ಕೊಟ್ಟ ಪ್ರೀತಿ, ಮಮತೆ, ಕಾಳಜಿ, ಅಕ್ಕರೆಗೆ ನಾನು ಸದಾ ಋಣಿ. ಇದ್ದ ಎರಡು ವರ್ಷಗಳ ಕಾಲ ನೀನು ನನ್ನ ಬೆಳೆಸಿದೆಯಾ? ನಾನು ನಿನ್ನ ಬೆಳೆಸಿದೆನಾ? ಅಥವಾ ಪ್ರೀತಿ ನಮ್ಮಿಬ್ಬರನ್ನೂ ಬೆಳೆಸಿತಾ? ಗೊತ್ತಿಲ್ಲ. ಎರಡು ವರ್ಷಗಳ ದಿವ್ಯ ಅನುಭೂತಿಯ ಜೊತೆಗೆ ಬರಸಿಡಿಲಿನಂತಹ ಅಪವಾದದೊಂದಿಗೆ ಎದ್ದು ಹೋದೆಯಲ್ಲ; ಅವತ್ತೇ ಬದುಕಿನ ಮಹತ್ವದ ಪಾಠ ಕಲಿತುಬಿಟ್ಟೆ!!
Anyway, ಯಾವುದೊ ಮಾಮರದ ಚಿಗುರು ತಿಂದ ಕೋಗಿಲೆಯ ಇಪಾದ ದ್ವನಿಯಂತೆ ನನ್ನ ಬಾಳು ಪೂರ್ತಿ ನಿನ್ನ ನೆನಪಿದ್ದರೂ, ಮರೆತ ದಾರಿಯ ದೂರದ ಪ್ರಯಾಣಿಕನಂತೆ ನಡೆದು ಹೊರಟಿದ್ದೇನೆ. ಮನದ ಮೂಲೆಯಲ್ಲಿ ಒಣಗಿ ಸೊರಗಿದ ಕೊರಡು ಕೊನರುವ ಸೂಚನೆ. ಅಲ್ಲಿ ಮತ್ತೆ ಹಾಡುಗಳ ಕಲರವ. ಚುಕ್ಕಿಗಳ ರಂಗವಲ್ಲಿ. ಸಡಗರದ ತೋರಣ. ಖುಷಿಯ ಚಿತ್ತಾರ. ಯಾವುದೋ ಮಾಯೆಗೆ ತನ್ನ ದಾರಿಯನ್ನು ಬಿಟ್ಟು ಹೋದ ಬಂಡಿ ತಿರುಗಿ ಹಳಿಗೆ ಬಂದಂತೆ: ಮತ್ತೆ ಎಲ್ಲವನ್ನೂ ಮೊದಲಿನಿಂದ ಪ್ರಾರಂಭಿಸುತ್ತಿದ್ದೇನೆ. ನಡೆವ ದಾರಿಯ ದೂರ ಅಗಾಧ. ಈ ಪ್ರಯಾಣದ ಪ್ರತಿ ಹೆಜ್ಜೆಯಲ್ಲೂ ನಿನ್ನ ನೆನಪಿರುತ್ತೆ; ಕಾಲಿನಲ್ಲಿ ಬರದೆ ಉಳಿದು ಹೋದ ಮುಳ್ಳಿನ ತುದಿಯಂತೆ!!

ಕೊರಡು ಕೊನರುತಿದೆ...

ದಿಕ್ಕು ತಪ್ಪಿದ ಪ್ರಯಾಣಿಕನಂತೆ
ನಿಂತೇ ಇದ್ದೆ ದುಷ್ಟ
ಬದುಕಿನ ಒಬ್ಬಂಟಿ ನಿಲ್ದಾಣದಲಿ
ಯಾವ ನಿರ್ಧಾರವು
ಬದಲಿಸಲಾಗದ ಅಸ್ತಿಪಂಜರದಂತೆ
ಯಾವ ಮಾಯೆಯೋ
ಯಾವ ಮರುಳೋ
ತುಂಬಿ ಬರುತಿದೆ ಹರುಷ
ಮನದ ಬಾನಂಗಳದಲಿ
ಕಳೆದ ದಾರಿ ಸಿಕ್ಕ
ಖುಷಿಯಲಿ ಹೃದಯ
ಹಾಡುತಿದೆ ಸಾರಿ
ಕನಸು ಕಾಣುವ ಕಣ್ಣಿಗೆ ಕನ್ನಡಕ
ಆದರೂ ಕನಸು ಮಂಜಾಗಿಲ್ಲ
ಕಣ್ಣಿರುವ ಈ ಕುರುಡನಿಗೂ
ಕಾಣುವ ತಿಳಿಮುಗಿಲ
ಕಾಮನಬಿಲ್ಲು
ಅದಕ್ಕೆ ಇರಬೇಕು,
ಕೊರಡು ಕೊನರಿದ ಘಮಲು