ಮಂಗಳವಾರ, ಆಗಸ್ಟ್ 10, 2010

ಕೊನೆಯ ಪತ್ರ!!!


ಮುನಿಸಿನ ಹುಡುಗೀ,
ನಿನಗೊಂದು ಕೊನೆಯ ಪತ್ರ. ನಿನ್ನನ್ನು ಮರೆಯುವ ಮುನ್ನ, ನಿನಗೆ ಮರೆವಾಗುವ ಮುನ್ನ ಒಂದಷ್ಟು ಸಾಲು. ಒಂದಷ್ಟು ಮಾತು. ಜೀವನದಲ್ಲಿ ಒಂದು ಸುಮಧುರ-ಸುಂದರ ಡಿಫೀಟು ಒಪ್ಪಿಕೊಳ್ಳುತ್ತಿದ್ದೇನೆ. ನಿನ್ನನ್ನು ಎಷ್ಟು ಪ್ರೀತಿಸಿದೆನೆಂದರೆ ಈ ಡಿಫೀಟು ಗ್ರೇಟೆ ಅನಿಸುತಿದೆ. ನೀನು ಗೆದ್ದ ಗೆಲುವಿಗೊಂದು ಕಂಗ್ರಾಟ್ಸ್. ನನ್ನ ಸೋತ ಸೋಲಿಗೊಂದು ಹಾಟ್ಸ್ ಆಫ್.ನಂಗೆ ನೀನು ದಕ್ಕಲಿಲ್ಲ ಅಂತ ಒಂದು ಕ್ಷಣಕ್ಕೂ ನೋವಾಗುತ್ತಿಲ್ಲ. ಆದರೆ ನಿನ್ನನ್ನು ನಾನು ಎಷ್ಟು ಪ್ರೀತಿಸಿದೆ ಅಂತ ಹೇಳಲೇ ಆಗಲಿಲ್ಲವಲ್ಲ? ಅದು ನೋವು ಕೊಡುತ್ತಿದೆ. ಆದರೆ ಗೆಳತೀ, ನಿನ್ನೆದುರು ನಿಂತು ಸೋಲುವ ಈ ಸೋಲೂ ಅದ್ಭುತವಾದದ್ದೇ. ನನಗೆ ಪ್ರತಿಯೊಂದು ನೆನಪಿದೆ. ಮೊಟ್ಟ ಮೊದಲು ನಿನ್ನ ನೋಡಿದಾಗಿನಿಂದ, ಕಟ್ಟ ಕಡೆಯ ದಿನ ನಿನ್ನ ಕಣ್ಣುಗಳಲ್ಲಿ ನಿರಾಕರಣೆ ಎದ್ದು ಬಂದ ಘಳಿಗೆಯ ತನಕ. ಯಾವುದನ್ನೂ ಮರೆತಿಲ್ಲ. ನಿನ್ನನ್ನು ನೋಡಿದೆ, ಆರಾಧಿಸಿದೆ, ಸನಿಹಕ್ಕೆ ಬಂದೆ, ಸುಮ್ಮನೆ ಬೆನ್ನತ್ತಿದೆ, ಬೊಗಸೆಯೊಡ್ಡಿ ಬೇಡಿದೆ, ಅಂಗಲಾಚಿದೆ, ಗೊಗೆರೆದೆ, ಹಠ ಮಾಡಿದೆ, ಅತ್ತೆ! ಆದರೆ ನೀನು, ನಿನ್ನ ಪ್ರಾರ್ಥನೆ, ಭಕ್ತಿ, ಉಪವಾಸ, ನಿಷ್ಠೆ ಯಾವುದಕ್ಕೂ ಸಂಬಂಧ ಇಲ್ಲ ಎಂದು ನಿರ್ಧರಿಸಿ ಪ್ರೀತಿಯಿಂದ ಎದುರಿಗೆ ತಂದಿಟ್ಟ ಪ್ರಸಾದವನ್ನೂ ಮುಟ್ಟದಂತೆ ಕುಳಿತು ಬಿಟ್ಟಿರುತ್ತಾನಲ್ಲ ಭಗವಂತ? ಹಾಗಿದ್ದೆ. ಇವತ್ತು ಸುಮ್ಮನೆ ಕೈ ಚೆಲ್ಲಿ ವಿದಾಯ ಹೇಳುತ್ತಿದ್ದೇನೆ. ಎರಡು ವರ್ಷಗಳ ಸುಧೀರ್ಘ ಕನಸಿದು. ಇವತ್ತು ಗೋರಿಯಲ್ಲಿ ಇಟ್ಟು ಚರಮಗೀತೆ ಹಾಡುತ್ತಿದ್ದೇನೆ!!
ನಿನಗೋಸ್ಕರ ನಾನು ಏನೇನು ಮಾಡಿದೆ ಅಂತ ಪಟ್ಟಿ ಕೊಡಲಾರೆ. ಒಂದೇ ಮಾತಿನಲ್ಲಿ ಹೇಳಲಾ? ಇದ್ದ ನೂರು ವರ್ಷಗಳ ಬೊಗಸೆಯಿಂದ ಅನಾಮತ್ತು ಎರಡು ವರ್ಷಗಳನ್ನೆತ್ತಿ ತಂದು ನಿನ್ನ ಪಾದಗಳ ಮೇಲೆ ಸುರಿದು ಸುಮ್ಮನೆ ನಿಂತೇ!! ಹೌದು ನಿನಿದ್ದ ಎರಡು ವರ್ಷ ನಿನ್ನ ಪ್ರೀತಿಸುವದನ್ನು ಬಿಟ್ಟು ಬೇರೆ ಏನನ್ನು ಮಾಡಲೇ ಇಲ್ಲ. ಕಾಲ ಉರುಳಿದ್ದೆ ಗೊತ್ತಾಗಲಿಲ್ಲ. ಕಾಲ ನನ್ನನ್ನು ಕೊಂದಿತಾ? ನಾನು ಕಾಲವನ್ನು ಕೊಂದೆನಾ? ಅಥವಾ ನಮ್ಮಿಬ್ಬರನ್ನು ಸೇರಿಸಿ ಕೊಂದು ನೀನು ಮುಗುಳ್ನಕ್ಕೆಯಾ?
ಈಗ ಯೋಚಿಸಿ ಪ್ರಯೋಜನವಿಲ್ಲ. ತುಂಬಾ ಸುಂದರಳಾದ, ತುಂಬಾ ಒಳ್ಳೆಯವಳಾದ ಹಾಗೂ ತುಂಬಾ ಮುಗ್ದಳಾಗಿದ್ದ ಹುಡುಗಿಯೊಬ್ಬಳನ್ನು ಇಷ್ಟು ದಿನ, ಇಷ್ಟು ತಿಂಗಳು, ಇಷ್ಟು ವರ್ಷ ಹೀಗೆ ಪ್ರೀತಿಸಿದ್ದೆ ಎಂಬ ಹೆಮ್ಮೆಯೊಂದು ನನ್ನಲ್ಲಿ ಕಡೆ ತನಕ ಇರುತ್ತದೆ.
ನೀನು ಕೊಟ್ಟ ಎರಡು ವರ್ಷಗಳ ಕನಸಿಗೆ, ಸಾಂಗತ್ಯಕ್ಕೆ, ಬಿಸುಪಿಗೆ, ಕಸುವಿಗೆ ಥ್ಯಾಂಕ್ಸ್ ಹೇಳುತ್ತಾ...
ಕೊನೆಯ ಪತ್ರ ಮುಗಿಸುತ್ತಿದ್ದೇನೆ.
bye.

3 ಕಾಮೆಂಟ್‌ಗಳು:

  1. ನಿನ್ನ ಪ್ರಾರ್ಥನೆ, ಭಕ್ತಿ, ಉಪವಾಸ, ನಿಷ್ಠೆ ಯಾವುದಕ್ಕೂ ಸಂಬಂಧ ಇಲ್ಲ ಎಂದು ನಿರ್ಧರಿಸಿ ಪ್ರೀತಿಯಿಂದ ಎದುರಿಗೆ ತಂದಿಟ್ಟ ಪ್ರಸಾದವನ್ನೂ ಮುಟ್ಟದಂತೆ ಕುಳಿತು ಬಿಟ್ಟಿರುತ್ತಾನಲ್ಲ ಭಗವಂತ? ಹಾಗಿದ್ದೆ.
    ADBHUT!!! idakkintalu nange berenu heloku gottagtilla sorry....

    ಪ್ರತ್ಯುತ್ತರಅಳಿಸಿ
  2. Ondu besarada sanjeya, kolluva ekaantadali kanniru haakida haagaayitu

    ಪ್ರತ್ಯುತ್ತರಅಳಿಸಿ