ಮಂಗಳವಾರ, ಡಿಸೆಂಬರ್ 07, 2010
ಚಳಿಗಾಲಕ್ಕೊಂದು ಪುಟ್ಟ ಪತ್ರ...
ಬೆಳ್ಳಿ ಬೆಟ್ಟದ ಭಾವಗಂಗೆ,
ಮಳೆಗಾಲ ಮುಗಿಯುತಿದೆ. ಮುಸುಕಿದ ಮೋಡದ ಮರೆಯಿಂದ ಹೊರ ಸರಿದ ಸೂರ್ಯ ಫಳಫಳಿಸುತ್ತಿದ್ದಾನೆ. ಗರಿಕೆಯ ಗರ್ಭದಲ್ಲಿ ಹುಟ್ಟಿದ ಚಳಿ ಬೆನ್ನು ಮೂಳೆಯವರೆಗೂ ಹರಡುತಿದೆ. ಹೃದಯದಲ್ಲಿದ್ದ ಪ್ರೀತಿ ಈ ಚಳಿಗೆ ಕಿಬ್ಬೊಟ್ಟೆಗೆ ಜಾರಿ ಕಾಂಕ್ಷೆಯಾಗಿ ಎದ್ದು ಬರುತಿದೆ. ಮುಸಲಧಾರೆಗೆ ಕವಿಯಾಗಿದ್ದವನು ಕೆರಳಿದ ಚಿರತೆಯಂತಾಗಿದ್ದೇನೆ. ಸನಿಹದಲಿ ನೀನಿಲ್ಲ!
ಇವತ್ತು ಸಿಗು. ಬೆಳದಿಂಗಳ ರಾತ್ರಿ, ಚಂದ್ರನ ಮುಖದಲ್ಲೂ ಅಸೂಯೆ ಬರುವಷ್ಟು ಗಾಢ ನಮ್ಮಿಬ್ಬರ ಪ್ರೀತಿ, ತನ್ನ ಪ್ರಿಯತಮನಿಗಾಗಿ ಜನುಮಾಂತರದ ವಿರಹ ಕಳೆಯಲೇನೋ ಎಂಬಂತೆ ರಭಸದಿಂದ ಹರಿಯುವ ನದಿಯ ಕಲರವ, ಸಕ್ಕರೆಯಂತೆ ಮೃದುವಾಗಿ ಮೈಗೊತ್ತುವ ಮರಳು, ಕೈ ಚಾಚಿದರೆ ಸಿಗುವ ನಾನು, ತಂಪಾದ ಮೊಸರನ್ನ, ಬೆಳತನಕ ಹಾಡು ಹಾಡು ಹಾಡು...
"ಹೂವು ಹಾಸಿಗೆ ಚಂದ್ರ ಚಂದನ
ಬಾಹು ಬಂಧನ ಚುಂಬನ..."
ದಣಿದರೆ ನನ್ನ ಹೆಗಲು ಇದ್ದೆ ಇದೆ. ಸುಂದರವಾದ ಕನಸುಗಳನ್ನು ಏಳೇಳು ಜನ್ಮಕ್ಕಾಗುವಷ್ಟು ಕಟ್ಟಿ ಕೊಡುತ್ತಾ, ನಿನ್ನ ಕಿವಿಗೆ ಇಂಪಾದ ಹಾಡಾಗುತ್ತಾ, ನಿನ್ನ ಜಂಪಿಗೆ ತಂಪಾದ ಮಡಿಲಾಗುತ್ತಾ, ಬೆಳಗಿನ ಸೂರ್ಯ ಕಿರಣ ನಿನ್ನ ಮನೆಯ ಪಾರಿಜಾತದ ಮೇಲೆ ಬಿಳುವದರೋಳಗಾಗಿ ನಿನ್ನ ಮನೆ ಮುಟ್ಟಿಸುತ್ತೇನೆ. ಅವತ್ತಷ್ಟೆ ಅರಳಿದ ನಿನ್ನ ಮನೆಯ ಕಿಡಕಿಗೆ ಆತು ನಿಂತ ಮಲ್ಲಿಗೆ ಮೊಗ್ಗಿನ ಮೇಲಾಣೆ!!
ನಿನ್ನೊಂದಿಗೆ ಬೆಳದಿಂಗಳಿನಲ್ಲಿ ೪೮೦ ನಿಮಿಷಗಳನ್ನು ಇನ್ನು ಹೇಗೆಲ್ಲ, ಎಷ್ಟೆಲ್ಲಾ ಅದ್ಭುತವಾಗಿ ಕಳೆಯಬೇಕು ಎಂದು ಕಣ್ಣು ತೆರೆದೇ ಕನಸು ಕಾಣುತಿರುವ ನಾನೇ!!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ