ಮಂಗಳವಾರ, ಜುಲೈ 27, 2010

ಗೊತ್ತಿಲ್ಲ!!!

ಅಂದು,
ಹೀಗೆ ಕಾಯುತ್ತಿದ್ದೆ ನೀನು ಬರುವೆ ಎಂದು. ನೀ ಬಂದೆ. ಇವತ್ತೂ ಕಾಯುತ್ತಿದ್ದೇನೆ ನೀನು ಬರುವದಿಲ್ಲ ಎಂದು ಗೊತ್ತಿದ್ದೂ!! ಇದು ನನ್ನ ಮೂರ್ಖತನವಾ, ದುರಾಸೆಯಾ, ಆಸೆಯಾ, ಬಯಕೆಯಾ, ನನ್ನ ಪ್ರೀತಿಯ ಪರೀಕ್ಷೆಯಾ, ಗೊತ್ತಿಲ್ಲ!!
ನಿನ್ನ ಮುದ್ದು ಮುಖ ನೋಡುತ್ತಾ, ಅನುಗಾಲವೂ ಜೊತೆಗಿರುವ ಕನಸನ್ನು ಹೊತ್ತು ಬದುಕಬೇಕು. ಇಲ್ಲಾ ನಿನ್ನೊಂದಿಗಿನ ಈ ಜನ್ಮದ್ದಲ್ಲ, ಏಳೇಳು ಜನ್ಮದ ಸಂಬಂಧವನ್ನು ಕಳೆದುಕೊಂಡು ಬಿಡಬೇಕು.
ಇಲ್ಲಿ ಸಂಜೆಯೊಂದು ನಿಧಾನವಾಗಿ ಸಾಯುತಿದೆ. ಬೀದಿ ದೀಪಗಳು ಕಣ್ಣು ಬಿಡುತ್ತಿವೆ. ನಿಚ್ಚಳ ಸಂಜೆ ಇದ್ದದ್ದು ಉನ್ಮಾದ ರಾತ್ರಿಯಾಗಿ ಬದಲಾಗುತ್ತಿದೆ. ಹಸುವನ್ನು ಬಿಟ್ಟು ದೂರ ಹೋದ ಕರು 'ಅಂಬಾ' ಎಂಬ ಸದ್ದಿನೊಂದಿಗೆ ಹಿಂದಿರುಗುತಿದೆ. ಕಾಳಿಗಾಗಿ ಗೂಡು ಬಿಟ್ಟ ಹಕ್ಕಿ ಮರಳುತಿದೆ. ಸತ್ತ ಸೂರ್ಯನ ನೆನಪಲಿ ಸೊಳ್ಳೆಗಳು ರೋಧಿಸುತ್ತಿವೆ. ಇಷ್ಟಗಲ ಚಾಚಿಕೊಂಡ ಅದೇ ಇಕ್ಕಟ್ಟು ರೂಮಿನಲ್ಲಿ ನಾನು ಬಿದ್ದುಕೊಂಡಿದ್ದೇನೆ ಹೆಣದಂತೆ!!!
ಬದುಕೇ ಬದಲಾಗುವದಿಲ್ಲವೇ? ಈ ಹತಾಶೆಯಲ್ಲೇ ಕೊರಗಿ ಬದುಕೇ ಮುಗಿದು ಹೋಗುತ್ತದಾ? ಎದುರು ಮನೆಯ ಮುದುಕಿಗೆ ಬಂದ ಕುಷ್ಟದಂತೆ ಸವೆದು ಸಾಯುತ್ತಿನಾ? ಮರೆತು ಹೋದವಳು ಮರಳಿ ಬರಬಹುದಾ? ಒಂಟಿ ದೋಣಿಗೊಂದು ದಡ ಸಿಗಬಹುದಾ? ಗೊತ್ತಿಲ್ಲ.
ಈ ಎಲ್ಲ ಗೊತ್ತಿಲ್ಲಗಳಿಗೂ ಉತ್ತರ ಹುಡುಕಬೇಕು. ಆದರೆ ಮೈಯಲ್ಲಿ ಕಸುವೆ ಸತ್ತಂತಿದೆ. ನೀನು ಕೈ ಬಿಟ್ಟು ಹೋದ ಮೇಲೆಯೇ ಹಿಗಾದದ್ದಾ? ಗೊತ್ತಿಲ್ಲ!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ