ಗೆಳತಿ,
ಕಾಣಿಸದ ಯಾವುದೋ ದೂರದಲಿ ಮೊಳಗುವ ದೇವಸ್ಥಾನದ ಘಂಟೆ, ಪ್ರೀತಿಯಿಂದ ಕಲೆಸಿದ ಮೊಸರನ್ನದ ಕೊನೆಯ ತುತ್ತು, ಬಿಸಿಲು ಮುಗಿದ ಸಾಯಂಕಾಲ ಸುಮ್ಮನೆ ಬಿದ್ದ ಮಳೆ ಎಬ್ಬಿಸುವ ಮಧುರ ಮಣ್ಣಿನ ವಾಸನೆ, ಮಾತು ಬಾರದ ಮಗುವಿನ ಮುಗ್ದ ನಗೆ, ಕರುವಿನ ಅಭೋದ ಕಣ್ಣು, ಹಸಿವೆಯಾದ ತಕ್ಷಣ ನೆನಪಾಗುವ ಅಮ್ಮ-
ನನಗೆ ನಿನ್ನ ನೆನಪಾಗುವದು ಹೀಗೆ!! ಒಳ್ಳೆಯದು ಅಂತ ಈ ಜಗತ್ತಿನಲಿ ಏನೇನಿದೆಯೋ; ಅದನ್ನು ನೋಡಿದಾಗಲೆಲ್ಲ ನೆನಪಾಗುವವಳು ನೀನು!!! ಚಂದದ ಹಾಡು ಕೇಳಿ ಸಂತೋಷಪಡುವ ಹೊತ್ತಲ್ಲೇ ನಿನಿಲ್ಲವಲ್ಲ ಅನಿಸಿಬಿಡುತ್ತದೆ. ಧುಮ್ಮಿಕ್ಕುವ ಜಲಪಾತಕ್ಕೆ ಮುಖ ಒಡ್ಡುತ್ತೇನೆ ತುಂತುರುವಿನಲಿ ನೀನಿರುತ್ತಿಯೆಂಬ ನಂಬಿಕೆ.ಇಬ್ಬನಿ ಬಿದ್ದ ಪಕಳೆಗೆ ಕೆನ್ನೆ ತಾಕಿಸುತ್ತೇನೆ; ನಿನ್ನ ಮನಸು ತಂಪಾಗಿರಲೆಂಬ ಆಸೆ. ನಾನೆಕಿಷ್ಟು ನಿನ್ನ ಪ್ರೀತಿಸುತ್ತೇನೆ?
ನನ್ನ ಪ್ರತಿ ಸುರ್ಯೋದಯವು ನಿನ್ನ ಸ್ಮರಣೆಯೊಂದಿಗೆ ಆಗಿದೆ. ಪ್ರತಿ ಸೂರ್ಯಾಸ್ತವು ನಿನ್ನ ನೆನಪಲ್ಲೇ ಆಗುತ್ತದೆ. ನಿನ್ನ ನಗೆ ನನಗೆ ಮುಂಗಾರಿನ ಆಗಮನ. ನನ್ನ ಬದುಕು ನೀನು. ಬರೆಯಲು ಕುಳಿತರೆ ಕಣ್ಣು ತುಂಬಿ ಬರುತ್ತವೆ. ನಿನ್ನ ಮುಖ ನೆನಪಾದರೆ ಎಂಥದೋ ಸಂಕಟ. ಗಡಿಯಾರದಲಿ ಎಂಟು ಘಂಟೆ; ನನಗೆ ನಿನ್ನ ಊಟದ ಚಿಂತೆ!!
ಸೋನು, ನಿನ್ನಿಲ್ಲದ ನನ್ನ ಬದುಕು... ಊಹೂ ನನಗೇ ಕಲ್ಪಿಸಿಕೊಳ್ಳಲಾಗುತ್ತಿಲ್ಲ. ಈ ಮದ್ಯರಾತ್ರಿಯಲಿ ನಿಶಾಚರಿಯಂತೆ ಕುಳಿತು ಯೋಚಿಸುತ್ತಿದ್ದೇನೆ.. I am Sorry ನನಗೇ ಬದುಕಲಾಗುತ್ತಿಲ್ಲ!!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ