ಬುಧವಾರ, ಜೂನ್ 16, 2010

ಧಾರವಾಡದಲ್ಲೊಂದು ಮಹಾ ಬೆಳಗು



ಶಾಲ್ಮಲೆಯಲ್ಲೊಂದು ಅದ್ಭುತ ಮುಂಜಾನೆ, ಧಾರವಾಡದ ತುಂತುರು ಮಳೆಯ ಜೊತೆ ರಮ್ಯ ಪ್ರಕೃತಿಯ ಮಡಿಲಲ್ಲಿ ದಿವ್ಯ ಸುಪ್ರಭಾತ. ಸಕಲ ಜೀವರಾಶಿಗಳಿಗೂ ಎಚ್ಚರಗೊಳಿಸುವ ಭವ್ಯ ದಿನಕರ. ಮನದ ಮೂಲೆಯಲ್ಲೆಲ್ಲೋ ಒಂದು ನವ್ಯ ಉತ್ಸಾಹ. ಬದುಕಿನ ಇನ್ನೊಂದು ಮಹಾ ಹಗಲು ಇಂಚಿಂಚಾಗಿ ತೆರೆದುಕೊಳ್ಳುವ ಸಂಭ್ರಮ. ಕತ್ತಲು ಸರಿದು ಬೆಳಕು ಹರಡುವ ನಿತ್ಯ ಸಂಕ್ರಮಣ. ಇನ್ನೊಂದು ಪರಿಭ್ರಮಣ ಯಶಸ್ವಿಯಾಗಿ ಮುಗಿಸಿದ ಭೂಮಿಯ ಮುಖದಲ್ಲೊಂದು ಅನನ್ಯ ಸಾರ್ಥಕತೆ. ಸಾಧನಕೇರಿಯ ಶಬ್ದ ಗಾರುಡಿಗ ಲಯಬದ್ದವಾಗಿ ಹೆಣೆದ "ಮೂಡಲ ಮನೆಯ ಮುತ್ತಿನ ನೀರಿನ...". ತಾಯಿಯ ತೆಕ್ಕೆಯಲ್ಲಿ ಮಲಗಿ ತುಟಿಯಂಚಿನಲಿ ನಗು ಅರಳಿಸಿ ಯಾವುದೋ ಸವಿಗನಸು ಕಾಣುತಿರುವ ಮುಗ್ದ ಮಗುವಿಗೂ ಮಗ್ಗುಲು ಬದಲಿಸುವ ಹಂಬಲ. ಶತಶತಮಾನಗಳಿಂದಲೂ ಪ್ರತಿ ಬೆಳಗಿಗೂ ಕೂಗುವ ಕೋಳಿ ನೈಸರ್ಗಿಕ ಸಮಯಸಾಚಿ. ದಶದಿಕ್ಕುಗಳಿಗೂ ತನ್ನ ರಂಗಾದ ರಂಗು ತುಂಬಿ ನಗುತ ಏರುವ ಸಹ್ಯ ಸೂರ್ಯ. ಮೊನ್ನೆ ಹುಟ್ಟಿದ ತನ್ನ ಮುದ್ದು ಮರಿಯ ಹೊಟ್ಟೆ ತುಂಬಿಸಲು ಪುರ್ರನೆ ಹಾರಿದ ತಾಯಿ ಹಕ್ಕಿ. ರಾತ್ರಿಯ ಜಡತ್ವ ಕಳೆದು ಬೆಳಗಿನ ಕೆಲಸಕ್ಕೆ ತಯಾರಾದ ರೈತ. ಇವತ್ತೂ ಬಾರದ ಮರೆತ ಪ್ರೇಮಿಯ ಪತ್ರಕ್ಕಾಗಿ ಕಾಯುವ ಗೃಹಿಣಿ. ಇನ್ನೂ ಒಂದು ದಿನ ಬದುಕಿ ಬಿಟ್ಟೆ ಎಂಬ ಸಂತೋಷದಲ್ಲಿ ಕೊಸಕೊಸನೆ ಕೆಮ್ಮಿ ಕ್ಯಾಕರಿಸುವ ವಯೋವೃದ್ಧ. ಮನಸಿಗೆ ಕನಸು ತಾಕಿಸಿ, ನಿನ್ನೆ ಕೊಟ್ಟ ಹುಡುಗನ ಬಿಸಿ ಮುತ್ತಿಗೆ ಈಗಲೂ ಕರಗುತಿರುವ, ಎಚ್ಚರಾದರೂ ಮುದುಡಿ ಮಲಗುವ ಹುಚ್ಚು ಹುಡುಗಿ. ಸ್ವಾತಿ ಮಳೆಗೆ ಬಾಯಿ ತೆರೆದು ಕಾಯುತಿರುವ ಚಿಪ್ಪಿನಂತೆ ತನ್ನನ್ನೇ ಮರೆತು ಹೋದವಳ ನೆನಪುಗಳೊಂದಿಗೆ ಎದ್ದೆಟಿಗೆ ಸಿಗರೇಟು ಸುಡುತಿರುವ ಭಗ್ನ ಪ್ರೇಮಿ. ರಾತ್ರಿ ಕಂಡ ಕನಸುಗಳೆಲ್ಲವನ್ನು ನನಸು ಮಾಡಲು ಅವಡುಗಚ್ಚಿದ ದೃಡ ಮನಸ್ಕ. ಇದೆಲ್ಲದರ ಮದ್ಯೆಯು ಸೂರ್ಯನ ಮುಖದಲ್ಲಿ ಮುಗುಳ್ನಗೆ ಹುಡುಕುವ ನಾನು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ