ಭಾನುವಾರ, ಜನವರಿ 09, 2011

ದೂರ ತೀರ ಯಾನ...

ಹುಡುಗೀ,
ಯಾಕೋ ಕಳವಳಗೊಂಡಿದ್ದೇನೆ. ನಿನ್ನ ಮರೆಯುತ್ತಿದ್ದೆನಾ? ಇತ್ತೀಚಿಗೆ ಯಾಕೋ ಹಾಗನಿಸುತ್ತಿದೆ. ಬದುಕೆಂಬ ಇಡೀ ದಿನದ ಗುನಗುವ ಹಾಡಾಗಬೇಕಾದವಳು, ಎಷ್ಟು ನೆನಪಿಸಿಕೊಂಡರೂ ತುಟಿಗೆ ಬರದೆ ಎದೆಯಲ್ಲೇ ಉಳಿದು ಹೋಗುವ ಪಲ್ಲವಿಯಂತಾದೆಯ? ಗೊತ್ತಿಲ್ಲ!
ಪ್ರತಿ ಸಂಬಂಧಕ್ಕೂ ಒಂದು ಆಯುಷ್ಯ ವಿರುವಂತೆ, ನೋವಿಗೂ ಆಯುಷ್ಯ ವಿರುತ್ತದಾ? ನೀನು ತುಳಿದು ಹೋದ ಎದೆಯ ಮೇಲೆ ಹೊಸ ಗರಿಕೆ ಮೂಡುತ್ತಿದೆಯಾ? ಕಾಲದ ಹೊಡೆತಕ್ಕೆ ಸಿಕ್ಕು ಕರಗಿ ಹೋಗುವ ಚರಾ ಚರ ವಸ್ತುಗಳಲಿ ನೀನೂ ಸೇರಿದೆಯಾ? ಸುಖದ ಅಮಲಿನಲ್ಲಿದ್ದ ಮನುಷ್ಯ ಎಲ್ಲವನ್ನು ಬಲು ಬೇಗ ಮರೆತು ಬಿಡುತ್ತಾನಂತೆ: ನಾನೀಗ ಸುಖದಲ್ಲಿದ್ದೆನಾ? ಉಹೂ... ನಿರ್ಧರಿಸಲಾಗುತ್ತಿಲ್ಲ!
ಬೇಸಿಗೆಯ ಖಾಲಿ ಮದ್ಯಾಹ್ನ ದಂತಿದ್ದ ಬಾಳಲ್ಲಿ ಇಳಿ ಸಂಜೆಯ ತಂಗಾಳಿಯಂತೆ ನಡೆದು ಬಂದವಳು ನೀನು. ನೀನಿದ್ದ ಕಾಲ ನನ್ನ ಬದುಕಿನ ಸುವರ್ಣಯುಗ! ನೀನು ಕೊಟ್ಟ ಪ್ರೀತಿ, ಮಮತೆ, ಕಾಳಜಿ, ಅಕ್ಕರೆಗೆ ನಾನು ಸದಾ ಋಣಿ. ಇದ್ದ ಎರಡು ವರ್ಷಗಳ ಕಾಲ ನೀನು ನನ್ನ ಬೆಳೆಸಿದೆಯಾ? ನಾನು ನಿನ್ನ ಬೆಳೆಸಿದೆನಾ? ಅಥವಾ ಪ್ರೀತಿ ನಮ್ಮಿಬ್ಬರನ್ನೂ ಬೆಳೆಸಿತಾ? ಗೊತ್ತಿಲ್ಲ. ಎರಡು ವರ್ಷಗಳ ದಿವ್ಯ ಅನುಭೂತಿಯ ಜೊತೆಗೆ ಬರಸಿಡಿಲಿನಂತಹ ಅಪವಾದದೊಂದಿಗೆ ಎದ್ದು ಹೋದೆಯಲ್ಲ; ಅವತ್ತೇ ಬದುಕಿನ ಮಹತ್ವದ ಪಾಠ ಕಲಿತುಬಿಟ್ಟೆ!!
Anyway, ಯಾವುದೊ ಮಾಮರದ ಚಿಗುರು ತಿಂದ ಕೋಗಿಲೆಯ ಇಪಾದ ದ್ವನಿಯಂತೆ ನನ್ನ ಬಾಳು ಪೂರ್ತಿ ನಿನ್ನ ನೆನಪಿದ್ದರೂ, ಮರೆತ ದಾರಿಯ ದೂರದ ಪ್ರಯಾಣಿಕನಂತೆ ನಡೆದು ಹೊರಟಿದ್ದೇನೆ. ಮನದ ಮೂಲೆಯಲ್ಲಿ ಒಣಗಿ ಸೊರಗಿದ ಕೊರಡು ಕೊನರುವ ಸೂಚನೆ. ಅಲ್ಲಿ ಮತ್ತೆ ಹಾಡುಗಳ ಕಲರವ. ಚುಕ್ಕಿಗಳ ರಂಗವಲ್ಲಿ. ಸಡಗರದ ತೋರಣ. ಖುಷಿಯ ಚಿತ್ತಾರ. ಯಾವುದೋ ಮಾಯೆಗೆ ತನ್ನ ದಾರಿಯನ್ನು ಬಿಟ್ಟು ಹೋದ ಬಂಡಿ ತಿರುಗಿ ಹಳಿಗೆ ಬಂದಂತೆ: ಮತ್ತೆ ಎಲ್ಲವನ್ನೂ ಮೊದಲಿನಿಂದ ಪ್ರಾರಂಭಿಸುತ್ತಿದ್ದೇನೆ. ನಡೆವ ದಾರಿಯ ದೂರ ಅಗಾಧ. ಈ ಪ್ರಯಾಣದ ಪ್ರತಿ ಹೆಜ್ಜೆಯಲ್ಲೂ ನಿನ್ನ ನೆನಪಿರುತ್ತೆ; ಕಾಲಿನಲ್ಲಿ ಬರದೆ ಉಳಿದು ಹೋದ ಮುಳ್ಳಿನ ತುದಿಯಂತೆ!!

1 ಕಾಮೆಂಟ್‌: