ಬುಧವಾರ, ಅಕ್ಟೋಬರ್ 27, 2010
ಕರ್ಣ
ವ್ಯಾಸರು ಸೃಷ್ಟಿಸಿದ ಮಹಾಭಾರತದ ಒಂದು ಅದ್ಭುತ ಪಾತ್ರ: ಕರ್ಣ. ದೇವಸುತನಾದರೂ, ಒಬ್ಬ ಸಾಮಾನ್ಯ ಮನುಷ್ಯನಂತೆ ತವಕ, ತಲ್ಲಣ, ಗೊಂದಲ, ಹತಾಶೆ, ಋಣ ಭಾರ ಎಲ್ಲವನ್ನೂ ಅನುಭವಿಸುತ್ತಾ ಬದುಕಿದವನು. ನಿರ್ದಿಷ್ಟ ನಿರ್ಧಾರಕ್ಕೆ ಬರಲಾಗದೆ ನಮ್ಮಂತೆ ಚಡಪಡಿಸಿದವನು. ಹಸ್ತಿನಾವತಿಯ ರಕ್ತ ಸಿಂಹಾಸನಕ್ಕೆರಲು ಎಲ್ಲ ರೀತಿಯಿಂದಲೂ ಯೋಗ್ಯನಾಗಿದ್ದು, ಹಿಂದೆ ಸರಿದು ಬಿಟ್ಟವನು. ಅದಕ್ಕೆಂದೇ ತನ್ನ ದೊರೆ ಅರಿಕೇಸರಿಯನ್ನು ಅರ್ಜುನನಿಗೆ ಸಮೀಕರಿಸಿ 'ವಿಕ್ರಮಾರ್ಜುನ ವಿಜಯ' ಎಂದು ಹೆಸರಿಟ್ಟರೂ, ಕರ್ಣನ ವ್ಯಕ್ತಿತ್ವಕ್ಕೆ ಮನಸೋತು-
"ನೆನೆಯದಿರಣ್ಣ, ಭಾರತದೋಳ್ ಇಂ ಪೆರರಾರುಮಂ
ಒಂದೇ ಚಿತ್ತದಿಂ! ನೆನವೊಡೆ ಕರ್ಣನಂ ನೆನೆಯ!
ಕರ್ಣನೋಳ್ ಆರ್ ದೊರೆ ಕರ್ಣನ ಏರು, ಕರ್ಣನ ಕಡುನನ್ನಿ,
ಕರ್ಣನ ಅಳಿವು, ಅಂಕದ ಕರ್ಣನ ಚಾಗಂ ಎಂದು ಕರ್ಣನ,
ಪಡೆ ಮಾಡಿನೋಳ್ ಪುಡಿದು ಕರ್ಣ ರಸಾಯನಂ ಅಲ್ತೆ ಭಾರತಂ"
ಎಂದು ಪಂಪ ಹೊಗಳುತ್ತಾನೆ. ದಾನವನ್ನೇ ವೀರತ್ವಕ್ಕೆರಿಸಿದ ಇನ್ನೊಬ್ಬೆ ಒಬ್ಬ ವ್ಯಕ್ತಿ ನಮಗೆ ಇತಿಹಾಸದಲ್ಲಿ ಇನ್ನೆಲ್ಲೂ ಸಿಗುವದಿಲ್ಲ. 'ದಾನ' ಕರ್ಣನ ವ್ಯಕ್ತಿತ್ವದ ಪ್ರತಿಬಿಂಬ. ಅದಕ್ಕೆಂದೇ ಅವನು 'ದಾನ ವೀರ ಶೂರ ಕರ್ಣ'.
ಜಗತ್ತನ್ನೇ ತನ್ನ ಶಕ್ತಿಯಿಂದ ಮುನ್ನಡೆಸುವ ಸೂರ್ಯನ ಮಗನಾದರೂ, ಸೂತನೊಬ್ಬನ ಮನೆಯಲಿ ಸಾಮಾನ್ಯನಂತೆ ಬೆಳೆಯುತ್ತಾನೆ. ಹಾಗೆ ಬದುಕಿದ್ದಕ್ಕೆ ನಮಗೆ ಹೆಚ್ಚು ಆಪ್ತನಾಗ್ತಾನೆ? ಹಸಿವೆ, ಬಡತನ,ಕಿಳರಿಮೆಗಳಲ್ಲೇ ಬಾಲ್ಯವನ್ನು ಕಳೆದ ಕರ್ಣನಿಗೆ, ಕುರು ಚಕ್ರಾಧಿಪತಿಯಾಗು ಎಂದು ಕೃಷ್ಣ ಹೇಳಿದಾಗ, ಆ ಐಶ್ವರ್ಯಕ್ಕಿಂತಲೂ ತನ್ನ ದೊರೆ, ಅಂತರಂಗದ ಮಿತ್ರ ದುರ್ಯೋಧನನೆ ಹೆಚ್ಚು ಅಂದುಕೊಳ್ಳುತ್ತಾನೆ. ಕೊಟಿ ಕಲ್ಲಿದ್ದಿಲಿನ ಮದ್ಯದಲ್ಲಿದ್ದರೂ ಪ್ರಕಾಶಿಸುವ ವಜ್ರದಂತೆ, ತನ್ನ ಮೈಯಲ್ಲಿ ಹರಿಯುತಿರುವ ಕ್ಷಾತ್ರ ರಕ್ತದ ಬಿಸಿ ತಡೆಯಲಾಗದೆ ಪರುಶುರಾಮನಂತಹ ಗುರುವನ್ನು ಗೆದ್ದು, ಜಗತ್ತಿನಲ್ಲೇ ಮಹಾರಥನಾಗ್ತಾನೆ. ಬಯಸದೆ ಸಿಕ್ಕ ದುರ್ಯೋಧನನ ಗೆಳೆತನವನ್ನು ತಪ್ಪಿ ಕೂಡಾ ದುರುಪಯೋಗಪಡಿಸಿಕೊಳ್ಳದ ನಿಜವಾದ ಧರ್ಮರಾಯ ಈ ಕರ್ಣ!!
ಭಿಷ್ಮರಂತಹ ತುಂಬಿದ ಕೊಡವೇ ತುಂಬಿದ ರಾಜಸಭೆಯಲಿ 'ಸೂತಪುತ್ರ' ಎಂದು ಹಂಗಿಸಿದಾಗ, 'ಹುಟ್ಟಿನಿಂದ ಕುಲವನ್ನು ನೋಡುತ್ತಿರಾದರೆ, ಆಚಾರ್ಯ ದ್ರೋಣರು ಕೂಡ ಬೆಸ್ತ ಕುಲದವರು' ಎಂದು ಎದುರು ಮಾತನಾಡುವಷ್ಟು ಘನತೆ ಕಲ್ಪಿಸಿದ ಧುರ್ಯೋಧನನೆ ಅವನಿಗೆಲ್ಲ. ಧುರ್ಯೋಧನ ಸಿಕ್ಕ ನಂತರ ಅವನು ತನಗೋಸ್ಕರ ಬದುಕಲೇ ಇಲ್ಲ ಅನಿಸಿ ಬಿಡುತ್ತದೆ!! ಅವನ ಎಲ್ಲ ಕಾರ್ಯಗಳೂ ಗೆಳೆಯನ ಸುತ್ತಲು ಸುತ್ತ ತೊಡಗಿದವಾ? ಸ್ವಯಂವರದಲಿ ಗೆಲ್ಲಬಹುದಾಗಿದ್ದ, ದ್ರೌಪದಿಯನು ಕೇವಲ ಗೆಳೆಯನಿಗಾಗಿಯೇ ಸೋತು ಬಿಡುತ್ತಾನೆ. ಕೃಷ್ಣ ನಿಂದ ತನ್ನ ಜನ್ಮ ರಹಸ್ಯ ತಿಳಿದ ನಂತರವೂ ರಕ್ತ ಸಂಬಂಧ ಕ್ಕಿಂತಲೂ ಸ್ನೇಹ ಸಂಬಂಧದ ಪರವಾಗೇ ನಿಂತು ಬಿಡುತ್ತಾನೆ. ಅದಕ್ಕೆಂದೇ ನಮ್ಮೆಲ್ಲರ ಹೃದಯದಲಿ ನಿಶ್ಚಲವಾಗಿ ನಿಂತು ಬಿಡುತ್ತಾನೆ. ಹೆತ್ತರೂ ಒಂದು ದಿನವು ಪ್ರೀತಿ-ವಾತ್ಸಲ್ಯ ತೋರಿಸದ ತಾಯಿ ಕುಂತಿಗೇ ವರದಾನ ನೀಡಿ, ಎಲ್ಲೋ ತಾಯಿಗಿಂತಲೂ ದೊಡ್ಡವನು ಅನಿಸಿಬಿಡ್ತಾನೆ!!! ಎಲ್ಲ ಕಡೆಯಿಂದಲೂ ತನಗೆ ಸೋಲು, ಸಾವು ನೀಡುವವರ ಪ್ರೀತಿಗೆ ಮಣಿಯುತ್ತಾನೆ, ಮಣಿದು ಮಡಿಯುತ್ತಾನೆ. ಯುದ್ಧದಲ್ಲಿ ಸಾವು ತನಗೆ ಕಟ್ಟಿಟ್ಟ ಬುತ್ತಿ ಎಂದು ತಿಳಿದಿದ್ದರೂ, ಹೃದಯದ ಗೆಳೆಯನಿಗಾಗಿ ಪರಾಕ್ರಮಿಯಂತೆ ಹೋರಾಡಿ, ಕೃಷ್ಣನ ಮೋಸಕ್ಕೆ ಬಲಿಯಾಗ್ತಾನೆ.
ಅದಕ್ಕೆಂದೇ ಕರ್ಣ ನಮ್ಮಲ್ಲೋಬ್ಬನಾಗ್ತಾನೆ!!!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕರ್ಣ ನ ನಿಜವಾದ ಮನಸ್ಸು ಓದಿದಂತೆ ಅದ್ಭುತವಾಗಿ ಬರೆದಿದ್ದೀರಿ. ಕರ್ಣನೆ ಮಹಾಭಾರತದ ನಿಜವಾದ ಹಿರೋ ಅನಿಸುವಷ್ಟು ಆಪ್ತ ಲೇಖನ ಲೇಖನದ ಕೊನೆ ಕೊನೆಗೆ ಕಣ್ಣು ಮಂಜಾದದ್ದು ಸತ್ಯ!
ಪ್ರತ್ಯುತ್ತರಅಳಿಸಿ