ಬುಧವಾರ, ಮಾರ್ಚ್ 31, 2010

ಮೊದಲ ಮಳೆಗೆ ಸಿಕ್ಕಿದ್ದು …



ಜಾನಂ,

ಬಿರಿದು ಬಾಯಿ ತೆರೆದ ಈ ಭುವಿಗೆ ತಂಪನ್ನೆರೆಯಲು ಆ ಮಳೆಗೂ ಏನು ಅವಸರ ನೋಡಿದೆಯಾ? ಬಿಸಿಲಿನಿಂದ ಬೆಂದ ತನ್ನ ಪ್ರಿಯತಮೆಯ ತುಟಿಗಳನ್ನು ತಂಪು ಮಾಡಲು ಬಂದೆ ಬಿಡ್ತು ! ಅದಕ್ಕೆ ಅಲ್ಲವಾ ಹಂಸಲೇಖ ಹೇಳಿದ್ದು ;

"ಬಿಡಿಸದ ಬಂಧವೇ

ನಿಮ್ಮದು ಬೆರೆಯುವ ಪಂದ್ಯವೇ

ನೀವಿಬ್ಬರೂ ಬೆರೆತರೆ ಸುತ್ತಲೂ

ಮಾಯದ ಮಣ್ಣಿನ ಗಂಧವೇ .."

ಮತ್ತೆ ಮಳೆ ಹುಯುತಿದೆ ಎಲ್ಲವು ನೆನಪಾಗುತಿದೆ ! ಯಾಕೆ ಅಂತ ಗೊತ್ತಿಲ್ಲ ಆದ್ರೆ ಪ್ರತಿ ಮಳೆ ಹನಿಯಲ್ಲೂ ನಾನು ನಿನ್ನನ್ನೇ ಹುಡುಕುತ್ತೇನೆ ! ಮೈಮೇಲೆ ಬಿಳೋ ಪ್ರತಿ ಹನಿಗೂ ನಿನದೆ ಘಮ ! ಇಲ್ಲಿ ನೀನಿಲ್ಲ ಅದಕ್ಕೆ ನನ್ನಲ್ಲಿ ನಾನಿಲ್ಲ!!

ಮಳೆ ಸುರಿಯುವ ಇಳಿಸಂಜೆ ನಾವಿಬ್ಬರು ಒಂದೇ ಕೊಡೆಯ ಕೆಳಗೆ ನಡೆದು ಹೋಗಿದ್ದು ನಿನ್ನೆ ,ಮೊನ್ನೆ ಅನ್ನೋ ಹಾಗಿದೆ . ಆದರೆ ನಾವಿಬ್ಬರು ಬೇರೆಯಾಗಿ ಇಂದಿಗೆ 325 ದಿನಗಳು! almost ಒಂದು ವರ್ಷ!! ನನ್ನ ಬದುಕಿನ ಸ್ಫೂರ್ತಿ ದೀಪದ ಬೆಳಕಿಲ್ಲದೆ ಹ್ಯಾಗೆ ನಡೆದೇ ಇಷ್ಟು ದಿನ ? ಗೊತ್ತಿಲ್ಲ . ಆದರೆ ನೀನಿಲ್ಲದೆ ಬದುಕಿದ ಈ 7800 ಘಂಟೆಗಳು ನಾನು ಚೆನ್ನಾಗಿರಲಿಲ್ಲ.

ನನ್ನ ಜೀವಕ್ಕಿಂತಲೂ ಸಮೀಪದಲ್ಲಿರುವ ಜೀವಕ್ಕೆ ಯಾವ ತೊಂದರೆಗಳು ಬಾರದಿರಲಿ, ಅಂತ ಅಂದು ನಾನು ಮಾತನಾಡಿದ ಮಾತು ನಿನಗೆ ಹೇಗೆ ಹೇಗೋ ಕಂಡಿರಬಹುದು , ಆದರೆ ನಾನಂದ ಮಾತಿನಲಿ , ಸಿಟ್ಟಿನಲ್ಲಿ , ಅಳುವಿನಲ್ಲಿ ಕೇವಲ ನಿನ್ನ ಬಗೆಗಿನ ಕಾಳಜಿ ಇತ್ತು ಅಂತ ಮಾತ್ರ ಹೇಳಬಲ್ಲೆ .

ಬಿಡು "ಮುಚ್ಚಿದ ಬಾಗಿಲಲ್ಲಿ ನಿಂತು ಬಿಕ್ಷೆ ಬೇಡಬಾರದು" ಅಂದ ನನ್ನ ಗುರುವಿನ ಮಾತಿನಂತೆ , ಎದ್ದು ಹೋದವಳ ಮುಂದೆ ಎಷ್ಟೆಲ್ಲಾ ಮಾತಾಡಿ ಏನು ಪ್ರಯೋಜನ ? ಆದರೆ ಪ್ರತಿ ಮಳೆಗೂ ನನ್ನಲ್ಲಿ ನೀನಗೆಂದೇ ಒಂದು ಪತ್ರ ಹುಟ್ಟುತ್ತೆ . ಆದರೆ ಈ ಪತ್ರ ನಿನಗೆ ಯಾವತ್ತು ಸಿಗಲ್ಲ . ಯಾಕೆ ಅಂದ್ರೆ ಇದು ನನ್ನ ಹುಚ್ಚು ತಳಮಳದ ಬೇಗುದಿಯಲ್ಲಿ ಅರಳಿದ ಸ್ವಗತ ಪುಷ್ಪ !

"ಕ್ಷಣ ಕಾಲ ತೆರೆದಿಡುವೆ ನನ್ನೀ ಎದೆಯನ್ನ

ನೋಡು ಬಾ ಗೆಳತಿ ನನ್ನೊಳಗೆ ನಿನ್ನ

ಅಲ್ಲಲ್ಲಿ ಹುದುಗಿದೆ ನೀ ಬಿಟ್ಟ ಹೂ ಬಾಣ

ಕಿತ್ತೊಗೆದು ಅಪ್ಪಿಕೋ ನಾ ಕಣ್ಮುಚ್ಚುವ ಮುನ್ನ"

Happy Raining…

ಮೊದಲ ಮಳೆಯಲಿ ಮನಸು ತೊಯಿಸಿಕೊಂಡವ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ