ಶನಿವಾರ, ಮಾರ್ಚ್ 12, 2011

ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೊಟ್ಯಾಂತರ ಉತ್ತರಗಳು ಇವೆಯಾದರೂ, ನನ್ನ ಪುಟ್ಟ ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೇವಲ ನೀನಾಗಿದ್ದೆ!!!


ಸೋನು,

ನಿನಗೆ ಕೊನೆಯ ಪತ್ರ ಬರೆಯಲು ಕುಳಿತಿದ್ದೇನೆ. ಕೈ ನಡುಗುತ್ತಿದೆ, ನನ್ನ ಇಲ್ಲದ ಅದೃಷ್ಟಕ್ಕೆ ನಾನೆ ಶಪಿಸಿಕುಳ್ಳುತ್ತಾ ಕೆಲವು ಸಾಲುಗಳನ್ನಾದರೂ ಕಷ್ಟ ಪಟ್ಟು ಈ ಪತ್ರದಲ್ಲಿ ತುಂಬಿಸಲು ಕುಳಿತಿದ್ದೇನೆ. ಕಣ್ಣಿಂದ ಒಂದೊಂದೆ ಹನಿಗಳು ಜಾರುತ್ತಿವೆ ಥೇಟ್ ನಿನ್ನ ನೆನಪಿನ ಹಾಗೆ. ಇಷ್ಟು ದಿನಗಳೂ ಅವು ಕೊಡುವ ಸುಳ್ಳು ಭರವಸೆಗಳಿಂದಲೇ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕಿನ ಒಂದೊಂದೆ ಹೆಜ್ಜೆಯನಿಡುತ್ತಿದ್ದೆ. ಅಂಕೆ ತಪ್ಪಿದರೂ ಕೈಹಿಡಿದೆತ್ತಲು ನೀನಿದ್ದೀಯ ಎಂಬ ಸಣ್ಣ ಭರವಸೆಯಾದರೂ ಇತ್ತು. ಆದರೆ ಈಗ? ತುಂಬಾ ದೊಡ್ಡ ಜಗದೊಳಗೆ ಯಾಕೋ ಒಂಟಿಯಾಗಿ ಬಿಟ್ಟೆ. ಕಾರಣ ಗೊತ್ತಿಲ್ಲ. ನಿನ್ನ ತಪ್ಪುಗಳ ಪಟ್ಟಿ ಮಾಡಿ ನಿನ್ನ ಮುಂದೆ ಹಿಡಿಯುವ ಧೈರ್ಯ ಸಾಲುತ್ತಿಲ್ಲ. ಕಾರಣ ಗೊತ್ತಾ? ತುಂಬಾ ಪ್ರೀತಿಸಿದವನು ನಾನು.

ನಕ್ಕಾಗ, ಅತ್ತಾಗ, ನೀನು ಸುಮ್ಮನೇ ಮುನಿಸಿಕೊಂಡಾಗ, ಮಾತೆ ಆಡದಿದ್ದಾಗ, ನನ್ನ ಬೆನ್ನ ಮೇಲೆ ಮಗುವಿನಂತೆ ಕೂಸುಮರಿಯಾಡುತ್ತಿದ್ದಾಗ ಒಂದೊಂದು ಕವಿತೆಯನ್ನ ಬರೆದು ಬರೆದು ನಿನ್ನ ಕೈಗಿಡುತ್ತಿದ್ದೆ ಅಲ್ವ? ನಿಜ ಹೇಳು ಅಷ್ಟು ಕವಿತೆಗಳಲ್ಲಿ ಒಂದು ಸಾಲೂ ನೆನಪಾಗುತ್ತಿಲ್ಲವಾ? ಪ್ರತಿ ಸಲ ಕೋಳಿ ಜಗಳಗಳಾದಗ, ಕೆಲವೊಮ್ಮೆ ಮಹಾಯುದ್ಧಗಳು ನಮ್ಮ ಮಧ್ಯೆ ನಡೆದಾಗ ಮೊದಲು ಕೇಳುತ್ತಿದ್ದ ಸ್ಸಾರಿ? ಜಾರಿ ಮುಗ್ಗರಿಸಿ ಬೀಳುತ್ತಿದ್ದಾಗ ಆಸರೆಯಾಗುತ್ತಿದ್ದ ಕೈ? ಚೂರೆ ಚೂರು ನೊಂದುಕೊಂಡರೂ ಈ ಕಣ್ಣುಗಳು ಸುರಿಸುತ್ತಿದ್ದ ಹನಿ? ನನ್ನ ಬಾಹುಗಳಲ್ಲಿ ಪೂರ್ತಿ ನೀನಿದ್ದಾಗಲೂ ಕಳೆದು ಕೊಳ್ಳದ ನನ್ನ ಸಂಯಮ? ಪಡೆದ ಮುತ್ತು? ಕೊಟ್ಟ ಮುತ್ತು? ಪರಸ್ಪರ ತಿನಿಸಿಕೊಂಡ ತುತ್ತುಗಳು? ಇಬ್ಬರೇ ನಡೆದ ಮೌನದ ಹಾದಿ? ಹಾಡಿದ ಸಾಲುಗಳು? ಕಟ್ಟಿದ ಗುಬ್ಬಿಗೂಡು?

ಹೇಳು ಇದ್ಯಾವುದೂ ನಿನಗೆ ನೆನಪಾಗುತ್ತಿಲ್ಲವೆ?

ಚಿಂತೆಯಿಲ್ಲ ಬಿಡು. ನಿನ್ನ ಜೊತೆಯಿದ್ದಾಗ ಒಂದು ನಿರ್ಮಲ ಪ್ರೀತಿಗೆ ನಾನು ಮಾಡಬೇಕಾದ ಋಣಸಂದಾಯವನ್ನ ನಾನು ಪ್ರಾಮಾಣಿಕವಾಗಿ ಮಾಡಿಯಾಗಿದೆ. ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೊಟ್ಯಾಂತರ ಉತ್ತರಗಳು ಇವೆಯಾದರೂ, ನನ್ನ ಪುಟ್ಟ ಜಗತ್ತಿನಲ್ಲಿ ಪ್ರೀತಿ ಅಂದ್ರೆ ಕೇವಲ ನೀನಾಗಿದ್ದೆ!!! ನಿನ್ನ ವಿನಾಕಾರಣ ಪ್ರೀತಿಸಿದವನು ನಾನು. ಕಾರಣವಿಲ್ಲದೇ ದೂರ ಹೋಗುತ್ತಿರುವವಳು ನೀನು. "ಹೇಳೀ ಹೋಗು ಕಾರಣ" ಎಂದು ನಿನ್ನ ಕೈ ಹಿಡಿದು ಕೇಳುವುದಿಲ್ಲ. ಬಲವಂತದಿಂದ ಪಡೆದುಕೊಂಡ ಪ್ರೀತಿಗೆ ಆಯಸ್ಸು, ಆರೋಗ್ಯ ತುಂಬಾ ಕಡಿಮೆಯಂತೆ. ಚಂದದ ಬದುಕನ್ನರಸಿ ಅದೆಲ್ಲಿಗೋ ಹೊರಟು ನಿಂತಿದ್ದೀಯ ನೀನು. ಹೋಗುತ್ತಿರುವ ದಾರಿಯಲ್ಲೆಲ್ಲ ಕೇವಲ ಸುಖದ ಹೂವುಗಳು, ಪ್ರೀತಿಯ ಊರುಗಳು ಕಾಣಿಸಲಿ. ಸಾಗುವ ದಾರಿಯಲ್ಲಿ ನೆಪಮಾತ್ರಕ್ಕಾದರೂ ಹಿಂತಿರುಗಿ ನೋಡಬೇಡ. ಈ ಬಂಗಾರದಂತಹ ಹುಡುಗನ ಪ್ರಾಮಾಣಿಕ ಪ್ರೀತಿ, ನೀನು ಬೇರೆ ಪ್ರೀತಿಯನ್ನರಸಿಕೊಂಡು ಹೊರಟ ನಿರ್ಧಾರವನ್ನು ಬದಲಿಸಿದರೂ ಬದಲಿಸಬಹುದು!!!

ಹೇಳಲು ಕಷ್ಟವಾದರೂ ಹೇಳುತ್ತಿದ್ದೀನಿ. ನಿನ್ನ ಬದುಕು ಬಂಗಾರವಾಗಲಿ.
ಗುಡ್ ಬೈ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ