ಶನಿವಾರ, ಫೆಬ್ರವರಿ 05, 2011

ಎದ್ದು ಹೋದವಳಿಗೊಂದು ಮುದ್ದಾದ ಪತ್ರ!!


ಸೋನು,
ಪ್ರಪೋಸ್ ಮಾಡದೇ ಶುರುವಾದ ಪ್ರೇಮ ನಮ್ಮದು! ಹೌದು ಪ್ರಪೋಸ್ ಮಾಡಿ ತೂಕ, ಅಳತೆ ಹಾಕಿ ಮಾಡೋದಕ್ಕೆ ಇದೇನು ಈರುಳ್ಳಿ ವ್ಯಾಪಾರವಾ? ಇಲ್ಲಾ ರಿಯಲ್ ಎಸ್ಟೇಟ್ ಬುಸಿನೆಸ್ಸಾ? ತಾಯಿ ಮಡಿಲಲ್ಲಿ ಬೆಚ್ಚಗೆ ಮಲಗಿದ ಹಸುಗೂಸು ನಿದ್ದೆಯಲ್ಲೇ ನಗುವ ಪರಿಯಂತೆ; ಹುಚ್ಚು ಹೃದಯ ಬೆಚ್ಚಗಾಗುವ ಆ ಕ್ಷಣ ಹೊತ್ತು ಯಾರಿಗೆ ಗೊತ್ತು?
ಒಂದು ಸುಂದರ ಸಂಜೆಯ ಜಡಿಮಳೆಯಲಿ ಯಾವುದೋ ಜನ್ಮದ ಒಪ್ಪಂದದ ಮುಂದುವರೆದ ಭಾಗವಾಗಿ ನಾವಿಬ್ಬರು ಸಿಕ್ಕೆವು! ನೋಡಿದ ಮರುಕ್ಷಣದಿಂದ ಬದುಕಿನ ಎಲ್ಲ ಕಾರ್ಮೋಡಗಳು ಸರಿದು ಮೂಡಿದ್ದು ಪ್ರೀತಿಯ ಕಾಮನಬಿಲ್ಲು! ಪ್ರೀತಿಸೋದಕ್ಕೆ ಕಾರಣ ಬೇಕಾ? never! ಕಾರಣವಿಲ್ಲದೆ ಹುಟ್ಟುವದೆ ನಿಜವಾದ ಪ್ರೀತಿ. ಕಾರಣ ಇಟ್ಟುಕೊಂಡು ಹುಟ್ಟೋದಕ್ಕೆ ಅದೇನು ಭಾರತದ ಪಾಪುಲೆಶನ್ನಾ?
ಹುಚ್ಚಿ, ಅದು ಕಲ್ಲು ಕರಗುವ ಸಮಯ, ತಾಯಿ ಹಕ್ಕಿ ಗುಟುಕು ಹಾಕುವ ಸಮಯ, ಹಾಳು ಬೆಳದಿಂಗಳು ಸಮುದ್ರದಲಿ ಲೀನವಾಗುವ ಸಮಯ, ಅದು, ಬಯಸಿದ ಮನಸುಗಳು ಒಂದಾಗುವ ಸಮಯ! ನಾವು ಒಂದಾಗಿದ್ದು ಹಾಗೆ ಅಲ್ಲವಾ? ದಟ್ಟ ಕಾನನದಲಿ ಕಳೆದು ಹೋದವನಿಗೆ ಸಿಕ್ಕ ದಾರಿಯಂತೆ, ಕಾರ್ಗತ್ತಲಿನಲ್ಲಿ ಬೆಪ್ಪಾಗಿ ನಿಂತವನಿಗೆ ಕಂಡ ಬೆಳಕ ಬೀಜದಂತೆ. ಎಷ್ಟು ಅದ್ಭುತವಾಗಿದ್ದವು ಆ ದಿನಗಳು! ಕುಡುಕ ಡ್ರೈವರ್ ನ ಕೈಗೆ ಸಿಕ್ಕ ಹೊಚ್ಚ ಹೊಸ ಲಾರಿಯಂತೆ! ಎಂಥ ವೇಗ, ಎಂಥ ಬಿರುಸು, ಎಂಥ ಸೊಗಸು. ಹಾಗೆ ಬದುಕಿನ ಸುವಿಶಾಲ ಹೆದ್ದಾರಿಯಲಿ ಹುಮ್ಮಸ್ಸಿನಲ್ಲಿ ಓಡುತ್ತಿದ್ದವನಿಗೆ Road under construction ಬೋರ್ಡು ಕಣ್ಣಿಗೆ ಬಿತ್ತು ನೋಡು ಸ್ಪಾನರ್ ಇಲ್ಲದೆ ಕಳಚಿ ಬಿದ್ದ ಬೋಲ್ಟ್ ನಂತಾದೆ! ಹೃದಯದ ರಿಪೇರಿಗೆ ಯಾವ ಸ್ಪಾನರು? ನೀನಿಲ್ಲದ ಈ ಬದುಕಲಿ ಅದ್ಭುತ ಮೆಕ್ಯಾನಿಕ್ ನೋಬ್ಬನಿಗಾಗಿ ಕಾಯುವ ಲಟಾರಿ ಲಾರಿಯಂತಾಗಿದ್ದೇನೆ!
ಹುಡುಗೀ, ಪ್ರತಿ ಸಿಟ್ಟಿಗೂ ಒಂದು ಆಯುಷ್ಯವಿರುತ್ತದಂತೆ! ಒಬ್ಬ ಬುದ್ದಿವಂತ ಜೀವನ ಪೂರ್ತಿ ದ್ವೇಷಿಸಬಹುದು ಆದರೆ ಹೃದಯವಂತ? ಊಹು೦... ಅದೇನು ಜನ್ಮ ಪೂರ್ತಿ ಜೊತೆಗಿರಲು ಹೃದಯ ಬಯಸಿದ ಪ್ರೀತಿಯಾ? ಬಿ.ಪಿ ಶುಗರ್ ಬರಿಸೋ ಕೆಟ್ಟ ಸಿಟ್ಟು! ಕುಳಿತು ಯೋಚಿಸಿದರೆ ಕೂಡಿ ಬಾಳಲು ಸಾವಿರ ಕಾರಣ ಸಿಕ್ಕಾವು. ನಾವು ಹಾಡಬೇಕಿದ್ದ ಹಾಡುಗಳು ಕೊರಳ ತುದಿಯಲ್ಲೇ ಮಡಿದಾವು. ಹರವಿ ಆನಂದಿಸುವ ಕನಸುಗಳು ಕಮರಿ ಹೋದಾವು. ಈ ಅಗಾಧ ಬದುಕಿನ ಉಳಿದ ಅವಧಿಗೆ ನೀನೆ ಬೇಕು. ಆ ಸಿಟ್ಟು ಬಿಟ್ಟಾಕಿ ಒಟ್ಟಿಗೆ ಬಾಳೋಣ ಬಂದು ಬಿಡು ಬೇಗ.
ಈ ಪ್ರೇಮಿಗಳ ದಿನದ ದಿವ್ಯ ಘಳಿಗೆಯಲಿ ಮತ್ತೆ ಪ್ರಪೋಸ್ ಮಾಡ್ತಿದೀನಿ...
I LOVE YOU...

3 ಕಾಮೆಂಟ್‌ಗಳು: