ಬುಧವಾರ, ನವೆಂಬರ್ 03, 2010

ದೀಪಾವಳಿಗೊಂದು ಕಥೆ

ಮೆಜೆಸ್ಟಿಕ್ ನ ಬಿ.ಎಂ.ಟಿ.ಸಿ ಬಸ್ ನಿಲ್ದಾಣದಿಂದ ಹೊರ ಬಂದು ನಡೆದರೆ ಅಲ್ಲೇ ಪಕ್ಕದಲ್ಲಿ ತಳ್ಳು ಗಾಡಿಯ ಮುಂದೆ ನಿಂತು ದಾರಿಯಲಿ ಹೋಗುವ-ಬರುವವರನ್ನು ಕೂಗಿ ತಿಂಡಿಯ ಹೆಸರು ಹೇಳುತ್ತಾ ನಾನು ನಿಂತಿರುತ್ತೇನೆ. ಕಳೆದ ನಾಲ್ಕು ವರ್ಷಗಳಿಂದಲೂ ನಿರಂತರವಾಗಿ ನಡೆಯುತಿರುವ ಈ ಕ್ರಿಯೆ ಎಷ್ಟು ಸಹಜವಾಗಿದೆ ಎಂದರೆ ರಸ್ತೆಯಲಿ ಯಾರೂ ಇಲ್ಲದಿದ್ದರೂ ನನ್ನ ಕಿರುಚಿಕೊಳ್ಳುವ ಗಂಟಲಿಗೆ ಗೊತ್ತೇ ಆಗುವದಿಲ್ಲ! ಯಾವತ್ತೋ ಬಿಗಿದ ಗಂಟಲಿಗೆ ಕೊಟ್ಟುಕೊಳ್ಳುವ ಶಿಕ್ಷೆಯಂತೆ!!
ರಣ ಬಿಸಿಲಿನ ಬಯಲಿನಲ್ಲಿದೆ ನನ್ನೂರು. ಅದು ಚಿತ್ತೂರು. ಅಪ್ಪ ಬಡ ಕೃಷಿಕ. ಅವ್ವ ಕೂಲಿಯಾಳು. ಅಣ್ಣ-ತಂಗಿಯರ ಮಧ್ಯ ಯಾರಿಗೂ ಬೇಡದ ಬಡ ಕೂಸು - ನಾನು. ನಮ್ಮ ಕೇರಿಯ ಗೆಳೆಯರ ಜೊತೆಗೆ ಆಡುತ್ತಾ, ಬಿಳುತ್ತಾ, ನೆಗೆಯುತ್ತಾ, ಕದಿಯುತ್ತಾ, ಬಡಿಸಿ ಕೊಳ್ಳುತ್ತಾ ನನ್ನ ಬಾಲ್ಯ ಸರಿದು ಹೋಯಿತು. ಬಸ್ಸಿನ ಕಿಡಕಿಯಲಿ ಜಾರಿ ಹೋಗುವ ಮನೋಹರ ದೃಶ್ಯದಂತೆ. ಯಾವ ಶಾಲೆ-ಕಾಲೇಜು ಇಲ್ಲದ ಕುಗ್ರಾಮದಲಿ ಕಾಡ ಕುಸುಮದಂತೆ ಬೆಳೆದ ಧೀರ-ನಾನು. ನನ್ನ ಬದುಕಲ್ಲೂ ಹರೆಯ ಮೂಡುವ ಕಾಲ. ಮೂಗ ಕೆಳಗೆ ಚಿಗುರು ಮೀಸೆ. ಮನದ ಸಮುದ್ರದಲಿ ಭಾವನೆಗಳ ಮಹಾಪೂರ. ಆ ಮಹಾಪೂರಕ್ಕೆ ಸಿಕ್ಕ ಮುತ್ತು-ಅವಳು! ಅವಳೊಂದಿಗೆ ಆಡದ ಆಟವಿಲ್ಲ, ಮಾಡದ ಜಗಳವಿಲ್ಲ, ತಿರುಗದ ಜಾಗವಿಲ್ಲ, ಉಣ್ಣದ ಊಟವಿಲ್ಲ, ಕಾಡ ಮಧ್ಯದಲಿ ಕಳೆದು ಹೋದವನಿಗೆ ಸಿಕ್ಕ ದಾರಿಯಂತವಳು. ಹಾಗೆ ನಮ್ಮ ಸ್ನೇಹಕ್ಕೆ ಎರಡು ವರ್ಷ. ಅದೊಂದು ಬೆಳಿಗ್ಗೆ ಅವ್ವ ನೆಲ ಸಾರಿಸಿ ರಂಗವಲ್ಲಿ ಬಿಡುವ ಹೊತ್ತಿಗೆ ನನಗೆ ಗೊತ್ತಾದದ್ದು- ಇವತ್ತು ದೀಪಾವಳಿ. ಊರ ಗೌಡನ ಮಕ್ಕಳು ಬಣ್ಣ ಬಣ್ಣದ ಬಟ್ಟೆ ತೊಟ್ಟು, ಪಟಾಕಿ ಹಾರಿಸುತ್ತಾ, ಕೇಕೆ ಹೊಡೆಯುತ್ತಾ ಕುಣಿದಾಡುವ ಹೊತ್ತಿಗೆ ನಾವು ಊರ ಮುಂದಿನ ಪಾಳು ಬಿದ್ದ ಹಣಮಪ್ಪನ ಗುಡಿಯಲಿ ಸ್ಥಾಪಿತರಾಗಿದ್ದೆವು.
"ಇವತ್ತು ಸಂಜಿನ್ಯಾಗ ನಾವು ದುಡಿಲಾಕ ಪುಣೆಕ್ಕ ಹೊಂಟೆವಿ. ನಾ ಹೊಳ್ಳಿ ನಿನ್ನ ಮಾರಿ ನೋಡತಿನೋ ಇಲ್ಲೋ?" ಅಂದಳು. ಹಾಗೆ ಅನ್ನುವಷ್ಟರಲ್ಲಿಯೇ ಇಬ್ಬರ ಕಣ್ಣಲ್ಲೂ ನೀರು ಚಕ್ರತೀರ್ಥ. ಮಾತು ಬಾರದ ಮೂಕ ಮರ್ಮರವನು ಅನುಭವಿಸುತ್ತ ಅದೆಷ್ಟು ಹೊತ್ತು ಕುಳಿತಿದ್ದೆವೋ ಗೊತ್ತಿಲ್ಲ. ಇಬ್ಬರ ಮನದಲ್ಲೂ ಜ್ವಾಲಾಮುಖಿ ಸಿಡಿದ ಅನುಭವ. ತುಂಬಿ ಬಂದ ಗಂಟಲು ಮಾತನಾಡಲು ಅವಕಾಶ ಕೊಡಲಿಲ್ಲ. ಪಕ್ಕದಲ್ಲಿ ಕುಳಿತು ಕೈ ಹಿಡಿದವಳ ಭಾವನೆ ಏನಿತ್ತು? ಅವಳ ಕಣ್ಣುಗಳು ಎಲ್ಲವನ್ನೂ ಹೇಳಿ ಮುಗಿಸಿಯೂ ಇನ್ನೇನೋ ಇದೆ ಎಂಬಂತೆ ಅರ್ಧ ಮುಚ್ಚಿಕೊಂಡಿದ್ದವು. ಅವಳು ಅಳುತ್ತಿದ್ದಳಾ? ಗೊತ್ತಿಲ್ಲ. ಆದರೆ ನಾನು ಅಳುವನ್ನು ಮೀರಿದ ದುಖದಲ್ಲಿದ್ದೆ. ಆ ಕ್ಷಣವನ್ನು ನಾನ್ಯಾವತ್ತು ಮರೆಯಲಾರೆ.
ಇಂದು ಅನಿಸುತ್ತದೆ ಅದು ಪ್ರೇಮವಾ, ಸ್ನೇಹವಾ, ಬಯಸದ ಬಂಧವಾ, ಬೆಸೆಯದ ಬಂಧವಾ, ಮುಗಾರು ದಿನಗಳಲಿ ಮಿಂಚಿ ಹೋಗುವ ಮಿಂಚಾ? ಗೊತ್ತಿಲ್ಲ. ಆದರೆ ಪ್ರತಿ ದೀಪಾವಳಿಗೂ ಹಳೆಯ ಗಾಯದಂತೆ, ಕಣ್ಣಿಗೆ ಕಟ್ಟಿದ ಚಿತ್ರದಂತೆ ನೆನಪಾಗುತ್ತಲೇ ಇರುತ್ತದೆ. ಬಹುಶಃ ನಾನಿರುವವರೆಗೂ...

1 ಕಾಮೆಂಟ್‌: