ಬುಧವಾರ, ಜನವರಿ 27, 2010

19th Jan 2010, 12.00 am


ಸೋನು,
ಇಲ್ಲಿ ರಾತ್ರಿಯೊಂದು ಸದ್ದಿಲ್ಲದೇ ಸರಿದು ಹೋಗುತ್ತಿದೆ. ಮನೆಯ ಮುಂದಿನ ಅಂಗಳದಲ್ಲಿ ನಿಂತು ನೋಡಿದರೆ ಅರ್ಧ ಚಂದ್ರ! ನನಗೆ ನಿನ್ನ ಅರೆಮುಚ್ಚಿದ ಕಣ್ಣುಗಳದೇ ನೆನಪು. ಎಲ್ಲಿದ್ದಿ ಹುಡುಗಿ? ಯಾವ ಸಪ್ತ ಸಮುದ್ರದ ಆಚೆಗೆ?
ಇವತ್ತು ಹುಚ್ಚು ಮನಸಿಗೆ ಯಾಕಿಷ್ಟು ತಳಮಳವೋ ಗೊತ್ತಿಲ್ಲ. ರಾತ್ರಿಯಿಡಿ ನಿನ್ನ ಒಂದೇ ಒಂದು "ಹ್ಯಾಪಿ ಬರ್ತ್ ಡೇ" ಗಾಗಿ ಕಾಯ್ತಾ ಕೂತಿದ್ದೀನಿ. ಆದರೆ ರೆಕ್ಕೆಯ ಮೇಲೆ ಮಂಜು ಬಿದ್ದ ಕೋಗಿಲೆಯಂತೆ ನನ್ನ ಸೆಲ್ ಕುಳಿತೆ ಇದೆ.ರಾತ್ರಿ ೧೨.೦೦ ಕ್ಕೆ ನನ್ನ ಶತ್ರುಗಳೂ ವಿಶ್ ಮಾಡಿದಾಗ, ಯಾಕೋ ಗೊತ್ತಿಲ್ಲ; ಬೆಚ್ಚನೆಯ ಕಣ್ಣ ಹನಿಯೊಂದು ಕೆನ್ನೆಯ ಮೇಲಿಳಿದಿತ್ತು.
ನಮ್ಮಿಬ್ಬರನ್ನು ಬಂಧಿಸಿ ಹಿಡಿದ ಪ್ರೀತಿಯ ಕೊನೆಯ ಕೊಂಡಿಯೂ ಕಳಚಿ ಬಿತ್ತಾ? ಪ್ರೀತಿ ಅಂದರೇ ಹೀಗೆನಾ ಸೋನು? ಒಂದು ಮುಟಿಗೆ ಆರ್ದ್ರತೆ, ಎದೆಯ ತುಂಬಾ ನವಿಲ ನರ್ತನ, ಮೈ ತುಂಬಾ ಸುರಿವ ಬೆಳದಿಂಗಳು, ಅದ್ಬುತ ಸಂಗೀತ, ಹರಿಯುವ ತಿಳಿ ನೀರ ನದಿ, ಹಿತವಾದ ಮೌನ, ಮೈ ಮರೆತು ತೊದಲುವ ಮಾತು, ಸ್ವಗತದಂತಹ ಸಾಹಿತ್ಯ; ಪ್ರೀತಿ ಅಂದರೇ ಅದು ಅಂದುಕೊಂಡಿದ್ದೆ. ನಮಗೆ ಇದೆಲ್ಲ ದಕ್ಕುವದೆ ಇಲ್ಲವಾ? ನನ್ನ ತಪ್ಪಿಗೆ ಕ್ಷಮೆಯೇ ಇಲ್ಲವಾ?
ಇವತ್ತಿಗೂ ಆಸೆಯಾಗುತ್ತಿದೆ; ನಿನ್ನ ಸನ್ನಿಧಿಗೆ ಬಂದು ಸುಮ್ಮನೆ ನಿನ್ನವನಾಗಿ ಬಿಡಬೇಕು, ಆಗ ನನಗೆ ಏನು ಕೇಳಿಸಬಾರದು; ನಿನ್ನೆದೆಯ ಬಡಿತದ ಹೊರತಾಗಿ. ಏನು ಕಾಣಿಸಬಾರದು; ನಿನ್ನ ಕಣ್ಣ ಕಾಂತಿಯ ಹೊರತಾಗಿ. ನಾನು ಸಾವಿರ ತಂತಿಗಳ ವೀಣೆಯಾಗಬೇಕು. ನೀನು, ನೀನು ಮಾತ್ರ ತಾಕದ ಹೊರತಾಗಿ ನುಡಿಯದ ಮೌನ ವೀಣೆ!
ಹೀಗಂತ ಮೋಡದೊಳಗೆ ತೇಲುತಿರುವ ಅರ್ಧ ಚಂದ್ರನನ್ನೇ ನೋಡುತ್ತಾ ಕನಸು ಕಾಣುತ್ತಿದ್ದೇನೆ!
ನೀನು ಹೇಗಿದ್ದೀಯ?
ಗೊತ್ತಿಲ್ಲ!
ಮೋಡಗಟ್ಟಿದ ಮನಸಿಗೆ ಬಿಕ್ಕಳಿಕೆ...

ನೀನು ಮರೆತು ಹೋದವ...