ಬುಧವಾರ, ಜುಲೈ 28, 2010

ಈ ಪ್ರೀತಿ ಒಂಥರಾ...

ಆಕಾಶದಿಂದ ಧರೆಗಿಳಿದ ಆ ಅದ್ಭುತ ಹನಿಯಂತೆ, ಈ ಎದೆಯಲಿ ಅವಿರ್ಭವಿಸಿದ ವರ್ಷದೇವತೆಯೇ,
ನಿಜವಾಗ್ಲೂ ನಾನು accept ಮಾಡಿರಲಿಲ್ಲ. ಇನ್ನೂ ಎಲೆ ಮರೆಯ ಕಾಯಿಯಂತಿದ್ದ, ಮೊಗ್ಗಿನಲ್ಲೇ ಹಿಗ್ಗಾಗಿದ್ದ ನಮ್ಮ ಪ್ರೀತಿ ಇಷ್ಟು ಬೇಗ ರುಚಿಯಾದ ಹಣ್ಣಾಗಿ, ಘಮ ಘಮಿಸುವ ಸುಮವಾಗಿ ಅರಳುತ್ತದೆಂದು ನಂಬಿರಲಿಲ್ಲ!!!
ಹುಟ್ಟಿದ ಶರಧಿ ಎಂದೋ ಸಾಗರ ಸೇರುವಂತೆ, ನಾವಿಬ್ಬರೂ ಸೇರುತ್ತೆವೆಂದು ಗೊತ್ತಿತ್ತು. ಆದರೆ ಅದು ಇಷ್ಟು ಬೇಗ! ಈ ಅನಿರೀಕ್ಷಿತ ಸಂತೋಷದ ಬಿರುಗಾಳಿಗೆ ಮಾತೇ ಹೊರಡುತ್ತಿಲ್ಲ. ತುತ್ತು ಅನ್ನಕ್ಕೂ ಗತಿ ಇಲ್ಲದ ಬಿಕ್ಷುಕನಿಗೆ ಕಣ್ಮುಚ್ಚಿ ತೆರೆಯುವದರೋಳಗಾಗಿ ಭಕ್ಷ-ಬೋಜಗಳ ಬಂಡಿ ಎದುರಾದರೆ, ಹೇಗೆ ಮೂಕನಾಗುತ್ತಾನೋ ಹಾಗಾಗಿದೆ ನನ್ನ ಸ್ತಿತಿ!!
ಇಂದು ಬೆಳಗಿನಿಂದಲೇ ಯಾಕೋ ಸುಮ್ಮನೆ ಭಾವುಕನಾಗಿದ್ದೆ, ಎಕ್ಸೈಟ್ ಆಗಿದ್ದೆ. ಆದರೆ ಆ ಭಾವುಕತೆಗೆ ಕಾರಣವೇ ಇದು ಎಂದು ಅಂದುಕೊಂಡಿರಲಿಲ್ಲ.
ಮಳೆಯನ್ನೇ ಕಾಣದ ಬರಡು ಭೂಮಿಯಲ್ಲಿ ಅಕಾಲಿಕ ಮಳೆ ಸುರಿದು ತಂಪಾಗುವಂತೆ, ಮೊದಲ ಮಳೆಗೆ ಬರುವ ಸುಮಧುರ ಮಣ್ಣಿನ ವಾಸನೆಯಂತೆ, ಆ ಮಳೆ ನಿಂತು ತುಂಬಾ ಹೊತ್ತಾದರೂ ಆ ಕಂಪಲ್ಲೇ ಇದ್ದೀನಿ ನಾನಿನ್ನೂ! ಅದ್ಭುತ ಕವಿಯ ಕಾವ್ಯ ಓದಿದ ನಂತರದ ಅತ್ಯದ್ಭುತ ಸೈಲೆನ್ಸ್ ನಂತೆ. ಆದರೆ ಪ್ರೀತಿಯನ್ನ ಒಪ್ಪಿಕೊಂಡ ನಂತರದ ಮೌನ ಇಷ್ಟು ಅದ್ಭುತವೆಂದು ಗೊತ್ತಿರಲಿಲ್ಲ!! ನಿನ್ನ ಒಪ್ಪಿಗೆಯನ್ನು ಕೇಳಿದ ಮರುಕ್ಷಣದಿಂದ ಈ ಕ್ಷಣದ ವರೆಗೂ ಅದನ್ನೇ ಅನುಭವಿಸುತ್ತ ಪ್ರತಿಮೆಯಂತಾಗಿದೆ ಮನಸು!!! ಹೇಳಿಕೊಳ್ಳೋಣವೆಂದರೆ ಸಮಿಪದಲಿ ಯಾರೂ ಇಲ್ಲ.
ಇದು ಕೇವಲ ಪತ್ರವಲ್ಲ! ನನ್ನ ಜೀವನದ ಶುದ್ದ ತಿರುವಿನ ಬೃಹತ್ ಮೈಲಿಗಲ್ಲು!! ಈ ಮೈಲುಗಲ್ಲಿನ ಕಾರಣವೇ ನೀನು!!!
ಯಾವುದೇ, ಯಾರದೇ ಮೇಲಿನ ದ್ವೇಷ, ಅಸೂಯೆ, ಸಿಟ್ಟಿನಿಂದಲ್ಲದೆ, ಕೇವಲ ನಿನ್ನ ಹಾಗೂ ಈ ಜೀವನದ ಮೇಲಿನ ಅಘಾಧ ಪ್ರೀತಿಗಾಗಿ ನಾನು ಬದಲಾಗುತ್ತಿದ್ದೇನೆ!! ನಾಳೆ ಬೆಳಿಗ್ಗೆ ಯಿಂದ ನನ್ನ ಜೀವನದ ಹೊಸ ಸುಂದರ ಅಧ್ಯಾಯ ಪ್ರಾರಂಭ. ಆ ಅಧ್ಯಾಯದ ಹೆಸರೇ - ಪ್ರೀತಿ. ಮೊದಲ ಸಾಲಿನ ಮೊದಲ ಪದವೇ - ನೀನು!!!
"ಪರಸ್ಪರ ನಂಬಿಕೆಯ ಮೇಲೆ ನಿಂತ ಭವಂತಿ"ಯ ಅಡಿಗಲ್ಲು ಬಿದ್ದ ಎಂಟು ಘಂಟೆಗಳ ನಂತರ ನಮ್ಮಿಬ್ಬರ ಪ್ರೀತಿ ಎಂಬ ಲತೆಯಿಂದ ಜನಿಸಿದ ಮೊದಲ ಸುಮವೇ ಈ ಪತ್ರ.
ನೀನು ನನ್ನ ಮೇಲೆ ಇಟ್ಟ ಪ್ರೀತಿ, ನಂಬಿಕೆ, ವಿಶ್ವಾಸ ಎಲ್ಲವು ನಾನು ಮಣ್ಣು ಸೇರುವ ಕೊನೆಯ ಘಳಿಗೆಯವರೆಗೂ ಹೀಗೆ ಇರುತ್ತವೆ ಎಂದು ಹೇಳುತ್ತಾ, ಪ್ರತಿ ದಿನದ ಸೂರ್ಯ ಅಸ್ತಮಿಸುವದರೋಳಗಾಗಿ ಇಂತಹದೇ ಅದ್ಭುತ ಪತ್ರ ನಿನ್ನ ಕೈಗಿಡುತ್ತಾ, ಆ ಕ್ಷಣಕ್ಕೆ ಕಣ್ಣರಳಿಸುವ ನಿನ್ನ ನೋಡುತ್ತಾ, ನಿನ್ನ ಖುಷಿಗೆ ನಗುವಾಗುತ್ತ, ದುಃಖಕ್ಕೆ ಹೆಗಲಾಗುತ್ತಾ, ನಿದ್ರೆಗೆ ಮಡಿಲಾಗುತ್ತಾ, ಕನಸಿಗೆ ಬಣ್ಣವಾಗುತ್ತಾ, ಕನವರಿಕೆಗೆ ಜೋಗುಳವಾಗುತ್ತಾ, ಈ ರಾತ್ರಿಗೆ ಗುಡ್ ನೈಟ್ ಹೇಳುತ್ತಾ, ನಾಳಿನ ಹೊಸ ಮುಂಜಾನೆಗೆ ಇಂಚಿಂಚಾಗಿ ತೆರೆದುಕೊಳ್ಳುತ್ತಿರುವ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ