ಧಡಾರ್ ಅಂತ ಸದ್ದು! ಏನು ಅಂತ ಕೂಡ ನೋಡಲಾಗದ ಜಡತ್ವ!
ಎರಡು ನಿಮಿಷ ಸುಧಾರಿಸಿಕೊಂಡು ಯೋಚಿಸಿದರೆ ನನ್ನದೇ ಕನಸಿನ ಗೋಪುರ ಸಿಡಿದು ಬಿದ್ದಿತ್ತು!!!
“ಇನ್ನು ನಿನ್ನೊಂದಿಗೆ ನನಗೆ ಬದುಕಲಾಗದು; ಯಾಕೆಂದರೆ
ನೀನು narrow minded fellow” ಅಂತ ಒಂದೇ ಉಸಿರಲಿ ಹೇಳಿ
ಎದ್ದು ಹೋದಳು. ಮುಂಗಾರು ಮಳೆಯಲಿ ಶುರುವಾದ ಪ್ರೀತಿ, ಬಿರು ಬೇಸಿಗೆಯ ಒಂದು ಮಧ್ಯಾನ ಮುರಿದು
ಬಿದ್ದಿತ್ತು; ನನ್ನ ಬದುಕಿನಂತೆ. “ಜಗತ್ತಿನಲಿ ಹುಟ್ಟಿದ ಪ್ರತಿ ಗಂಡು-ಹೆಣ್ಣು ಪ್ರಿತಿಸಿಕೊಳ್ಳುತ್ತಾರೆ;
ನಿನ್ನದೆನಪ್ಪ ವಿಶೇಷ?” ಅಂತ ಕೇಳಿದ ಪರಮ ಗುರು ರವಿ ಬೆಳಗೆರೆಯ ಮಾತಿನಂತೆ ನಮ್ಮದು 3 ವರ್ಷಗಳ
ಪವಿತ್ರ ಪ್ರೇಮ. ಬದುಕಿನ ಎಲ್ಲ ಕಷ್ಟ-ಸುಖಗಳನ್ನೂ ಒಟ್ಟಿಗೆ ಅನುಭವಿಸುವ ನಿರ್ಧಾರ ಮಾಡಿ,
ಶುರುವಾದ ವಸಂತಗಾನ.
Propose ಮಾಡಿದ ದಿನವೇ ನಾವು
ನಿರ್ಧರಿಸಿದ್ದು; We should rise with love ಅಂತ!!! ಇದ್ದ ಮೂರು ವರ್ಷಗಳಲಿ ಪಂಪನಿಂದ
ಹಣಮಂತ ಹಾಲಿಗೇರಿ ವರೆಗೂ ಎಲ್ಲರನ್ನೂ ಓದುತ್ತಾ, ಒಬ್ಬರಿಗೊಬ್ಬರು ಓದಿ ಹೇಳುತ್ತಾ, ಎಲ್ಲೋ ಕೇಳಿದ
ಅದ್ಭುತ ಹಾಡು ಕೇಳಿ – ಕೇಳಿಸುತ್ತಾ ದಿನಕ್ಕೊಂದು ಪತ್ರ, ಅರ್ಧದಿನಕ್ಕೊಂದು ಕವಿತೆ,
ಮಧ್ಯರಾತ್ರಿಗೊಂದು ಚುಟುಕ ಹೀಗೆ ಬದುಕಿಬಿಟ್ಟೆವು. ಅದು ನಮ್ಮಿಬ್ಬರ ಬದುಕಿನ ಸುವರ್ಣಕಾಲ!!!
ಇಲ್ಲದ ಕಾರಣವನ್ನು
ಹುಡುಕಿ, ಆರೋಪಿಸಿ ಎದ್ದು ಹೋದವಳ ಮರೆತು ಬದುಕಲು ತುಂಬಾ ಕಷ್ಟವಿತ್ತು; ಯಾಕೆಂದರೆ ನಾನು ಉಳಿದು
ಹೋದವ!!! ಅದು ಕುರುಡು ಕತ್ತಲು. ಎದ್ದು ನಿಲ್ಲಲಾಗದ ಅಸಹಾಯಕತೆ, ಮುಖದ ಮೇಲೆ ಉಳಿದು ಹೋದ ಅವಮಾನದ
ಗೀರು, ತುಳಿದು ಹೋದ ಎದೆ, ಸ್ವರ ಮೂಡದ ಕೊಳಲು, ಕ್ಷಣಕ್ಕೊಮ್ಮೆ ತುಂಬಿಕೊಳ್ಳುವ ಕಣ್ಣು,
ಒಟ್ಟಿನಲ್ಲಿ ರವಿ ಹೇಳಿದಂತೆ Grinding Halt. ಕೇವಲ ಪ್ರೀತಿಸಿದ ತಪ್ಪಿಗೆ 2 ವರ್ಷಗಳ ಚಿತ್ರಹಿಂಸೆ. ಸತ್ತು ಹೋಗುವ ನಿರ್ಧಾರದಿಂದ ಹಿಂದೆ ಬಂದಿದ್ದಕ್ಕೆ
ಕಾರಣ ಕೇವಲ “ಅಮ್ಮ”. ಮುರಿದು ಬಿದ್ದ ಬದುಕನ್ನ ಮತ್ತೆ ಮೊದಲಿನಿಂದ ಕಟ್ಟಿಕೊಳ್ಳುವ ಪೇಲವ ಯತ್ನ.
ಮತ್ತೆ ಮತ್ತೆ ಮುಗ್ಗರಿಸುವ ಹಿಂಸೆ, ಸಿಗದ ನೌಕರಿ, ಅದು ಹತಾಶೆಯೇ ಮುಗಿ ಬಿದ್ದ ಕ್ರೂರ ಕಾಲ.
ಆ ಪ್ರಪಾತದಿಂದ
ಮೇಲೆಬ್ಬಿಸಿದ್ದು Once Again ಅಮ್ಮ, ಗೆಳೆಯರು, ಮತ್ತೆ
ಮೊದಲಿನಿಂದ ಓದಿದ ಎಲ್ಲ ಪ್ರೀತಿಯ ಲೇಖಕರು, ಸಂಗೀತ, ಸಾಹಿತ್ಯ, ಬದುಕಲ್ಲಿ
ನಿಧಾನವಾಗಿ ಎಸ್ಪಿಬಿ, ಪಿಬಿಎಸ್, ಹಂಸಲೇಖ ನರಸಿಂಹ ಸ್ವಾಮಿಗಳ ಪದ್ಯ, ಅಶ್ವಥ್ ಕಂಠ ಕೇಳತೊಡಗಿತು!
ಬೆಡ್ ರೂಮಲ್ಲಿ ರವಿ, ಭೈರಪ್ಪ, ಅನಂತಮೂರ್ತಿ, ಜಯಂತ ಕಾಯ್ಕಿಣಿ, ಜೋಗಿ, ದೆವನೂರು ಎಲ್ಲರೂ ಸಂತೆ
ನೆರೆದು ಸಮಾಧಾನಿಸತೊಡಗಿದರು! ಬದುಕಿನ ಯಾವ ಕಷ್ಟಕ್ಕೂ, ನೋವಿಗೂ, ಹತಾಶೆಗೂ ಸಾಹಿತ್ಯ ಮತ್ತು
ಸಂಗೀತದಲ್ಲಿ ಔಷಧಿ ಇದೆ ಎಂಬ ಸತ್ಯ ಗೊತ್ತಾಯ್ತು. I am happy now!!! ಬದುಕು ಮಗ್ಗುಲು ಬದಲಿಸುತಿದೆ. ಪ್ರತಿ
ಸುರ್ಯೋದಯಕ್ಕೂ ಹೊಸ ಹುರುಪು, ಪ್ರತಿ ಇರುಳಿಗೂ ನವ ಸಂತಸ. ಯಾವುದೋ ‘ಭಾವ’ ದೂರದಿಂದ ಕೈ
ಚಾಚುತಿದೆ. ನನ್ನ ಬದುಕಲ್ಲೂ ಮಧುರ ಆಲಾಪ ಶುರುವಾಗುವ ದಿನ ದೂರವಿಲ್ಲ ಅನಿಸುತಿದೆ. ಬರೋ
ಮಳೆಗಾಲಕ್ಕೆ ಕೊರಡು ಕೊನರುವ ಸೂಚನೆ. ತಡೆದ ಮಳೆ ಜಡಿದು ಬರುವ ಮುನ್ಸೂಚನೆ!!!
ಬದುಕಿನ ಕಡು ಕಷ್ಟದಲಿ ಕೈ
ಹಿಡಿದೆತ್ತಿದ ಎಲ್ಲ ಮಹಾನುಭಾವರಿಗೂ Thanks!!!(ಹಾಯ್ ಬೆಂಗಳೂರ್ ನಲ್ಲಿ ಪ್ರಕಟಿತ)