ಮಂಗಳವಾರ, ಮೇ 17, 2011

ಏನು ಮಾಡಲಿ ಗೆಳತೀ, ಪೊಸೆಸಿವ್ ಮನಸ್ಸು ಲೂಸ್ ಮಾದ!!!ವಿ ಸೂ : ಇದನ್ನ ನಾನೇ ಬರಿಬೇಕಿತ್ತು ಆದರೆ ನಾನು ಹೇಳಬೇಕು ಅಂದುಕೊಂಡಿರೋ ಎಲ್ಲವು ಇಲ್ಲಿವೆ ಅದಕ್ಕೆ ನನ್ ಗುರು ರವಿ ಬೆಳಗೆರೆ ಬರದಿರೋ ಲವ್ ಲವಿಕೆ ಯಿಂದ ಕದ್ದು ಹಾಕ್ತಾ ಇದ್ದೀನಿ. ಗುರುಗಳಿಗೆ ಥ್ಯಾಂಕ್ಸ್!!

ನನ್ನ ಒಲವಿನ ಜಾನ್ಸ್,

ಬೆಳಗ್ಗೆಯಿಂದ ನಿನಗೆ ಏನೋ ಹೇಳಬೇಕು ಅಂದುಕೊಂಡದ್ದು ಈಗ ನೆನಪಾಯ್ತು ನೋಡು. ಮತ್ತೇನಿಲ್ಲ, ನಂಗೆ ನೀನು ಅಂದ್ರೆ ಇಷ್ಟ. ನಿನ್ನ ಪುಟ್ಟ ಪಾದ ಇಷ್ಟ. ಅದರ ಕಿರುಬೆರಳು ಮುದ್ದು. ಮೈಯ ಮಚ್ಚೆಗೆಲ್ಲ ಒಂದು ಕಡೆಯಿಂದ, ತಲಾ ಒಂದಕ್ಕೆ ನೂರರನಂತೆ ಮುತ್ತಿಟ್ಟುಕೊಂಡು ಬಂದರೆ ಒಟ್ಟಿನಲ್ಲಿ ಎಷ್ಟು ಸಾವಿರವೋ? ನಿನ್ನ ತುದಿಗೋಪ ನಂಗಿಷ್ಟ. ಕಣ್ಣ ಹೊರಳಿಗೆ ಅಲ್ಲೇ ಬಿದ್ದು ಸಾಯ್ತೇನೆ. ಮೈಯ ಮಾಟಕ್ಕೆ ನಿಂತಲ್ಲೇ ಮಟಾಷ್. ಆಕ್ಸಿಡೆಂಟಾಗಿ ಸಾಯುವುದೇ ಹಣೆಯಲ್ಲಿ ಬರೆದಿದ್ದರೆ, ನಿನ್ನ ಹುಬ್ಬಿ ತಿರುವಿನಲ್ಲಿ ಆಗಲಿ ಅಪಘಾತ. ಕೊರಳ ಇಳಿಜಾರಿನಲ್ಲಿ ಸಂಭವಿಸಲಿ ಆಕ್ಸಿಡೆಂಟ್. ತೋಳ ತಿರುವಿನಲ್ಲಿ ಬ್ರೇಕು ಫೇಲಾಗಲಿ. ಕಿಬ್ಬೊಟ್ಟೆಯ ನುಣಿಪಿನಲ್ಲಿ ಸ್ಕಿಡ್ಡಾಗಿ ಹೋದೆನು. ಐ ಲವ್ ಯೂ ಕಣೆ.

ನಾನೇನು ಮಾಡಲಿ? ನೀನು ಯಾರೊಂದಿಗಾದರೂ ಮಾತನಾಡಿದರೆ ನಂಗೆ ಬೇಜಾರಾಗುತ್ತೆ. ಸೋಶಿಯಾಲಜಿ ಮೇಷ್ಟ್ರು, ಪೈನಲ್ ಇಯರ್‍ ಶಿವು, ಸ್ಪೋರ್ಟ್ಸ್ ಸೆಕ್ರೇಟರಿ ಈರಣ್ಣ ಕಡೆಗೆ ಅಟೆಂಡರ್‍ ಹನುಮಂತಿವಿನೊಂದಿಗೆ ನೀನು ನಗುನಗುತ್ತಾ ಮಾತನಾಡಿದರೂ,. ಬೆರಳ ತುದಿಗೆ ಚೇಳ ಕುಟುಕು. ನಾನದರೂ ಏನು ಮಾಡಲಿ? ಎ ದಿಲ್ ತೋ ಪಾಗಲ್ ಹೈ….

ಹೀಗೆ ಪೊಸೆಸೀವ್ ಆಗಿರೋದು ತಪ್ಪು. ಎಷ್ಠಾದರೂ ನೀನು ನನ್ನವಳು. ನನ್ನ ಪ್ರೀತಿಗೆ, ವಿನಂತಿಗೆ ಸಮ್ಮತಿ ಸಲ್ಲಿಸಿದವಳು. ನನ್ನನ್ನು ತುಂಬಾಪ್ರೀತಿಸುವಳು. ಇಂದಲ್ಲಾ ನಾಳೆ ಮದುವೆಯಾಗಲಿರುವಳು. ನೀನು ನಾಲ್ಕು ಮಂದಿಯೊಂದಿಗೆ ಮಾತನಾಡಿದರೆ ತಪ್ಪೇನಿದೆ? ನಿಂಗೂ ಒಂದು ಸೋಶಿಯಲ್ ಲೈಫ್ ಬೇಡವಾ? ಗೆಳೆಯರು ಬೇಡವಾ? ನೂನು ಮೊದಲಿನಂತೆಯೇ ಇರಬೇಕು. ನನ್ನ ಪ್ರೀತಿ ನಿನಗೆ ಬಂಧನವಾಗಬಾರದು. ಎಸ್, ಹಾಗಂತೆಲ್ಲಾ ಯೋಚಿಸುತ್ತೇನೆ. ತುಂಬಾ ಸ್ಪುಟವಾಗಿ ಯೋಚಿಸಿ, ಇನ್ಮೇಲಿಂದ ಹಾಗೆಲ್ಲಾ ಪೊಸೆಸೀವ್ ಆಗಿ ಆಡಬಾರದು ಎಂತ ನಿರ್ಧರಿಸುತ್ತೇನೆ. ಆದರೆ ಏನು ಮಾಡಲಿ ಜಾನ್ಸ್? ಮನಸ್ಸು ಲೂಸ್ ಮಾದ! ಬೆಳಗ್ಗೆ ನೀನು ಕಾರಿಡಾರಿನಲ್ಲಿ ನಿಂತು ಕನ್ನಡಕ ಮೇಷ್ಟ್ರು ಜೊತೆಯಲ್ಲಿ ನಗ ನಗ್ತಾ ಮಾತಾಡ್ತಾ ನಿಂತಿದ್ದು ನೋಡಿದೆ. ರಾತ್ರಿ ಯೋಚಿಸಿದ್ದಲ್ಲಾ ಮರೆತು ಹೋಗಿ ಅಂಗಾಲಿನ ಸಿಟ್ಟು ನೆತ್ತಿಗೇರಿಕೊಂಡು ಬಂದು, ಐ ಆಮ್ ಸಾರಿ….ಆ ಹೊತ್ತಿನಲ್ಲಿ ನಾನು ಮನುಷ್ಯನಾಗಿರಲಿಲ್ಲ.

ಜಾನ್ಹವಿ, ನಿನ್ನೊಂದಿಗೆ ತುಂಬಾ ಒರಟಾಗಿ ಮಾತನಾಡಿಬಿಟ್ಟೆ. ಹಾಗೆಲ್ಲಾ ಮಾತನಾಡುವುದು ನನ್ನ ಸ್ವಭಾವವೇ ಅಲ್ಲ. ಮನೆಯಲ್ಲೂ ನಾನು ಉಳಿದೆಲ್ಲರಿಗಿಂತ ಸ್ಮೂತ್ ಫೆಲೋ. ಅಪ್ಪನೆದುರು ನಿಂತು ಪಾಕೆಟ್ ಮನಿ ಕೇಳುವುದಕ್ಕೂ ಅಳಕುತ್ತೇನೆ. ಅಣ್ಣ ನನ್ನ ಪಾಲಿಗೆ ಡೆಡ್ಲಿ. ಅತ್ತಿಗೆಯೊಂದಿಗೂ ನನಗೆ ಅಂತ ಸಲಿಗೆಯಿಲ್ಲ. ಏನು ಮಾಡಲಿ ಹೇಳು, ನನಗೆ ಅಕ್ಕ ತಂಗಿಯರಿಲ್ಲ. ಹಠ ಮಾಡಿ ಮುದ್ದು ಮಾಡಿಸಿಕೊಳ್ಳೋಣವೆಂದರೆ ಚಿಕ್ಕಂದಿನಲ್ಲೇ ಅಮ್ಮ ತೀರಿಹೋದಳು. ಐ ಆಮ್ ಸಾರಿ ಜಾನ್ಸ್, ಅಭದ್ರತೆ ಯೆಂಬುದು ಚಿಕ್ಕಂದಿನಿಂದಲೂ ನನ್ನ ಬೆನ್ನತ್ತಿದ ಪೀಡೆ. ನನಗೆ ಸಿಗಬೇಕಾದ ಪ್ರೀತಿ ಎಲ್ಲಿ ಸಿಗದೇ ಹೋಗುತ್ತದೋ, ಎಲ್ಲಿ ಇನ್ನೊಬ್ಬರ ಪಾಲಾಗುತ್ತದೋ ಅಂತ ಅಟಮಟಿಸುತ್ತೇನೆ. ಈ ಕಾರಣಕ್ಕಾಗಿಯೇ ಮಧ್ಯಾಹ್ನ ನಿನ್ನೊಂದಿಗೆ ಒರಟಾಗಿ ಮಾತನಾಡಿದ್ದು.

ಬೇಸರ ಮಾಡಿಕೊಳ್ಳಬೇಡ ಜಾನ್ಸ್, ನನ್ನ ಸೆಡವು, ನನ್ನ ಮುನಿಸು, ಒರಟು ಮಾತು, ಹಠ, ಜಗಳ ಇವೆಲ್ಲಾ ತುಂಬಾ ತಾತ್ಕಾಲಿಕ. “ನೀನು ನನ್ನವನು, ಫಾರೆವರ್‍” ಅಂತ ಎದೆಯ ಮೇಲೆ ಒಂದು ಸಲ ನಿನ್ನ ಪುಟ್ಟ ಕೈಯಿಟ್ಟು ಹೇಳು, ಮತ್ತೆ ನಾನು ಬೇರೆಯದೇ ಮನುಷ್ಯ. ಒಂದೇ ಒಂದು ಮುಟಿಗೆಯಷ್ಟು ಪ್ರೀತಿ ಸಿಕ್ಕರೂ ಚಲಿಸಿಹೋಗುವುವನು ನಾನು. ನನಗೆ ತುಂಬಾ ಅತಿರೇಕವೆನಿಸುವಂತಹ ಡಿಮ್ಯಾಂಡ್ ಗಳಿಲ್ಲ. ನೀನು ನನಗೋಸ್ಕರ ಏನೂ ಮಾಡಬೇಕಾಗಿಲ್ಲ. ಒಂದು ಹಿಡಿ ಪ್ರೀತಿ ಕೊಡು; ನಂಗ್ ನಂಗೇ ಅಂತ ಕೊಡು. ನನ್ನದು ಹುಚ್ಚು ಬಡಬಡಿಕೆ ಅನ್ನಿಸಿದರೂ ಸಹನೆಯಿಂದ ಕೇಳಿಸಿಕೋ. ನನ್ನಲ್ಲೊಂದು ವಿಶ್ವಾಸ ಮೂಡಿಸು. “ಬದುಕಿದರೂ ಬಾಳಿದರೂ, ಸತ್ತರೂ, ಸರ್ವನಾಶವಾದರೂ-ಒಟ್ಟಿಗೆ” ಅಂತ ಆಣೆ ಮಾಡು. ಐ ಪ್ರಾಮಿಸ್, ಇನ್ನು ಮೇಲೆ ಯಾವತ್ತೂ ಪೊಸೆಸೀವ್ ಆಗಿ ಆಡುವುದಿಲ್ಲ. ನಿಜ ಹೇಳಬೇಕೆಂದರೆ, ನಿನ್ನ ಬಗ್ಗೆ ಅನುಮಾನ ನನಗೆ ಖಂಡಿಯ ಇಲ್ಲ. ಇವೆಲ್ಲಾ ಹುಚ್ಚು ಮನಸ್ಸಿನ ಆಟ: ಪ್ಲೀಸ್, ನಂಬು.

ನಾಳೆ ಸಿಗೋಣ.

ನಿನ್ನನ್ನು ಎಂದಿನಂತೆಯೇ ಪ್ರೀತಿಸುತ್ತೇನೆ, ಆರಾಧಿಸುತ್ತೇನೆ. ಹೇಯ್ ಜಾನ್ಸ್, ಈ ಜಗತ್ತಿನಲ್ಲಿ ನನಗೆ ಬೇರೆ ಇದ್ದಾರಾದರೂ ಯಾರು ಹೇಳು? ಜಗಳಕ್ಕೂ ನೀನೇ ಬೇಕು: ನಂಗ್ ನಂಗೇ ಬೇಕು. ಇಡಿ ಇಡಿಯಾಗಿ ಬೇಕು.

-ನಿನ್ನವನು.

ಮಂಗಳವಾರ, ಮೇ 10, 2011

ಏಕಾಂಗಿ ನವಿಲು...

ಯಾರೂ ನೋಡದ ಕಾಡಿನ ಬಯಲಲಿ, ತನ್ನ ಪರಿವಾರವನ್ನೆಲ್ಲ ಮರೆತು, ಮಳೆಯ ಆಗಮನಕ್ಕೆ ಕಾಯುವ ಮಯೂರ. ಅದಕ್ಕೆ ಮಳೆ ಬರುವ ಮುನ್ಸೂಚನೆ ಇತ್ತಾ? ಅಥವಾ ಇದರ ಕರೆಗೆ ಅದು ಧರೆಗಿಳಿಯಿತಾ? ಗೊತ್ತಿಲ್ಲ. ಬಹುದಿನಗಳ ನಂತರ ಪ್ರಿಯತಮನ ಮುಖ ನೋಡಲು ಬಾಗಿಲ ಮರೆಯಲಿ ನಿಂತ ಷೋಡಶಿಯಂತೆ!! ಅದು ಕಾಯುತ್ತಲೇ ಇತ್ತು.
ಮಯೂರನ ಕರೆಗೆ ಓಗೊಟ್ಟು ಸುರಿದ ಮಳೆ! ಅದು ಮಯೂರ ಮಳೆ!! ಬದುಕಿನ ಎಲ್ಲ ಜಡತ್ವ ತೊರೆದು, ಹೊಸ ತಳಿರು-ತೋರಣಗಳಿಂದ ಅಲಂಕರಿಸಿ ಬರಮಾಡಿಕೊಳ್ಳುವ ಹಬ್ಬದಂತೆ. ಮಳೆ ಬರುವ ವರೆಗೂ ಅದು ನಿಂತೇ ಇತ್ತು. ಪ್ರಿಯತಮೆಗೆ ಮಾತು ಕೊಟ್ಟ ಮುಗ್ದ ಹುಡುಗನಂತೆ!!