ಶನಿವಾರ, ಮಾರ್ಚ್ 01, 2014

‘ಅಮ್ಮ’ ಮತ್ತು ಅನ್ನದ ಬೆಲೆ ತಿಳಿಸಿದ ಸಿಟ್ಟು...


ನನಗೆ ನೆನಪಿದ್ದಂತೆ, ನಾನು ಮೊಟ್ಟ ಮೊದಲು ಸಿಟ್ಟು ಮಾಡಿಕೊಂಡಿದ್ದು ನನ್ನ ಪ್ರೀತಿಯ ‘ಅಮ್ಮ’ನ ಮೇಲೆ!!! ಇವತ್ತಿಗೂ ಕಣ್ಣಿಗೆ ಕಟ್ಟಿದಂತೆ ನೆನಪಿದೆ. ಆಗ ನಾನು 5 ಅಥವಾ 6 ನೇ ಕ್ಲಾಸ್ ನಲ್ಲಿದ್ದೆ. ಉತ್ತರ ಕರ್ನಾಟಕದ ಬಯಲುಸೀಮೆಯವರಂತೆ ನಂಗೂ ರಣ ಹಸಿವು. ಏನು ಕೊಟ್ಟರೂ, ಎಷ್ಟು ಕೊಟ್ಟರೂ ತಣಿಯದ ಜಠರಾಗ್ನಿ.
          ಒಂದು ಮದ್ಯಾಹ್ನ ಸ್ಕೂಲ್ ಮುಗಿಸಿ ಸಳಸಳನೆ ಬೆವೆಯುತ್ತಾ ಮನೆಗೆ ಓಡಿ ಬಂದರೇ (ಮನೆಯಿಂದ ಸ್ಕೂಲ್ 2 ಕಿ.ಮೀ ದೂರ) ಅಮ್ಮ ಕಲೆಸಿಕೊಟ್ಟದ್ದು ಅನ್ನ, ಟೊಮೇಟೊ ಸಾರು!!! ಊಟ ಮಾಡ್ತಾ ಮಾಡ್ತಾ ಒಂದೇ ಒಂದು ಕಲ್ಲು ಸಿಕ್ಕಿ ಬಿಡ್ತು. ಎಲ್ಲಿತ್ತೋ ಆ ಸಿಟ್ಟು; ಉಣ್ಣುವ ತಟ್ಟೆ ಬೀಸಿ ಎದುರಿಗಿರೋ ಗೋಡೆಗೆ ಅಪ್ಪಳಿಸಿಬಿಟ್ಟೆ! ಬಿಸಿಲಲಿ ಓಡೀ ಬಂದದ್ದು, ರಣ ಹಸಿವು, ಇಷ್ಟವಿಲ್ಲದ ಟೊಮೇಟೊ ಸಾರು, ಅದರಲ್ಲೂ ಸಿಕ್ಕ ಬೆಣಚುಗಲ್ಲು. ಎಲ್ಲ ಸೇರಿ ನನ್ನೊಳಗಿನ ಮನುಷ್ಯನೇ ಸ್ವಲ್ಪ ಕಾಲ ಮರೆಯಾದ  ಕ್ಷಣ.
          ಸರಿಯಾಗಿ ಎರಡು ನಿಮಿಷ ಯಾವುದೋ ಟ್ರಾನ್ಸ್ ನಲ್ಲಿದ್ದ ಅನುಭವ. ಎಲ್ಲವೂ ಸ್ಥಿಮಿತಕ್ಕೆ ಬಂದು ಕಣ್ಣುಜ್ಜಿಕೊಂಡು ನೋಡಿದ್ರೆ; ಗೋಡೆಗೆ ರಾಚಿದ ಅನ್ನ, ಬಿದ್ದ ಏಟಿಗೆ ಚಪ್ಪಟೆಯಾದ ತಟ್ಟೆ, ಅಮ್ಮನ ಕಣ್ಣಲ್ಲಿ ನೀರು. ಬೇರೇನೂ ತೋಚದೇ ಎದ್ದು ಶಾಲೆಗೇ ಹೋಗಿ ಬಿಟ್ಟೆ. ಇಡೀ ದಿನ ಯೋಚನೆ ಮಾಡಿ, ಯಾವ ಮುಖ ಇಟ್ಟುಕೊಂಡು ಅಮ್ಮನ ಕ್ಷಮೆ ಕೇಳೋದು? ಛೇ.. ಎಂಥ ತಪ್ಪು ಮಾಡಿ ಬಿಟ್ಟೆ. ಕ್ಷಣ ಕ್ಷಣಕ್ಕೂ ಪ್ರೀತಿಯಿಂದ ಅನ್ನ ಕಲಿಸಿಕೊಂಡು ಬಂದು ತಟ್ಟೆ ಕೈಗಿಟ್ಟ ಅಮ್ಮನ ಚಿತ್ರವೇ ಕಣ್ಮುಂದೆ ಬರತೊಡಗಿತು. ಸತ್ತೇ  ಹೋಗಿ ಬಿಡೋವಷ್ಟು ನನ್ನ ಮೇಲೆ ನನಗೆ ಅಸಹ್ಯ.
ರಾತ್ರಿ ಎದ್ದು ಮನೆಗೆ ಹೋದರೆ, ಅದೇ ನಗು ಮುಖ, ಮದ್ಯಾಹ್ನ ಏನೂ ಆಗೇ ಇಲ್ಲವೇನೋ ಎಂಬಷ್ಟು ಸಮಾಧಾನ. “ಅರ್ಜೆಂಟ್ ಲ್ಲಿ ಅಕ್ಕಿ ಆರಿಸೋದು ಮರ್ತುಬಿಟ್ಟೆ ಕಣೋ” ಅಂತ ಮಗುವಿನಂತೆ ತಪ್ಪಿತಸ್ಥ ದನಿಯಲಿ ಹೇಳಿದಾಗ, ಯಾಕೋ ತಡೆಯದೆ ಅಮ್ಮನನ್ನ ತಬ್ಬಿಕೊಂಡು ಮನಸು ಹಗುರಾಗೋ ವರೆಗೂ ಅತ್ತುಬಿಟ್ಟಿದ್ದೆ.
ಅದಾದ ನಂತರ ಡಿಗ್ರಿ ಮುಗಿಸಿ ಬೆಂಗಳೂರಿಗೆ ಬಂದು ಬಿಟ್ಟೆ. ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ. ಇಲ್ಲಿಯ ಹೋಟೆಲ್ ಊಟ, ಅಮ್ಮನಿಲ್ಲದ ಇಕ್ಕಟ್ಟು ರೂಮು ಹುಟ್ಟಿಸುವ ಅನಾಥ ಪ್ರಜ್ಞೆ, ಎಲ್ಲ ಎಲ್ಲ ಸೇರಿ ನನಗೀಗ ಗೊತ್ತಾಗಿದೆ; ಅಮ್ಮ ಮತ್ತು ಅನ್ನದ ಬೆಲೆ!!! ಈಗಲೂ ಊರಿಗೆ ಹೋದಾಗ ಟೊಮೇಟೊ ಸಾರು ನೋಡಿದ್ರೆ ಅದೇ ಮುಗ್ದ ನಗು ಅಮ್ಮನ ಮುಖದ ಮೇಲೆ. ನಾನು ಪ್ಯಾಲಿ ನಗೆ ನಕ್ಕು ತಬ್ಬಿಕೊಳ್ತಿನಿ. ನನಗೀಗ ಟೊಮೇಟೊ ಸಾರು ಇಷ್ಟ!!!
ಕೊನೆಗೆ ನಾನ್ಯಾಕೆ ಅವತ್ತು ಹಾಗೆ ರಾಕ್ಷಸನ ಥರ ಆಡಿದ್ದೆ ಅಂದ್ರೆ; ನಮ್ಮ ಪಕ್ಕದ ಮನೆಯ ಒಬ್ಬ ಹುಡುಗ ನನಗಿಂತ 4-5 ವರ್ಷಕ್ಕೆ ದೊಡ್ಡೋನು ಪ್ರತಿದಿನ ಗೋಡೆಗೆ ತಟ್ಟೆ ಅಪ್ಪಳಿಸುತ್ತಿದ್ದ ಮತ್ತು ಅದು ಈಗಲೂ ಮುಂದುವರೆದಿದೆ!! Anyway ಅವತ್ತಿನ ತಪ್ಪಿಗೆ ಈಗ ಕೇಳ್ತಿದೀನಿ “ಅಮ್ಮಾ ಈ ನಿನ್ನ ದುಷ್ಟ ಮಗನನ್ನ ಕ್ಷಮಿಸಿಬಿಡು please….”  

(ಓ ಮನಸೇ 86 ರಲ್ಲಿ ಪ್ರಕಟಿತ)