ಗುರುವಾರ, ಅಕ್ಟೋಬರ್ 31, 2013

ಯಾವುದೇ ಕಾರಣಕ್ಕೂ ನಿನ್ನ ನೋಯಿಸದಿರುವ ನನ್ನ ನಿರ್ಧಾರ ದಿನ-ದಿನಕ್ಕೂ ಗಟ್ಟಿಯಾಗುತ್ತಿದೆ

ಸೋನು,
ಇಲ್ಲಿ ಹುಚ್ಚು ಮಳೆ! ರುದ್ರ ಶಿವನ ಜಟಾಜೂಟದಿಂದ ಧುಮ್ಮಿಕ್ಕಿದ ಗಂಗೆ ಹಳ್ಳಿ, ನಗರಗಳನ್ನು ಅಲ್ಲೋಲ ಕಲ್ಲೋಲಗೊಳಿಸುತ್ತಿದ್ದಾಳೆ. ಮಳೆಯನ್ನೇ ಕಾಣದ ರೈತನ ಮುಖದಲಿ ಎರಡು ಹೊತ್ತಿನ ಊಟದ ಚಿಂತೆ ಪರಿಹಾರವಾದ ಸಂತಸ. ಮುರಿದು ಹೋದ ಮನಸುಗಳಿಗೆ ದಿವ್ಯ ಔಷಧದಂತೆ ಕೆಲಸ ಮಾಡುವ ವರ್ಷದಾರೆ!

          ಇದ್ದ ಕೆಲಸವನ್ನೆಲ್ಲ ಬಿಟ್ಟು ಹೊಸದೊಂದು ಕನಸು ಕಟ್ಟಲು ಅಣಿಯಾದ ನಾನು; ನೀನೂ ಇಲ್ಲದ ಒಬ್ಬಂಟಿ ಸಂಚಾರಿ. ನಮ್ಮಿಬ್ಬರ ಒಲವಿನ ಬಳ್ಳಿ ಮುರಿದು ಹೋದ ಕ್ಷಣದಿಂದಲೂ ಉಳಿದು ಹೋದ ನೋವು, ಇನ್ನೂ ತೋಟಕ್ಕುತ್ತಿದೆ. ಬಿಸಿಲ ನಾಡಿನ ಬಯಲು ಸೀಮೆಯಲಿ ಹುಟ್ಟಿ ಬೆಳೆದವನಿಗೆ ಮಲೆನಾಡಿನ ಪರಿಚಯವಾದಂತೆ, ನಿನ್ನ ಪರಿಚಯವಾಯ್ತು. ಅದೆಲ್ಲ ಎಷ್ಟು ಸುಂದರ ಕನಸುಗಳಿದ್ದ ಸುಮಧುರ ದಿನಗಳು.

          ಜೇಬಿನಲ್ಲಿ ಎರಡು ರೂಪಾಯಿ ಇರದಿದ್ದರೂ ಇಡೀ ಜಗತ್ತು ಗೆಲ್ಲುವ ಹಪಿಹಪಿ. ಬಿಳಿ ಹಾಳೆಯ ಮೇಲೆ ಬರೀ ಪೆನ್ನಿಟ್ಟರೆ ಸಾಕು; ಎದ್ದು ಬರುವ ಮುದ್ದಾದ ಪತ್ರ. ಸಾಯಂಕಾಲಕ್ಕೊಂದು ಸುಂದರ ಕವನ. ಅರ್ಧರಾತ್ರಿಯಲಿ ಹೊಳೆವ ಹನಿಗವನ. ಮಳೆಯಲಿ ನೆನೆದು ಬಂದಾಗ ತೋಚಿದ ಮುದ್ದಾದ ಸಾಲು. ಅವೆಲ್ಲ ಯಾವ ಜನ್ಮದ ನೆನಪುಗಳೋ ಎಂಬಷ್ಟು ‘ಡ್ರೈ’ ಆದ ನಾನು.


          ಇತ್ತೀಚಿಗೆ ಎಂಥ ದುಃಖಕ್ಕೂ ಕಣ್ಣಿರು ಬರುತ್ತಿಲ್ಲ. ಸಂತೋಷ – ಅದು ನಿನ್ನೊಂದಿಗೆ ಜಾಗ ಖಾಲಿ ಮಾಡಿದ ಮಾಯಾವಿ! ಮನದ ಮೂಲೆಯಲಿ ನಿಂತು ಸದಾ ಎಚ್ಚರಿಸುತ್ತಿದ್ದ ಮಾನವಿಯತೆಯೇ ಮರೆಯಾಗಿ ಹೋದ ಅನುಭವ. ನೀನು ಕೈ ಕೊಡವಿ ಎದ್ದು ಹೋದ ಮೇಲೆ ಮುರಿದು ಹೋದ ಹಡಗಿನಂತಾದೆನಾ? ಗೊತ್ತಿಲ್ಲ! ಯಾವುದೇ ಕಾರಣಕ್ಕೂ ನಿನ್ನ ನೋಯಿಸದಿರುವ ನನ್ನ ನಿರ್ಧಾರ ದಿನ-ದಿನಕ್ಕೂ ಗಟ್ಟಿಯಾಗುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ