ಗುರುವಾರ, ಅಕ್ಟೋಬರ್ 31, 2013

“ಹಾಡಾಗದೆ, ಕಾವ್ಯವಾಗದೆ ಕಡೆಗೆ ಗದ್ಯವೂ ಆಗದೆ ಉಳಿದು ಹೋದದ್ದು ನಾನೊಬ್ಬನೇ”

ನೀ ಮೀಟಿದ
ನೆನಪೆಲ್ಲವೂ
ಎದೆ ತುಂಬಿ
ಹಾಡಾಗಿದೆ...!!!

“ಹಾಡಾಗದೆ, ಕಾವ್ಯವಾಗದೆ ಕಡೆಗೆ ಗದ್ಯವೂ ಆಗದೆ ಉಳಿದು ಹೋದದ್ದು ನಾನೊಬ್ಬನೇ” – ನೀ ಬರೆದ ಕಾದಂಬರಿ ಚಿತ್ರದ ಹಾಡು ಕೇಳುತ್ತಾ ತನ್ನಷ್ಟಕ್ಕೆ ತಾನೆ ಅಂದುಕೊಂಡನು ವಸಂತ್. ಬಯಲು ಸೀಮೆಯ ಬಿಸಿಲಿನಲ್ಲಿ ಒಣಗಿ ನಿಂತ ಕಲ್ಲು ಬಂಡೆಯ ಹಾಗಿದ್ದಾನೆ. ಓದಿದ್ದು ಕನ್ನಡ ಎಮ್.ಎ ಆದರೂ ಹೊಟ್ಟೆ ಪಾಡಿಗೆ ಬಿ.ಎಂ.ಟಿ.ಸಿ ಕಂಡಕ್ಟರ್ ಕಮ್ ಡ್ರೈವರ್. ಚಂದ್ರಾ ಲೇಔಟಿನ ಹಂದಿ ಗೂಡಿನಂತಹ ಚಿಕ್ಕ ರೂಮೊಂದರಲ್ಲಿ ಗೆಳೆಯರೊಂದಿಗೆ ಎಲ್ಲವನ್ನೂ ಶೇರ್ ಮಾಡಿಕೊಳ್ಳುತ್ತಾ, ಬೆಂಗಳೂರಿನ ಬದುಕನ್ನು ಇಷ್ಟಿಷ್ಟೇ ಅರ್ಥ ಮಾಡಿಕೊಳ್ಳುತ್ತಾ ಜೀವಿಸುತಿದ್ದಾನೆ. ಇದ್ದ ಇಬ್ಬರೂ ಅದೇ ಬಿ.ಎಂ.ಟಿ.ಸಿಯಲಿ ಮೆಕ್ಯಾನಿಕ್ಕುಗಳು. ತಿಂಗಳಿಡಿ ದುಡಿದರೂ, ತಿಂಗಳಿಡಿ ಬದುಕಲಾರದಷ್ಟು ಸಂಬಳಕ್ಕೆ ದುಡಿಯುತ್ತಾ, ಸಂಬಳದ ದಿನ ಕಾರ್ನರ್ ಬಾರಿನ ಮೂಲೆಯಲಿ ಕುಳಿತು ಒಂದೇ ಒಂದು ಪಿಂಟ್ ಬಿಯರ್ ಕುಡಿಯುತ್ತಾ... ಯೌವನದ ಇಷ್ಟಿಷ್ಟೇ ವರ್ಷಗಳು ಜಾರಿ ಹೋಗುತ್ತಿವೆ.

ಆರು ನೂರು ಕಿ.ಮಿ ದೂರದ ಉತ್ತರ ಕರ್ನಾಟಕ ದಿಂದ ಬಂದು ಇಲ್ಲಿನ ರೀತಿ-ರಿವಾಜುಗಳಿಗೆ ಹೊಂದಿಕೊಂಡು ೪ ವರ್ಷಗಳಾದವು.ಊರು ನೆನಪಾಗುತ್ತೆ ಮೂರೋ, ಆರೋ ತಿಂಗಳಿಗೊಂದು ಸಲ; ವತ್ಸಲ ನೆನಪಾದಂತೆ!! ಬಾಡಿಗೆಗೆಂದು ಪಕ್ಕದ ಮನೆಗೆ ಬಂದ ಮೇಷ್ಟ್ರ ಒಬ್ಬಳೇ ಮಗಳು ವತ್ಸಲ. ಒಂದು ದಿನವೂ ಮಾತನಾಡಿಸಿದವಳಲ್ಲ. ಅವಳನ್ನು ನೋಡಿದ ಮೊಟ್ಟ ಮೊದಲ ದಿನವೇ ವಸಂತನಿಗೆ ಪ್ರೀತಿಯ ತುಡಿತ-ಮಿಡಿತ ಅರ್ಥವಾದದ್ದು! ಆಗ ಅವನು ಹೈಸ್ಕೂಲಿನ ಕಡೆಯ ವರ್ಷದ ಟೆನ್ಶನ್ ನಲ್ಲಿದ್ದ. ಒಂದು ವರ್ಷಕ್ಕೆ ಚಿಕ್ಕವಳು ವತ್ಸಲ. ಹಾಗೂ ಹೀಗೂ ಎಸ್.ಎಸ್ .ಎಲ್.ಸಿ ೭೫% ತೆಗೆದು ಮುಂದಿನ ಓದಿಗೆ ಧಾರವಾಡಕ್ಕೆ ಹೊರತು ನಿಂತಾಗ ಅವ್ವನಿಗಿ೦ತಲೂ, ವತ್ಸಲಳನ್ನು ಬಿಟ್ಟು ಹೊರಡುವದು ಕಷ್ಟವಾಗಿತ್ತು. ಹೊರಡುವ ಕೊನೆಯ ಘಳಿಗೆಯಲಿ ಆಯಾಚಿತವಾಗಿ ನೋಡಿ ನಕ್ಕವಳ ಆ ನಗುವಿನ ಘಮ ಇನ್ನೂ ಅವನ ಮನದೊಳಗೆ ಹಸಿರಾಗಿದೆ!

          
ಧಾರವಾಡದ ೭ ವರ್ಷಗಳ ಎಂ.ಎ ಜೀವನದವರೆಗೂ ಆ ಘಮದ ದಟ್ಟ ಅಮಲಿನಲ್ಲಿಯೇ ತೇಲುತ್ತಿದ್ದ ವಸಂತನಿಗೆ, ಕೊನೆಯ ಪರೀಕ್ಷೆ ಮುಗಿಸಿ ಊರಿಗೆ ಹೋದ ದಿನದಂದೇ ಬಿದ್ದ ಸಿಡಿಲು ವತ್ಸಲಳ ಸಾವು!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ