ಬುಧವಾರ, ಏಪ್ರಿಲ್ 14, 2010

ಮಳೆಗೊಂದು ಸ್ವಗತ...



ಒಂದೇ ಸಮನೆ ನಿಟ್ಟುಸಿರು
ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ ಕಂಗಳಲಿ
ಕರಗುತಿದೆ ಕನಸಿನ ಬಣ್ಣ
ಎದೆಯ ಜೋಪಡಿಯ ಒಳಗೆ
ಕಾಲಿಡದೆ
ಕೊಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ
ಮಳೆಬಿ
ಲ್ಲಿನಂತೆ ನೋವು
ಕೊನೆಯಿರದ ಏಕಾಂತವೆ ಒಲವೇ...

ನಿನದೇ ನೆನಪು...


ಮತ್ತೆ ಮತ್ತೆ ನೀನೇ ನೆನಪಾಗ್ತಾ ಇದ್ದೀಯ
ಮರೆತು ಹೋಗಬೇಕೆಂಬ ವಿಚಿತ್ರ ತಳಮಳದಲಿ
ಪ್ರತಿ ದಿನವೂ, ಕ್ಷಣವೂ ನಿನದೇ ನೆನಪು
ನೀನಿಲ್ಲ ಎಂಬ ಸತ್ಯ ಅರಗಿಸಿಕೊಳ್ಳದ ಮನಸು
ನಿನಿಲ್ಲೇ ಇದ್ದೀಯ ಎಂಬ ಹುಚ್ಚು ಕನವರಿಕೆಯಲ್ಲೇ ಇದೆ
ಮೊಬೈಲಿನ ವಾಲ್ ಪೇಪರ್ ನಲ್ಲಿ ನಿರಂತರ ಸುರಿಯುವ ಮಳೆಯಂತೆ...

ಸೋಮವಾರ, ಏಪ್ರಿಲ್ 12, 2010

ನಿನ್ನ ಪ್ರೀತಿಸೋದಕ್ಕೆ ಕಾರಣವೇ ಇರಲಿಲ್ಲ...


ಇನ್ಯಾವತ್ತೂ ನಿನ್ನ ನೆನಪು ಮಾಡಿಕೊಳ್ಳಬಾರದೆಂದು ಅವಡುಗಚ್ಚಿ ಕುಳಿತಿದ್ದೆ. ನೀನು ನೆನಪಾದ ತಕ್ಷಣ ಕಣ್ಣಲ್ಲಿ ಮೂಡುವ ಒಂದಷ್ಟು ಹನಿಗಳನ್ನು ನನಗೇ ಕಾಣದಂತೆ ಮುಚ್ಚಿಟ್ಟಿದ್ದೆ. ಪ್ರತಿ ಕ್ಷಣ ನಿನ್ನ ನೆನಪು ಮಾಡಿಕೊಳ್ಳುವ ನನ್ನ ಅಸಹಾಯಕತೆಗೆ ನಾನೇ ಬೇಸರಿಸಿಕೊಂಡಿದ್ದೆ. ನಿನ್ನಿಷ್ಟದ ಹಾಡನ್ನ ಯಾವತ್ತೂ ಗುನಿಗಿಕೊಳ್ಳಲಿಲ್ಲ ನಿನ್ನೊಂದಿಗೆ ತಿಂದ ವೆಜ್ ಕುರ್ಮಾ,ಗೋಲಗುಪ್ಪೆ, ಪಾನಿಪುರಿ ಯಾವುದನ್ನೂ ತಿಂದೆ ಇಲ್ಲ. ನಿನ್ನ ಜೊತೆ ನೋಡಬೇಕಾಗಿದ್ದ ಎಷ್ಟೋ ಸಿನಿಮಾಗಳನ್ನ ನೋಡೇ ಇಲ್ಲ. ಇದಾವುದನ್ನು ನೆನಪು ಮಾಡಿಕೊಳ್ಳಬಾರದು ಎಂದುಕೊಂಡರೂ ನನಗೆ ಸಾಧ್ಯವಾಗ್ತಿಲ್ಲ. ಇದೇನಾ ಪ್ರೀತಿ?
ಕಾರಣವೇ ಇಲ್ಲದೆ ಇಷ್ಟವಾದವಳು ನೀನು. ಅಸಲು ನಿನ್ನ ಪ್ರೀತಿಸೋದಕ್ಕೆ ಕಾರಣವೇ ಇರಲಿಲ್ಲ. ಹೌದು ನಿಜವಾದ ಪ್ರೀತಿಗೆ ಕಾರಣವೇ ಬೇಕಿಲ್ಲ. ಅದು ಬೆಳದಿಂಗಳಿನಂತೆ! ತನ್ನ ಅನನ್ಯವಾದ ಹಾಲು ಬಿಳುಪನ್ನ ಹರಡುವದೊಂದೇ ಕೆಲಸ. ಯಾವುದರ ಮೇಲೆ ತನ್ನ ಬೆಳಕು ಹರಡುತ್ತಿದೆ? ಕಲ್ಲು, ಮುಳ್ಳು, ಬೆಟ್ಟ, ಗುಡ್ಡ, ನದಿ, ತೊರೆ ಉಹುಂ ಅದಕ್ಕೆ ಬೇಕಿಲ್ಲ!! ಅದು ಎಲ್ಲಿ ಬಿದ್ದರೂ ಕಳವಳ, ಗೊಂದಲ ಯಾವುದು ಇಲ್ಲ. ನನ್ನ ಪ್ರೀತಿ ಮಾತ್ರ ಕಾಡು ಬೆಳದಿಂಗಳಾಯಿತೇ? ಗೊತ್ತಿಲ್ಲ!

ಬಣ್ಣ ಬದಲಿಸುವ ಹುಡುಗ - ಹುಡುಗಿಯರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನಿಜವಾಗಿಯೂ ಪ್ರೀತಿಸುವವರ ಸಂಖ್ಯೆ ಯಾವತ್ತೂ ಕಡಿಮೆಯಾಗಿಲ್ಲ!!! ನಿನ್ನ ಚಂಚಲ ಮನಸು, ಹಸಿ ಹಸಿ ಸುಳ್ಳು ಇವೆಲ್ಲವನ್ನೂ ಬದಿಗಿಟ್ಟು ಹೇಳಬೇಕೆಂದರೆ... ಇನ್ನೂ ಕೂಡ ಇಷ್ಟೇ ಇಷ್ಟು ಪ್ರೀತಿ ಉಳಿದಿಕೊಂಡಿದೆ. ಅದು ಹೆಮ್ಮರವೂ ಆಗಬಹುದು. ನನ್ನ ಸ್ವಾಭಿಮಾನವನ್ನೆಲ್ಲ ಮತ್ತೊಮ್ಮೆ ಅಡವಿಟ್ಟು ನೀನು ಬೇಕೇ ಬೇಕೆಂದು ಕೊನೆ ಸಲ ಕೇಳ್ತಾ ಇದ್ದೀನಿ!!! ಪ್ಲೀಸ್ ಒಂದೇ ಒಂದು ಸಲ ತಿರುಗಿ ಬಂದು ಬಿಡು ನಾವು ತಿನ್ನೋ ಪಾನಿಪುರಿ, ಗೋಲಗುಪ್ಪೆ ಕಾಯ್ತಾ ಇವೆ!!! ಇನ್ನೆಂದೂ ಬಿಟ್ಟು ಹೋಗದ ಹಾಗೆ ಗಟ್ಟಿಯಾಗಿ ತಬ್ಬಿಕೊಂಡೇ ಬದುಕಿ ಬಿಡ್ತೀನಿ ಇರುವಷ್ಟು ಕಾಲ.

ನಿನ್ನ ನೆನಪನ್ನೇ ಉಸಿರಾಡಿಕೊಂಡಿರುವ ನಾನೇ..

ಬುಧವಾರ, ಮಾರ್ಚ್ 31, 2010

ಮಳೆಯ ರಾತ್ರಿ...






ಬೆಂಗಳೂರಿನ ಒಂದು ಮಧ್ಯ ರಾತ್ರಿ

ಹಗಲೆಲ್ಲ ಗಡಿಬಿಡಿಯ ನಡುವೆ

ಯಾರು ಮಾತನಾಡಿಸದ ಕಪ್ಪು ಟಾರ್ ರಸ್ತೆಗೆ …

ಅದೇಕೋ ಮಾತನಾಡುವ ಹುಕಿ

ಸಕಲವೂ ಸ್ತಬ್ದವಾದಾಗ

ಮಾತನಾಡುವ ಮನಸಿನಂತೆ …

ಸಂಜೆ ಬಿದ್ದ ದೊಡ್ಡ ಮಳೆಗೆ

ದೀಪದ ಬೆಳಕಿನಲಿ

ಅಳುತ್ತ ಮಲಗಿತ್ತು

ಕೈ ಕೊಟ್ಟ ಪ್ರಿಯತಮೆಯ

ಕಾಯುತ್ತ ಕುಳಿತ ಹುಡುಗನಂತೆ

ಅದಕ್ಕೂ ಯಾವುದೋ ಜನ್ಮದ ನೆನಪು !!!

ಮೊದಲ ಮಳೆಗೆ ಸಿಕ್ಕಿದ್ದು …



ಜಾನಂ,

ಬಿರಿದು ಬಾಯಿ ತೆರೆದ ಈ ಭುವಿಗೆ ತಂಪನ್ನೆರೆಯಲು ಆ ಮಳೆಗೂ ಏನು ಅವಸರ ನೋಡಿದೆಯಾ? ಬಿಸಿಲಿನಿಂದ ಬೆಂದ ತನ್ನ ಪ್ರಿಯತಮೆಯ ತುಟಿಗಳನ್ನು ತಂಪು ಮಾಡಲು ಬಂದೆ ಬಿಡ್ತು ! ಅದಕ್ಕೆ ಅಲ್ಲವಾ ಹಂಸಲೇಖ ಹೇಳಿದ್ದು ;

"ಬಿಡಿಸದ ಬಂಧವೇ

ನಿಮ್ಮದು ಬೆರೆಯುವ ಪಂದ್ಯವೇ

ನೀವಿಬ್ಬರೂ ಬೆರೆತರೆ ಸುತ್ತಲೂ

ಮಾಯದ ಮಣ್ಣಿನ ಗಂಧವೇ .."

ಮತ್ತೆ ಮಳೆ ಹುಯುತಿದೆ ಎಲ್ಲವು ನೆನಪಾಗುತಿದೆ ! ಯಾಕೆ ಅಂತ ಗೊತ್ತಿಲ್ಲ ಆದ್ರೆ ಪ್ರತಿ ಮಳೆ ಹನಿಯಲ್ಲೂ ನಾನು ನಿನ್ನನ್ನೇ ಹುಡುಕುತ್ತೇನೆ ! ಮೈಮೇಲೆ ಬಿಳೋ ಪ್ರತಿ ಹನಿಗೂ ನಿನದೆ ಘಮ ! ಇಲ್ಲಿ ನೀನಿಲ್ಲ ಅದಕ್ಕೆ ನನ್ನಲ್ಲಿ ನಾನಿಲ್ಲ!!

ಮಳೆ ಸುರಿಯುವ ಇಳಿಸಂಜೆ ನಾವಿಬ್ಬರು ಒಂದೇ ಕೊಡೆಯ ಕೆಳಗೆ ನಡೆದು ಹೋಗಿದ್ದು ನಿನ್ನೆ ,ಮೊನ್ನೆ ಅನ್ನೋ ಹಾಗಿದೆ . ಆದರೆ ನಾವಿಬ್ಬರು ಬೇರೆಯಾಗಿ ಇಂದಿಗೆ 325 ದಿನಗಳು! almost ಒಂದು ವರ್ಷ!! ನನ್ನ ಬದುಕಿನ ಸ್ಫೂರ್ತಿ ದೀಪದ ಬೆಳಕಿಲ್ಲದೆ ಹ್ಯಾಗೆ ನಡೆದೇ ಇಷ್ಟು ದಿನ ? ಗೊತ್ತಿಲ್ಲ . ಆದರೆ ನೀನಿಲ್ಲದೆ ಬದುಕಿದ ಈ 7800 ಘಂಟೆಗಳು ನಾನು ಚೆನ್ನಾಗಿರಲಿಲ್ಲ.

ನನ್ನ ಜೀವಕ್ಕಿಂತಲೂ ಸಮೀಪದಲ್ಲಿರುವ ಜೀವಕ್ಕೆ ಯಾವ ತೊಂದರೆಗಳು ಬಾರದಿರಲಿ, ಅಂತ ಅಂದು ನಾನು ಮಾತನಾಡಿದ ಮಾತು ನಿನಗೆ ಹೇಗೆ ಹೇಗೋ ಕಂಡಿರಬಹುದು , ಆದರೆ ನಾನಂದ ಮಾತಿನಲಿ , ಸಿಟ್ಟಿನಲ್ಲಿ , ಅಳುವಿನಲ್ಲಿ ಕೇವಲ ನಿನ್ನ ಬಗೆಗಿನ ಕಾಳಜಿ ಇತ್ತು ಅಂತ ಮಾತ್ರ ಹೇಳಬಲ್ಲೆ .

ಬಿಡು "ಮುಚ್ಚಿದ ಬಾಗಿಲಲ್ಲಿ ನಿಂತು ಬಿಕ್ಷೆ ಬೇಡಬಾರದು" ಅಂದ ನನ್ನ ಗುರುವಿನ ಮಾತಿನಂತೆ , ಎದ್ದು ಹೋದವಳ ಮುಂದೆ ಎಷ್ಟೆಲ್ಲಾ ಮಾತಾಡಿ ಏನು ಪ್ರಯೋಜನ ? ಆದರೆ ಪ್ರತಿ ಮಳೆಗೂ ನನ್ನಲ್ಲಿ ನೀನಗೆಂದೇ ಒಂದು ಪತ್ರ ಹುಟ್ಟುತ್ತೆ . ಆದರೆ ಈ ಪತ್ರ ನಿನಗೆ ಯಾವತ್ತು ಸಿಗಲ್ಲ . ಯಾಕೆ ಅಂದ್ರೆ ಇದು ನನ್ನ ಹುಚ್ಚು ತಳಮಳದ ಬೇಗುದಿಯಲ್ಲಿ ಅರಳಿದ ಸ್ವಗತ ಪುಷ್ಪ !

"ಕ್ಷಣ ಕಾಲ ತೆರೆದಿಡುವೆ ನನ್ನೀ ಎದೆಯನ್ನ

ನೋಡು ಬಾ ಗೆಳತಿ ನನ್ನೊಳಗೆ ನಿನ್ನ

ಅಲ್ಲಲ್ಲಿ ಹುದುಗಿದೆ ನೀ ಬಿಟ್ಟ ಹೂ ಬಾಣ

ಕಿತ್ತೊಗೆದು ಅಪ್ಪಿಕೋ ನಾ ಕಣ್ಮುಚ್ಚುವ ಮುನ್ನ"

Happy Raining…

ಮೊದಲ ಮಳೆಯಲಿ ಮನಸು ತೊಯಿಸಿಕೊಂಡವ.

ಗುರುವಾರ, ಮಾರ್ಚ್ 04, 2010

ನೆನಪು...


ಇಡೀ ಜಗತ್ತಿಗೆ ರಜೆ ಹಾಕಿ ಕೋಳಿ ಗೂಡಿನಂತಹ ರೂಮಿನಲ್ಲಿ ಮುಸುಕೆಳೆದು ಮಲಗಿದರೂ
ಮನದ ಮೂಲೆಯಲ್ಲೆಲ್ಲೋ ನೀನು ಸರಿದು ಹೋಗುವ ಸಿಹಿ ನೆನಪು
ಈ ಮುಸುಕಿನಲೇ ಅವತ್ತಿದ್ದು, ಇವತ್ತಿಲ್ಲದ ದಗ್ದ ನೆನಪು
ಪ್ರಪಂಚದ ದುಷ್ಟತನವನ್ನರಿಯದ ಮುಗ್ದ ಮಗುವಿಗೆ ತಿಳಿ ಹೇಳಿದ ಶುದ್ದ ನೆನಪು
ಕಡಲಿನ ತಳದಲಿ ಕೇವಲ ಮುತ್ತೆ ಅಲ್ಲದೆ ಕುತ್ತು ಇದೆ ಎಂದು ಹೇಳಿದ ಕಲ್ಲು ನೆನಪು
ಬರಡಾದ ಬದುಕಿನಲಿ ಬೆಳದಿಂಗಳಿನಂತೆ ನಡೆದು ಬಂದ ಬಿಳಿ ನೆನಪು
ಜಗತ್ತೇ ಎದುರಾದರೂ ಜೊತೆಗೆ ನಾನಿರ್ತೀನಿ ಅಂದ ಮುಗ್ದ ನೆನಪು
ಕಪ್ಪು ತುಂಬಿದ ಆಕಾಶದಿಂದ ಧರೆಗಿಳಿದ ಸ್ವಾತಿ ನೆನಪು
ಹೆಪ್ಪುಗಟ್ಟಿದ ಕತ್ತಲೋಳಗಿಂದ ಮುಡಿ ಬಂದ ಮಿಂಚು ನೆನಪು
ಒಬ್ಬರನ್ನೊಬ್ಬರು ಕನ್ನಡಿಯಲ್ಲಲ್ಲದೆ ಎದುರಿಗೇ ನೋಡಿದ ಪ್ರತಿಬಿಂಬದ ನೆನಪು
ರಾತ್ರಿಯಿಡಿ ಚಿತ್ತ ಕೆರಳಿಸಿ ಮುನಿಸಿಕೊಳ್ಳುವ ಕಷ್ಟದ ನೆನಪು
ಕಷ್ಟದ ದಿನಗಳ ಒಟ್ಟಿಗೆ ಉಂಡ ಪೆದ್ದು ನೆನಪು
ಇಷ್ಟದ ಹಾಡಿನ ಮಧ್ಯ ಉಸಿರೆಳೆಯುವಂತೆ ಮಾಡುವ ಕೊರಳ ನೆನಪು
ಬೀಳುವ ಮಳೆಯಲಿ ಒಂದೇ ಕೊಡೆಯಲಿ ಜೊತೆಗೆ ನಡೆದ ನೆನಪು
ಅದ್ಭುತ ಸಾಂಗತ್ಯದ ಬಿಸುಪು ಮನದಲ್ಲಿರುವಾಗಲೇ ಬಿಟ್ಟೆದ್ದ ನೆನಪು
ಇದು...
ಪ್ರತಿ ಮುಂಜಾನೆಯಿಂದ ಇರುಳ ಕನಸಿನವರೆಗೂ ನಡೆದು ಬರುವ ನಿನ್ನದೇ ನೆನಪು

ಎಂದಿಗೂ ನೆನಪಾಗದವನು.

ಬುಧವಾರ, ಜನವರಿ 27, 2010

19th Jan 2010, 12.00 am


ಸೋನು,
ಇಲ್ಲಿ ರಾತ್ರಿಯೊಂದು ಸದ್ದಿಲ್ಲದೇ ಸರಿದು ಹೋಗುತ್ತಿದೆ. ಮನೆಯ ಮುಂದಿನ ಅಂಗಳದಲ್ಲಿ ನಿಂತು ನೋಡಿದರೆ ಅರ್ಧ ಚಂದ್ರ! ನನಗೆ ನಿನ್ನ ಅರೆಮುಚ್ಚಿದ ಕಣ್ಣುಗಳದೇ ನೆನಪು. ಎಲ್ಲಿದ್ದಿ ಹುಡುಗಿ? ಯಾವ ಸಪ್ತ ಸಮುದ್ರದ ಆಚೆಗೆ?
ಇವತ್ತು ಹುಚ್ಚು ಮನಸಿಗೆ ಯಾಕಿಷ್ಟು ತಳಮಳವೋ ಗೊತ್ತಿಲ್ಲ. ರಾತ್ರಿಯಿಡಿ ನಿನ್ನ ಒಂದೇ ಒಂದು "ಹ್ಯಾಪಿ ಬರ್ತ್ ಡೇ" ಗಾಗಿ ಕಾಯ್ತಾ ಕೂತಿದ್ದೀನಿ. ಆದರೆ ರೆಕ್ಕೆಯ ಮೇಲೆ ಮಂಜು ಬಿದ್ದ ಕೋಗಿಲೆಯಂತೆ ನನ್ನ ಸೆಲ್ ಕುಳಿತೆ ಇದೆ.ರಾತ್ರಿ ೧೨.೦೦ ಕ್ಕೆ ನನ್ನ ಶತ್ರುಗಳೂ ವಿಶ್ ಮಾಡಿದಾಗ, ಯಾಕೋ ಗೊತ್ತಿಲ್ಲ; ಬೆಚ್ಚನೆಯ ಕಣ್ಣ ಹನಿಯೊಂದು ಕೆನ್ನೆಯ ಮೇಲಿಳಿದಿತ್ತು.
ನಮ್ಮಿಬ್ಬರನ್ನು ಬಂಧಿಸಿ ಹಿಡಿದ ಪ್ರೀತಿಯ ಕೊನೆಯ ಕೊಂಡಿಯೂ ಕಳಚಿ ಬಿತ್ತಾ? ಪ್ರೀತಿ ಅಂದರೇ ಹೀಗೆನಾ ಸೋನು? ಒಂದು ಮುಟಿಗೆ ಆರ್ದ್ರತೆ, ಎದೆಯ ತುಂಬಾ ನವಿಲ ನರ್ತನ, ಮೈ ತುಂಬಾ ಸುರಿವ ಬೆಳದಿಂಗಳು, ಅದ್ಬುತ ಸಂಗೀತ, ಹರಿಯುವ ತಿಳಿ ನೀರ ನದಿ, ಹಿತವಾದ ಮೌನ, ಮೈ ಮರೆತು ತೊದಲುವ ಮಾತು, ಸ್ವಗತದಂತಹ ಸಾಹಿತ್ಯ; ಪ್ರೀತಿ ಅಂದರೇ ಅದು ಅಂದುಕೊಂಡಿದ್ದೆ. ನಮಗೆ ಇದೆಲ್ಲ ದಕ್ಕುವದೆ ಇಲ್ಲವಾ? ನನ್ನ ತಪ್ಪಿಗೆ ಕ್ಷಮೆಯೇ ಇಲ್ಲವಾ?
ಇವತ್ತಿಗೂ ಆಸೆಯಾಗುತ್ತಿದೆ; ನಿನ್ನ ಸನ್ನಿಧಿಗೆ ಬಂದು ಸುಮ್ಮನೆ ನಿನ್ನವನಾಗಿ ಬಿಡಬೇಕು, ಆಗ ನನಗೆ ಏನು ಕೇಳಿಸಬಾರದು; ನಿನ್ನೆದೆಯ ಬಡಿತದ ಹೊರತಾಗಿ. ಏನು ಕಾಣಿಸಬಾರದು; ನಿನ್ನ ಕಣ್ಣ ಕಾಂತಿಯ ಹೊರತಾಗಿ. ನಾನು ಸಾವಿರ ತಂತಿಗಳ ವೀಣೆಯಾಗಬೇಕು. ನೀನು, ನೀನು ಮಾತ್ರ ತಾಕದ ಹೊರತಾಗಿ ನುಡಿಯದ ಮೌನ ವೀಣೆ!
ಹೀಗಂತ ಮೋಡದೊಳಗೆ ತೇಲುತಿರುವ ಅರ್ಧ ಚಂದ್ರನನ್ನೇ ನೋಡುತ್ತಾ ಕನಸು ಕಾಣುತ್ತಿದ್ದೇನೆ!
ನೀನು ಹೇಗಿದ್ದೀಯ?
ಗೊತ್ತಿಲ್ಲ!
ಮೋಡಗಟ್ಟಿದ ಮನಸಿಗೆ ಬಿಕ್ಕಳಿಕೆ...

ನೀನು ಮರೆತು ಹೋದವ...