ಭಾನುವಾರ, ಜನವರಿ 30, 2011

ಆ ದಿನಗಳ ನೆನಪಿನೊಂದಿಗೆ...

ಸೋನು,
ಅಕ್ಕ ಫೋನ್ ಮಾಡಿದ್ಲು. ಚನ್ನಾಗಿದ್ದಾಳಂತೆ. ಆರು ತಿಂಗಳ ಬಸುರಿ. ನಿಧಾನವಾಗಿ ಅವಳಲ್ಲೊಬ್ಬ ತಾಯಿ ರೂಪಗೊಳ್ಳುತ್ತಿದ್ದಾಳೆ!! ಮಾತಾಡ್ತಾ ಆಡ್ತಾ ಆ ದಿನಗಳನ್ನ ನೆನಪಿಸಿಕೊಂಡೆವು. ಕಣ್ಣುಗಳೆಕೋ ಮಂಜು ಮಂಜು. 'ಮೊದಲಿನ ಬಿರುಸು, ಸೊಗಸು ಎರಡೂ ಕಮ್ಮಿಯಾಗಿದೆ ಅನಿಸ್ತಿದೆ ಕಣೋ' ಅಂದ್ಲು. ಅವಳಿಗೇನು ಗೊತ್ತು? ಬದುಕಿನ ಎರಡೂ ಚಕ್ರ ಕಳಚಿದ ಬಂಡಿ ನಾನು ಅಂತ.
ಮತ್ತದೇ ಮಾತು, ಅದೇ ರಾಗ ಏನಾಗಿತ್ತು? ಯಾಕೆ ಬೇರೆಯಾದ್ರಿ? ಸಾವಿನ ಮನೆಯಲ್ಲಿ ಕುಳಿತು ಜೀವ ಹೋಗಿದ್ದು ಹೇಗೆ? ಎಂದು ಕೇಳಿದಂತಿತ್ತು. 'ಅವಳೇಕೆ ನಿನ್ನ ಬಿಟ್ಟು ಹೋದಳು?' ಎಂದು ಪಿಡಿಸಿ ಕೇಳುವ ಈ ಜಗತ್ತಿಗೆ ಹೇಳಲು At lest ಒಂದು ಉತ್ತರವನ್ನಾದ್ರೂ ಉಳಿಸಿ ಹೋಗಬೇಕಿತ್ತು ನೀನು!!
ದಟ್ಟ ಅಡವಿಯಲಿ ದಾರಿ ತಿಳಿಯದವನನ್ನು ಬಿಟ್ಟು ಹೋಗುವ ಮುನ್ನ ಕೊಂಚ ಯೋಚಿಸಬೇಕಿತ್ತು. ಅವಳೊಂದಿಗೆ ಮಾತನಾಡುಅಷ್ಟು ಹೊತ್ತೂ ಎದೆಯ ಮೂಲೆಯಲ್ಲೆಲ್ಲೋ ತಡೆಹಿಡಿದ ನೋವು ಒಸರುತ್ತಿತ್ತು ರಕ್ತದೊಂದಿಗೆ. ಬದುಕು ಎಷ್ಟು ಬೇಗ ಬದಲಾಯಿತು ನೋಡು, ಸತ್ತೆ ಹೋಗಬೇಕು ಅಂದುಕೊಂಡೋನು ಬದುಕಿಯೇ ಇದ್ದೇನೆ! ಮುಗಿದೇ ಹೋಯಿತು ಅಂದುಕೊಂಡೋರ ಬದುಕು ಮತ್ತೆ ಚಿಗುರುತಿದೆ! ಕಾಲದ ಕೈಯಲ್ಲಿ ಎಲ್ಲವೂ ಅಯೋಮಯ.
ನಿಂತು ನೋಡಿದರೆ ಇಡೀ ಜಗತ್ತು ಓಡುತಿದೆ. ಆದರೆ ಯಾವುದರತ್ತ? ಬದುಕಿನತ್ತಲೋ? ಸಾವಿನತ್ತಲೋ? ನಾವು ಇಷ್ಟೆಲ್ಲಾ ಮಾಡುತಿರುವದು ನೆಮ್ಮದಿಯ ಬದುಕಿಗೋ? ಸಾವಿಗೋ? ಗೊತ್ತಿಲ್ಲ. ಯಾವುದನ್ನೂ ನಿರ್ಧರಿಸಲಾಗದ ಗೊಂದಲ. ಯಾಕೆ 'ನೀವಿಬ್ಬರೂ ಬೇರೆಯಾದ್ರಿ?' ಎಂದು ಚುಚ್ಚಿ ಕೇಳುವ ಈ ದುಷ್ಟ ಪ್ರಪಂಚಕ್ಕೆ "ಬೇರೆಯಾಗಿದ್ದು ಇಬ್ಬರಲ್ಲ, ಅವಳೊಬ್ಬಳೆ. ನಾನಿನ್ನು ಅವಳು ಬಿಟ್ಟು ಹೋದ ಅದೇ ಜಾಗದಲ್ಲಿದ್ದೇನೆ - ದೋಣಿಗೆ ಕಾಯುವ ದಂಡೆಯಂತೆ'' ಅಂತ ಕಿರುಚಿ ಹೇಳೋಣ ಅನಿಸ್ತಿದೆ ಆದರೆ ಈ ಜಗತ್ತಿಗೆ ಕಿವಿಯಿಲ್ಲ, ಕೇವಲ ಬಾಯಿ ಮಾತ್ರ!!
ಎದ್ದು ಹೋಗಿ ಇಷ್ಟು ದಿನಗಳಾದರೂ ನಿನ್ನ ಉಸಿರು, ಘಮ, ಬಿಸುಪು, ಹೆಜ್ಜೆಸದ್ದು, ಕಿರುನಗೆ, ಹುಸಿಗೋಪ ಯಾವುದು ಮರೆಯಾಗಿಲ್ಲ! ಅದೆಲ್ಲ ಇನ್ನೂ ಹಾಗೆ ಇದೆ: ವೀಣೆ ಮಿಟಿದ ಎಷ್ಟೋ ಹೊತ್ತಿನ ನಂತರವೂ ಉಳಿಯುವ ಕಂಪನದಂತೆ!!
ಮನುಷ್ಯ ಮೇಲ್ ಐಯ್ ಡಿ, ಫೋನ್ ನಂಬರ್, ಅಡ್ರೆಸ್, ಬದುಕಿನ ರೀತಿ ಹೀಗೆ ಎಲ್ಲವನ್ನೂ ಬದಲಿಸಿಕೊಳ್ಳಬಹುದು. ಆದರೆ ಮನದ ಭಾವ? ಊಹು೦... ಭಾವಕ್ಕೆ ಲಾಜಿಕ್ ಗೊತ್ತಿಲ್ಲ. ಅದು ಯಾವ ಗಣಿತದ ಸಿದ್ದ ಸೂತ್ರಕ್ಕೂ ಸಿಕ್ಕದ ಮಾಯಾವಿ!! ದಟ್ಟ ಸಂತೋಷದ ಘಳಿಗೆಯಲ್ಲಿದಾಗಲೂ ಯಾವುದೋ ನೋವಿಗೆ ಕಣ್ಣಿರು ಬರಿಸುತ್ತೆ. ದುಖದ ನಟ್ಟ ನಡುವಿದ್ದರೂ ತುಟಿಯ ಮೇಲೊಂದು ಕಿರುನಗೆ ಅರಳಿಸುತ್ತೆ.
ಹುಚ್ಚಿ,
ಇವತ್ತಿನ ಈ ಕ್ಷಣದವರೆಗಿನ ಎಲ್ಲವನ್ನೂ delete ಮಾಡಿ reinstall ಮಾಡಿ ಬಿಡೋಣ ಅನ್ನೋದಕ್ಕೆ ಹೃದಯವೇನು computeraa? ಅದು ನೂರು ಕಂಪ್ಯೂಟರ್ ಗಳನ್ನು ಸೃಷ್ಟಿಸಿದರೂ ಕ್ಷಣಕ್ಕೊಂದು ಭಾವಕ್ಕೆ ದನಿ ತೆರೆದು ಹಾಡುವ ನಿತ್ಯ ಗಾಯಕ!! ಅಂಥ ಭಾವ ಸೃಷ್ಟಿಸೋ ಹೃದಯ ನೀನು ಬಂದೆ ಬರ್ತಿಯಾ ಎಂಬ ದಿವ್ಯ ನಿರೀಕ್ಷೆಯಲ್ಲೇ ಇದೆ: ಮೊದಲ ಮಳೆಗೆ ಬಾಯಿ ತೆರೆದು ಕಾಯುತಿರುವ ಚಿಪ್ಪಿನಂತೆ!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ