ನೀನೇನು ಕಾಲವಾ?
ಹೊರಟು ಹೋದ ಮೇಲೆ
ಮರಳಿ ಬರಲಾರೆ
ಎಂದು ದುಖಿಸುವದಕ್ಕೆ...
ಕವಿ ಮಿರ್ಜಾ ಗಾಲಿಬ್ ನ ಈ ಸಾಲು ಎಷ್ಟು ಸತ್ಯ ಆಲ್ವಾ? ಒಂದ್ಸಲ ಸರಿಯಾಗಿ ಓದು. ನಿನಗಿದು ಅರ್ಥವಾದೀತು. ಇದರೊಳಗಿನ ನಾನು ಅರ್ಥವಾದೇನು!
ನೀನು ನನ್ನ ವಿಲಾಸದ ಒಂದು ಭಾಗವಲ್ಲ. ನಿನ್ನನ್ನೇ ಬದುಕಾಗಿಸಿಕೊಂಡಿದ್ದೇನೆ. ಬದುಕಿನ ಕಸುವಾಗಿಸಿಕೊಂಡಿದ್ದೇನೆ. ಹೀಗಾಗಿ ನೀನು ಬಹುದೂರದಲ್ಲಿದ್ದು ನೊಂದರೆ, ನಿಡಸುಯ್ದರೆ, ನಿನ್ನ ಕಣ್ಣುಗಳಲ್ಲಿ ನೀರು ಸುಳಿದಿರುಗಿದರೆ ಒಂದು ವಿಚಿತ್ರ ಸಂಕಟವನ್ನು ನಾನಿಲ್ಲಿ ಅನುಭವಿಸುತ್ತೇನೆ! ನೀನಲ್ಲಿ ಹಸಿದಿದ್ದರೆ, ನನಗಿಲ್ಲಿ ಊಟ ಮಾಡದ ಮನಸ್ಥಿತಿ. ನಿನ್ನ ದುಃಖಕ್ಕೆ, ನನ್ನ ಕಣ್ಣಿರು. ನಿನ್ನ ನಲಿವಿಗೆ, ನನ್ನ ಕಿರುನಗೆ. ನಿನ್ನ ಹಗಲುಗಳ ಮೊದಲ ಕಿರಣ ನಾನು! ನಿನ್ನ ಇರುಳ ಆಕಾಶದಲಿ ಕಾಣುವ ಮೊದಲ ಚುಕ್ಕಿ ನಾನು! ನೀನು ಛಟ್ಟನೆ ಮಾತು ಮುಗಿಸಿ ಎದ್ದು ಹೊರಟೆಯಲ್ಲ? ತಕ್ಷಣ ನೆನಪಾದದ್ದು ಗಾಲಿಬ್ ನ ಈ ಕವಿತೆ. ನೀನು ಕಾಲವಲ್ಲ! ಮತ್ತೆ ಹಿಂದಿರುಗುವದಿಲ್ಲವೇನೋ ಎಂದು ದುಗುಡಪಡಬೇಕಾಗಿಲ್ಲ. ಈ ಜಗತ್ತು ತುಂಬಾ ಚಿಕ್ಕದು ಮತ್ತು ದುಂಡಗಿದೆ. ನೀನು ಯಾವ ದಾರಿಯಲ್ಲಿ ಹೊರಟರೂ ನಿನ್ನ ನಾವೇ ಮತ್ತೆ ನನ್ನಲ್ಲಿಗೆ ಮರಳಿ ಬರಬೇಕು! ಅಲ್ಲಿ ಸಣ್ಣ ಮರಳ ದಂಡೆಯ ಮೇಲೆ ನಾನಿರುತ್ತೇನೆ! ನಿನಗೋಸ್ಕರ!!
ನಿನ್ನಲ್ಲೊಬ್ಬ ಕಮ್ಮಗಿನ ಗೆಳತಿ, ಕಾಮನೆಗಳ ಕೆಂಡ ಸಂಪಿಗೆ, ಶುದ್ಧ ಪ್ರೀತಿಯ ಮಮಕಾರ, ನೊಂದಾಗ ಚುಕ್ಕು ತಟ್ಟಿ ಮಲಗಿಸುವ ವಾತ್ಸಲ್ಯಮಯಿ ಅಮ್ಮ, ಸುಮ್ಮನೆ ಕೈ ಹಿಡಿದು ನಡೆಸಿಕೊಂಡು ಹೋಗೋಣವೆನಿಸುವಂತಹ ಅರಳು ಕಂಗಳ ಅಮಾಯಕ ಮಗು - ಇಷ್ಟೆಲ್ಲಾ ನಾನು ಕಾಣದೆ ಹೋಗಿದ್ದರೆ... ಇಂದು ಇಷ್ಟೊಂದು ನೋವು ಅನುಭವಿಸುವ ಜರೂರತ್ತಿರಲಿಲ್ಲ!!! ಮಾತಿಗೆ ಕುಳಿತಾಗ ಇದೆಲ್ಲ ಹೇಗೆ ಬಿಡಿಸಿ ಹೇಳಲಿ? ನಾನು ಕೇವಲ ಬರೆಯಬಲ್ಲೆ. ಹಾಳೆಗೂ ನನಗೂ ಯಾವುದೋ ಜನ್ಮದ ನಂಟು - ನನ್ನಂತೆ ನಿನ್ನಂತೆ!!! ಆದರೆ ಅಕ್ಷರಗಳು ಮುನಿಯುವದಿಲ್ಲ. ಛಟ್ಟನೆ ಕೈ ಕೊಡವಿ ಎದ್ದು ಹೋಗುವದಿಲ್ಲ. ಪ್ರತಿ ಸಲ ನಿನಗೆ ಬರೆಯಲು ಕುಳಿತಾಗಲೂ ನೀನು ನನಗೆ ಜಾಸ್ತಿ ಅರ್ಥವಾಗ್ತಿಯ; ತಲೆ ಬಾಗಿಸಿ ನಿಂತ ಫಕಿರನಿಗೆ ದೇವರು ಅರ್ಥವಾದಂತೆ!! ಒಂದೊಂದು ಪತ್ರವೂ ದೂರಾತಿ ದೂರದಿಂದ ಕೈ ಹಿಡಿದು ಕರೆ ತಂದು ನಿನ್ನ ಮಡಿಲಿಗೆ ಚೆಲ್ಲಿದೆ. ಕಡೆಯ ಪಕ್ಷ ನನ್ನ ಅಕ್ಷರಗಳ ಘಮ, ಅದಾದರೂ ನಿನಗೆ ನನ್ನ ಅರ್ಥ ಮಾಡಿಸುವದಿಲ್ಲವಾ ಸೋನು?
ನಂಗೆ ಅದೂ ಗೊತ್ತು: ಮರೆತು ಸುಮ್ಮನಾಗಬಹುದಾದ ಹುಡುಗೀ ನೀನೂ ಅಲ್ಲ. ನನ್ನ ಬದುಕಿನಲಿ ಮೂಡಿ ನಿಂತ ಮೊದಲ ವಸಂತ. ಮಾಮರದ ಚಿಗುರು ತಿಂದ ಮೊದಲ ಕೋಗಿಲೆ. ಕುಹೂ ಎಂದು ಕೂಗಿ ಎಬ್ಬಿಸಿದ ಮೊದಲ ಮಧುರ ದ್ವನಿ. ನನ್ನ ಬದುಕು ನಿನ್ನ ಬರುವಿಕೆಗಿಂತ ಮೊದಲು ಹೇಗಿತ್ತು ಎಂಬುದು ನಿಚ್ಚಳ ನೆನಪಿದೆ; ಅದೂ ಭಾನುವಾರದ ಮದ್ಯಾಹ್ನದಂತೆ ಖಾಲಿ ಖಾಲಿ. ಅಂತಹ ಬದುಕಿನೊಳಗೆ ಶುಕ್ರವಾರದ ಸಂಭ್ರಮವಾಗಿ ನಡೆದು ಬಂದವಳು ನೀನು!! ಸುಮ್ಮನೆ ಹುಡುಗಿಯಾಗಿದ್ದರೆ ಈ ಪರಿ ಪ್ರೀತಿಸುತ್ತಿರಲಿಲ್ಲವೇನೋ? ನೀನೊಂದು ಗುಂಗು. ಈ ಬದುಕಿನ ರಂಗು. ಬಿಟ್ಟು ಬಿಡದೆ ನೆನಪಾಗ್ತಿಯ. ಕಣ್ಣಿಗೆ ಕಟ್ಟಿದ ಚಿತ್ರವಾಗುತ್ತಿಯ. ಒಬ್ಬನೇ ಕುಳಿತು ನಿನ್ನ ಹೆಜ್ಜೆಯ ಸಪ್ಪುಳಕ್ಕಾಗಿ ಕಾಯುತ್ತೇನೆ. ಅದೆಷ್ಟೋ ಹೊತ್ತಿನಿಂದ ತುಂಬಾ ಲೋನ್ಲಿ. ನನ್ನೊಳಗೆ ನಾನೂ ಇಲ್ಲವೇನೋ ಎಂಬಷ್ಟು ಒಬ್ಬಂಟಿ. ಬರೆಯುವ ಹುಡುಗ ಹೀಗೆ ಬಳಲಬಹುದೇ ಗೆಳತಿ? ನನ್ನ ಕಥೆಯ ಪಾತ್ರ ಮುನಿದಿವೆ. ಕವಿತೆಗಳಿಗೆಕೋ ಬಿಗಿದ ಗಂಟಲು. ಪೆನ್ನಿಗೂ ವಿಶಾಧದ ಸೆಳೆತ. ಹಾಳೆಗೆ ನೋವಿನ ಮುದುರು. ಅವುಗಳಿಗೆಲ್ಲ ನೀನು ಬೇಕು. ಮೇಕೆ ಮರಿಯ ಅಬೋಧ ಕಣ್ಣುಗಳಲ್ಲಿ ತಾಯಿ ಕಳೆದುಹೋದ ದಿಗಿಲು. ತುಂಬಾ ಇಷ್ಟದಿಂದ ನಾನೂ ಏನನ್ನಾದರೂ ಬರೆದು ಎಷ್ಟು ದಿನಗಳಾದವು ಜಾನಂ?
ಇವತ್ತಿಗೂ ಆಸೆ ಕಳೆದುಕೊಂಡಿಲ್ಲ. ಬಂದೆ ಬರುತ್ತಿ. ಆದರೆ ಯಾವತ್ತು? ಕರಾರುವಾಕಾಗಿ ನೀನು ಬರುವ ಘಳಿಗೆಯನ್ನಾದರೂ ಹೇಳು. ಅಲ್ಲಿಯವರೆಗಾದರೂ ಬದುಕಿರಲು ಪ್ರಯತ್ನಿಸುತ್ತೇನೆ; ಸುಳ್ಳೇ ಸಂತೋಷವೊಂದನ್ನು ಮೈಗೆ ಸುತ್ತಿಕೊಂಡು.
ನೆನಪಿರಲಿ ಒಬ್ಬ ಹುಡುಗ ಕಾಯುತ್ತಿದ್ದಾನೆ
ನಾವೆಗೆ ಕಾಯುವ ದಂಡೆಯಂತೆ
ಕೇವಲ ನಿನಗೋಸ್ಕರ!!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ